ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್ ಶತಕೋಟಿ ಮೈಲಿಗಲ್ಲು!

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಾಲ್~ ಜತೆ ಮಾತುಕತೆ ನಡೆಸಬೇಕಾದರೆ ವಿಜಾಪುರದ ಗೋಲ್‌ಗುಂಬಜ್‌ಗೋಡೆ ಜತೆಗೇ ಮಾತುಕತೆ ನಡೆಸಬೇಕೆಂದು ಭಾವಿಸಬೇಕಿಲ್ಲ. ಫೇಸ್‌ಬುಕ್ `ವಾಲ್~ ಮೇಲೂ ಬೇಕಾದ್ದನ್ನೆಲ್ಲಾ ಬರೆದುಕೊಂಡು, ಇಷ್ಟಪಟ್ಟುಕೊಂಡು(ಲೈಕ್), ಹಂಚಿಕೊಂಡು(ಷೇರ್) ಗಂಟೆಗಟ್ಟಲೆ `ಚಾಟ್~ ಮಾಡಿಕೊಂಡು ಸಮಯ ಕೊಲ್ಲಬಹುದು. ಗೋಲ್‌ಗುಂಬಜ್‌ನ ಗೋಡೆ ದೂರದಲ್ಲಿದ್ದವರಿಗೆ ಪಿಸುಧ್ವನಿಯನ್ನು ರವಾನಿಸಿದರೆ, ಫೇಸ್‌ಬುಕ್‌ನ ವಾಲ್ ಇಡೀ ಪ್ರಪಂಚಕ್ಕೆ ನಿಮ್ಮ ಸಂದೇಶ ಬಿತ್ತರಿಸಬಲ್ಲುದು.

ಇಂಥ ಒಂದು ವಿಸ್ಮಯದ ಉದಯಕ್ಕೆ ಅಮೆರಿಕದ ಮಾರ್ಕ್ ಜುಕರ್‌ಬರ್ಗ್ ಮೂಲ ಕಾರಣನಾದರೂ ಈತನ ನಾಲ್ವರು ಸ್ನೇಹಿತರೂ `ಫೇಸ್‌ಬುಕ್~ ಈ ಮಟ್ಟಿಗೆ ಮುಂದುವರೆಯಲು ಕಾರಣಕರ್ತರು. ಅಧಿಕೃತವಾಗಿ 2004ರ ಫೆಬ್ರುವರಿ 4 ಈ ಜಾಗತಿಕ ಗೋಡೆಯ ಜನ್ಮದಿನಾಂಕ. ಸಾಮಾಜಿಕ ತಾಣಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ತಾಣ ಫೇಸ್‌ಬುಕ್ ಎಂಬುದು ಹೆಗ್ಗಳಿಕೆ.
 
ಇದೀಗ ತಿಂಗಳಿಗೆ ಒಂದು ಶತಕೋಟಿ ಕ್ರಿಯಾಶೀಲ ಬಳಕೆದಾರರನ್ನು ಹೊಂದುವ ಮೂಲಕ ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳಲ್ಲೇ ಅಧ್ವಿತೀಯ ಸಾಧನೆ ಮಾಡಿದೆ.
ಕಳೆದ ವಾರ ಲಂಡನ್ನಿನ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಫೇಸ್‌ಬುಕ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಹಾಗೂ ಸದ್ಯ ಅದರ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯೂ ಆಗಿರುವ ಜುಕರ್‌ಬರ್ಗ್ ವಿಶ್ವದ ಪ್ರತಿ ಏಳು ಜನರಲ್ಲಿ ಒಬ್ಬರು ಫೇಸ್‌ಬುಕ್ ಬಳಸುತ್ತಿದ್ದು, ಇದರಲ್ಲಿ 60 ಕೋಟಿ ಮಂದಿ ಮೊಬೈಲ್‌ನಲ್ಲಿ ಫೇಸ್‌ಬುಕ್ ಬಳಸುತ್ತಿದ್ದಾರೆ. ಜನರ ಮನಸುಗಳನ್ನು ಬೆಸೆದ ಅದ್ಭುತ ತಾಣ ಇದು ಎಂದಯ ಬೆನ್ನುತಟ್ಟಿಕೊಂಡಿದ್ದಾರೆ.

ಹೌದು, ಜುಕರ್‌ಬರ್ಗ್ ಮಾತು ಅಕ್ಷರಶಃ ಸತ್ಯ. ಇಂದು ಬಹುತೇಕ ಎಲ್ಲ ಪ್ರಮುಖ ದಿನಪತ್ರಿಕೆಗಳು, ಕಂಪೆನಿಗಳು, ಉದ್ದಿಮೆಗಳು ಮಾತ್ರವಲ್ಲ ಕೆಲವೊಂದು ಸರ್ಕಾರಿ ಇಲಾಖೆಗಳೂ ಕೂಡ ಫೇಸ್‌ಬುಕ್‌ನಲ್ಲಿ ಖಾತೆಗಳನ್ನು ತೆರೆದಿವೆ. ಈವರೆಗೆ 1.13 ಟ್ರಿಲಿಯನ್(ಲಕ್ಷ ಕೋಟಿಯಷ್ಟು) ಮೆಚ್ಚುಗೆ ಇದಕ್ಕೆ ದಕ್ಕಿದ್ದರೆ, ನಿತ್ಯ 30000 ಕೋಟಿ ಚಿತ್ರಗಳು ಫೇಸ್‌ಬುಕ್‌ಗೆ ಅಪ್‌ಲೋಡ್ ಆಗುತ್ತಿವೆ ಎನ್ನುತ್ತದೆ ಕಂಪೆನಿ.

ಯುವಜರು ಬೆಳಿಗ್ಗೆ ಎದ್ದೊಡನೆ ನೋಡುವುದು ದೇವರ ಚಿತ್ರಪಟವನ್ನಲ್ಲ, ಫೇಸ್‌ಬುಕ್ ವಾಲ್ ಅನ್ನು. ಮೊಬೈಲ್‌ನಲ್ಲಿ ಫೇಸ್‌ಬುಕ್ ಚೆಕ್ ಮಾಡಿ ಬೇರೆಯವರು ಹಾಕಿದ ಚಿತ್ರವಿಚಿತ್ರ ಪೋಸ್ಟರ್‌ಗಳಿಗೆ `ಲೈಕ್~ ಬಟನ್ ಒತ್ತುತ್ತಾ ಪರಿಚಿತರೊಂದಿಗೆ `ಷೇರ್~ ಮಾಡಿಕೊಳ್ಳುತ್ತಾ ಕಡೆಗೆ ತಾವೊಂದು ವಿಸ್ಮಯಕಾರಿ ಚಿತ್ರ ಹುಡುಕುತ್ತಾ ಹೋಗಿ ಎಲ್ಲಿಂದೆಲ್ಲೋ ಒಂದು ಚಿತ್ರವನ್ನೆತ್ತಿ ತಮ್ಮ ಫೇಸ್‌ಬುಕ್‌ನ ವಾಲ್‌ಗೆ ಅಂಟಿಸಿ ದಿನಚರಿ ಪ್ರಾರಂಭಿಸುವ ಅನೇಕರು ಮಲಗುವಾಗಲೂ ಫೇಸ್‌ಬುಕ್‌ನಲ್ಲಿಯೇ ಗುಡ್‌ನೈಟ್ ಹೇಳುವ ಗೀಳು ಹತ್ತಿಸಿಕೊಂಡಿರುತ್ತಾರೆ.

ಅಷ್ಟೆ ಅಲ್ಲ, ಫೇಸ್‌ಬುಕ್‌ನಲ್ಲಿ ಸ್ನೇಹಿತರ ಸಂಖ್ಯೆ ಹೆಚ್ಚಿದ್ದಷ್ಟೂ ಅದು ತಮ್ಮ ಪ್ರತಿಷ್ಠೆ ಎಂದು ಭಾವಿಸುವ ಮಂದಿಯೂ ನಮ್ಮಡನೆ ಇದ್ದಾರೆ. ಅಪರಿಚಿತರಿಗೆ ಸ್ನೇಹ ಹಸ್ತ ಚಾಚುತ್ತಾ, ತಮಗೆ ಬಂದ ಸ್ನೇಹದ ಕೋರಿಕೆಗಳನ್ನು ಪೂರ್ವಾಪರ ವಿಚಾರಿಸಿದೆ ಒಪ್ಪಿಕೊಳ್ಳುತ್ತಾ ತಮ್ಮ ಬಳಗವನ್ನು ಇನ್ನಷ್ಟು ಮತ್ತಷ್ಟು ವಿಸ್ತಾರಗೊಳಿಸುವ ಧಾವಂತ ಒಂದೆಡೆಯಾದರೆ.

ಫೇಸ್‌ಬುಕ್‌ನಲ್ಲಿ ಸಿಗುವ ಗೆಳೆಯ/ಗೆಳತಿಯರೊಡನೆ ಹರಟುತ್ತಾ, ಕಷ್ಟ-ಸುಖ ಹಂಚಿಕೊಳ್ಳುತ್ತಾ ಒಂದು ಬೇಡದ ಸಂಬಂಧವನ್ನು ಅಗಾಧವಾಗಿ ಬೆಳೆಸಿಕೊಂಡು ವೈಯಕ್ತಿಕ ಬದುಕಿನಲ್ಲಿ ಇಕ್ಕಟ್ಟಿಗೆ ಸಿಲುಕಿ ಪ್ರತಿ ಕ್ಷಣ ಆತಂಕಿತರಾಗುವವರೂ ಇದ್ದಾರೆ.

ಏನೇ ಇರಲಿ, ಇಷ್ಟಕ್ಕೆ ಮಾತ್ರ `ಫೇಸ್‌ಬುಕ್~ ಬುಕ್ ಆಗುತ್ತದೆ ಎಂದು ಹೇಳಿದರೆ ಅದು ಅರ್ಧಸತ್ಯ. ಈ ಫೇಸ್‌ಬುಕ್ ಮರೆತಿದ್ದ ಹಳೆಯ ಗೆಳೆಯ/ಗೆಳತಿಯರನ್ನು ನೆನಪಿಸಿ ಸಂಬಂಧವನ್ನು ಮತ್ತೆ ಬೆಸೆಯಿಸಬಹುದು, ಹೈಸ್ಕೂಲು-ಕಾಲೇಜಿನ ಸಹಪಾಠಿಗಳು, ಗೆಳೆಯ/ಗೆಳತಿಯರೊಡನೆ ಮತ್ತೆ ನಂಟು ಬೆಸೆದು ಸ್ನೇಹದ ಮುಂದುವರಿಕೆಗೆ ಕಾರಣವಾಗಲೂಬಹುದು ಎಂಬುದನ್ನು ಅಲ್ಲಗಳೆಯಲಿಕ್ಕೆ ಆಗದು.

ಹಾಗೆಯೇ ಫೇಸ್‌ಬುಕ್ ಮದುವೆಯ ಸಂಬಂಧ ಬೆಸೆಯುವ ತಾಣವಾಗಿಯೂ ಕೆಲವೊಮ್ಮೆ ಕಾರ್ಯನಿರ್ವಹಿಸಿರುವುದುಂಟು. ಜತೆಗೇ ಗಂಡ-ಹೆಂಡತಿ ಸಂಬಂಧದಲ್ಲಿ ಅನವಶ್ಯಕವಾಗಿ ಅಪನಂಬಿಕೆಗಳಿಗೆ ಕಾರಣವಾಗಿ ಸಂಬಂಧ ಮುರಿಯುವ ಮಾಧ್ಯಮವಾಗಿಯೂ ಪರಿಣಮಿಸಿರುವ ಉದಾಹರಣೆಗಳೂ ಇವೆ.

ಅಷ್ಟೇನೂ ಹೆಚ್ಚು ಬಂಡವಾಳ ಹೂಡಿಲ್ಲದ ಚಿಕ್ಕ ವರ್ತಕರಿಗೆ ಮಾರುಕಟ್ಟೆ ವೃದ್ಧಿಸಿಕೊಳ್ಳಲು ಫೇಸ್‌ಬುಕ್ ಒಂದು ಅಕ್ಷಯ ಪಾತ್ರೆಯೇ ಆಗಿದೆ. ಮಾರ್ಕೆಟಿಂಗ್‌ನಲ್ಲಿ ಇದರ ಪ್ರಚಾರ ಯಾವುದೇ ಜಾಹೀರಾತು ತಂದುಕೊಡುವ ಪ್ರತಿಕ್ರಿಯೆಗಿಂತ ಕಡಿಮೆ ಇಲ್ಲ. ನಿರಂತರವಾಗಿ ದಿನವೂ ಪೇಜ್ ಅಪ್‌ಡೇಟ್ ಮಾಡುತ್ತಿದ್ದಲ್ಲಿ ಸ್ನೇಹಿತರ ಬಳಗ ದೊಡ್ಡದಾಗಿ ತಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವಂತೆ ಫೇಸ್‌ಬುಕ್ ಪ್ರೇರೇಪಿಸುತ್ತದೆ.

ಕೆಲವು ತಿಂಗಳ ಹಿಂದೆಯಷ್ಟೇ ಟ್ಯುನಿಷಿಯಾ, ಈಜಿ  ಪ್ಟ್, ಯೆಮನ್‌ನಲ್ಲಿನ ಸಾಮಾಜಿಕ ಕ್ರಾಂತಿಗೂ ಪ್ರಮುಖ ಕಾರಣ ಇದೇ ಫೇಸ್‌ಬುಕ್. ಇದು ಕ್ರಾಂತಿಕಾರರನ್ನು ಒಂದೆಡೆ ಸೇರಿಸುವ, ವಿಚಾರ ವಿನಿಮಯದ ವೇದಿಕೆಯಾಗಿ ಪರಿಣಮಿಸಿ, ಟ್ಯುನಿಷೇಯಾ ಹಾಗೂ ಈಜಿಪ್ಟ್‌ನಲ್ಲಿ ಆಳುವ ಸರ್ಕಾರವನ್ನು ಕಿತ್ತೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಹಾಗೆಂದು ಇದು ವಿವಾದಗಳಿಂದೇನೂ ದೂರವಿಲ್ಲ. ಸೆನ್ಸಾರ್‌ಷಿಪ್, ಪ್ರೈವೆಸಿಯಂತಹ ಪ್ರಶ್ನೆ-ವಿವಾದಗಳು ಇದನ್ನು ಸುತ್ತಿಕೊಂಡಿವೆ. ಚೀನಾ, ಭಾರತ ಸೇರಿದಂತೆ ವಿಶ್ವದ ಕೆಲವು ದೇಶಗಳು ಫೇಸ್‌ಬುಕ್‌ನಲ್ಲಿರುವ ಆಕ್ಷೇಪಾರ್ಹ ಸಂಗತಿಗಳಿಂದ ಆಂತರಿಕ ಗಲಭೆ ಉಂಟಾಗುತ್ತದೆ ಎಂದು ದೂರಿ ಸೆನ್ಸಾರ್‌ಷಿಪ್ ವಿಧಿಸುವತ್ತ ಗಂಭೀರವಾಗಿ ಚಿಂತಿಸುತ್ತಿವೆ.

ಇತ್ತೀಚೆಗಷ್ಟೆ ಬೆಂಗಳೂರಿನಿಂದ ಅಸ್ಸಾಂ ಕಡೆಗೆ ಸಾಮೂಹಿಕವಾಗಿ ಗುಳೆ ಹೊರಟ ಈಶಾನ್ಯ ಭಾರತೀಯರಲ್ಲಿ ಭಯದ ವಿಷಬೀಜ ಬಿತ್ತಲು ಫೇಸ್‌ಬುಕ್ ಕೂಡ ಒಂದು ಸಾಧನವಾಯಿತೆಂಬುದು ತಾಜಾ ಉದಾಹರಣೆ.

ಆದಾಗ್ಯೂ ದಿನದಿಂದ ದಿನಕ್ಕೆ ದೈನಂದಿನ ಬದುಕಿನಲ್ಲಿ ಒಂದು ಅನಿವಾರ್ಯವಾಗುವತ್ತ ಫೇಸ್‌ಬುಕ್ ಹೊರಟಿದೆ. ಈವೆರಗೂ ಕೇವಲ ಬರಹ, ಫೋಟೊಗಳಿಗೆ ಮಾತ್ರ ಸೀಮಿತವಾಗಿದ್ದ ಫೇಸ್‌ಬುಕ್‌ನಲ್ಲಿ ಇದೀಗ ವಿಡಿಯೋ ಕೂಡ ಹಾಕುವ ಸೌಲಭ್ಯವನ್ನು ಒದಗಿಸಲಾಗಿದೆ. ಹೀಗಾಗಿ ಇದು ಇನ್ನಷ್ಟು ಜನಪ್ರಿಯವಾಗುತ್ತದೆ ಎಂಬುದು ಕಂಪೆನಿಯ ಆಂಬೋಣ.

25 ಕೋಟಿ ಬಳಕೆದಾರರು
ಏಳು ವರ್ಷದ ಹಿಂದೆ ಫೇಸ್‌ಬುಕ್ ಜನ್ಮತಳೆದಿದ್ದರೂ ಅದರ ಬಳಕೆದಾರರ ಸಂಖ್ಯೆ ದ್ವಿಗುಣಗೊಂಡಿರುವುದು ಕಳೆದ ಎರಡು ವರ್ಷಗಳಲ್ಲಿ. ಅಂದ ಹಾಗೆ ಫೇಸ್‌ಬುಕ್ ಹೆಚ್ಚು ಬಳಸುತ್ತಿರುವ ದೇಶಗಳಲ್ಲಿ ಮೊದಲ ಐದು ಸ್ಥಾನಗಳನ್ನು ಬ್ರೆಜಿಲ್, ಭಾರತ, ಇಂಡೋನೇಷ್ಯಾ, ಮೆಕ್ಸಿಕೊ ಹಾಗೂ ಅಮೆರಿಕ ಪಡೆದುಕೊಂಡಿವೆ. ಭಾರತದಲ್ಲಿ ಫೇಸ್‌ಬುಕ್ ಬಳಸುತ್ತಿರುವವರ ಸಂಖ್ಯೆ 25 ಕೋಟಿ ಮೀರಿದೆ.

ವರ್ಷದಿಂದ ವರ್ಷಕ್ಕೆ ರಾಕೆಟ್ ವೇಗದಲ್ಲಿ ಬೆಳೆಯುತ್ತಾ ಕಬಂದಬಾಹುಗಳನ್ನು ಚಾಚುತ್ತಿರುವ ಫೇಸ್‌ಬುಕ್ ಯಾರನ್ನೂ ಬಿಟ್ಟಿಲ್ಲ ಎಂದೇ ಹೇಳಬಹುದು. ಯುವಜನರಾದಿಯಾಗಿ ವೃದ್ಧರಿಗೂ ಇದರ ನಂಟಿನಿಂದ ತಪ್ಪಿಸಿಕೊಳ್ಳಲು ಆಗಿಲ್ಲ. ಇದರ ವೃದ್ಧಿ ರಕ್ತ ಬೀಜಾಸುರನಂತೆ.

ಒಂದಕ್ಕೆ ಎರಡಾಗಿ, ಎರಡಕ್ಕೆ ನಾಲ್ಕಾಗಿ, ನಾಲ್ಕಕ್ಕೆ ಎಂಟಾಗಿ...ಹೀಗೆ ದಿನೇ ದಿನೇ ತನ್ನ ವ್ಯಾಪ್ತಿಯನ್ನು ವಿಸ್ತಾರಗೊಳಿಸಿಕೊಳ್ಳುತ್ತಿರುವ ಫೇಸ್‌ಬುಕ್ ಒಳಗೊಳ್ಳದ ವಿಷಯಗಳೇ ಇಲ್ಲ!


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT