ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ಚಂದ್ರಮನ ಸಂಕ್ರಮಣ

Last Updated 21 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ಈ ವರ್ಷದ ಅಂತ್ಯದೊಳಗೆ ತಮಿಳು ಚಿತ್ರರಂಗ ಪ್ರವೇಶಿಸುವುದು ಖಚಿತ'.
ನಟ ಪ್ರೇಮ್ ಅವರ ಮಾತಿನಲ್ಲಿ ಆತ್ಮವಿಶ್ವಾಸವಿತ್ತು. ಮಿಗಿಲಾಗಿ ಗೆಲುವಿನ ಸಂಭ್ರಮ ತುಳುಕುತ್ತಿತ್ತು. ಆರ್. ಚಂದ್ರು ನಿರ್ಮಾಣ-ನಿರ್ದೇಶನದ `ಚಾರ್‌ಮಿನಾರ್'ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ಸಿನಿಮಾಗಳ ನಡುವೆಯೂ ಎರಡನೇ ವಾರ ಚಿತ್ರಮಂದಿರ ಭರ್ತಿಯಾಗುತ್ತಿದೆ ಎಂಬ ಖುಷಿ ಅವರದ್ದು. ಈ ಗೆಲುವು ಅವರ ಸಿನಿಮಾಯಾನದ ದಿಕ್ಕನ್ನು ಬದಲಿಸುವ ಸೂಚನೆಯನ್ನೂ ನೀಡಿದೆ. ಇನ್ನೊಂದು ಭರ್ಜರಿ ಗೆಲುವಿನ ನಿರೀಕ್ಷೆಯೂ ಅವರ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ರೂಪಾ ಅಯ್ಯರ್ ನಿರ್ದೇಶನದ `ಚಂದ್ರ' ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಲಿದೆ ಎಂಬ ನಂಬಿಕೆ ಪ್ರೇಮ್‌ರದ್ದು.

`ಚಂದ್ರ' ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ತಯಾರಾಗಿರುವ ಚಿತ್ರ. ಇದು ತಮಿಳು ಚಿತ್ರರಂಗಕ್ಕೆ ಪ್ರವೇಶಿಸುವ ಪ್ರೇಮ್ ಬಯಕೆಗೆ ಮುನ್ನುಡಿ ಬರೆದರೆ, ನಿರ್ಮಾಪಕ ಲಿಂಗುಸ್ವಾಮಿ ಅವರನ್ನು ಸಂಪೂರ್ಣವಾಗಿ ತಮಿಳಿಗೆ ಪರಿಚಯಿಸುವ ಹಂಬಲದಲ್ಲಿದ್ದಾರೆ. ಈ ವರ್ಷಾಂತ್ಯಕ್ಕೆ ಪ್ರೇಮ್ ಹೊಸ ದೋಣಿಯನ್ನೇರಲಿದ್ದಾರೆ.

`ಚಾರ್‌ಮಿನಾರ್' ಚಿತ್ರವನ್ನು ತೆಲುಗಿಗೆ ಕೊಂಡೊಯ್ಯುತ್ತಿರುವ ನಿರ್ಮಾಪಕ ಶ್ರೀಧರ್, ತೆಲುಗಿಗೆ ಪ್ರೇಮ್ ಅವರನ್ನು ಪರಿಚಯಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ಅನೇಕ ನಿರ್ಮಾಪಕರೂ ಚಿತ್ರ ಹಾಗೂ ಪ್ರೇಮ್ ಅಭಿನಯವನ್ನು ಮೆಚ್ಚಿದ್ದಾರೆ. ಹೀಗಾಗಿ ಕನ್ನಡ ನೆಲದಾಚೆಗಿನ ಫ್ರೇಮಿನಲ್ಲೂ ಪ್ರೇಮ್ ಮಿಂಚು ಹರಿಸಲಿದ್ದಾರೆ.

`ಪ್ರಾಣ' ಚಿತ್ರದ ಮೂಲಕ ನಾಯಕರಾಗಿ ಪರಿಚಿತರಾದ ಪ್ರೇಮ್ ಹೆಸರು ಮಾಡಿದ್ದು `ನೆನಪಿರಲಿ' ಚಿತ್ರದಲ್ಲಿ. ಅಲ್ಲಿಂದ ಇಲ್ಲಿವರೆಗಿನದು ಒಂದು ದಶಕದ ಪಯಣ. ಆದರೆ ನಟಿಸಿದ್ದು ಬೆರಳಣಿಕೆಯ ಚಿತ್ರಗಳಲ್ಲಿ. ಹೆಸರು ಬಂದಾಕ್ಷಣ ಬಂದ ಚಿತ್ರಗಳನ್ನೆಲ್ಲ ಒಪ್ಪಿಕೊಂಡು ನಟಿಸಿದರೆ ಅದರ ಆಯಸ್ಸು ಕೆಲವೇ ವರ್ಷಗಳಷ್ಟೆ. ಹಾಗೆ ನಟಿಸಿ ಮೂಲೆಗುಂಪಾದ ಅನೇಕ ನಟರು ನಮ್ಮ ಕಣ್ಣೆದುರಿಗೆ ಇದ್ದಾರೆ. ಅವರಲ್ಲಿ ನಾನೂ ಒಬ್ಬನಾಗಲು ಇಷ್ಟವಿಲ್ಲ. ಉತ್ತಮ ಕಥೆಯುಳ್ಳ ಚಿತ್ರಗಳನ್ನು ಮಾತ್ರ ಆಯ್ದುಕೊಂಡೆ. ಅದರಲ್ಲಿ ಗೆಲುವು ಮತ್ತು ಸೋಲು ಎರಡನ್ನೂ ಕಂಡೆ. ಚಿತ್ರಗಳು ಕಡಿಮೆಯಾದರೂ ಜನ ನನ್ನನ್ನು ಮರೆತಿಲ್ಲ ಎನ್ನುತ್ತಾರೆ ಪ್ರೇಮ್.

`ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾದರೂ ಗೆಲುವು ಮರೀಚಿಕೆಯಾಯಿತು. ನಂತರ `ಚಂದ್ರ' ಹಾಗೂ `ಚಾರ್‌ಮಿನಾರ್' ಚಿತ್ರಗಳಿಗೆ ಪ್ರೇಮ್ ಒಂದೂವರೆ ವರ್ಷ ಸಮಯ ಮುಡಿಪಾಗಿಟ್ಟರು. ಅದರ ಪ್ರತಿಫಲ ಈಗಾಗಲೇ ಒಂದು ಗೆಲುವು ಸಿಕ್ಕಿದೆ. ಆ ಗೆಲುವಿನ ಶ್ರೇಯ ನಿರ್ದೇಶಕ ಚಂದ್ರು ಅವರಿಗೇ ಸಲ್ಲಬೇಕು ಎನ್ನುತ್ತಾರೆ ಅವರು. ಅನಿವಾರ್ಯವಾಗಿ ನಿರ್ಮಾಣದ ಜವಾಬ್ದಾರಿ ಹೊತ್ತ ಚಂದ್ರು ಅವರ ಸಂಕಷ್ಟದ ಸಮಯದಲ್ಲಿ ಪ್ರೇಮ್ ಕಣ್ಣೀರಿನ ಪಾಲುದಾರರೂ ಆಗಿದ್ದರಂತೆ.

`ಚಂದ್ರ' ಪ್ರೇಮ್‌ಗೆ ವಿಶಿಷ್ಟ ಅನುಭವ ನೀಡಿರುವ ಚಿತ್ರ. ತಮ್ಮ ಹೆಬ್ಬಯಕೆಯ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ. ನಿರ್ದೇಶಕಿ ರೂಪಾ ಅಯ್ಯರ್ ಅವರ ಸ್ನೇಹಿತೆ. ಮೆಚ್ಚಿನ ನಾಯಕಿ ಶ್ರೇಯಾ ಶರಣ್ ಜೊತೆಯಲ್ಲಿ ನಟಿಸುವ ಅನುಭವ. ಜೊತೆಗೆ ದೇಹವನ್ನು ದಂಡಿಸಿ ಸಿಕ್ಸ್‌ಪ್ಯಾಕ್‌ಗೆ ಇಳಿಸಿದ ಸಾಹಸ. `ಚಂದ್ರ' ತಮಗೆ ಮಾತ್ರವಲ್ಲ ಪ್ರೇಕ್ಷಕರಿಗೂ ಅದ್ಭುತ ಅನುಭವ ನೀಡಲಿರುವ ಚಿತ್ರ ಎನ್ನುವುದು ಅವರ ಬಣ್ಣನೆ. `ರಾಜಕುಮಾರನ ಪಾತ್ರಕ್ಕೆ ಕಥೆ ಸಿಕ್ಸ್‌ಪ್ಯಾಕ್ ಬಯಸಿತ್ತು. ಬಾಲಿವುಡ್ ನಟರಂತೆ ಕನ್ನಡದ ನಟರೂ ಸಿಕ್ಸ್‌ಪ್ಯಾಕ್ ಟ್ರೆಂಡ್‌ಗೆ ಮೊರೆಹೋಗುತ್ತಿದ್ದಾರೆ.

ಇದು ನಾವೂ ಯಾರಿಗೂ ಕಡಿಮೆಯಿಲ್ಲ ಎನ್ನುವುದನ್ನು ಸೂಚಿಸುತ್ತದೆ' ಎನ್ನುವ ಪ್ರೇಮ್, ಚಿತ್ರಕಥೆ, ನಿರ್ದೇಶನ, ನೃತ್ಯ, ಸಾಹಿತ್ಯ ಹೀಗೆ ಎಲ್ಲಾ ಪ್ರಕಾರಗಳಲ್ಲಿಯೂ ತೊಡಗಿಕೊಳ್ಳುವ ರೂಪಾ ಅಯ್ಯರ್‌ರ ಪರಿಶ್ರಮವನ್ನು ಪ್ರಶಂಸಿಸುತ್ತಾರೆ.

ಸೋಲು ಗೆಲುವು ಎರಡನ್ನೂ ವೃತ್ತಿ ಜೀವನದಲ್ಲಿ ಸಮನಾಗಿ ಎದುರಿಸಿದ್ದೇನೆ. ಗೆಲುವಿನಲ್ಲಿ ಚಪ್ಪಾಳೆ ತಟ್ಟುವವರು ಸೋಲು ಎದುರಾದಾಗ ಜೊತೆಗಿರುವುದಿಲ್ಲ ಎನ್ನುವುದು ಬದುಕು ಕಲಿಸಿದ ಪಾಠ. ಸೋತಾಗ ಕೆಲವೇ ಗೆಳೆಯರು, ಕುಟುಂಬ ವರ್ಗ ಜೊತೆಗಿದ್ದರು ಎಂಬ ಬೇಸರ ಅವರಲ್ಲಿದೆ. ತಮ್ಮದೇ ಪ್ರೊಡಕ್ಷನ್ ಹೌಸ್ ಪ್ರಾರಂಭಿಸುವುದು ಅವರ ಕನಸು.

ಆ್ಯಕ್ಷನ್, ರೊಮ್ಯಾಂಟಿಕ್, ಲವರ್ ಬಾಯ್ ಹೀಗೆ ವಿಭಿನ್ನ ಬಗೆಗಳಲ್ಲಿ ಕಾಣಿಸಿಕೊಂಡಿದ್ದರೂ `ಲವ್ಲಿ ಸ್ಟಾರ್' ಇಮೇಜ್ ಪ್ರೇಮ್‌ಗೆ ಖುಷಿ ಕೊಟ್ಟಿದೆ. `ದೊಡ್ಡ ಪ್ರಮಾಣದಲ್ಲಿ ಮಹಿಳಾ ಅಭಿಮಾನಿ ಬಳಗ ಹೊಂದುವ ಭಾಗ್ಯ ಎಷ್ಟು ನಟರಿಗೆ ತಾನೆ ಸಿಗುತ್ತದೆ?' ಎನ್ನುವಾಗ ಅವರ ತುಟಿಯಲ್ಲಿ ತುಂಟ ಕಿರುನಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT