ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕತೆ ಇಲ್ಲದ ಉಪವಾಸ

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಉಪವಾಸ ಸತ್ಯಾಗ್ರಹ ನಡೆಯುವುದು ಮುಖ್ಯವಾಗಿ ಮೂರು ಕಾರಣಗಳಿಗಾಗಿ. ಬೇಡಿಕೆಗಳ ಈಡೇರಿಕೆಗೆ ಆಗ್ರಹ, ತಪ್ಪಿತಸ್ಥರ ಮನಃಪರಿವರ್ತನೆ ಇಲ್ಲವೇ ಸ್ವಂತ ಪಾಪದ ಪ್ರಾಯಶ್ಚಿತ.

ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರು ನಡೆಸಿರುವ ಮೂರು ದಿನಗಳ ಸದ್ಭಾವನಾ ಉಪವಾಸ ಇವುಗಳಲ್ಲಿ ಯಾವ ಉದ್ದೇಶವನ್ನು ಹೊಂದಿದೆ ಎನ್ನುವುದು ಸ್ಪಷ್ಟವಾಗಿಲ್ಲ.

ಅವರು ಯಾವುದೇ ಬೇಡಿಕೆಗಳನ್ನು ಮುಂದಿಟ್ಟಿಲ್ಲ. ಮುಖ್ಯಮಂತ್ರಿಗಳಾಗಿರುವ ಅವರು ನೀಡುವ ಸಾಮರ್ಥ್ಯ ಉಳ್ಳವರು, ಬೇಡುವ ಅಗತ್ಯವೂ ಅವರಿಗಿಲ್ಲ.
 
ಯಾವ ತಪ್ಪಿತಸ್ಥರನ್ನೂ ಅವರು ಹೆಸರಿಸದೆ ಇರುವುದರಿಂದ ಮನಃಪರಿವರ್ತನೆಯ ಉದ್ದೇಶವೂ ಅವರಿಗೆ ಇದ್ದಂತಿಲ್ಲ. ಸ್ವಂತ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಂಡಿರಬಹುದೇ? ಈ ಬಗ್ಗೆಯೂ ಅವರು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.

`ರಾಜ್ಯದ ಯಾವುದೇ ವ್ಯಕ್ತಿಗೂ ನೋವಾದರೂ ಮುಖ್ಯಮಂತ್ರಿಯಾಗಿ ಅದು ನನ್ನ ನೋವೆಂದು ಭಾವಿಸುತ್ತೇನೆ ಮತ್ತು ಅಂತಹವರಿಗೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ~ ಎಂದಷ್ಟೇ ನರೇಂದ್ರ ಮೋದಿ ಹೇಳಿದ್ದಾರೆ.

ಆದರೆ ನೋವಿಗೀಡಾಗಿರುವ ವ್ಯಕ್ತಿಗಳು ಯಾರು? ಆ ನೋವಿಗೆ ಕಾರಣಕರ್ತರು ಯಾರು? ಎನ್ನುವುದನ್ನು ವಿವರಿಸದೆ ಇರುವುದರಿಂದ ಅವರ ಈ ಹೇಳಿಕೆ ಪ್ರಾಮಾಣಿಕವಾದುದು ಎಂಬ ನಂಬಿಕೆ ಹುಟ್ಟಿಸುವುದಿಲ್ಲ.

ಪ್ರಧಾನಿ ಪಟ್ಟದ ಅಭ್ಯರ್ಥಿಯಾಗಲು ಭಾರತೀಯ ಜನತಾ ಪಕ್ಷದೊಳಗೆ ಈಗಾಗಲೇ ಶೀತಲವಾದ ಪೈಪೋಟಿ ಪ್ರಾರಂಭವಾಗಿದೆ. ಎಲ್.ಕೆ.ಅಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ಯಾತ್ರೆ ಹೊರಡಲು ಸಿದ್ಧತೆ ನಡೆಸಿದ್ದಾರೆ.

ಮೋದಿ ಅವರು ಬಹುಪ್ರಚಾರದ ಉಪವಾಸ ಕೈಗೊಂಡಿರುವುದು ಕೂಡಾ ಈ ಪೈಪೋಟಿಯ ಭಾಗವೆಂದೇ ಹೇಳಬೇಕಾಗುತ್ತದೆ. ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವ ಉದ್ದೇಶ ಅವರಿಗಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಅದನ್ನು ಅವರು ನೇರವಾಗಿ ಹೇಳಿಬಿಡಬೇಕು.

ಆದರೆ ಅದಕ್ಕಿಂತ ಮೊದಲು ಒಂಬತ್ತು ವರ್ಷಗಳ ಹಿಂದೆ ಗುಜರಾತ್‌ನಲ್ಲಿ ನಡೆದ ನರಮೇಧದ ಬಗ್ಗೆ ದೇಶದ ಜನರಿಗೆ ಅವರು ವಿವರಣೆ ನೀಡಬೇಕಾಗುತ್ತದೆ. ಈ ಆರೋಪದಿಂದ ನ್ಯಾಯಾಲಯ ಅವರನ್ನು ಇನ್ನೂ ಮುಕ್ತಗೊಳಿಸಿಲ್ಲ ಎನ್ನುವುದನ್ನು ಅವರು ಮರೆಯಬಾರದು. ಆ ಹಿಂಸಾಚಾರದಲ್ಲಿ ಅವರು ನೇರವಾಗಿ ಭಾಗವಹಿಸದೆ ಇರಬಹುದು.

ಆದರೆ ಆ ಕಾಲದಲ್ಲಿ ರಾಜ್ಯದ ಆಡಳಿತದ ಚುಕ್ಕಾಣಿ ಅವರ ಕೈಯಲ್ಲೇ ಇದ್ದ ಕಾರಣ ಆ ದುರ್ಘಟನೆಗೆ ನೈತಿಕ ಹೊಣೆಗಾರರು ಅವರೇ ಆಗಿರುತ್ತಾರೆ. ಈ ಘೋರ ಕರ್ತವ್ಯಲೋಪದ ಬಗ್ಗೆ ಮೋದಿ ಅವರು ಇಲ್ಲಿಯವರೆಗೆ ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಿಲ್ಲ.

ಧಾರ್ಮಿಕ ಉದ್ದೇಶದ ಉಪವಾಸವನ್ನು ರಾಜಕೀಯ ಹೋರಾಟದ ಅಸ್ತ್ರವನ್ನಾಗಿ ಯಶಸ್ವಿಯಾಗಿ ಪ್ರಯೋಗಿಸಿದ್ದು ಮಹಾತ್ಮ ಗಾಂಧೀಜಿ. ಆದರೆ ಸ್ವತಂತ್ರ ಭಾರತದಲ್ಲಿ ಅಹಿಂಸಾತ್ಮಕ ಹೋರಾಟದ ಪ್ರಬಲ ಸಾಧನವಾಗಿರುವ ಉಪವಾಸ ಸತ್ಯಾಗ್ರಹ ದುರ್ಬಳಕೆಯಾಗಿದ್ದೇ ಹೆಚ್ಚು.

ಉಪವಾಸ ಕೂರುವ ಮನುಷ್ಯ ಪಾರದರ್ಶಕವಾಗಿ ಇರದೆ ಇದ್ದರೆ ಇಲ್ಲವೇ ದುರುದ್ದೇಶ ಹೊಂದಿದ್ದರೆ ಅದರ ಪಾವಿತ್ರ್ಯ ನಾಶವಾಗುತ್ತದೆ. ನರೇಂದ್ರ ಮೋದಿ ಅವರು ತಮ್ಮ ಸಂಶಯಾತ್ಮಕ ನಡೆ-ನುಡಿಗಳ ಮೂಲಕ ಉಪವಾಸದ ಪಾವಿತ್ರ್ಯ ನಾಶ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT