ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಬದಲಿಸುವುದೇ ಗಲಭೆ

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮುಜಫ್ಫರ್‌ನಗರ  (ಉತ್ತರ ಪ್ರದೇಶ): ಏಳು ತಿಂಗಳ ಹಿಂದಿನ ಕರಾಳ ಕೋಮು ಗಲಭೆಯನ್ನು ಜನ ಇನ್ನೂ ಮರೆತಿಲ್ಲ. ರಸ್ತೆಗಳ ಮೇಲೆ ಚೆಲ್ಲಾಡಿದ ನೆತ್ತರ ಕಲೆಗಳು ಮಾಸಿದ್ದರೂ, ಪರಸ್ಪರರ ವಿರುದ್ಧ ಕೆಂಡ ಕಾರುವ ಹಿಂದೂ – ಮುಸ್ಲಿಮರ ಸಿಟ್ಟು– ಹಗೆತನ ಇನ್ನೂ ತಣ್ಣಗಾಗಿಲ್ಲ... ಕಳೆದ ವರ್ಷ 63 ಜೀವಗಳನ್ನು ಬಲಿ ತೆಗೆದುಕೊಂಡ ದೊಂಬಿ ಜನರ ಹೃದಯಗಳ ಮೇಲೆ ಮಾಡಿರುವ ಗಾಯಗಳು ಮಾಯುವ ಮುನ್ನವೇ ಮುಜಫ್ಫರ್‌ನಗರ ಚುನಾ­ವಣೆಗೆ ಸಜ್ಜಾಗಿದೆ. ಗಲಭೆ ಲಾಭ ಪಡೆಯಲು ರಾಜಕೀಯ ಪಕ್ಷಗಳು ತಮ್ಮದೇ ತಂತ್ರ  ರೂಪಿಸಿವೆ.

ಬಹುಜನ ಸಮಾಜ ಪಕ್ಷದ ಖಾದಿರ್‌ ರಾಣಾ ಮುಜಫ್ಫರ್‌ನಗರ  ಲೋಕ­ಸಭಾ ಕ್ಷೇತ್ರದ ಸದಸ್ಯ. ಬಿಎಸ್‌ಪಿ ಪುನಃ ಖಾದಿರ್‌ ರಾಣಾ ಅವರಿಗೆ ಟಿಕೆಟ್‌ ನೀಡಿದೆ. ಬಿಜೆಪಿ ಜಾಟ್‌ ಸಮುದಾಯದ ಡಾ. ಸಂಜೀವ್‌ ಬಲಿಯಾನ್‌ ಅವರನ್ನು ಕಣಕ್ಕಿಳಿಸಿದೆ. ಸಮಾಜವಾದಿ ಪಕ್ಷ ಗುಜ್ಜರ್‌ ಜಾತಿಯ ವೀರೇಂದ್ರಸಿಂಗ್‌, ಕಾಂಗ್ರೆಸ್‌ ಪಕ್ಷ ವೈಶ್ಯರಾದ ಪಂಕಜ್‌ ಅಗರವಾಲ್‌ ಮತ್ತು ಎಎಪಿ ಯಾಮಿನ್‌ ಅವರನ್ನು ಸ್ಪರ್ಧೆಗಿಳಿಸಿವೆ.

ಮುಜಫ್ಫರ್‌ನಗರದಲ್ಲಿ ಪ್ರಚೋದನ­ಕಾರಿ ಭಾಷಣ ಮಾಡಿ ಕೋಮು ಭಾವನೆ ಕೆರಳಿಸಿದ ಆರೋಪದ ಮೇಲೆ ರಾಣಾ ಹಾಗೂ ಸಂಜೀವ್‌ ಬಲಿ­ಯಾನ್‌ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಇವರಿಬ್ಬರು ಜೈಲಿಗೂ ಹೋಗಿ ಬಂದಿದ್ದಾರೆ.  ಕಳೆದ ಚುನಾವಣೆಯಲ್ಲಿ ರಾಣಾ ರಾಷ್ಟ್ರೀಯ ಲೋಕದಳದ ಅಭ್ಯರ್ಥಿ ಅನುರಾಧಾ ಚೌಧರಿ ಅವರನ್ನು ಸೋಲಿಸಿದ್ದಾರೆ.

‘ಐದು ವರ್ಷದಲ್ಲಿ ರಾಣಾ ಏನೂ ಕೆಲಸ ಮಾಡಿಲ್ಲ. ಕಾಲ ಹರಣ ಮಾಡಿ­ದ್ದಾರೆ’ ಎಂಬ ಟೀಕೆಗೆ ಗುರಿಯಾಗಿ­ದ್ದಾರೆ. ಆದರೆ, ಗಲಭೆ ಬಳಿಕದ ಬೆಳವಣಿಗೆ­ಯಿಂದ ಮುಸ್ಲಿಂ ಸಮು­ದಾಯ ರಾಣಾ ಅವರ ಬೆಂಬಲಕ್ಕೆ ನಿಲ್ಲುವಂತೆ ಕಾಣುತ್ತಿದೆ. ಮುಜಫ್ಫರ್‌ ನಗರದಲ್ಲಿ ಸುಮಾರು ಹದಿನಾರು ಲಕ್ಷ ಮತದಾರರಿದ್ದಾರೆ. ಮುಸ್ಲಿಂ ಮತ­ದಾರರ ಸಂಖ್ಯೆ ಐದು ಲಕ್ಷ ದಾಟುತ್ತದೆ. ಎರಡು ಲಕ್ಷ ದಲಿತ, ಅಷ್ಟೇ ಸಂಖ್ಯೆಯ ಜಾಟ್‌ ಮತಗಳಿವೆ. ಗುಜ್ಜರ್‌, ರಜ­ಪೂತ, ಬನಿಯಾ, ತ್ಯಾಗಿ (ಬ್ರಾಹ್ಮಣರು) ಮತ್ತಿತರ ಜಾತಿಗಳ  ಮತದಾರರ ಸಂಖ್ಯೆ ತಲಾ ಒಂದು ಲಕ್ಷ ದಾಟುತ್ತದೆ.

ಸಂಜಯ್‌ ಬಲಿಯಾನ್‌ ಪಶುವೈದ್ಯ ವಿಭಾಗದಲ್ಲಿ ಡಾಕ್ಟರೇಟ್‌ ಪಡೆದಿ­ದ್ದಾರೆ. ಬಿಜೆಪಿ ಸೇರುವ ಮೊದಲು ಹರಿಯಾಣ­ದಲ್ಲಿ ಪಶುವೈದ್ಯಾಧಿಕಾರಿ ಆಗಿದ್ದವರು. ಕೋಮು ಗಲಭೆ ಬಳಿಕ ಮುಸ್ಲಿಮರ ಕಡು ವೈರಿಗಳಾಗಿರುವ ಜಾಟ್‌ ಸಮಾಜ ಬಲಿಯಾನ್‌ ಅವ­ರನ್ನು ಬೆಂಬಲಿಸುತ್ತಿದೆ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ. ಅಲ್ಲದೆ, ಗಲಭೆ­ಯನ್ನೇ ಬಂಡವಾಳ ಮಾಡಿಕೊಂಡು ಎಲ್ಲ ಹಿಂದೂ ಜಾತಿಗಳನ್ನು ಒಗ್ಗೂಡಿ­ಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಎಸ್‌ಪಿ ನಾಯಕಿ ಮಾಯಾವತಿ ಅವರಿಗೆ ನಿಷ್ಠ­ರಾಗಿರುವ ದಲಿತರ ಮತಗಳನ್ನು ಒಡೆ­ಯಲು ಬಿಜೆಪಿ ಹೊಂಚು ಹಾಕುತ್ತಿದೆ.

‘ಯುಪಿಎ ಸರ್ಕಾರ ಜಾಟರನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಶೇ  5ರಷ್ಟು ಮೀಸಲಾತಿ ಕಲ್ಪಿ­ಸಿದೆ. ಈ ಕಾರಣದಿಂದ ಕಾಂಗ್ರೆಸ್‌ಗೂ ಜಾಟರ ಮತಗಳು ಬೀಳಬಹುದು. ಆರ್‌ಎಲ್‌ಡಿ ಮುಖಂಡ, ಯುಪಿಎ ಸರ್ಕಾರದ ಸಚಿವ ಅಜಿತ್‌ ಸಿಂಗ್‌ ಕಾಂಗ್ರೆಸ್‌ ಜತೆ ಹೊಂದಾಣಿಕೆ ಮಾಡಿ­ಕೊಂಡು, ಮುಜಫ್ಫರ್‌ನಗರವನ್ನು ಮಿತ್ರ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದಾರೆ. ಇದರಿಂದ ಅಜಿತ್‌ ಸಿಂಗ್‌ ಬೆಂಬಲಿಗರು ಪಂಕಜ್‌ ಅಗರ­ವಾಲ್‌ ಪರ ನಿಲ್ಲುತ್ತಾರೆ. ಜಾತಿ ಕಾರಣಕ್ಕೆ ವೈಶ್ಯರ ಮತಗಳೂ ಅವರಿಗೆ ಬೀಳಲಿವೆ’ ಎಂದು ಕಾಂಗ್ರೆಸ್‌ ಮುಖಂಡರು ವ್ಯಾಖ್ಯಾನಿಸುತ್ತಿದ್ದಾರೆ.

‘ಸಮಾಜವಾದಿ ಪಕ್ಷ ಗುಜ್ಜರ್‌ ಮತ್ತಿತರ ಹಿಂದುಳಿದ ವರ್ಗಗಳ ಮತ­ಗಳ ಮೇಲೆ ಕಣ್ಣಿಟ್ಟಿದೆ. ಮುಸ್ಲಿಮರ ಬೆಂಬಲ ದೊರೆಯುವ ಬಗ್ಗೆ ವಿಶ್ವಾಸ­ವಿದೆ. ರಾಜ್ಯ ವಿಧಾನಸಭೆ ಚುನಾವಣೆ­ಯಲ್ಲಿ ಮುಸ್ಲಿಮರು ತಮಗೆ ಬೆಂಬಲ­ವಾಗಿ ನಿಂತಿದ್ದು ಮುಲಾಯಂ ಸಿಂಗ್‌ ಅವರ ನಂಬಿಕೆಗೆ ಕಾರಣವಾಗಿದೆ.

‘ಮುಜಫ್ಫರ್‌ನಗರದಲ್ಲಿ ನಡೆದದ್ದು ಮುಸ್ಲಿಂ ಮತ್ತು ಜಾಟರ ನಡುವಣ ಗಲಭೆ. ಜಾಟರನ್ನು ಬಿಟ್ಟು ಮತ್ಯಾರೂ ಅದರಲ್ಲಿ ಭಾಗವಹಿಸಿಲ್ಲ. ಉತ್ತರ ಪ್ರದೇಶ­ದಲ್ಲಿ ಜಾಟರು ಎಷ್ಟು ಪ್ರಬಲರೋ, ಮುಸ್ಲಿಮರೂ ಅಷ್ಟೇ ಪ್ರಬಲರು. ಮೊದಲಿನಿಂದಲೂ ಇವೆ­ರಡು ಕೂಡಿ ಬಾಳಿದ ಸಮುದಾಯ­ಗಳು. ಈಗ ಬಡಿದಾಡಿ ಒಬ್ಬರ ಮುಖ­ವನ್ನೊಬ್ಬರು ನೋಡದ ಸ್ಥಿತಿಗೆ ಬಂದಿ­ದ್ದಾರೆ’ ಎಂದು ಮಾಹಿತಿ ಹಕ್ಕು ಕಾರ್ಯ­ಕರ್ತ ಶಾಹಿದ್‌ ಹುಸೇನ್‌ ಹೇಳುತ್ತಾರೆ.

‘ಅಖಿಲೇಶ್‌ ಯಾದವ್‌ ಸರ್ಕಾರ ಮುಜಫ್ಫರ್‌ನಗರದ ಗಲಭೆ ತಡೆಯ­ಲಿಲ್ಲ. ಉಭಯ ಕೋಮಿನ ಜನರ ಆಸ್ತಿ– ಪಾಸ್ತಿ ಮತ್ತು ಪ್ರಾಣ ಹಾನಿಯಾ­ಗುತ್ತಿದ್ದರೂ ಆಡಳಿತ ಯಂತ್ರ ನಿಷ್ಕ್ರಿಯ­ವಾಗಿತ್ತು. ಮುಖ್ಯಮಂತ್ರಿ ಸಕಾಲದಲ್ಲಿ ನಿರ್ಧಾರಗಳನ್ನು ಕೈಗೊಂಡಿದ್ದರೆ ದಂಗೆ ನಿಯಂತ್ರಣ ಸಾಧ್ಯವಿತ್ತು. ಸಮಾಜ­ವಾದಿ ಪಕ್ಷದ ಮುಖಂಡರ ಈ ನಡವಳಿಕೆ ಬಗ್ಗೆ ರಾಜ್ಯದ ಜನರಿಗೆ ಅದರಲ್ಲೂ ಜಾಟ್‌ ಮತ್ತು ಮುಸ್ಲಿಮರಿಬ್ಬರಿಗೂ ಬೇಸರವಿದೆ’ ಎಂಬುದು ಸ್ಥಳೀಯರಾದ ನೀರಜ್‌ ತ್ಯಾಗಿ ಅವರ ಊಹೆ.

‘ಮುಜಫ್ಫರ್‌ನಗರದಲ್ಲಿ ಮೇಲ್ನೋ­ಟಕ್ಕೆ ಬಿಜೆಪಿ ಮತ್ತು ಬಿಎಸ್‌ಪಿ ಹಣಾ­ಹಣಿ ನಡೆಯುವಂತೆ ಕಾಣುತ್ತಿದ್ದರೂ, ಎಸ್‌ಪಿ ಮತ್ತು ಕಾಂಗ್ರೆಸ್‌ ಪಕ್ಷಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ದಲಿತ ಮತಗಳನ್ನು ಮೊದಲೆರಡು ಪಕ್ಷಗಳು ಹಂಚಿಕೊಳ್ಳ­ಬಹುದು’ ಎನ್ನುವುದು ಇದೇ ಕ್ಷೇತ್ರದ ಜಮೀಲ್‌ ಅಹಮದ್‌ ಅವರ ನಿರೀಕ್ಷೆ.

‘ಕೋಮು ಗಲಭೆಯಲ್ಲಿ ಮನೆ, ಮಠ ಮತ್ತು ಸಂಬಂಧಿಕರನ್ನು ಕಳೆದುಕೊಂಡಿ­ರುವ ಸಾವಿರಾರು ಜನ ಇನ್ನೂ ರಾಜ್ಯ ಸರ್ಕಾರದ ಶಿಬಿರಗಳಲ್ಲೇ ಆಶ್ರಯ ಪಡೆದಿದ್ದಾರೆ. ಬಹುತೇಕರಿಗೆ ಊರು­ಗಳಿಗೆ ವಾಪಸ್‌ ಹೋಗುವ ಮನಸಿಲ್ಲ. ಇಂಥ ಸಂಕಟದ ಪರಿಸ್ಥಿತಿಯಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಯಾರಿಗೆ ಮತ ಹಾಕಬೇಕೆಂದು ಆಲೋಚಿಸುವ ಸ್ಥಿತಿಯಲ್ಲಿ ಸಂತ್ರಸ್ತರಿಲ್ಲ’ ಎಂದು ವಿವೇಕ್‌ ಠಾಕೂರ್‌ ಹೇಳುತ್ತಾರೆ.

ಮುಜಫ್ಫರ್‌ನಗರ  ಪುರಾತನ ಪಟ್ಟಣ. ಹಳೆಯ ಕಟ್ಟಡಗಳು, ಕಿರಿದಾದ ರಸ್ತೆಗಳು, ಕಾಲಿಡಲು ಜಾಗವಿಲ್ಲದಷ್ಟು ಜನ ಜಂಗುಳ, ವಾಹನಗಳ ಓಡಾಟದ ಭರಾಟೆ, ರಸ್ತೆ ಆಕ್ರಮಿಸಿಕೊಂಡ ಬೀದಿ ಬದಿಯ ವ್ಯಾಪಾರಿಗಳು, ನಡು ರಸ್ತೆಯಲ್ಲೇ ದೇವಸ್ಥಾನಗಳು ಇಲ್ಲಿನ ಲಕ್ಷಣ.

ಅಗತ್ಯ ಮೂಲಸೌಲಭ್ಯಗಳ ಕೊರತೆ ಈ ಪಟ್ಟಣವನ್ನು ಕಾಡುತ್ತಿದೆ. ಅಭಿವೃದ್ಧಿ ಕಡೆ ಗಮನ ಕೊಡಬೇಕಾದ ಜನ ಪ್ರತಿನಿಧಿಗಳು ಧರ್ಮ, ಧರ್ಮದ ನಡುವೆ ಜಗಳ ಹಚ್ಚುತ್ತಿದ್ದಾರೆಂದು 80ರ ಹಿರಿಯ ಠಾಕೂರ್ ವಿಷಾದಿಸು­ತ್ತಾರೆ. ಈ ಕ್ಷೇತ್ರದ ರಾಜಕೀಯ ಇತಿಹಾಸ ಗಮನಿಸಿದರೆ 1952ರಿಂದ 67ರವರೆಗೆ ಐದು ಸಲ ಸತತವಾಗಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಅನಂತರ ಎರಡು ಸಲ ಸಿಪಿಐ, ಎರಡು ಸಲ ಜನತಾ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸಿದೆ.

1996, 97 ಮತ್ತು 99ರಲ್ಲಿ ಬಿಜೆಪಿ ಬೆಂಬಲಿಸಿದೆ. 2004ರಲ್ಲಿ ಎಸ್‌ಪಿ, 2009ರಲ್ಲಿ ಬಹುಜನ ಸಮಾಜ ಪಕ್ಷಕ್ಕೆ ಒಲಿದಿದೆ. ‘ಮುಸ್ಲಿಮರು ಮತ್ತು ಜಾಟರ ನಡುವಣ ಕಿತ್ತಾಟ ಈ ಚುನಾವಣೆ ದಿಕ್ಕು ಬದಲಿಸುವುದೇ?’ ಎಂಬ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT