ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಭ್ರಿಕ್ ಸ್ಪಾ

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಫ್ಯಾಬ್ರಿಕ್ ಸ್ಪಾ... ಬ್ಯಾಂಡ್‌ಬಾಕ್ಸ್‌ಗೆ ನಿಯಮಿತವಾಗಿ ಉಡುಪುಗಳನ್ನು ಕೊಟ್ಟು ಕೊಳೆ, ಕಲೆ, ಬೆವರು ನೀಗಿಸಿಕೊಳ್ಳುವ, ಹಳೆಯ ಬಟ್ಟೆಗಳಿಗೆ ಹೊಸದಾಗಿಸಿಕೊಳ್ಳುವ ಗ್ರಾಹಕರನ್ನು ಸೆಳೆಯುತ್ತಿರುವ ವಿನೂತನ ಮತ್ತು ಉತ್ತಮ ದರ್ಜೆಯ ಸೇವೆ. ಸಿಲಿಕಾನ್ ಸಿಟಿಗೆ ಈ ಸೇವೆಯನ್ನು ಪರಿಚಯಿಸಿದ ಜ್ಯೋತಿ ಫ್ಯಾಬ್ರಿಕೇರ್ ಸರ್ವಿಸ್ ಲಿಮಿಟೆಡ್ (ಜೆಎಫ್‌ಎಸ್‌ಎಲ್)ನ ಘೋಷವಾಕ್ಯವೂ ಇದುವೇ.

`ಬಟ್ಟೆ, ವಿನ್ಯಾಸ, ಚಿತ್ತಾರ, ಕಸೂತಿ ಹೀಗೆ ಯಾವುದೇ ದೃಷ್ಟಿಯಿಂದಲೂ ಉಡುಪಿನ ನೋಟ ಮತ್ತು ಬಾಳ್ವಿಕೆಗೆ ಧಕ್ಕೆಯಾಗದಂತೆ, ಪ್ರತಿ ಬಾರಿಯೂ ಹೊಚ್ಚ ಹೊಸದರಂತೆ ಕಾಣಿಸುವ ತಾಂತ್ರಿಕ ಚಮತ್ಕಾರ ಫ್ಯಾಬ್ರಿಕ್ ಸ್ಪಾನದು. ಹಾನಿಕಾರಕ ರಾಸಾಯನಿಕ, ಕೊಳೆ ನಿವಾರಕಗಳನ್ನು ನಾವು ಬಳಸುವುದಿಲ್ಲ.
 
ಕೊಳೆ, ಕಲೆಯ ತೀವ್ರತೆಯನ್ನು ಆಧರಿಸಿ ಅದಕ್ಕೆ ಸೂಕ್ತವಾದ `ಚಿಕಿತ್ಸೆ~ಯನ್ನಷ್ಟೇ ನೀಡುವ ಕಾರಣ ಬಟ್ಟೆಯ ಆಯುಸ್ಸು, ಚಂದ ಹದಗೆಡುವುದಿಲ್ಲ, ಬಣ್ಣವೂ ಕಳೆಗುಂದುವುದಿಲ್ಲ. ಸಾಮಾನ್ಯ ಬ್ಯಾಂಡ್‌ಬಾಕ್ಸ್‌ನಲ್ಲಿ ಇಂತಹ ತಜ್ಞರ ಸೇವೆ, ಸಲಹೆ ನಿಮಗೆ ಲಭ್ಯವಿರುವುದಿಲ್ಲ ಎನ್ನುವ ವಿವರಣೆ ಜೆಎಫ್‌ಎಸ್‌ಎಲ್ ಫ್ಯಾಬ್ರಿಕ್ ಸ್ಪಾದ ಉಪ ವ್ಯವಸ್ಥಾಪಕ ನಿರ್ದೇಶಕ ಕೆ. ಉಲ್ಲಾಸ್ ಕಾಮತ್ ಅವರದು.

ಫ್ಯಾಬ್ರಿಕ್ ಸ್ಪಾ ಎಂಬ ಅತ್ಯಾಧುನಿಕ ಲಾಂಡ್ರಿ ಸೇವೆ ಗ್ರಾಹಕರನ್ನು ಬಲುವೇಗವಾಗಿ ತನ್ನತ್ತ ಸೆಳೆಯುತ್ತಿದೆ. ದೊಡ್ಡಬಳ್ಳಾಪುರದ ಅಪಾರೆಲ್ ಪಾರ್ಕ್‌ನಲ್ಲಿ ಫ್ಯಾಕ್ಟರಿ ಹೊಂದಿರುವ ಸಂಸ್ಥೆಯು ನಗರದಲ್ಲಿ ಈಗಾಗಲೇ 15ಕ್ಕೂ ಹೆಚ್ಚು ಶಾಖೆಗಳನ್ನು ತೆರೆದಿದೆ.
 
ಫ್ಯಾಕ್ಟರಿಯಲ್ಲಿ ದಿನವೊಂದಕ್ಕೆ 40ಸಾವಿರಕ್ಕೂ ಅಧಿಕ ಬಟ್ಟೆಗಳು ಅಂದರೆ 12 ಟನ್‌ಗೂ ಹೆಚ್ಚು ಬಟ್ಟೆಗಳು ಸ್ಪಾ `ಚಿಕಿತ್ಸೆ~ ಪಡೆಯುತ್ತವೆ ಎಂದರೆ ನಂಬುತ್ತೀರಾ? 40 ಕೋಟಿ ರೂಪಾಯಿಗೂ ಹೆಚ್ಚಿನ ವೆಚ್ಚದಲ್ಲಿ ಅನುಷ್ಠಾನಗೊಂಡಿರುವ ಫ್ಯಾಕ್ಟರಿಯಲ್ಲಿ ಸ್ಪಾಗೆ ಸಂಬಂಧಿಸಿದ ಎಲ್ಲಾ ಬಗೆಯ ಕೆಲಸಗಳನ್ನೂ ವಿಶ್ವದರ್ಜೆಯ ಯಂತ್ರೋಪಕರಣಗಳೇ ನಿರ್ವಹಿಸುತ್ತವೆ. ಗ್ರಾಹಕರಿಗೆ ಎರಡೇ ದಿನದಲ್ಲಿ ಲಾಂಡ್ರಿ ಸೇವೆ ಲಭ್ಯವಾಗಲು ಇದೇ ಕಾರಣ.

`ಬ್ಯುಸಿ ಈಸಿ~
ಜೆಎಫ್‌ಎಸ್‌ಎಲ್ ತನ್ನ ಗ್ರಾಹಕರಿಗೆ ಕೆಲವು ಸರಳೋಪಾಯಗಳನ್ನೂ ಒದಗಿಸಿದೆ. ಮುಖ್ಯವಾಗಿ, ಫ್ಯಾಬ್ರಿಕ್ ಸ್ಪಾಗೆ ಸದಸ್ಯರಾಗುವ ಅವಕಾಶ. ಸದಸ್ಯರಿಗೆ ಸಂಸ್ಥೆ ಕೊಡುವ ಅಧಿಕೃತ ಕಾರ್ಡ್‌ನಲ್ಲಿ ಗುರುತಿನ ಸಂಖ್ಯೆಯೂ ಇರುತ್ತದೆ. ಪ್ರತಿ ಬಾರಿ ಲಾಂಡ್ರಿಗೆ ಬಟ್ಟೆ ಕೊಡುವಾಗಲೂ ಈ ಸಂಖ್ಯೆ ಬಳಕೆಯಾಗುತ್ತದೆ.

ನಿಯಮಿತವಾಗಿ ಬಟ್ಟೆಗಳನ್ನು ಲಾಂಡ್ರಿಗೆ ಕೊಡುವ ಗ್ರಾಹಕರ ಮನೆಯಿಂದಲೇ ಬಟ್ಟೆಗಳನ್ನು ಸಂಗ್ರಹಿಸಿ ಮನೆ ಬಾಗಿಲಿಗೆ ತಲುಪಿಸುವ ಡೋರ್ ಡೆಲಿವರಿ ಸೇವೆಯನ್ನು ಇದು ಸರಳೀಕರಿಸುತ್ತದೆ. ಸದಸ್ಯರು ತಿಂಗಳಲ್ಲಿ ಒಂದು ದಿನಾಂಕವನ್ನು ನಿಗದಿಪಡಿಸಿಕೊಳ್ಳಬೇಕು.

ಆ ದಿನಾಂಕದಂದು ಯಾವ ಸಮಯದಲ್ಲಿ ಬಟ್ಟೆ ಸಂಗ್ರಹಿಸಲು ಬರಬೇಕು ಎಂದು ಎಸ್‌ಎಂಎಸ್ ಮಾಡಿದರೆ ಅಷ್ಟು ಹೊತ್ತಿಗೆ ಅವರ ಮನೆ ಬಾಗಿಲಲ್ಲಿ ಫ್ಯಾಬ್ರಿಕ್ ಸ್ಪಾದ `ಬಟ್ಟೆ ಸಂಗ್ರಹಣಾ ವಾಹನ~ ಬಂದು ನಿಲ್ಲುತ್ತದೆ. ನೀವು ಬ್ಯುಸಿ, ಲಾಂಡ್ರಿ ಈಸಿ...!
`ವೆಟ್ ವಾಶ್, ಡ್ರೈ ವಾಶ್, ಪ್ರೆಸಿಂಗ್, ಕೊಳೆ ನಿವಾರಣೆ (ಸ್ಟೇನ್ ರಿಮೂವಲ್), ಜೊತೆಗೆ ಪಾಲಿಶಿಂಗ್, ಬಣ್ಣ ಬಳಿಯುವ ಡಯಿಂಗ್, ಶುಭ್ರಗೊಳಿಸುವ ವೈಟನಿಂಗ್, ಸಣ್ಣಪುಟ್ಟ ದುರಸ್ತಿ (ಡಾರ್ನಿಂಗ್)ಗೆ ಇಲ್ಲಿ ಬೇಡಿಕೆ ಹೆಚ್ಚು.

ನಮ್ಮಲ್ಲಿರುವ ಫ್ಯಾಬ್ರಿಕ್ ತಜ್ಞರು ಪ್ರತಿಯೊಂದು ಬಟ್ಟೆಯನ್ನೂ ಗ್ರಾಹಕರ ಸಮ್ಮುಖದಲ್ಲೇ ಕೂಲಂಕಷವಾಗಿ ಪರಿಶೀಲಿಸಿ ಯಾವ ಬಟ್ಟೆಗೆ ಯಾವ ಬಗೆಯ ಸೇವೆ ಅಗತ್ಯ ಎಂಬುದನ್ನು ವಿವರಿಸುತ್ತಾರೆ. ಅದರನ್ವಯ ದರ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ ಹತ್ತಿಯ ಶರ್ಟ್‌ಗೆ ರೂ. 220, ಯಾವುದೇ ಬಗೆಯ ಸೀರೆಗೆ ರೂ. 364, ಚೂಡಿದಾರ್‌ಗೆ ರೂ. 145ರಂತೆ ಶುಲ್ಕ ವಿಧಿಸಲಾಗುತ್ತದೆ~ ಎನ್ನುತ್ತಾರೆ ಇಂದಿರಾನಗರ ಶಾಖೆಯ ವ್ಯವಸ್ಥಾಪಕ ಮೂರ್ತಿ.

ಸಮಸ್ಯೆಯೇ ಸವಾಲಾದಾಗ...
ಫ್ಯಾಬ್ರಿಕ್ ಸ್ಪಾದಂತಹ ವಿನೂತನ ಲಾಂಡ್ರಿ ಸೌಲಭ್ಯ ಕೆ. ಉಲ್ಲಾಸ್ ಕಾಮತ್ ಎಂಬ ಯುವಕನ ಕಲ್ಪನೆಯ ಕೂಸು. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಕಾಮತ್ ಹೇಳುತ್ತಾರೆ: `ವೃತ್ತಿಸಂಬಂಧ ತಿಂಗಳುದ್ದಕ್ಕೂ ಪರವೂರುಗಳಿಗೆ ಪ್ರವಾಸ ಕೈಗೊಳ್ಳುವಾಗೆಲ್ಲ ಬಟ್ಟೆಗಳನ್ನು ಕೊಂಡೊಯ್ಯುವುದೇ ದೊಡ್ಡ ಸಮಸ್ಯೆಯಾಗುತ್ತಿತ್ತು.

ಪಂಚತಾರಾ ಹೋಟೆಲ್‌ಗಳನ್ನು ಬಿಟ್ಟರೆ ಬೇರೆಲ್ಲೂ ಗುಣಮಟ್ಟದ ಲಾಂಡ್ರಿ ಲಭ್ಯವಿರುತ್ತಿರಲಿಲ್ಲ. ಇದಕ್ಕೆ ನಾನೇ ಯಾಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಾರದು ಎಂದು ಯೋಚಿಸಿದೆ. ನನ್ನ ಚಿಂತನೆಗೆ ಮುಂಬೈನ ಜ್ಯೋತಿ ಲ್ಯಾಬೊರೆಟರೀಸ್ (ಉಜಾಲಾ ತಯಾರಿಕಾ ಸಂಸ್ಥೆ) ನೆರವಿಗೆ ಬಂತು.
 
ಫ್ಯಾಬ್ರಿಕ್ ಸ್ಪಾ ಕಾರ್ಯರೂಪಕ್ಕೆ ಬಂತು.  ಗ್ರಾಹಕರು ತಮ್ಮ ಬಟ್ಟೆಗಳನ್ನು ಹೊತ್ತುಕೊಂಡು ಲಾಂಡ್ರಿಗೆ ಓಡಾಡಬೇಕಿಲ್ಲ. ಪೀಜಾ, ಬರ್ಗರ್‌ಗೆ ಆರ್ಡರ್ ಕೊಡುವ ರೀತಿಯಲ್ಲೇ ನಮ್ಮ 4664 4664ಗೆ ಕರೆ ಮಾಡಿ `ಆರ್ಡರ್~ ಕೊಟ್ಟರಾಯಿತು~.

ಗ್ರಾಹಕರು ಏನಂತಾರೆ?
ಫ್ಯಾಬ್ರಿಕ್ ಸ್ಪಾ ಸ್ವಲ್ಪ ದುಬಾರಿ ಎನಿಸಿದರೂ ಗ್ರಾಹಕರ ಮೆಚ್ಚುಗೆ ಗಳಿಸಿರುವುದು ಸುಳ್ಳಲ್ಲ. ಆದರೆ ಇಲ್ಲಿಯೂ ಇತರ ಲಾಂಡ್ರಿ/ಬ್ಯಾಂಡ್‌ಬಾಕ್ಸ್‌ಗಳಲ್ಲಿ ಆಗುವಂತೆ ಆಗಿರುವ ಕಹಿ ಅನುಭವಗಳನ್ನು ಹಲವಾರು ಗ್ರಾಹಕರು ಫೇಸ್‌ಬುಕ್‌ನಲ್ಲಿ ಹರಿಯಬಿಟ್ಟಿದ್ದಾರೆ. ತಮ್ಮ ಉಡುಪುಗಳು ಇನ್ನಿಲ್ಲದಂತೆ ಹಾಳಾಗಿವೆ ಎಂದೂ ಜಿಗುಪ್ಸೆ ವ್ಯಕ್ತಪಡಿಸಿದ್ದೂ ಇದೆ.

ಜೆಎಫ್‌ಎಸ್‌ಎಲ್‌ನ ಜಾಲತಾಣಕ್ಕೆ ಭೇಟಿಕೊಟ್ಟರೆ, `ನಮ್ಮಲ್ಲಿ ಬಟ್ಟೆಗಳಿಗೆ ಹಾನಿಯಾದರೆ ಹತ್ತು ಪಟ್ಟು ಅಧಿಕ ಮೊತ್ತವನ್ನು ಪರಿಹಾರರೂಪದಲ್ಲಿ ಕೊಡುತ್ತೇವೆ~ ಎಂದು ಹೇಳಿಕೊಂಡಿದೆ. ಆದರೆ `ಸಂತ್ರಸ್ತ~ ಗ್ರಾಹಕರು `ತಿಂಗಳುಗಟ್ಟಲೆ ಅಲೆದಾಡಿದ್ದೇವೆ, ನಮಗೆ ಪರಿಹಾರ ಬಿಡಿ, ಕನಿಷ್ಠ ಕ್ಷಮೆ ಕೋರುವ ಸೌಜನ್ಯವನ್ನೂ ಸಂಸ್ಥೆ ಮಾಡಿಲ್ಲ~ ಎಂದು ದೂರಿಕೊಂಡವರೂ ಇದ್ದಾರೆ.

ಅದೇನೇ ಇದ್ದರೂ ಫ್ಯಾಬ್ರಿಕ್ ಸ್ಪಾದಂತಹ ವಿಶ್ವದರ್ಜೆಯ ಸೇವೆ ಲಾಂಡ್ರಿ ಕ್ಷೇತ್ರದಲ್ಲಿ ಮೈಲಿಗಲ್ಲು ಎಂಬುದಂತೂ ಸತ್ಯ.

ಲಾಂಡ್ರಿ ಮಾಹಿತಿ ಕೇಳಬ್ಯಾಡ್ರಿ..!
ಫ್ಯಾಬ್ರಿಕ್ ಸ್ಪಾದ ಬಗ್ಗೆ ಮಾಹಿತಿ ಕಲೆಹಾಕುವ ಮೊದಲ ಪ್ರಯತ್ನವಾಗಿ ಸರ್ಚ್ ಎಂಜಿನ್ ಮೊರೆ ಹೋದಾಗ ಸಮಗ್ರವಾದ ವಿವರಗಳೇನೊ ಸಿಕ್ಕಿದವು. ಆದರೆ ಅವುಗಳನ್ನು ಸಂಸ್ಥೆಯ ಕಡೆಯಿಂದಲೇ ಪಡೆದುಕೊಂಡು ಸ್ಪಷ್ಟತೆ ಕೊಡೋಣ ಅಂದುಕೊಂಡು ಡಬ್ಲ್ಯೂಡಬ್ಲ್ಯೂಡಬ್ಲ್ಯೂ.

ಫ್ಯಾಬ್ರಿಕ್‌ಸ್ಪಾ ಡಾಟ್ ಕಾಮ್‌ನ `ನಮ್ಮನ್ನು ಸಂಪರ್ಕಿಸಿ~ ವಿಭಾಗದಲ್ಲಿರುವ ಗ್ರಾಹಕ ಸೇವಾ ಸಂಖ್ಯೆ 4664 4664ಗೆ ಕರೆ ಮಾಡಲಾಯಿತು. ಕರೆ ಸಂಖ್ಯೆಯಿಂದ ಸಂಖ್ಯೆಗೆ ವಿಸ್ತರಣೆಗೊಂಡಿತೇ ವಿನಾ ಸ್ಪಾದ ಬಗ್ಗೆ ಯಾರೊಬ್ಬರೂ ಬಾಯಿಬಿಡಲಿಲ್ಲ.

ಸಂಸ್ಥೆಯ ಉಪ ವ್ಯವಸ್ಥಾಪಕ ನಿರ್ದೇಶಕ ಕೆ. ಉಲ್ಲಾಸ್ ಕಾಮತ್ ಅವರ ಜಿ ಮೇಲ್ ಖಾತೆಗೆ ಒಂದು ಇಮೇಲ್ ಮಾಡಿ, ನಿಮ್ಮ ಸಂದರ್ಶನ ಬೇಕು ಅಂತ ನಿರೀಕ್ಷಿಸಿದೆ.

ತಿಂಗಳು ಕಳೆದರೂ ಪ್ರತಿಕ್ರಿಯೆ ಇಲ್ಲ!
ಕೊನೆಗೆ, ಮಣಿಪಾಲ್ ಸೆಂಟರ್‌ನಲ್ಲಿರುವ ಜೆಎಫ್‌ಎಸ್‌ಎಲ್‌ನ ಪ್ರಾದೇಶಿಕ ಕಚೇರಿಗೆ ಗ್ರಾಹಕಿಯಂತೆ ಭೇಟಿ ನೀಡಿ ವಿವರ ಕೇಳಿದಾಗಲೂ `ನೀವು ಸದಸ್ಯರಾಗಿದ್ದೀರಾ?~ ಎಂದು ಕೇಳಿದರು ರಿಸೆಪ್ಷನಿಸ್ಟ್. ಆಗುವ ಇಚ್ಛೆಯಿದೆ. ಮೊದಲು ಅದರ ಬಗ್ಗೆ ನನಗೆ ಮಾಹಿತಿ ಕೊಟ್ಟರೆ ಅನುಕೂಲವಾಗುತ್ತದೆ~ ಎಂದೆ.

`ಸೇಲ್ಸ್ ಮ್ಯಾನೇಜರ್ ಮೀಟಿಂಗ್‌ನಲ್ಲಿದ್ದಾರೆ. ಮೂರ್ತಿ ಅನ್ನುವವರಿಗೆ ಕರೆ ಮಾಡಿ. ಅವರೇ ಹೇಳುತ್ತಾರೆ. ನಾವು ಮಾಹಿತಿ ಕೊಡಲಾಗುವುದಿಲ್ಲ~ ಎಂಬ ಉತ್ತರ ಬಂತು! ಪಟ್ಟುಬಿಡದೆ ಮೂರ್ತಿ ಅವರಿಗೆ ಕರೆ ಮಾಡಿದಾಗ ಅಷ್ಟಿಷ್ಟು ಮಾಹಿತಿ ಸಿಕ್ಕಿತು!
ಈ ರೀತಿ ಗೌಪ್ಯ ಕಾಪಾಡುವ ಉದ್ದೇಶವಾದರೂ ಏನು ಎಂಬುದು ಇನ್ನೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ನಾಲ್ಕೇ ಗಂಟೆಯಲ್ಲಿ ತುರ್ತು ಸೇವೆ
ತುರ್ತಾಗಿ ಯಾವುದೋ ಸಮಾರಂಭಕ್ಕೋ ಸಭೆಗೋ ಹೋಗಬೇಕಾದ ಅನಿವಾರ್ಯತೆ ಎದುರಾಯಿತೆಂದಿಟ್ಟುಕೊಳ್ಳಿ. ಪರವೂರಿನಲ್ಲಿ ನಡೆದಿರುವ ಬೋರ್ಡ್ ಮೀಟಿಂಗ್ ಎರಡನೇ ದಿನಕ್ಕೂ ಮುಂದುವರಿಯಲಿದೆ. ಆದರೆ ಇಂದು ಧರಿಸಿದ, ಬೆವರು ಸೂಸುವ ಸೂಟು ಹಾಕುವುದು ಹೇಗೆ? ಅತ್ತ ಪತ್ನಿಯ ಸೀರೆಯ ಸ್ಥಿತಿಯೂ ಇದೇ. ಹಾಗಿದ್ದರೆ, ಈ ಅತ್ಯಲ್ಪ ಅವಧಿಯಲ್ಲಿ ಸಿದ್ಧರಾಗುವ ಬಗೆ ಹೇಗೆ?

ಇದಕ್ಕೂ ಫ್ಯಾಬ್ರಿಕ್ ಸ್ಪಾದಲ್ಲಿ ಸಿದ್ಧಸೂತ್ರವಿದೆ. ಕೇವಲ ನಾಲ್ಕು ಗಂಟೆಯಲ್ಲಿ `ಸ್ವಿಫ್ಟ್ ಅಂಡ್ ಸ್ಮೂತ್~ ಸೇವೆ ಇಲ್ಲಿ ಲಭ್ಯ. ಆದರೆ ಇದಕ್ಕೆ ಶೇ. ಐವತ್ತರಷ್ಟು ಅಧಿಕ ಮೊತ್ತ ಪಾವತಿಸಿದಲ್ಲಿ ಸೂಟು, ಶರ್ಟು, ಪ್ಯಾಂಟು ಮತ್ತು ದುಪಟ್ಟಾಗೆ ಮಾತ್ರ ಈ ಸೇವೆ ಅನ್ವಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT