ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ರೈತರಿಗೆ ವಿಶೇಷ ಒತ್ತು - ಸದಾನಂದಗೌಡ ಭರವಸೆ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರೈತರ ಹಿತ ಕಾಯುವ ಜವಾಬ್ದಾರಿ ಸರ್ಕಾರಕ್ಕಿದ್ದು, ಬರುವ ಬಜೆಟ್‌ನಲ್ಲಿ ರೈತರಿಗಾಗಿ ಸರ್ಕಾರ ವಿಶೇಷ ಒತ್ತು ನೀಡಲಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೋಮವಾರ ನಡೆದ `ರೈತೋತ್ಸವ-2012~ ರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ ಎಂಬ ಆರೋಪ ಹೆಚ್ಚಾಗುತ್ತಿದೆ. ಆದರೆ ಕಳೆದ ಮೂರು ವರ್ಷಗಳ ಅವಧಿಯ ನಮ್ಮ ಸರ್ಕಾರ ರೈತರ ಬಗ್ಗೆ ರೂಪಿಸಿರುವ ಕಾರ್ಯಕ್ರಮಗಳು ಈ ಆರೋಪಗಳನ್ನು ಸುಳ್ಳು ಮಾಡಿವೆ. ರಾಜ್ಯದ ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರೈತರ ಏಳಿಗೆಗಾಗಿ ಸರ್ಕಾರ ಸದಾ ಸಿದ್ಧವಿದೆ~ ಎಂದು ಅವರು ನುಡಿದರು.

`ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ರೈತ ಹೋರಾಟ ರೈತರ ಹಾಗೂ ಶೋಷಿತರ ಪರವಾಗಿತ್ತು. ವಿಧಾನಸಭೆಯಲ್ಲಿ ರೈತರ ಬಗ್ಗೆ ದನಿ ಎತ್ತಿದ ಮಹನೀಯರು ಅವರು. ತಮ್ಮ ಜೀವನದ ಕೊನೆಯವರೆಗೂ ಬಹುರಾಷ್ಟ್ರೀಯ ಬೀಜ ಕಂಪೆನಿಗಳ ವಿರುದ್ಧ ಹೋರಾಟ ನಡೆಸಿದರು. ರೈತರ ಆತ್ಮಹತ್ಯೆಗಳನ್ನು ತಡೆಯುವ ಬಗ್ಗೆ ಸರ್ಕಾರ ನಿರಂತರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಲೇ ಇದೆ. ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಿದೆ~ ಎಂದು ಅವರು ಭರವಸೆ ನೀಡಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, `ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಬಗ್ಗೆ ಸರ್ಕಾರಗಳು ಗಮನ ನೀಡಬೇಕು. ಸ್ವಾವಲಂಬನೆಯ ಕೃಷಿ ಸಾಧ್ಯವಾದಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ. ಸರ್ಕಾರ ರೈತರ ಹಿತ ಕಾಯುವ ಕೆಲಸಗಳಿಗೆ ಮುಂದಾಗಬೇಕು. ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಸಾಧ್ಯ ಎಂಬುದು ಈಗಾಗಲೇ ಸಾಬೀತಾಗಿದ್ದರೂ ಅದನ್ನು ಹೆಚ್ಚು ಪ್ರಚಾರ ಪಡಿಸಲು ಸರ್ಕಾರಕ್ಕೆ ಮನಸ್ಸಿಲ್ಲ. ಸರ್ಕಾರದ ಅಭಿವೃದ್ಧಿಯ ಪರಿಕಲ್ಪನೆಯೇ ಬೇರೆಯಾಗಿದೆ~ ಎಂದು ವಿಷಾದ ವ್ಯಕ್ತ ಪಡಿಸಿದರು.

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, `ವಿಧಾನಸಭೆಯಲ್ಲಿ ರೈತರ ಬಗ್ಗೆ ದನಿ ಎತ್ತಿದ ಮೊದಲಿಗರು ಪ್ರೊ.ನಂಜುಂಡಸ್ವಾಮಿ. ದೇಶದ ಕೃಷಿಯ ಬಗ್ಗೆ ಹಾಗೂ ರೈತರ ಸಮಸ್ಯೆಗಳ ಪರಿಹಾರದ ಬಗ್ಗೆ ಅವರು ಅನೇಕ ಹೊಸ ಒಳನೋಟಗಳನ್ನು ಹೊಂದಿದ್ದವರು. ಅವರ ಹೋರಾಟಗಳು ರೈತ ಹೋರಾಟಗಳಿಗೆ ಮಾದರಿಯಾಗುವಂತಿವೆ~ ಎಂದರು.

ಸಮಾರಂಭದಲ್ಲಿ ಮಾತನಾಡಿದ ಕುಲಾಂತರಿ ಮುಕ್ತ ಭಾರತ ಸಂಘಟನೆಯ ಸಂಯೋಜಕಿ ಕವಿತಾ ಕುರಗಂಟಿ, `ರಕ್ಷಣೆ ಹಾಗೂ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ಕೊಡುವ ಪ್ರಾಮುಖ್ಯತೆಯನ್ನು ಸರ್ಕಾರಗಳು ರೈತರ ಸಾಂಪ್ರದಾಯಿಕ ಬೀಜ ಸಂಸ್ಕೃತಿಯ ರಕ್ಷಣೆಗೆ ನೀಡುತ್ತಿಲ್ಲ. ಸರ್ಕಾರಗಳು ಬಹು ರಾಷ್ಟ್ರೀಯ ಕುಲಾಂತರಿ ಬೀಜ ಕಂಪೆನಿಗಳ ಏಜೆಂಟರಂತೆ ವರ್ತಿಸುತ್ತಿವೆ.
 
ಈ ಮೂಲಕ ಸರ್ಕಾರ ರೈತರನ್ನು ವಂಚಿಸುತ್ತಿದೆ. ಕುಲಾಂತರಿ ಬೀಜದ ಪ್ರಯೋಗ ಕೃಷಿಯ ಮೂಲಕ ನಮ್ಮಲ್ಲಿನ ಬೀಜ ಸಂಸ್ಕೃತಿಯನ್ನು ನಾಶ ಪಡಿಸುವ ಪ್ರಯತ್ನಗಳು ನಡೆಯುತ್ತಿದೆ. ಇದರ ವಿರುದ್ಧ ವ್ಯಾಪಕ ಹೋರಾಟ ನಡೆಯಬೇಕಿದೆ. ಬೀಜ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಎಲ್ಲ ರೈತರೂ ಒಗ್ಗೂಡಬೇಕಿದೆ~ ಎಂದು ಅವರು ಕರೆ ನೀಡಿದರು.

ಸಮಾರಂಭದಲ್ಲಿ ತಮಿಳುನಾಡಿನ ರೈತ ಹೋರಾಟಗಾರ ಡಾ.ಎಂ.ಆರ್.ಶಿವಸ್ವಾಮಿ ಮತ್ತು ಸ್ವಿಟ್ಜರ್ಲೆಂಡ್‌ನ ನೈಸರ್ಗಿಕ ಕೃಷಿ ಚಳವಳಿಯ ಮುಖಂಡ ಒಲಿವಿಯರ್ ಡಿ ಮಾರ್ಸೆಲಸ್ ಅವರಿಗೆ `ಪ್ರೊ.ಎಂಡಿ.ನಂಜುಂಡಸ್ವಾಮಿ ಅಂತರರಾಷ್ಟ್ರೀಯ ಜೀವಮಾನ ಸಾಧನೆ ಪ್ರಶಸ್ತಿ~ ಯನ್ನು ನೀಡಲಾಯಿತು.

ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ನಟ ಅಶೋಕ್, ಪ್ರೊ.ಎ.ಡಿ.ನಂಜುಂಡಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ, ಕಾರ್ಯದರ್ಶಿ ಚುಕ್ಕಿ ನಂಜುಂಡಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಗರಂ ಆದ ಸಿಎಂ...
`ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತಾವೊಬ್ಬರೇ ನಗುತ್ತಾ ಇದ್ದರೆ ಸಾಲದು. ರಾಜ್ಯದ ರೈತರ ಹಾಗೂ ಶೋಷಿತರ ಮುಖಗಳಲ್ಲಿ ನಗು ಮೂಡಿಸುವ ಬಗ್ಗೆಯೂ ಗಮನ ನೀಡಬೇಕು~ ಎಂಬ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಅವರ ಮಾತಿನಿಂದ ಕೋಪಗೊಂಡ ಸದಾನಂದಗೌಡ, `ಪುಟ್ಟಣ್ಣಯ್ಯ ಅವರ ಮಾತಿನಿಂದ ನನ್ನ ಮನಸ್ಸಿಗೆ ನಿಜಕ್ಕೂ ಬೇಸರವಾಗಿದೆ. ನಾನು ಇರುವುದೇ ಹೀಗೆ. ನನ್ನ ಈ ನಗು ಮುಖಕ್ಕೆ ನನ್ನ ತಂದೆ ತಾಯಿಗಳು ಕಾರಣ. ಯಾವಾಗಲೂ ಕಾರಣವಿಲ್ಲದೇ ನಗುವವರನ್ನು ಹುಚ್ಚರು ಎನ್ನುತ್ತಾರೆ. ಆದರೆ ಹಾಗೆ ಸದಾ ಕಾರಣವಿಲ್ಲದೇ ನಗುವ ವ್ಯಕ್ತಿ ನಾನಲ್ಲ~ ಎಂದು ತಿರುಗೇಟು ನೀಡಿದರು.

ಸದಾನಂದಗೌಡ ಅವರು ತಮ್ಮ ಭಾಷಣ ಮುಗಿಸುತ್ತಿದ್ದಂತೆಯೇ ಅವರ ಬಳಿ ದಾವಿಸಿದ ಪುಟ್ಟಣ್ಣಯ್ಯ, `ನಿಮ್ಮನ್ನು ಅಪಹಾಸ್ಯ ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ನಗು ಮುಖ ಸದಾ ಆರೋಗ್ಯವಂತ ಸ್ಥಿತಿಯನ್ನು ತಿಳಿಸುತ್ತದೆ. ಅಂತಹ ಆರೋಗ್ಯವಂತರಾದ ನಿಮ್ಮ ಬಗ್ಗೆ ನನಗೇನೂ ಹೊಟ್ಟೆಕಿಚ್ಚಿಲ್ಲ. ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮಿಸಿ~ ಎಂದು ಕ್ಷಮೆ ಕೋರಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT