ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ರಫೆಲ್ ನಡಾಲ್, ಜೊಕೊವಿಚ್

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಎಎಫ್‌ಪಿ): ಸ್ಪೇನ್‌ನ ರಫೆಲ್ ನಡಾಲ್ ಮತ್ತು ಸರ್ಬಿಯದ ನೊವಾಕ್ ಜೊಕೊವಿಚ್ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ. ಮಹಿಳೆಯರ ವಿಭಾಗದ ಪ್ರಶಸ್ತಿಗೆ ಸೆರೆನಾ ವಿಲಿಯಮ್ಸ ಹಾಗೂ ಸಮಂತಾ ಸ್ಟಾಸರ್ ಹಣಾಹಣಿ ನಡೆಸುವರು.

ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ನಡಾಲ್ 6-4, 6-2, 3-6, 6-2 ರಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ ವಿರುದ್ಧ ಜಯ ಪಡೆದರು.

ಮ್ಯಾರಥಾನ್ ಹೋರಾಟ ಕಂಡುಬಂದ ಮತ್ತೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಅಗ್ರಶ್ರೇಯಾಂಕದ ನೊವಾಕ್ ಜೊಕೊವಿಚ್ 6-7, 4-6, 6-3, 6-2, 7-5 ರಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಅವರನ್ನು ಮಣಿಸಿದರು.

ಸೋಮವಾರ ನಡೆಯುವ ಫೈನಲ್ ಪಂದ್ಯ ಕಳೆದ ವರ್ಷದ ಫೈನಲ್‌ನ ಪುನರಾವರ್ತನೆ ಎನಿಸಲಿದೆ. ಏಕೆಂದರೆ, ಇವರಿಬ್ಬರು ಕಳೆದ ಬಾರಿಯೂ ಇಲ್ಲಿ ಫೈನಲ್‌ನಲ್ಲಿ ಎದುರಾಗಿದ್ದರು. ಮಾತ್ರವಲ್ಲ ಸ್ಪೇನ್‌ನ ಆಟಗಾರ ಚಾಂಪಿಯನ್ ಆಗಿದ್ದರು. ಇದೀಗ ಅಂದಿನ ಸೋಲಿಗೆ ಮುಯ್ಯಿ ತೀರಿಸುವ ಅವಕಾಶ ಜೊಕೊವಿಚ್‌ಗೆ ಲಭಿಸಿದೆ.

ನಡಾಲ್ ಪಂದ್ಯದುದ್ದಕ್ಕೂ ಪ್ರಭುತ್ವ ಮೆರೆದರು. ಮೂರನೇ ಸೆಟ್‌ನಲ್ಲಿ ಗೆಲುವು ಪಡೆದ ಮರ‌್ರೆ ಮರುಹೋರಾಟದ ಸೂಚನೆ ನೀಡಿದ್ದರು. ಆದರೆ ಮುಂದಿನ ಸೆಟ್‌ನಲ್ಲಿ ಸೊಗಸಾದ ಪ್ರದರ್ಶನ ನೀಡಿದ ನಡಾಲ್ ಫೈನಲ್‌ಗೆ ಲಗ್ಗೆಯಿಟ್ಟರು. ಇದು ಅವರ ವೃತ್ತಿಜೀವನದ 14ನೇ ಗ್ರ್ಯಾನ್ ಸ್ಲಾಮ್ ಫೈನಲ್ ಆಗಿದೆ.

`ಈ ವರ್ಷ ನಾನು ನೊವಾಕ್ ಜೊತೆ ಐದು ಸಲ ಪೈಪೋಟಿ ನಡೆಸಿದ್ದೇನೆ. ಎಲ್ಲವೂ ಫೈನಲ್ ಪಂದ್ಯಗಳು. ಮಾತ್ರವಲ್ಲ ಐದೂ ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದೇನೆ. ಈ ಬಾರಿ ಅದೃಷ್ಟ ನನ್ನ ಪರ ಇರಬಹುದು ಎಂಬ ವಿಶ್ವಾಸ ಹೊಂದಿದ್ದೇನೆ~ ಎಂದು ಸೋಮವಾರ ನಡೆಯುವ ಫೈನಲ್ ಪಂದ್ಯದ ಬಗ್ಗೆ ನಡಾಲ್ ಪ್ರತಿಕ್ರಿಯಿಸಿದ್ದಾರೆ.

ಜೊಕೊವಿಚ್ ಮತ್ತು ಐದು ಬಾರಿಯ ಚಾಂಪಿಯನ್ ಫೆಡರರ್ ನಡುವಿನ ಪಂದ್ಯವನ್ನು ಅರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ನೆರೆದ ಪ್ರೇಕ್ಷಕರು ಸುಲಭದಲ್ಲಿ ಮರೆಯಲು ಸಾಧ್ಯವಿಲ್ಲ. ಟೆನಿಸ್ ಜಗತ್ತಿನ ಇಬ್ಬರು ದಿಗ್ಗಜರು ಮೂರು ಗಂಟೆ 51 ನಿಮಿಷಗಳ ಕಾಲ ಪೈಪೋಟಿ ನಡೆಸಿದರು. ವೇಗದ ಸರ್ವ್, ಆಕರ್ಷಕ ರಿಟರ್ನ್ ಮತ್ತು ದೀರ್ಘ ರ‌್ಯಾಲಿಗಳ ಮೂಲಕ ಇಬ್ಬರೂ ಟೆನಿಸ್ ಆಟದ ಸೌಂದರ್ಯವನ್ನು ನೆರೆದ ಪ್ರೇಕ್ಷಕರ ಮುಂದೆ ತೆರೆದಿಟ್ಟರು.

ಮೊದಲ ಎರಡು ಸೆಟ್‌ಗಳಲ್ಲಿ ಸೋಲು ಅನುಭವಿಸಿದರೂ, ಅದ್ಭುತ ರೀತಿಯಲ್ಲಿ ತಿರುಗೇಟು ನೀಡಿ ಪಂದ್ಯವನ್ನು ಗೆದ್ದ ಜೊಕೊವಿಚ್ ತಾನೊಬ್ಬ ಛಲಗಾರ ಎಂಬುದನ್ನು ತೋರಿಸಿಕೊಟ್ಟರು. ವಿಶ್ವದ ಅಗ್ರ ರ‌್ಯಾಂಕಿಂಗ್‌ನ ಆಟಗಾರ ಎರಡು ಮ್ಯಾಚ್ ಪಾಯಿಂಟ್‌ಗಳನ್ನು ಸೇವ್ ಮಾಡಿಕೊಂಡು ಸೋಲಿನ ಸುಳಿಯಿಂದ ಪ್ರಯಾಸದಿಂದ ಪಾರಾಗಿ ಬಂದರು.

ಮೊದಲ ಎರಡು ಸೆಟ್‌ಗಳನ್ನು ಗೆದ್ದ ಸ್ವಿಸ್ ಆಟಗಾರ ಸುಲಭ ಗೆಲುವಿನ ನಿರೀಕ್ಷೆ ಮೂಡಿಸಿದ್ದರು. ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟರು. `ಸೋಲಿಗೆ ನಾನೇ ಕಾರಣ~ ಎಂದು ಪಂದ್ಯದ ಬಳಿಕ ಫೆಡರರ್ ಪ್ರತಿಕ್ರಿಯಿಸಿದರು.

ಫೈನಲ್‌ಗೆ ಸೆರೆನಾ, ಸ್ಟಾಸರ್: ಅಮೆರಿಕದ ಸೆರೆನಾ ವಿಲಿಯಮ್ಸ ಮತ್ತು ಆಸ್ಟ್ರೇಲಿಯದ ಸಮಂತಾ ಸ್ಟಾಸರ್ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದರು.

ಸೆಮಿಫೈನಲ್‌ನಲ್ಲಿ ಸೆರೆನಾ  6-2, 6-4 ರಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಡೆನ್ಮಾರ್ಕ್‌ನ ಕ್ಯಾರೊಲಿನ್ ವೊಜ್‌ನಿಯಾಕಿ ವಿರುದ್ಧ ಜಯ ಪಡೆದರು. ಸಮಂತಾ ಸ್ಟಾಸರ್ 6-3, 2-6, 6-2 ರಲ್ಲಿ ಜರ್ಮನಿಯ ಏಂಜೆಲಿಕ್ ಕೆರ್ಬರ್ ಅವರನ್ನು ಮಣಿಸಿದರು. ಇಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಸೆರೆನಾ ವೃತ್ತಿಜೀವನದ 13ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

ಮೆಲ್ಜರ್ ಜೋಡಿ ಚಾಂಪಿಯನ್: ಆಸ್ಟ್ರಿಯದ ಜರ್ಗನ್ ಮೆಲ್ಜರ್ ಮತ್ತು ಜರ್ಮನಿಯ ಫಿಲಿಪ್ ಪೆಟ್‌ಶ್ನೆರ್ ಜೋಡಿ ಪುರುಷರ ಡಬಲ್ಸ್ ವಿಭಾಗದ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಶನಿವಾರ ನಡೆದ ಫೈನಲ್‌ನಲ್ಲಿ ಮೆಲ್ಜರ್ ಮತ್ತು ಫಿಲಿಪ್ 6-2, 6-2 ರಲ್ಲಿ ಪೋಲೆಂಡ್‌ನ ಮರಿಯಸ್ ಫ್ರಿಸ್ಟೆನ್‌ಬರ್ಗ್ ಮತ್ತು ಮಾರ್ಸಿನ್ ಮಟೋವ್‌ಸ್ಕಿ ಎದುರು ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT