ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿನ್‌ಲ್ಯಾಂಡ್ ವಿದ್ಯಾರ್ಥಿನಿಯೂ..ಕನ್ನಡ ಭಾಷೆಯೂ

Last Updated 23 ಜನವರಿ 2011, 19:35 IST
ಅಕ್ಷರ ಗಾತ್ರ

ನಿಮ್ಮ ಹೆಸರು ಏನು?
ಕೋಲಾರದ ಆದಿಮ ಸಾಂಸ್ಕೃತಿಕ ಸಂಘಟನೆಯ ಆವರಣದಲ್ಲಿ ನಿಂತ ಸರಳ ಉಡುಗೆಯ, ತುಂಬು ಉತ್ಸಾಹದ ನಗೆಯ, ನೀಳಕಾಯದ, 25ರ ಹರೆಯದ ಫಿನ್‌ಲ್ಯಾಂಡ್ ತರುಣಿ ಡೈನಾ ತನ್ನ ವಿಶಿಷ್ಟ ದನಿಯ ಕನ್ನಡದಲ್ಲಿ ಮಾತನಾಡಿದಾಗ ಕೇಳಿಸಿಕೊಂಡವರಿಗೆಲ್ಲ ಅದೇನೋ ಖುಷಿ.

ತಾವು ನೋಡೇ ಇರದ ದೇಶವೊಂದರ ಹೆಣ್ಣುಮಗಳು, ತಾನು ಈ ಬರದ ನಾಡಿಗೆ ಬರುವುದೆಂದರೆ ತುಂಬ ಇಷ್ಟ ಎಂದು ಹೇಳುವುದನ್ನು ಕೇಳಿ ಅವರ ಬೆರಗು ಕಣ್ಣುಗಳು ಹೊಳೆಯುತ್ತವೆ. ಆಕೆ ಮಾತ್ರ ಮೋಹಕವಾಗಿ, ಮಗುವಿನಂತೆ ಕಿಲಕಿಲನೆ ನಗುತ್ತ ತನಗೆ ಬರುವ ಕನ್ನಡ ಮಾತಾಡುತ್ತಾಳೆ. ಹಲವು ದಿನ ಕೋಲಾರದ ಆದಿಮ ಸಾಂಸ್ಕೃತಿಕ ಸಂಘಟನೆಯಲ್ಲಿ ತಂಗಿದ್ದ ಆಕೆ ಎಲ್ಲರ ಅಚ್ಚುಮೆಚ್ಚಿನ ಡೈನಾ.

ಸಾವಿರಾರು ಸರೋವರಗಳ ದೇಶವೆಂದೇ ಖ್ಯಾತವಾದ ಫಿನ್‌ಲ್ಯಾಂಡಿನ ರಾಜಧಾನಿಯ ಹೆಸರುಳ್ಳ ಹೆಲ್ಸಿಂಕಿ ವಿಶ್ವವಿದ್ಯಾಲಯದ ಮೊದಲ ವರ್ಷದ ಮಾನವಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿನಿಯಾದ ಆಕೆಗೆ ಸಾಮಾಜಿಕ-ಸಾಂಸ್ಕೃತಿಕ ಅಧ್ಯಯನವೆಂದರೆ ಇಷ್ಟ.
ಪದವಿ ಓದುವಾಗ ಇಂಟರ್ನ್‌ಶಿಪ್ ಸಲುವಾಗಿ ಕಳೆದ ವರ್ಷ ಭಾರತಕ್ಕೆ ಬಂದು ಕುಂದಾಪುರದಲ್ಲಿ 10 ದಿನದ ಶಿಬಿರದಲ್ಲಿ ತಂಗಿದ್ದ ಆಕೆಗೆ ಈಗ ಭಾರತ ಅಚ್ಚುಮೆಚ್ಚಿನ ದೇಶವಾಗಿಬಿಟ್ಟಿದೆ. ದೇಶವೊಂದನ್ನು ಹಚ್ಚಿಕೊಳ್ಳುವ ಹಲವು ಮಾದರಿಗಳ ನಡುವೆ ಆಕೆಯದ್ದು ವಿಶಿಷ್ಟ ನಿಲುವು. ಕುಂದಾಪುರದಲ್ಲಿ ಕೆಲವು ಕನ್ನಡ ಪದ ಬಳಸುವುದನ್ನು ಕಲಿತ ಆಕೆ ಅಲ್ಲಿಂದ ಮಂಗಳೂರು ಮತ್ತು ಬೆಂಗಳೂರು ನೋಡಿದ್ದಾರೆ. ಬೆಂಗಳೂರಿನ ಪೀಣ್ಯದ ಕೊಳಚೆ ಪ್ರದೇಶಗಳಲ್ಲಿ ’ದನಿ’ ಸ್ವಯಂಸೇವಾ ಸಂಸ್ಥೆಯ ನೇತೃತ್ವದಲ್ಲಿ ಕೆಲವು ತಿಂಗಳ ಕಾಲ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಕೆಲಸವನ್ನೂ ಮಾಡಿದ ಆಕೆಗೆ ಅದೇ ಸಂಸ್ಥೆಯ ಭಾರತಿ ಕನ್ನಡ ಕಲಿಸಿದ್ದರು.

ಡೈನಾಗೆ ಅದಷ್ಟೆ ಸಾಕೆನಿಸಲಿಲ್ಲ ಎಂಬುದು ವಿಶೇಷ. ಭಾರತವನ್ನು ಇನ್ನಷ್ಟು ಬಗೆಯಲ್ಲಿ ಅರ್ಥ ಮಾಡಿಕೊಳ್ಳಬೇಕೆನಿಸಿದೆ ಎಂದಾಗ ’ದನಿ’ ಸಂಸ್ಥೆಯವರು ಕೋಲಾರದ ಬಳಿ ಇರುವ ಸಾಂಸ್ಕೃತಿಕ ಸಂಸ್ಥೆ ’ಆದಿಮ’ದ ದಾರಿ ತೋರಿದರು. 2009ರ ಜನವರಿಯಲ್ಲಿ ಡೈನಾ ಆದಿಮಗೆ ಹೆಜ್ಜೆ ಇಟ್ಟರು. ಮಾರನೇ ದಿನದಿಂದಲೇ ಅವರು ಗುರು ದೊರೈರಾಜರಿಂದ ಡೊಳ್ಳು ಬಾರಿಸುವುದನ್ನು ಕಲಿತರು. ಆದಿಮದ ಹೆಣ್ಣುಮಕ್ಕಳ ಜೊತೆ ಕೂತು ಕಸೂತಿ ಕಲಿತರು. ದೊಡ್ಡಬಾಣಲೆಯಲ್ಲಿ ಎರಡು ಕೋಲು ತಿರುಗಿಸಿ ರಾಗಿ ಮುದ್ದೆ ತೊಳೆಸುವುದೂ ಆಕೆಗೀಗ ಗೊತ್ತು. ಮುದ್ದೆ ಆಕೆಗೆ ಇಷ್ಟದ ಆಹಾರ! ಮೊಗ್ಗಿನ ಜಡೆ ಹಾಕಿಸಿಕೊಂಡು ಆಕೆ ಸಂಭ್ರಮಿಸಿ ಹಿಗ್ಗಿದ ಕ್ಷಣವಂತೂ ಅವರ್ಣನೀಯ. ಆದಿಮದ ಕುಟೀರಗಳನ್ನು ನಿರ್ಮಿಸುವಾಗ ಆಕೆ ಮಣ್ಣಿನ ಗುಣಿ ತೋಡಿದ್ದೂ ಇದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಫಿನ್‌ಲ್ಯಾಂಡಿನಿಂದ ಆದಿಮದ ಮಣ್ಣಿಗೆ ಇಳಿದಾಕೆ.

ಅವರು ಈ ಬಾರಿ ಆದಿಮ ಅಧ್ಯಕ್ಷ ಕೋಟಿಗಾನಹಳ್ಳಿ ರಾಮಯ್ಯನವರೊಡನೆ ಕೋಲಾರ ತಾಲ್ಲೂಕಿನ ಹಲವು ಸರ್ಕಾರಿ ಶಾಲೆಗಳನ್ನು ಸುತ್ತಿದ್ದಾರೆ. ತಂದೆ, ತಾಯಿ ಮತ್ತು ಮೂವರು ಸಹೋದರರನ್ನು ಸದ್ಯಕ್ಕೆ ಬಿಟ್ಟು ಬಂದಿರುವ ಆಕೆಗೆ ಭಾರತದಲ್ಲೆ ನೆಲೆಯೂರುವ ಆಸೆಯೂ ಇದೆ.

ಆಕೆಯ ಮಾತುಗಳು ಇಲ್ಲಿವೆ...
‘ಭಾರತ ಸಾಂಸ್ಕೃತಿಕ ಅಧ್ಯಯನಕ್ಕೆ ಅದ್ಭುತ ಅವಕಾಶಗಳಿರುವ ದೇಶ. ನನಗಂತೂ ಇಲ್ಲಿನ ಅಧಿಕಾರ ಸಂಬಂಧ, ಆರ್ಥಿಕ, ಸಾಮಾಜಿಕ ಸಂಬಂಧಗಳು ಹೆಚ್ಚು ಕುತೂಹಲ ಹುಟ್ಟಿಸಿವೆ. ಸಾಮಾಜಿಕ ಮಾನವಶಾಸ್ತ್ರವನ್ನು ಪದವಿಯಲ್ಲಿ ಅಧ್ಯಯನ ಮಾಡಿರುವುದರಿಂದ ಅದನ್ನೆ ಆಧಾರವಾಗಿಟ್ಟುಕೊಂಡು ನನ್ನ ಪ್ರಬಂಧ ರಚಿಸುವೆ. ಸ್ವೀಡನ್, ದಕ್ಷಿಣ ಕೊರಿಯಾ, ಜಪಾನ್, ಥೈಲೆಂಡ್, ಚೈನಾ ಸೇರಿದಂತೆ ಮಧ್ಯ ಯೂರೋಪಿಯನ್ ದೇಶಗಳಲ್ಲಿ ಸಂಚರಿಸಿದ್ದೇನೆ. ಫಿನಿಶ್, ಇಂಗ್ಲಿಷ್, ಫ್ರೆಂಚ್ ಗೊತ್ತಿದೆ’

‘ನನ್ನದು ಶೇ 70ರಷ್ಟು ದಟ್ಟ ಅರಣ್ಯ ಪ್ರದೇಶವೇ ಇರುವ ದೇಶ. ಮರದ ಉದ್ಯಮ ಹೆಚ್ಚು. ನಮ್ಮ ದೇಶದಲ್ಲಿ ಚಳಿ ಜಾಸ್ತಿ. ಇಲ್ಲಿ ಮಾತ್ರ ಬೆಚ್ಚಗಿನ ವಾತಾವರಣವಿದೆ. ಇಲ್ಲಿನದಕ್ಕಿಂತ ನಮ್ಮ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಭಿನ್ನ. ಬಡವ-ಶ್ರೀಮಂತರೆಲ್ಲರಿಗೂ ಅನುಕೂಲಕರವಾಗಿದೆ. ಬಡ ಮಕ್ಕಳಿಗೆ ಸರ್ಕಾರವೇ ಉಚಿತ ಶಿಕ್ಷಣ ನೀಡುತ್ತದೆ’

‘ಮಹಿಳೆ ಸಬಲೀಕರಣಕ್ಕೆ ನಮ್ಮ ದೇಶದಲ್ಲಿ ಉತ್ತಮ ವಾತಾವರಣವಿದೆ. ಆದರೆ ಕುಟುಂಬಗಳಲ್ಲಿ ಮಾತ್ರ ಹಿಂಸೆ ದೊಡ್ಡಮಟ್ಟದಲ್ಲೆ ಇದೆ. ಭಾರತದಲ್ಲಿದ್ದಂತೆ ವರದಕ್ಷಿಣೆ ಕಿರುಕುಳ, ಸಾವಿನಂಥ ಘಟನೆಗಳು ನಡೆಯದಿದ್ದರೂ, ಹಿಂಸೆಯಿಂದ ಕೂಡಿದ ಕೊಲೆಗಳು ಇತ್ತೀಚೆಗೆ ಹೆಚ್ಚು ನಡೆಯುತ್ತಿವೆ. ಅಲ್ಲಿ ಜಾತಿ ಇಲ್ಲ. ವರ್ಗ ವ್ಯವಸ್ಥೆ ಇದೆ. ಇಲ್ಲಿ ಜಾತಿ, ವರ್ಗ ವ್ಯವಸ್ಥೆ ಎರಡೂ ಇದೆ’

‘ಭಾರತದಲ್ಲಿದ್ದಂತೆ ನಮ್ಮ ದೇಶದಲ್ಲೂ ಮದುವೆ ಎಂದರೆ ಎರಡು ಕುಟುಂಬಗಳ ಬಾಂಧವ್ಯವೇ ಆದರೂ ಅರೇಂಜ್ಡ್ ಮೇರೇಜ್ ಕಲ್ಪನೆ ನನಗೆ ಇಷ್ಟವಿಲ್ಲ. ಮದುವೆ ಯಶಸ್ಸಾಗಲು ಗಂಡು-ಹೆಣ್ಣಿನ ನಡುವೆ ಉತ್ತಮ ಗೆಳೆತನದ ತಳಪಾಯ ಅತ್ಯಗತ್ಯ ಎಂಬುದು ನನ್ನ ಖಚಿತ ನಿಲುವು. ಸದ್ಯಕ್ಕೆ ಮದುವೆ ಯೋಚನೆ ಇಲ್ಲ’.

‘ನನ್ನ ಅಪ್ಪ, ಅಮ್ಮ ನನಗಿರುವ ಸ್ವಾತಂತ್ರ್ಯದ ಅರಿವು ಮೂಡಿಸಿದವರು. ಜಗತ್ತನ್ನು ಸುತ್ತಿ ತಿಳಿಯುವುದರಲ್ಲಿರುವ ಮಹತ್ವವನ್ನು ಮನದಟ್ಟು ಮಾಡಿಸಿದವರು. ಹೀಗಾಗಿಯೇ ನಾನು ಭಾರತಕ್ಕೆ ಬರಲು ಸಾಧ್ಯವಾಯಿತು. ಫಿನ್‌ಲ್ಯಾಂಡ್‌ನಲ್ಲೆ ಮಾಡಬೇಕಾದ ಕೆಲಸ ದಂಡಿಯಾಗಿರುವಾಗ ಯಾಕೆ ಭಾರತಕ್ಕೆ ಹೋಗ್ತೀಯಾ ಎಂದು ಹಲವರು ನನ್ನನ್ನು ಕೇಳುತ್ತಾರೆ. ಆದರೆ ಭಾರತದ ಮೇಲಿನ ನನ್ನ ಪ್ರೀತಿ ಮತ್ತು ಕುತೂಹಲದ ಭಾವವನ್ನು ಅವರಿಗೆ ಭಾಷೆಯ ಮಿತಿಯಲ್ಲಿ ವಿವರಿಸಲು ಇದುವರೆಗೂ ಸಾಧ್ಯವಾಗಿಲ್ಲ’.

ಕಲಿಕೆಯ ಸಲುವಾಗಿ ನಾನೀಗ ಭಾರತಕ್ಕೆ ಬಂದಿದ್ದೇನೆ.   ಇಲ್ಲಿಯೇ ಸಮಾಜ ಸೇವೆ ಮಾಡಬೇಕೆಂಬ ಇರಾದೆಯೂ ಇದೆ. ಆದರೆ ದಿನಗಳು ಹೇಗೆ ಸಾಗುವುವೋ ನನಗೂ ಗೊತ್ತಿಲ್ಲ. ಫಿನ್‌ಲೆಂಡ್‌ನಲ್ಲೆ ಇರು ಎಂದು ಒತ್ತಾಯಿಸಿದರೂ, ನಾನು ಭಾರತದಲ್ಲಿರುವುದು ನನ್ನ ಮನೆಯವರಿಗೆ ಅಭಿಮಾನದ ವಿಷಯ. ಹೀಗಾಗಿ ನಾನು ನಿರಾಳ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT