ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ಅನುಷ್ಠಾನಕ್ಕೆ ಕಠಿಣ ಕ್ರಮ: ಸಿಎಂ

Last Updated 24 ಫೆಬ್ರುವರಿ 2011, 16:55 IST
ಅಕ್ಷರ ಗಾತ್ರ

ಬೆಂಗಳೂರು:  ‘ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಬೇಕೆಂಬ ನನ್ನ ಕನಸು ಈಡೇರಿದೆ. ಇದು ಎಲ್ಲ ದೃಷ್ಟಿಯಿಂದಲೂ ಒಂದು ಐತಿಹಾಸಿಕ ಬಜೆಟ್’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರ ಮತ್ತು ರೈತರು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನವನ್ನು ಈ ಬಜೆಟ್‌ನಲ್ಲಿ ಮಾಡಲಾಗಿದೆ ಎಂದರು.

‘ಸ್ವಾತಂತ್ರ್ಯಾನಂತರ ದೇಶದಲ್ಲಿ ಮೊದಲ ಬಾರಿಗೆ ಕೃಷಿಗೆ ಪ್ರತ್ಯೇಕವಾಗಿ ಬಜೆಟ್ ಮಂಡನೆಯಾಗಿದೆ. ಈ ಬಗ್ಗೆ ದೇಶದ ಉದ್ದಗಲಕ್ಕೆ ಚರ್ಚೆ ನಡೆಯುತ್ತದೆ ಎಂಬ ವಿಶ್ವಾಸವಿದೆ. ಪ್ರಧಾನಿ ಮತ್ತು ಕೇಂದ್ರ ಹಣಕಾಸು ಸಚಿವರು ಈ ಬಗ್ಗೆ ಆಸಕ್ತಿ ವಹಿಸಿ ಕೇಂದ್ರ ಸರ್ಕಾರದಲ್ಲೂ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ತೀರ್ಮಾನ ಕೈಗೊಂಡರೆ ನನ್ನ ಪ್ರಯತ್ನ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ವಾರದೊಳಗೆ ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಬಜೆಟ್ ಘೋಷಣೆಗಳ ಅನುಷ್ಠಾನ ಕುರಿತು ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು. ಕೃಷಿ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆಯಾಗಿದೆ. ಇನ್ನು ಹೊಸ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ನೀಡುವುದೇ ತಮ್ಮ ಆದ್ಯತೆ ಎಂದರು.

‘ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ನಿಗದಿ ಮಾಡಿರುವ ಅನುದಾನದ ಪ್ರಮಾಣದಲ್ಲಿ ಶೇಕಡ 52ರಷ್ಟು ಹೆಚ್ಚಳವಾಗಿದೆ. ರೈತರಿಗೆ ಶೇ 1ರ ಬಡ್ಡಿ ದರದಲ್ಲಿ ಬೆಳೆ ಸಾಲ ನೀಡುತ್ತಿರುವುದು ದೇಶದ ಇತಿಹಾಸದಲ್ಲೇ ಮೊದಲು. ನೀರಾವರಿ ಕ್ಷೇತ್ರಕ್ಕೂ ಹಿಂದೆಂದಿಗಿಂತ ಹೆಚ್ಚು 7,800 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕೃಷಿ ಕ್ಷೇತ್ರಕ್ಕೆ ಬಂಡವಾಳ ಆಕರ್ಷಿಸುವ ಪ್ರಯತ್ನವೂ ಈ ಬಜೆಟ್‌ನಲ್ಲಿದೆ’ ಎಂದು ವಿವರಿಸಿದರು.

ಗುರಿ ತಲುಪುವ ವಿಶ್ವಾಸ: ಹಿಂದಿನ ವರ್ಷದ ಬಜೆಟ್ ಘೋಷಣೆಯಂತೆ ರಾಜ್ಯದ ಆರ್ಥಿಕತೆ ಸಾಗಿದೆ. ತೆರಿಗೆ ಮತ್ತು ರಾಜಸ್ವ ಸಂಗ್ರಹದಲ್ಲಿ ಹಿನ್ನಡೆ ಆಗಿಲ್ಲ. ಯೋಜನಾ ವೆಚ್ಚದಲ್ಲೂ ಹಿನ್ನಡೆ ಆಗುವುದಿಲ್ಲ. ಮಾರ್ಚ್ ಅಂತ್ಯದೊಳಗೆ ಬಜೆಟ್‌ನಲ್ಲಿ ಪ್ರಕಟಿಸಿದ ಮೊತ್ತದ ಯೋಜನಾ ವೆಚ್ಚವನ್ನು ಬಳಕೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.‘ಹಣಕಾಸಿನ ನಿರ್ವಹಣೆಯಲ್ಲಿ ರಾಜ್ಯವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಯೋಜನಾ ಗಾತ್ರದಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿದೆ.ಮುಂದಿನ ಬಜೆಟ್‌ನ ಒಟ್ಟು ಗಾತ್ರ ಒಂದು ಲಕ್ಷ ಕೋಟಿ ರೂಪಾಯಿ ತಲುಪಲಿದೆ. ಇದು ರಾಜ್ಯವು ಪ್ರಗತಿ ಪಥದಲ್ಲಿರುವ ಸಂಕೇತ’ ಎಂದು ಯಡಿಯೂರಪ್ಪ ಹೇಳಿದರು.

ಚರ್ಚೆಗೆ ಆಹ್ವಾನ: ‘ರಾಜಕಾರಣಕ್ಕಾಗಿ ರಾಜ್ಯದ ಗೌರವಕ್ಕೆ ಧಕ್ಕೆ ತರುವಂತೆ ಟೀಕೆ ಮಾಡುವುದು ಬೇಡ. ಸತ್ಯವನ್ನು ಮರೆಮಾಚಿ ವರ್ಚಸ್ಸು ಕುಂದಿಸುವ ರೀತಿಯಲ್ಲಿ ಟೀಕಿಸುವುದು ಸಲ್ಲ. ಅಂಕಿ-ಅಂಶ ಸಮೇತ ವಿಧಾನಮಂಡಲದಲ್ಲಿ ಚರ್ಚೆಗೆ ಮುಕ್ತ ಅವಕಾಶವಿದೆ. ಅಲ್ಲಿ ಬನ್ನಿ’ ಎಂದು ವಿರೋಧಪಕ್ಷಗಳ ನಾಯಕರಿಗೆ ಅವರು ಆಹ್ವಾನ ನೀಡಿದರು.

‘ಕೆಲ ತಿಂಗಳುಗಳಿಂದ ರಾಜ್ಯದ ಗೌರವವನ್ನು ಕುಗ್ಗಿಸುವಂತಹ ಘಟನೆಗಳು ನಡೆದುಹೋಗಿವೆ. ಇನ್ನು ಟೀಕೆಗಾಗಿಯೇ ಟೀಕಿಸುವುದು ಬೇಡ’ ಎಂದ ಅವರು, ‘ಇದು ಗಿಮಿಕ್ ಬಜೆಟ್’ ಎಂಬ ಪ್ರತಿಪಕ್ಷಗಳ ಟೀಕೆಗೆ, ‘ಅವರಿಗೆ ಒಳ್ಳೆಯದಾಗಲಿ’ ಎಂದಷ್ಟೇ ಪ್ರತಿಕ್ರಿಯಿಸಿದರು.

ಹೊರೆ ಇಲ್ಲ: ತೆರಿಗೆ ಹೆಚ್ಚಳ ಕುರಿತು ಪ್ರತಿಕ್ರಿಯಿಸಿದ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ವಿ.ನಾಗರಾಜನ್, ‘ಕೆಲವು ವಲಯಗಳಲ್ಲಿ ಮಾತ್ರ ಶೇ 0.5ರಷ್ಟು ತೆರಿಗೆ ಹೆಚ್ಚಿಸಲಾಗಿದೆ. ಸಾಮಾನ್ಯ ಜನರಿಗೆ ಹೊರೆ ಆಗದಂತೆ ತೆರಿಗೆ ಹೆಚ್ಚಳದ ಪ್ರಸ್ತಾವ ರೂಪಿಸಲಾಗಿದೆ’ ಎಂದರು.

ತೆರಿಗೆ ಹೆಚ್ಚಳದಿಂದ ಒಟ್ಟು 1,020 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ. ಮೌಲ್ಯವರ್ಧಿತ ತೆರಿಗೆಯಲ್ಲಿನ ಹೆಚ್ಚಳದಿಂದ ರೂ 500 ಕೋಟಿ ಹೆಚ್ಚಿನ ಆದಾಯ ಲಭ್ಯವಾಗಲಿದೆ. ಆಭರಣಗಳ ಮೇಲೆ ಶೇ 2ರಷ್ಟು ತೆರಿಗೆ ವಿಧಿಸಿದ್ದು, ರೂ 70 ಕೋಟಿ ಸಂಗ್ರಹವಾಗಲಿದೆ ಎಂದರು.ನೋಂದಣಿ ಮತ್ತು ಮುದ್ರಾಂಕ ತೆರಿಗೆಯಲ್ಲಿ ರೂ 300 ಕೋಟಿ, ಅಬಕಾರಿ ವಲದಯಲ್ಲಿ ರೂ 200 ಕೋಟಿ ಮತ್ತು ಮೋಟಾರು ವಾಹನಗಳ ಮೇಲಿನ ಸೆಸ್‌ನಿಂದ ರೂ 20 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ ಎಂದರು.

ನಂಜುಂಡಸ್ವಾಮಿಗೆ ಕೃಷಿ  ರತ್ನ ಪ್ರಶಸ್ತಿ
ರೈತರ ಹೋರಾಟಕ್ಕೆ ಹೊಸ ಚೈತನ್ಯವನ್ನು ತುಂಬಿದ ದಿ.ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರಿಗೆ ಕೃಷಿ ರತ್ನ ಪ್ರಶಸ್ತಿ ನೀಡುವುದರ ಜೊತೆಗೆ, ಅವರ ಪ್ರತಿಷ್ಠಾನಕ್ಕೆ 10 ಲಕ್ಷ ರೂಪಾಯಿ ಘೋಷಣೆ.ಸಾವಯವ ಕೃಷಿಯ ಅಭಿಯಾನ ಆರಂಭಿಸಿ ಅನೇಕ ವರ್ಷಗಳ ಕಾಲ ದುಡಿದ ತೀರ್ಥಹಳ್ಳಿ ಪುರುಷೋತ್ತಮ ರಾವ್ ಅವರಿಗೆ ಸಾವಯವ ಕೃಷಿ ರತ್ನ ಪ್ರಶಸ್ತಿ ಜೊತೆಗೆ, ಅವರ ಪ್ರತಿಷ್ಠಾನಕ್ಕೆ 10 ಲಕ್ಷ ರೂಪಾಯಿ ಘೋಷಣೆ.

ಬೀದಿ ಬದಿ ವ್ಯಾಪಾರಸ್ಥೆಯರಿಗೆ ಸಾಲ
ಬೆಂಗಳೂರು: ನಗರ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥ ಮಹಿಳೆಯರಿಗೆ ಅಲ್ಪಾವಧಿ ಸಾಲ ನೀಡುವ ಅಪರೂಪದ ಯೋಜನೆ ಈ ಬಾರಿಯ ಬಜೆಟ್‌ನ ವಿಶೇಷ. ಇದಕ್ಕಾಗಿ 2ಕೋಟಿ ರೂಪಾಯಿ ಮೀಸಲು.

ಇಂತಹ ಮಹಿಳೆಯರಿಗೆ ದಿನ ನಿತ್ಯ ಅಥವಾ ವಾರಕ್ಕೊಮ್ಮೆ ಸಾಲ ನೀಡುವ ವ್ಯವಸ್ಥೆ ಇದಾಗಿದೆ. ಪರಿಣತ ಸೇವಾ ಸಂಸ್ಥೆಗಳ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಹಣವನ್ನು ನೀಡಲಾಗುವುದು.ಮೊದಲ ಹಂತದಲ್ಲಿ ಈ ಯೋಜನೆಯನ್ನು ಮೈಸೂರು ಮತ್ತು ಶಿವಮೊಗ್ಗದಲ್ಲಿ ಪ್ರಾರಂಭಿಸಲಾಗುವುದು.
ಅಪೂರ್ಣಗೊಂಡಿರುವ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ 100 ಕೋಟಿ ಹಣ ವಿನಿಯೋಗಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT