ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ: ಸಾಮೂಹಿಕ ಹೊಸ ವರ್ಷಾಚರಣೆ

Last Updated 2 ಜನವರಿ 2012, 8:45 IST
ಅಕ್ಷರ ಗಾತ್ರ

ಬಂಟ್ವಾಳ:  ತಾಲ್ಲೂಕಿನ ಭಗವಾನ್‌ಕಟ್ಟೆ ನಿತ್ಯಾನಂದ ಗೋವಿಂದ ಸ್ವಾಮೀಜಿ ಭಜನಾ ಮಂದಿರ ಬಳಿ ಭಾನುವಾರ ನಡೆದ ಅದ್ದೂರಿ `ಉಚಿತ ಸಾಮೂಹಿಕ ವಿವಾಹ~ದಲ್ಲಿ ಒಟ್ಟು 13ಜೋಡಿ ವಧು-ವರರು ಹಸೆಮಣೆಗೆ ಏರುವ ಮೂಲಕ  ಹೊಸ ವರ್ಷವನ್ನು ವಿನೂತನ ರೀತಿಯಲ್ಲಿ ಸ್ವಾಗತಿಸಿದರು.

ಭಗವಾನ್ ನಿತ್ಯಾನಂದ ಸ್ವಾಮಿ ಮಹಾಸಮಾಧಿ ಸ್ವರ್ಣೋತ್ಸವ ಸಮಿತಿ ಹಾಗೂ ಇಲ್ಲಿನ ಮೂರು ನಿತ್ಯಾನಂದ ಭಜನಾ ಮಂದಿರದ ವತಿಯಿಂದ ಸ್ವಾಮೀಜಿಯವರ 50ನೇ `ಪುಣ್ಯತಿಥಿ~ ಪ್ರಯುಕ್ತ `ನಿತ್ಯಾನಂದ ಸಹಸ್ರನಾಮ ಹವನ~ ಮತ್ತು `ಉಚಿತ ಸಾಮೂಹಿಕ ವಿವಾಹ~ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಧರ್ಮಣ ಸಮಗಾರ- ಶ್ವೇತಾ, ಪ್ರಕಾಶ್- ಚಂದ್ರಾವತಿ, ಪುರುಷೋತ್ತಮ-ಜಯಲತಾ, ದಯಾನಂದ -ಜಲಜ, ರವಿ-ಕೀರ್ತಿ, ಲಿಂಗಪ್ಪ-ಅಪ್ಪಿ, ಪ್ರಕಾಶ್-ಶ್ರೀಮತಿ, ಸುಂದರ-ಗಿರಿಜ, ಮಾಧವ-ಚಿತ್ರಾ, ರಾಜೇಶ್-ಶ್ವೇತಾ, ಅಶೋಕ್-ಕಮಲಾ, ಲಿಂಗಪ್ಪ ಮೂಲ್ಯ-ಸುಮತಿ, ಉಮೇಶ್-ಚಂದ್ರಾವತಿ ಇವರು ಇಲ್ಲಿನ ಪ್ರಧಾನ ಅರ್ಚಕ ಸತ್ಯನಾರಾಯಣ ಭಟ್ ನೇತೃತ್ವದ ಅರ್ಚಕ ವೃಂದದ ಮಂತ್ರೋಚ್ಛಾರಣೆ ಜೊತೆಗೆ ಸಪ್ತಪದಿಗೆ ಹೆಜ್ಜೆ ಹಾಕಿದರು.

ಒಂದೆಡೆ ಸ್ಥಳೀಯ ನಿವಾಸಿಗಳಾದ ಉಮೇಶ ಭಂಡಾರಿ, ಸಂಜೀವ ಸಪಲ್ಯ, ಶ್ಯಾಮ ಗೌಡ, ಜಯರಾಮ, ರಾಮಪ್ಪ ಪೂಜಾರಿ, ಕೇಶವ, ಅಶೋಕ ಕುಲಾಲ್, ಸಂಜೀವ ಕೊಟ್ಟಾರಿ, ಜಯ ಕುಲಾಲ್, ಸೋಮಪ್ಪ ಹೊಸ್ಮಾರ್, ನಾರಾಯಣ ಮೂಲ್ಯ, ಬೇಬಿ ಪೂಜಾರಿ, ಶಿವರಾಮ ಶೆಟ್ಟಿ ಅವರು ಮುಂಡಾಸು ಸುತ್ತಿಕೊಂಡು ಮದುವೆ ಗುರಿಕಾರರಾಗಿ ಜವಾಬ್ದಾರಿ ನಿರ್ವಹಿಸಿದರು.

ಇನ್ನೊಂದೆಡೆ ಸ್ಯಾಕ್ಸೋಫೋನ್ ವಾದನ, ಬ್ಯಾಂಡ್ ವಾದ್ಯ, ಕೊಂಬು ಕಹಳೆಯೊಂದಿಗೆ ಅದ್ದೂರಿ ದಿಬ್ಬಣಕ್ಕೆ ಸಿಡಿಮದ್ದು, ಮಾಲೆ ಪಟಾಕಿ ಸದ್ದು ಅಬ್ಬರ ನೀಡಿತು.

ದೇವಳದ ಮುಂಭಾಗದಲ್ಲಿ ನೇತ್ರಾವತಿ ನದಿ, ಪಕ್ಕದಲ್ಲೇ ನಿರ್ಮಿಸಲಾಗಿರುವ ನಿತ್ಯಾನಂದ ಸಹಸ್ರನಾಮ ಹವನದ ಯಜ್ಞಕುಂಡದಿಂದ ಬರುವ ಘಮ ಘಮ ಪರಿಮಳ. ದೇವಳದ ಭಕ್ತರು ಮತ್ತು ವಧು-ವರರ ನೆಂಟರಿಷ್ಟರಿಗೆ ಬೆಲ್ಲ-ನೀರು ನೀಡಿ ಸ್ವಾಗತ ಕೋರುವ ನೂರಾರು ಮಂದಿ ಕಾರ್ಯಕರ್ತರಲ್ಲಿ ನಗುಮುಖದ ಉತ್ಸಾಹ ಇಣುಕುತ್ತಿತ್ತು.
ಬೆಳಗಾವಿ ಬೇವಿನಕೊಪ್ಪ ವಿಜಯಾನಂದ ಸ್ವಾಮೀಜಿ, ಮೈಸೂರಿನ ನಿತ್ಯಾನಂದ ಆಶ್ರಮದ ಹಸನ್ಮಾತಾಜಿ, ಆರ್‌ಎಸ್‌ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್, ಹೆತ್ತವರು ಮತ್ತು ಗುರುಹಿರಿಯರಿಂದ ನೂತನ ವಧೂವರರು ಆಶೀರ್ವಾದ ಪಡೆದರು.

ಸಮಿತಿ ಅಧ್ಯಕ್ಷರೂ ಆಗಿರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ಸಮಿತಿಯ ಕಾರ್ಯಾಧ್ಯಕ್ಷ ಬಿ.ದಿನೇಶ ಭಂಡಾರಿ, ಗೌರವಾಧ್ಯಕ್ಷ ಬಿ.ಯೋಗೀಶ ಸಪಲ್ಯ, ಬಾಲಕೃಷ್ಣ ಪಿ.ಭಂಡಾರಿ, ಬಿ.ಮಂಜುನಾಥ ಸಪಲ್ಯ, ಬಿ.ಸದಾಶಿವ ಭಂಡಾರಿ, ಬಿಲ್ಲವ ಮುಖಂಡ ಕೆ.ಸೇಸಪ್ಪ ಕೋಟ್ಯಾನ್ ಮತ್ತಿತರರು ನವದಂಪತಿಗೆ ಅಕ್ಷತೆ ಕಾಳು ಹಾಕಿ ಶುಭ ಹಾರೈಸಿದರು.

ಭಗವಾನ್ ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರ ಟ್ರಸ್ಟ್ ಭಗವಾನ್‌ಕಟ್ಟೆ, ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ ನಿತ್ಯಾನಂದ ನಗರ ಬೈಪಾಸ್, ನಿತ್ಯಾನಂದ ಸ್ವಾಮಿ  ಭಜನಾ ಮಂದಿರ ನಾವೂರ ಹಳೆಗೇಟು ಇಲ್ಲಿನ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಕಳೆದೆರಡು ದಿನಗಳಿಂದ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆದಿದ್ದವು. ಪಾಯಸ-ಹೋಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT