ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಕುಶಿಮಾ ಅತ್ಯಂತ ಗಂಭೀರ

Last Updated 2 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ಟೋಕಿಯೊ/ ಫುಕುಶಿಮಾ (ಎಎಫ್‌ಪಿ): ಜಪಾನ್‌ನ ಫುಕುಶಿಮಾ ಅಣು ಸ್ಥಾವರ ಭಾರಿ ಅಪಾಯಕಾರಿ ಸ್ಥಿತಿ ತಲುಪಿದೆ. ಬೃಹತ್ ವಿಕಿರಣಯುಕ್ತ ತ್ಯಾಜ್ಯ ನೀರು ಸಂಗ್ರಾಹಕದಲ್ಲಿ ಸುಮಾರು 12 ಇಂಚು ಅಗಲದ ಬಿರುಕು ಬಿಟ್ಟಿದ್ದು, ತ್ಯಾಜ್ಯ ಸಮುದ್ರವನ್ನು ಸೇರುತ್ತಿದೆ. ಇಲ್ಲಿನ ಪರಿಸ್ಥಿತಿಯನ್ನು ಅಂತರ ರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ)    ‘ಅತ್ಯಂತ ಗಂಭೀರ ಸ್ಥಿತಿ’ ಎಂದು ಎಚ್ಚರಿಸಿದೆ.

ಸ್ಥಾವರದಿಂದ ವಿಕಿರಣಯುಕ್ತ ನೀರನ್ನು ಸುರಕ್ಷಿತವಾಗಿ ಸಂಗ್ರಹಿಸಿ ಬೇರೆಡೆಗೆ ಒಯ್ಯಲು ಹಡಗಿನಂತಹ ಉಕ್ಕಿನ ಬೃಹತ್ ತೇಲುಪಾತ್ರೆ (ಮೆಗಾ ಫ್ಲೋಟ್)ಯನ್ನು ಸಿದ್ಧಪಡಿಸಲಾಗಿದೆ. ಇದು ಒಂದು ಸಣ್ಣ ದ್ವೀಪದಷ್ಟೇ ದೊಡ್ಡದಾಗಿದೆ. ಖಾಸಗಿ ಒಡೆತನದಲ್ಲಿದ್ದ ಇದನ್ನು ಈ ಮೊದಲು ವಿಹಾರಕ್ಕಾಗಿ ‘ತೇಲುವ ದ್ವೀಪ ಪಾರ್ಕ್’ನಂತೆ ಬಳಸಲಾಗುತ್ತಿತ್ತು.

ಈ ಪಾತ್ರೆಯಲ್ಲಿ ಸುಮಾರು 10,000 ಟನ್‌ಗಳಷ್ಟು ವಿಕಿರಣಯುಕ್ತ ತ್ಯಾಜ್ಯ ನೀರು ಸಂಗ್ರಹಿಸಬಹುದಾಗಿದೆ. ಆದರೆ ಸ್ಥಾವರದ ಸುತ್ತ 13,000 ಟನ್‌ಗಳಷ್ಟು ಕಲುಷಿತ ನೀರು ಸಂಗ್ರಹವಾಗಿದ್ದು, ಅದನ್ನು ಒಟ್ಟುಗೂಡಿಸಲು ಟೋಕಿಯೊ ವಿದ್ಯುಚ್ಛಕ್ತಿ ಸಂಸ್ಥೆ (ಟೆಪ್ಕೊ)ಹರಸಾಹಸ ಮಾಡುತ್ತಿದೆ. ಸ್ಥಾವರದ ಸುತ್ತಲಿನ ಅಂತರ್ಜಲದಲ್ಲಿ ನಿಗದಿಗಿಂತ ಅತ್ಯಧಿಕ ಪ್ರಮಾಣದ ವಿಕಿರಣಯುಕ್ತ ಅಯೋಡಿನ್-131 ಅಂಶ ಪತ್ತೆಯಾಗಿದೆ. ಅಲ್ಲದೆ ಈ ಪ್ರದೇಶದ ನೆಲ, ಜಲ, ಆಕಾಶ ಎಲ್ಲವೂ ಭಾರಿ ಪ್ರಮಾಣದ ವಿಕಿರಣದಿಂದ ಅಪಾಯಕಾರಿ ಸ್ಥಿತಿಯಲ್ಲಿವೆ ಎನ್ನಲಾಗಿದೆ.

ಸ್ಫೋಟ ತಡೆ ಯತ್ನ: ಪರಮಾಣು ಸ್ಥಾವರದ ಕೇಂದ್ರ ಭಾಗದಲ್ಲಿ ಯುರೇನಿಯಂ ಮೂಲವಸ್ತು ಕರಗಿ ಜಲಜನಕದ ಸಂಗ್ರಹ ಹೆಚ್ಚಿ ಭಾರಿ ಸ್ಫೋಟ ಸಂಭವಿಸುವುದನ್ನು ತಡೆಯಲು ತಜ್ಞರು ಈಗ ಸಾರಜನಕವನ್ನು (ನೈಟ್ರೋಜನ್) ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ.  ಸ್ಥಾವರವನ್ನು ತಂಪಾಗಿಸಲು ನೀರು ಬೇಕಾಗಿದ್ದು, ನೌಕಾಪಡೆಯ ಬೃಹತ್ ಟ್ಯಾಂಕರ್‌ಗಳನ್ನು ಬಳಸಲಾಗುತ್ತಿದೆ.

ಪ್ರಧಾನಿ ಭೇಟಿ: ಫುಕುಶಿಮಾ ಸ್ಥಾವರ ಮತ್ತು ಸುನಾಮಿ ಸಂತ್ರಸ್ತ ಪ್ರದೇಶಗಳಿಗೆ ಪ್ರಧಾನಿ ನವಾಟೊ ಕಾನ್ ಶನಿವಾರ ಇದೇ ಪ್ರಥಮ ಬಾರಿಗೆ ಭೇಟಿ ನೀಡಿ ಪ್ರತ್ಯಕ್ಷ ಮಾಹಿತಿ ಸಂಗ್ರಹಿಸಿದರು.

15,540 ಮಂದಿ ಇನ್ನೂ ಪತ್ತೆ ಇಲ್ಲ

ಟೋಕಿಯೊ (ಐಎಎನ್‌ಎಸ್): ಜಪಾನ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕಂಪ ಹಾಗೂ ಸುನಾಮಿಗೆ ಬಲಿಯಾದವರ ಸಂಖ್ಯೆ 11,800ಕ್ಕೆ ಏರಿದೆ. ಈ ನಡುವೆ, ಈ ಸಂದರ್ಭದಲ್ಲಿ ಕಾಣೆಯಾಗಿದ್ದ 15,540 ಮಂದಿ ಇನ್ನೂ ಪತ್ತೆಯಾಗಿಲ್ಲ.

ಕಾಣೆಯಾದವರ ಶೋಧ ದಲ್ಲಿ ತೊಡಗಿರುವ ಅಮೆರಿಕ ಹಾಗೂ ಜಪಾನ್ ರಕ್ಷಣಾ ಪಡೆ ಯೋಧರ ಜಂಟಿ ಕಾರ್ಯಚರಣೆ ಭಾನುವಾರ ಅಂತ್ಯಗೊಳ್ಳಲಿದೆ.  ಅಲ್ಲಿಂದೀಚೆಗೆ ದೇಶವು ಪುನರ್ವಸತಿ ಕಾರ್ಯದತ್ತ ಗಮನಹರಿಸಲಿದೆ.

ಐಎಇಎ ಕಳವಳ
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ  ಶನಿವಾರ ನಡೆದ ವಿವಿಧ ದೇಶಗಳ ‘ಪರಮಾಣು ತುರ್ತು ನಿರ್ವಹಣಾ ಸಂಸ್ಥೆ’ಗಳ ಮುಖ್ಯಸ್ಥರ ಸಭೆಯಲ್ಲಿ ಫುಕುಶಿಮಾ ಸ್ಥಿತಿಯ ಬಗ್ಗೆ ಐಎಇಎ ಅಧ್ಯಕ್ಷ ಯುಕಿಯಾ ಅಮಾನೊ ಮತ್ತು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಾವರವನ್ನು ಸಹಜ ಸ್ಥಿತಿಗೆ ತರಲು ಇನ್ನೂ ಬಹಳ ಸಮಯ ಬೇಕಾಗಬಹುದು ಎಂದು ಅಮಾನ್ ಹೇಳಿದ್ದು, ಜಪಾನ್ ಏಕಾಂಗಿಯಲ್ಲ, ತುರ್ತುಸ್ಥಿತಿ ನಿಭಾಯಿಸಲು ಎಲ್ಲ ನೆರವನ್ನೂ ನೀಡಲಾಗುವುದು ಎಂದು ಮೂನ್ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT