ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯ ಶಮನ: ಜೆಡಿಎಸ್‌ನಲ್ಲಿ ಹೊಸ ಹುರುಪು

ಮುಳಬಾಗಲು: ಕಾಂಗ್ರೆಸ್‌ನಲ್ಲಿ ಮುಂದುವರಿದ ಬಂಡಾಯ
Last Updated 25 ಏಪ್ರಿಲ್ 2013, 8:25 IST
ಅಕ್ಷರ ಗಾತ್ರ

ಕೋಲಾರ: ಈ ಕ್ಷೇತ್ರದಲ್ಲಿ ಬಿಸಿಯೇರಿದ್ದ ಜೆಡಿಎಸ್‌ನಲ್ಲಿನ ಬಂಡಾಯವು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಭೇಟಿಯ ಪರಿಣಾಮ ತಣ್ಣಗಾಗಿದ್ದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದೆ.

ಇದೇ ವೇಳೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಅಮರೇಶ ಪರ ಹಲವು ಮುಖಂಡರು ಪ್ರಕಟಿಸಿರುವ ಬಂಡಾಯ ಮುಂದುವರಿದಿದೆ. ಮುಖಂಡರು ಪಕ್ಷೇತರ ಅಭ್ಯರ್ಥಿ ಜಿ.ಮಂಜುನಾಥ್ ಅವರಿಗೆ ಬೆಂಬಲ ಪ್ರಕಟಿಸಿ ಪ್ರಚಾರದಲ್ಲೂ ಪಾಲ್ಗೊಳ್ಳುತ್ತಿದ್ದಾರೆ.

ಜೆಡಿಎಸ್
ಜೆಡಿಎಸ್‌ನಲ್ಲಿ ಬಿ ಫಾರಂ ಕೈ ತಪ್ಪಿದ ಕಾರಣಕ್ಕೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಆದಿನಾರಾಯಣ ಅವರೂ ಪಕ್ಷದ ಮುಖಂಡರೊಡನೆ ಅಧಿಕೃತ ಅಭ್ಯರ್ಥಿ ಮುನಿಆಂಜಪ್ಪ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದಿನಾರಾಯಣ ಪರವಾಗಿರುವಂತೆ ಕಾಣಿಸಿಕೊಂಡಿದ್ದ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಶಂಕರ್ ಸೇರಿದಂತೆ ಹಲವು ಪ್ರಮುಖರೂ ಅಸಮಾಧಾನವನ್ನು ಬದಿಗಿಟ್ಟು ಪ್ರಚಾರಕ್ಕೆ ಬಂದಿರುವುದು ಹೊಸ ಬೆಳೆವಣಿಗೆ
ಬುಧವಾರ ಪಕ್ಷದ ಪ್ರಮುಖರು ಆದಿನಾರಾಯಣ ಅವರ ಸಂಬಂಧಿಗಳಾದ ಶೇಷು ಅವರ ಮನೆಯಲ್ಲೇ ಸಭೆ ನಡೆಸಿ ಪ್ರಚಾರ ಕಾರ್ಯಕ್ರಮದ ರೂಪರೇಷೆ ಚರ್ಚಿಸಿದರು.

ಇದೇ ಸಂದರ್ಭದಲ್ಲಿ `ಪ್ರಜಾವಾಣಿ'ಯೊಡನೆ ಮಾತನಾಡಿದ ಮುಖಂಡ ಕಾಡೇನಹಳ್ಳಿ ನಾಗರಾಜ್, ಪಕ್ಷದಲ್ಲಿದ್ದ ಒಡಕು ದೇವೇಗೌಡರ ಭೇಟಿಯಿಂದ ಶಮನಗೊಂಡಿದೆ ಎಂದು ಸ್ಪಷ್ಟವಾಗಿ ನುಡಿದರು.

ಮೊದಲಿಗೆ ಪಂಚಾಯಿತಿ ಕೇಂದ್ರಗಳಿಗೆ ಭೇಟಿ, ನಂತರ ಹೋಬಳಿ ಕೇಂದ್ರಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಲಾಗುವುದು. ಬಹಿರಂಗ ಸಭೆಗಳನ್ನೂ ನಡೆಸಲಾಗುವುದು ಎಂದು ಅವರು ಹೇಳಿದರು.

ಕಾಂಗ್ರೆಸ್
`ನ್ಯಾಯಾಲಯದಿಂದ ಶಿಕ್ಷೆ ಆದೇಶಕ್ಕೆ ತಡೆಯಾಜ್ಞೆ ಪಡೆದಿದ್ದಾರೆ ಎಂಬ ಕಾರಣಕ್ಕೆ ಆರೋಪಿತನವನ್ನು ಅಲ್ಲಗೆಳೆಯಲಾಗುವುದಿಲ್ಲ' ಎಂದು ಕಾಂಗ್ರೆಸ್‌ನ ಹಲವು ಮುಖಂಡರು ಅಭ್ಯರ್ಥಿ ಅಮರೇಶ ಅವರ ವಿರುದ್ಧ ಪ್ರಕಟಿಸಿರುವ ಅಸಮಾಧಾನ ಮತ್ತು ಬಂಡಾಯ ಮುಂದುವರಿದಿದೆ.

ಮುಖಂಡರ ಬಂಡಾಯವು ಪಕ್ಷೇತರ ಅಭ್ಯರ್ಥಿ ಜಿ.ಮಂಜುನಾಥ್ ಅವರ ಮೇಲಿನ ಪ್ರೇಮವಾಗಿ ಪರಿವರ್ತನೆಯಾಗಿರುವುದು ಕ್ಷೇತ್ರದಲ್ಲಿ ಗಮನಾರ್ಹ ಸಂಗತಿ.

ಅಶೋಕ್ ಕೃಷ್ಣಪ್ಪ, ಕಸಬಾ ಮತ್ತು ಆವಣಿ ಬ್ಲಾಕ್‌ಗಳ ಅಧ್ಯಕ್ಷರಾದ ಷಹಬಾಜ್, ಜಿ.ರಾಮಲಿಂಗಾರೆಡ್ಡಿ, ಎಂ.ವಿ.ಶ್ರೀನಿವಾಸಗೌಡ, ಉತ್ತನೂರು ಶ್ರೀನಿವಾಸ್, ಹೆಬ್ಬಣಿ ರಾಮು, ಆರ್.ಎಚ್.ಕೃಷ್ಣಯ್ಯಶೆಟ್ಟಿ, ನೀಲಕಂಠೇಗೌಡ, ಲಕ್ಷ್ಮಿದೇವಮ್ಮ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಹಲವು ಜನಪ್ರತಿನಿಧಿಗಳು ಕಾಂಗ್ರೆಸ್ ಪಾಳೆಯದಿಂದ ದೂರ ಸರಿದು ಮಂಜುನಾಥ ಪರ ಪ್ರಚಾರದಲ್ಲಿ ತೊಡಗಿರುವುದು ಕಾಂಗ್ರೆಸ್‌ಗೆ ನುಂಗಲಾಗದ ತುತ್ತಾಗಿದೆ.

ಭಿನ್ನಮತವನ್ನು ಶಮನಗೊಳಿಸುವ ಪ್ರಯತ್ನವೂ ಮುಖಂಡರಿಂದ ನಡೆದಂತೆ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ನಡೆದಿದೆ.

ಮಂಜುನಾಥರನ್ನು ಗೆಲ್ಲಿಸಿಯೇ ತೀರುತ್ತೇವೆ ಎಂದು ಬಂಡಾಯ ಮುಖಂಡರು ಹೇಳುತ್ತಿದ್ದಾರೆ, ಕಾಂಗ್ರೆಸ್ ಬಲವನ್ನು ತೋರಿಸುತ್ತೇವೆ ಎಂದು ಅಮರೇಶ ಪರ ಮುಖಂಡರೂ ಸವಾಲೊಡ್ಡಿದ್ದಾರೆ.

ಬಿಜೆಪಿ
ಬಿಜೆಪಿ ಅಭ್ಯರ್ಥಿ ವೈ.ಶ್ರೀನಿವಾಸ್ ಪಟಾಪಟ್ ಯುವಕರಿಗೆ ಪಕ್ಷದ ಸದಸ್ಯತ್ವ ನೀಡಿ ಮತದಾರರನ್ನು ಒಲೈಸಲು ಗ್ರಾಮಗಳತ್ತ ಮುಖ ಮಾಡಿದ್ದಾರೆ. ಕ್ಷೇತ್ರದಲ್ಲಿ ಗೆದ್ದ ಇತಿಹಾಸವಿಲ್ಲದ ಬಿಜೆಪಿಗೆ ಈ ಚುನಾವಣೆಯೂ ದೊಡ್ಡ ಸವಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT