ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರ್ಮುಲಾ ಒನ್ ರೇಸ್‌: ಭಾರತದತ್ತ ವಿಶ್ವದ ಗಮನ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಎಂದಾಕ್ಷಣ ವಿದೇಶಿಯರಿಗೆ ನೆನಪಾಗುವುದು ಮಹಾತ್ಮಾ ಗಾಂಧಿ, ತಾಜ್‌ಮಹಲ್, ಮಸಾಲೆ ಪದಾರ್ಥ ಹಾಗೂ ಚೆಸ್ ತಾರೆ ವಿಶ್ವನಾಥನ್ ಆನಂದ್. ಸ್ವಲ್ಪ ಮಟ್ಟಿಗೆ ಕ್ರಿಕೆಟ್ ಆಟದಿಂದಲೂ ಸ್ಮರಿಸುತ್ತಾರೆ. ಆದರೆ ಇನ್ನು ಮುಂದೆ ದೇಶದ ಖ್ಯಾತಿಗೆ ಫಾರ್ಮುಲಾ ಒನ್ ಮೋಟಾರ್ ರೇಸ್ ಕೂಡ ಸೇರಿಕೊಳ್ಳಲಿದೆ.


ಮೊಟ್ಟ ಮೊದಲ ಬಾರಿಗೆ ಫಾರ್ಮುಲಾ ಒನ್ ಗ್ರ್ಯಾನ್ ಪ್ರೀ ನಡೆಸಲಿರುವ ಭಾರತವು ಮೋಟಾರ್ ರೇಸಿಂಗ್ ಭೂಪಟದಲ್ಲಿ ಸ್ಥಾನ ಗಿಟ್ಟಿಸಲಿದೆ. ಅಕ್ಟೋಬರ್ 30ರಂದು ವಿಶ್ವದ ಗಮನ ಭಾರತದ ಕಡೆಗೆ ತಿರುಗಲಿದೆ. ಹೊಸದಾಗಿ ಇಲ್ಲಿಗೆ ಸಮೀಪದ ನೊಯಿಡಾದಲ್ಲಿ ನಿರ್ಮಾಣವಾದ ಟ್ರ್ಯಾಕ್‌ನಲ್ಲಿ ಯಾವ ತಂಡದ ಚಾಲಕನ ಕಾರು ಮುನ್ನುಗ್ಗುತ್ತದೆಂದು ಎಲ್ಲರೂ ಕುತೂಹಲದಿಂದ ಕಾಯ್ದಿದ್ದಾರೆ.

ಈ ಸಾಲಿನಲ್ಲಿ ಬಾಕಿ ಇರುವ ಮೂರು ರೇಸ್‌ಗಳಲ್ಲಿ ಇಲ್ಲಿ ನಡೆಯುವುದೂ ಒಂದಾಗಿದೆ. ಆನಂತರ ಕೊನೆಯ ಎರಡು ರೇಸ್‌ಗಳು ಅಬುಧಾಬಿ ಹಾಗೂ ಬ್ರೆಜಿಲ್‌ನಲ್ಲಿ ನಡೆಯಲಿವೆ. ಆದ್ದರಿಂದ ಪ್ರತಿಯೊಂದು ರೇಸಿಂಗ್ ತಂಡದವರು ಪಾಯಿಂಟ್ಸ್ ಹೆಚ್ಚಿಸಿಕೊಳ್ಳಲು ಪ್ರಬಲ ಪೈಪೋಟಿ ನಡೆಸಲು ಸಜ್ಜಾಗುತ್ತಿದ್ದಾರೆ. ಸಹಾರಾ ಫೋರ್ಸ್ ಇಂಡಿಯಾ ಕೂಡ ಐದನೇ ಸ್ಥಾನಕ್ಕೇರುವ ಕನಸು ಕಾಣುತ್ತಿದೆ. ಆದ್ದರಿಂದ ಭಾರತದಲ್ಲಿನ ಫಾರ್ಮುಲಾ ಒನ್ ಈ ರೇಸಿಂಗ್ ಋತುವಿನ ಮಹತ್ವದ ಘಟ್ಟವೆನಿಸಿದೆ.

ಒಂದೆಡೆ ರೇಸಿಂಗ್ ತಂಡಗಳ ತಂತ್ರಜ್ಞರು ಉತ್ತಮ ಪ್ರದರ್ಶನದ ನಿರೀಕ್ಷೆಯೊಂದಿಗೆ ಕಾರ್ ಸಜ್ಜುಗೊಳಿಸುವಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ರೇಸರ್‌ಗಳು ಹೊಸ ಟ್ರ್ಯಾಕ್‌ನಲ್ಲಿ ಅದೃಷ್ಟವನ್ನು ಎದುರು ನೋಡುತ್ತಿದ್ದಾರೆ.

ಈಗಾಗಲೇ ನಿತ್ಯವೂ ಟ್ರ್ಯಾಕ್ ಸುತ್ತುವ ಕಾಯಕವನ್ನು ಅನೇಕ ತಂಡಗಳ ತಜ್ಞರು ಆರಂಭಿಸಿದ್ದಾರೆ. ಅವರ ಮೊದಲ ಗಮನ ಈ ಗ್ರ್ಯಾನ್ ಪ್ರೀಯಲ್ಲಿ ಯಶಸ್ಸು ಪಡೆಯುವುದು. ಆನಂತರ ಭಾರತದಲ್ಲಿ ಒಂದೆರಡು ದಿನ ಸುತ್ತುವುದು.

ಹೌದು; ಮರ್ಸಿಡೀಸ್ ಚಾಲಕ ನಿಕೊ ರೋಸ್‌ಬರ್ಗ್ ಐತಿಹಾಸಿಕ ತಾಜ್‌ಮಹಲ್ ನೋಡಿಕೊಂಡೇ ಹೋಗುವುದೆಂದು ತೀರ್ಮಾನ ಮಾಡಿದ್ದಾರೆ. ಸೌಬರ್ ತಂಡದ ಕಾಮುಯಿ ಕೊಬಾಯಾಶಿಗಂತೂ ಇಲ್ಲಿನ ಬಟರ್ ಚಿಕನ್ ಎಂದರೆ ಭಾರಿ ಇಷ್ಟ. ಇಲ್ಲಿಂದಲೇ ಅಲ್ಲವೇ ಈ ರುಚಿಕಟ್ಟಾದ ಆಹಾರ ಪದಾರ್ಥ ವಿಶ್ವದೆಲ್ಲೆಡೆ ಪ್ರಚಾರ ಪಡೆದಿದ್ದೆಂದು ಅವರು ಈಗಾಗಲೇ ತಮ್ಮ ಅಭಿಪ್ರಾಯವನ್ನು ಹರಿಬಿಟ್ಟಿದ್ದಾರೆ.

ಮೈಕಲ್ ಶೂಮೇಕರ್ ಅವರಂತೂ ಭಾರತದ ಬಗ್ಗೆ ಸಾಕಷ್ಟು ಕೇಳಿ ಹಾಗೂ ಓದಿ ತಿಳಿದುಕೊಂಡಿದ್ದಾರೆ. ಇದೊಂದು ವಿಭಿನ್ನವಾದ ಸಂಸ್ಕೃತಿಯ ತಾಣ. ನೋಡುವುದೇ ಸೊಗಸೆಂದು ಅವರು ಆಸಕ್ತಿಯಿಂದ ಕಾಯ್ದಿದ್ದಾರೆ. ರೆಡ್ ಬುಲ್ ಚಾಲಕರಾಗಿರುವ ಆಸ್ಟ್ರೇಲಿಯಾದ ಮಾರ್ಕ್ ವೆಬ್ಬರ್ ಸ್ವಲ್ಪ ಮಟ್ಟಿಗೆ ಕ್ರಿಕೆಟ್ ಆಸಕ್ತರು. ಆದ್ದರಿಂದ ಅವರು ಭಾರತದ ಕ್ರಿಕೆಟಿಗರ ಕುರಿತು ಮಾತನಾಡಲು ಇಷ್ಟಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT