ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧುಗಳೇ ಸುರ್ಜಿತ್‌ಗೆ ಅಪರಿಚಿತರು!

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಫಿಡ್ಡೆ (ಪಂಜಾಬ್) (ಐಎಎನ್‌ಎಸ್): ಭಾರತದ ಒತ್ತಡ, ನಿರೀಕ್ಷೆಗಳನ್ನೆಲ್ಲ ಹುಸಿಗೊಳಿಸಿ ಪಾಕ್ ಜೈಲಿನಲ್ಲಿಕೊಳೆಯುತ್ತಿದ್ದ ಸರಬ್ಜಿತ್ ಸಿಂಗ್ ಬದಲಿಗೆ ಅಲ್ಲಿಂದ ಬಿಡುಗಡೆಯಾಗಿ ತವರಿಗೆ ಮರಳಿದ ಮತ್ತೊಬ್ಬ ಕೈದಿ ಸುರ್ಜಿತ್ ಸಿಂಗ್ ಇದೀಗ ತನ್ನೂರಿನವರೊಂದಿಗೆ ಸಂತಸ ಹಂಚಿಕೊಳ್ಳುತ್ತಿದ್ದಾರೆ.

ಬಾಂಬ್ ಸ್ಫೋಟಗೊಳಿಸಿದ ಆರೋಪದ ಮೇಲೆ ಪಾಕ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತದ ಸರಬ್ಜಿತ್ ಸಿಂಗ್ ಅವರನ್ನು ಬಿಡುಗಡೆಮಾಡಲಾಗುವುದು ಎಂದು ಅಲ್ಲಿಯ ಸರ್ಕಾರ ಈ ಮೊದಲು ತಿಳಿಸಿದ್ದರಿಂದ ಪಂಜಾಬ್‌ನ ಆತನ ಹುಟ್ಟೂರಿನಲ್ಲಿ ಸಂಭ್ರಮ ಮೇರೆ ಮೀರಿತ್ತು. ದೇಶದ ಎಲ್ಲೆಡೆ ಸ್ವಾಗತ ಕೇಳಿಬಂದಿತ್ತು. ಆದರೆ ಅದೇ ದಿನ ಮಧ್ಯರಾತ್ರಿ ಬಿಡುಗಡೆ ಮಾಡುತ್ತಿರುವ ಕೈದಿ ಸರಬ್ಜಿತ್ ಅಲ್ಲ ಆತ ಸುರ್ಜಿತ್ ಸಿಂಗ್ ಎಂದು ಪಾಕ್ ರಾಗ ಬದಲಿಸಿದಾಗ ಎಲ್ಲರಿಗೂ ಆಶ್ಚರ್ಯ, ಗೊಂದಲವುಂಟಾಗಿತ್ತು.

ಬೇಹುಗಾರಿಕೆ ಆರೋಪದ ಮೇರೆಗೆ ಮೂವತ್ತು ವರ್ಷಗಳಿಗೂ ಅಧಿಕ ಕಾಲ ಪಾಕ್‌ನ ವಿವಿಧ ಜೈಲುಗಳಲ್ಲಿ ಬಂಧಿಯಾಗಿದ್ದ 69 ವರ್ಷದ ಸುರ್ಜಿತ್ ಇದೀಗ ಲಾಹೋರ್ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದು, ತಮ್ಮೂರು ಪಂಜಾಬ್‌ನ ಫಿಡ್ಡೆಯ ಮನೆಯಲ್ಲಿ ವಿರಮಿಸುತ್ತಿದ್ದಾರೆ. `ನಾನ್ಯಾರು ಎಂಬುದು ಗೊತ್ತಾಗುತ್ತಿದೆಯೇ ?~ ಎಂದು ಭೇಟಿ ಮಾಡಲು ಬಂದವರನ್ನೆಲ್ಲ ಅವರು ಈಗ ಪ್ರಶ್ನಿಸುತ್ತಿದ್ದಾರೆ.

`ಬಿಸಿಗಾಳಿಯ ತೀವ್ರತೆ ಹೆಚ್ಚಾಗಿದ್ದರೂ ಹಳ್ಳಿಯ ಹಾಗೂ ಸುತ್ತಲಿನ ಜನ ನನ್ನನ್ನು ಭೇಟಿ ಮಾಡಲು ಬರುತ್ತಿದ್ದಾರೆ. ಆದರೆ ಈ ಎಲ್ಲರನ್ನು ಗುರುತಿಸುವುದು ನನಗೀಗ ಕಷ್ಟವಾಗುತ್ತಿದೆ. ನನ್ನ ಸಂಬಂಧಿಗಳನ್ನೂ ತಾವ್ಯಾರು ಎಂದು ಪ್ರಶ್ನಿಸುವಂತಾಗಿದೆ~ ಎಂದು ಸುರ್ಜಿತ್ ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ತಿಳಿಸಿದರು.

ಪಾಕ್‌ನಿಂದ ಗುರುವಾರವಷ್ಟೆ ಬಿಡುಗಡೆಯಾಗಿ ಬಂದಿರುವ ಸುರ್ಜಿತ್ ಅವರನ್ನು ಕುಟುಂಬದವರು, ಗ್ರಾಮಸ್ಥರು ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡರು. ಭೇಟಿಗೆ ಬರುತ್ತಿರುವವರಲ್ಲಿ ಕೆಲವರು, ತಮ್ಮವರು ಹಲವು ವರ್ಷಗಳಿಂದ ಕಣ್ಮರೆಯಾಗಿದ್ದು ಅವರೇನಾದರೂ ಪಾಕ್ ಜೈಲುಗಳಲ್ಲಿದ್ದಾರೆಯೇ ಎಂಬುದನ್ನೂ ಸುರ್ಜಿತ್ ಅವರಿಂದ ತಿಳಿದುಕೊಳ್ಳುತ್ತಿದ್ದಾರೆ. ಈ ಹಿಂದೆ ಪಾಕ್ ಜೈಲುಗಳಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡವರು ಸುರ್ಜಿತ್ ಜತೆ ಸಂತಸ ಹಂಚಿಕೊಳ್ಳುತ್ತಿದ್ದಾರೆ.

`1982ರಿಂದ ಸುರ್ಜಿತ್ ಕಣ್ಮರೆಯಾದ ದಿನಗಳಿಂದಲೂ ಕಂಗಾಲಾಗಿದ್ದೆ, ಇದೀಗ ಅವರು ಬಿಡುಗಡೆಯಾಗಿರುವುದರಿಂದ ಕುಟುಂಬದ ಜವಾಬ್ದಾರಿ ಅವರೇ ಹೊರುತ್ತಾರೆ~ ಎಂದು ಸುರ್ಜಿತ್ ಪತ್ನಿ ಹರ್‌ಬನ್ಸ್ ಕೌರ್ ಸಂತಸದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT