ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇರ್ ಅಂಡ್ ಲವ್ಲಿ ಹುಡುಗಿಯರು

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ಆರ್ಥಿಕವಾಗಿ ಹಿಂದುಳಿದ, ಆದರೆ ಶೈಕ್ಷಣಿಕವಾಗಿ ಪ್ರತಿಭಾವಂತರಾದ ಬಾಲಕಿಯರ ದೊಡ್ಡ ದಂಡು ಅಲ್ಲಿ ಸಂಭ್ರಮದಿಂದ ನೆರೆದಿತ್ತು. ಸುನಿತಾ, ಆಯಿಷಾ, ಶ್ವೇತಾ, ಅಮೃತಾ, ಲತಾ ಮಾಧವರಾವ್, ಶ್ರುತಿ ಅವರಂತಹ ಅನೇಕ ಹುಡುಗಿಯರ ಮುಖದಲ್ಲಿ ನಗು ಲಾಸ್ಯವಾಡುತ್ತಿತ್ತು.

ನಡು ದಿನದಲ್ಲಿ ಪ್ರಜ್ವಲಿಸುತ್ತಿದ್ದ ಸೂರ್ಯನ ಬಿಸಿಲು ಕೂಡ ಅವರ ನಗುವಿಗೆ ಅಡ್ಡಿಪಡಿಸಲು ಹಿಂಜರಿಯುತ್ತಿದ್ದ. ಅದು ಕನಸು ನನಸಾದ ಸಮಯ. ಉನ್ನತ ಶಿಕ್ಷಣದ ಕನಸು ಹೊತ್ತ ಪ್ರತಿಭಾವಂತ ಹುಡುಗಿಯರ ಕನಸಿಗೆ ರೆಕ್ಕೆ ಕಟ್ಟಿದ್ದು `ಫೇರ್ ಆಂಡ್ ಲವ್ಲಿ ಪ್ರತಿಷ್ಠಾನ~.

ಸುನಿತಾ ಧ್ರುಪದ್ ಶಿಕ್ಷಕಿಯಾಗುವ ಕನಸು ಹೊತ್ತ ಹುಡುಗಿ. ಬಾಗಲಕೋಟೆಯ ನೇಕಾರರೊಬ್ಬರ ಮಗಳು ಈಕೆ. ಮನೆಯ ಕಡುಬಡತನ ಕನಸುಗಳನ್ನು ಹೆಣೆಯುವ ಆಕೆಯ ಉತ್ಸಾಹಕ್ಕೆ ಭಂಗ ತಂದಿಲ್ಲ. ಡಿಪ್ಲೊಮಾ ಪಡೆದು ಶಿಕ್ಷಕಿಯಾಗಬೇಕೆಂಬ ಹಂಬಲ ಆಕೆಗೆ. ಆದರೆ ಮಗಳ ಆಸೆಯನ್ನು ಕೈಗೂಡಿಸುವಷ್ಟು ಆರ್ಥಿಕ ಚೈತನ್ಯ ಅಪ್ಪನಿಗೆ ಇಲ್ಲ. ಈ ಸಂದರ್ಭದಲ್ಲಿ ಸುನಿತಾಳ ಆಸೆಗೆ ನೀರೆರೆದಿದ್ದು ಫೇರ್ ಆಂಡ್ ಲವ್ಲಿ ಪ್ರತಿಷ್ಠಾನ. ಈಗ ಸುನಿತಾ ಆತ್ಮವಿಶ್ವಾಸದ ಬುಗ್ಗೆ ಆಗಿದ್ದಾಳೆ. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಶಿಕ್ಷಕಿಯಾಗುವ ತಯಾರಿ ನಡೆಸಿದ್ದಾಳೆ.

ಆಯಿಷಾ ಬಾನು ಮುಲ್ಲಾ ಕೊಪ್ಪಳದವಳು. ಈಕೆ ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಾಕೆ. ಅಪ್ಪನ ಸಾವು ಬರ ಸಿಡಿಲಿನಂತೆ ಬಡಿಯಿತು. ಜತೆಗೆ ಸಂಸಾರದ ಹೊಣೆ ಹೆಗಲೇರಿತು.

ಆದರೂ ಈಕೆ ದೃತಿಗೆಡಲಿಲ್ಲ. ಅಣ್ಣನೊಂದಿಗೆ ಸೇರಿ ಕುಟುಂಬದ ಭಾರ ಹೊತ್ತಳು. ಈ ಹೊಣೆಗಾರಿಕೆ, ಸಂಸಾರದ ಜಂಜಡದ ನಡುವೆಯೂ ಆಕೆ ಓದಿಗೆ ಬೆನ್ನು ತೋರಿಸಲಿಲ್ಲ. ಬಿಬಿಎಂ ಪದವಿ ಪಡೆದು ಮುಂದೆ ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಹೊತ್ತಿದ್ದಾಳೆ.

ಶ್ವೇತಾ ಆಚಾರ್ಯ ಮೈಸೂರಿನ ಬಡಗಿಯೊಬ್ಬರ ಮಗಳು. ಮಗಳ ಉನ್ನತ ಶಿಕ್ಷಣದ ಕನಸಿಗೆ ನೀರೆರೆಯುವ ತಾಕತ್ತು ತಂದೆಗೆ ಇಲ್ಲ. ಆದರೆ ಆ ಕಾರಣಕ್ಕಾಗಿಯೇ ಮದುವೆಯಾಗಿ ತನ್ನ ಬದುಕನ್ನು ಅಂತ್ಯಗೊಳಿಸುವ ಇರಾದೆ ಕೂಡ ಆಕೆಗೆ ಇಲ್ಲ. ಮೈಕ್ರೋಬಯಾಲಜಿ ಅಥವಾ ಬಯೋ ಟೆಕ್ನಾಲಜಿಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ಆಕೆಯ ಕನಸಿಗೆ ರೆಕ್ಕೆ ಕಟ್ಟಿದ್ದು ಈ ವಿದ್ಯಾರ್ಥಿವೇತನ.

`ಯುವತಿಯರು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿರುವ ಎಲ್ಲ ನೆರವನ್ನು ನೀಡುವುದರತ್ತ ನಾವು ಗಮನ ಹರಿಸಿದ್ದೇವೆ. ಈ ಮೂಲಕ ಅವರು ರಾಷ್ಟ್ರದ ಸಂಪತ್ತಾಗಬೇಕು ಎನ್ನುವುದು ನಮ್ಮ ಆಶಯ~ ಎನ್ನುತ್ತಾರೆ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್‌ನ ಸ್ಕಿನ್ ಕೇರ್ ವಿಭಾಗದ ಉಪಾಧ್ಯಕ್ಷ ಗೋವಿಂದ ರಾಜನ್.

`ಇಂದು ನಾವು ಮಹಿಳೆಯರಿಗೆ ಉನ್ನತ ಶಿಕ್ಷಣ ನೀಡಿದರೆ ಮುಂದಿನ ಹಲವು ಪೀಳಿಗೆಗಳ ಅದು ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಕಾರಣಕ್ಕಾಗಿಯೇ ಆರ್ಥಿಕವಾಗಿ ಹಿಂದುಳಿದ ಹುಡುಗಿಯರಿಗೆ ಉನ್ನತ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ನೆರವು ನೀಡುವ ಈ ಕಾರ್ಯಕ್ರಮ ಒಂದು ಸಾಮಾಜಿಕ ಅಭಿವೃದ್ಧಿ ಚಟುವಟಿಕೆಯಾಗಿದೆ~ ಎನ್ನುತ್ತಾರೆ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಯ ಅಧ್ಯಕ್ಷ ಪ್ರೊ. ಸುಖದೇವ್ ಥಾರೋಟ್. 

ವೈ.ವಿ ಚವ್ಹಾಣ್ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜನಸಮೂಹದ ಎದುರು ಮಹತ್ವಾಕಾಂಕ್ಷೆ ಹೊಂದಿರುವ 219 ಹುಡುಗಿಯರು ಫೇರ್ ಆಂಡ್ ಲವ್ಲಿ ಪ್ರತಿಷ್ಠಾನದ ವಿದ್ಯಾರ್ಥಿವೇತನ ಸ್ವೀಕರಿಸಿದರು. ಈ ಹಣ ಬಡ ಹುಡುಗಿಯರ ಶಿಕ್ಷಣದ ಶುಲ್ಕ, ವಸತಿ, ಸ್ಥಳೀಯ ಪ್ರಯಾಣ ವೆಚ್ಚ, ಪುಸ್ತಕ ಮತ್ತು ಸ್ಟೇಷನರಿ ಖರ್ಚುಗಳಿಗೆ ಬಳಕೆ ಆಗಲಿದೆ. ಅಂದಹಾಗೆ ವಿದ್ಯಾರ್ಥಿ ವೇತನದ ಮೊತ್ತ ಒಂದು ಲಕ್ಷ ರೂಪಾಯಿ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT