ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ ಅಳಿಸಿಕೊಂಡ ನಟ ಸಾಮ್ರಾಟ

Last Updated 9 ಜೂನ್ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅದು ನೀನಾಸಂ ತಿರುಗಾಟದ `ಮಿಸ್ ಸದಾರಮೆ~ ನಾಟಕ.ತಿರುಗಾಟದಲ್ಲಿದ್ದ ನಟ ದಿವಂಗತ ಕೆ. ಶರತ್ ತನ್ನ ಜೊತೆಗಿದ್ದ ನಟಿಯನ್ನು ಯಾವುದೋ ಕಾರಣಕ್ಕೆ ಬೈಯ್ದರು. ಇದನ್ನು ಕಂಡ ನಟ ಏಣಗಿ ನಟರಾಜ ಸುಮ್ಮನಿರದೆ ಶರತ್ ಅವರನ್ನು ಬೈದರು.

ಇದರಿಂದ ಸಿಟ್ಟಿಗೆದ್ದು ಸಂಜೆ ನಡೆಯುವ ನಾಟಕದಲ್ಲಿ ಪಾತ್ರ ಮಾಡುವುದಿಲ್ಲವೆಂದು ಶರತ್ ಹಟ ಹಿಡಿದರು. ಎಷ್ಟೇ ಹೇಳಿದರೂ ಕೇಳಲಿಲ್ಲ. ಕೊನೆಗೆ ಶರತ್ ಪಾತ್ರವನ್ನು ನಟರಾಜ ತನ್ನ ಪಾತ್ರದ ಜೊತೆಗೆ ಲೀಲಾಜಾಲವಾಗಿ ಅಭಿನಯಿಸಿದರು. ಇದು ಕಲಾವಿದ ಏಣಗಿ ನಟರಾಜ ಅವರ ಸಾಮರ್ಥ್ಯಕ್ಕೊಂದು ಪುಟ್ಟ ಉದಾಹರಣೆ.

ನಟರಾಜ ಅವರಿಗೆ ಇಂತಹ ಕೌಶಲ ಸಿದ್ಧಿಸಿದ್ದು ಜನ್ಮಜಾತವಾಗಿ. ಹಿರಿಯ ರಂಗಕರ್ಮಿಗಳಾದ ಏಣಗಿ ಬಾಳಪ್ಪ ಮತ್ತು ಲಕ್ಷ್ಮಿಬಾಯಿ ಅವರ ಪುತ್ರನಾದ ಅವರು ಬಾಲಕನಿರುವಾಗಲೇ ಕಲಾವೈಭವ ನಾಟಕ ಕಂಪೆನಿಯಲ್ಲಿ ಬೆಳೆದರು. ನಟರಾಜಗೆ ನಾಟಕ ಕಂಪೆನಿಯಲ್ಲಿ ನಟರು ಇದ್ದಕ್ಕಿದ್ದಂತೆ ಕೈಕೊಟ್ಟಾಗ ಬಣ್ಣ ಹಚ್ಚಿಕೊಂಡು ಪಾತ್ರ ನಿರ್ವಹಿಸುವುದು ಸುಲಭವಾಗಿತ್ತು. ಹೀಗಾಗಿ ನೀನಾಸಂ ತಿರುಗಾಟದಲ್ಲಿ ಶರತ್ ಕೈಕೊಟ್ಟಾಗ ಏನೂ ಆಗಿಲ್ಲವೆಂಬಂತೆ ಪಾತ್ರ ನಿರ್ವಹಿಸಲು ಅವರಿಗೆ ಸುಲಭವಾಗಿತ್ತು.

ತಮ್ಮ ಆಂಗಿಕ ಅಭಿನಯ, ಮಾತಿನ ಏರಿಳಿತ ಮೂಲಕ ಎದುರಿಗಿದ್ದ ನಟನನ್ನು ಮೀರಿ ಇಡೀ ರಂಗವನ್ನು ತುಂಬಿಕೊಂಡು ಎಲ್ಲ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆವ ಶಕ್ತಿ ಅವರಿಗಿತ್ತು.ಇಂಥ ನಟರಾಜ ಜನಿಸಿದ್ದು 1984ರ ಸೆಪ್ಟೆಂಬರ್ 18ರಂದು. ಓದಿದ್ದು ಬಿ.ಕಾಂ. ಓದುತ್ತಲೇ ತಂದೆಯ ಕಂಪೆನಿಯಲ್ಲಿಯೇ ಐತಿಹಾಸಿ, ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದರು.

ನಂತರ 1981ರಿಂದ 1983ರ ವರೆಗೆ ತಂದೆಯ ಕಲಾವೈಭವ ನಾಟ್ಯ ಸಂಘವನ್ನು ಮುನ್ನಡೆಸಿದರು. ಆದರೆ ನಷ್ಟದಿಂದಾಗಿ ಕಂಪೆನಿಯನ್ನು ಮುಚ್ಚಿದರು.ಆಮೇಲೆ ಹೆಗ್ಗೋಡಿನ ನೀನಾಸಂ ಸೇರಿ ರಂಗಭೂಮಿ ಕುರಿತು ತರಬೇತಿ ಪಡೆದು, 3-4 ವರ್ಷಗಳವರೆಗೆ ತಿರುಗಾಟದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ಹೀಗೆ ವೃತ್ತಿ ರಂಗಭೂಮಿಯ ಜೊತೆಗೆ ಹವ್ಯಾಸಿ ರಂಗಭೂಮಿ ಜ್ಞಾನ ಸಂಪಾದಿಸಿಕೊಂಡು ಭರವಸೆಯ ನಟರಾಗಿ, ನಿರ್ದೇಶಕರಾಗಿ ಹೊರಹೊಮ್ಮಿದರು.

ನಂತರ ಮೈಸೂರಿನ ರಂಗಾಯಣದಲ್ಲಿ ಉಪನ್ಯಾಸಕರಾಗಿ, ಕೇರಳದ ತ್ರಿಶ್ಯೂರಿನಲ್ಲಿ ರಂಗಭೂಮಿ ಕುರಿತ ಅತಿಥಿ ಉಪನ್ಯಾಸಕರಾಗಿ ದುಡಿದರು. ತಮ್ಮ ಎಲ್ಲ ಮಕ್ಕಳಿಗಿಂತ ಕೊನೆಯ ಪುತ್ರ ನಟರಾಜ ರಂಗಕರ್ಮಿಯಾದುದು ಬಾಳಪ್ಪನವರಿಗೆ ಖುಷಿ ಹಾಗೂ ಸಮಾಧಾನ ಉಂಟು ಮಾಡಿತ್ತು.

ನಟ ಸಾಮ್ರಾಟ: ಕೆಲ ವರ್ಷಗಳ ಹಿಂದೆ `ನಟ ಸಾಮ್ರಾಟ~ ನಾಟಕದಲ್ಲಿ ನಟರಾಜ ಅಭಿನಯಿಸಿದ್ದು ವೃದ್ಧ ರಂಗನಟನೊಬ್ಬನ ಪಾತ್ರ. ವಯಸ್ಸಿಗೂ ಮೀರಿದ ಆ ಪಾತ್ರವನ್ನು ನಟರಾಜ ಅದ್ಭುತವಾಗಿ ಅಭಿನಯಿಸಿದ್ದನ್ನು ಕಂಡವರು ಬಾಳಪ್ಪನವರನ್ನೇ ರಂಗದ ಮೇಲೆ ಕಂಡಷ್ಟು ಖುಷಿ ಪಡುತ್ತಿದ್ದರು.

ಈಚಿನ ವರ್ಷಗಳಲ್ಲಿ ಸುರೇಂದ್ರನಾಥ ಅವರ ಎರಡೇ ಪಾತ್ರಗಳಿರುವ `ನಾ ತುಕಾರಾಮ ಅಲ್ಲ~ ನಾಟಕವನ್ನು ಬಿ. ಸುರೇಶ ಜೊತೆಗೆ ನಟರಾಜ ಅಭಿನಯಿಸಿದ್ದನ್ನು ನೋಡಿದವರು ಮರೆಯಲಾರರು. ಇದರೊಂದಿಗೆ 30ಕ್ಕೂ ಅಧಿಕ ಟಿವಿ ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ್ದರು.

25 ಸಿನಿಮಾಗಳಲ್ಲಿ ನಟಿಸಿದ್ದರು. ಇದಾದ ಮೇಲೆ ಹೂವಿನಹಡಗಲಿಯಲ್ಲಿ ಎಂ.ಪಿ. ಪ್ರಕಾಶ ಕಟ್ಟಿದ ರಂಗ ಸಂಸ್ಥೆಗೆ ಮುಖ್ಯಸ್ಥರಾಗಿ ದುಡಿದ್ದರು. ಕಳೆದ ವರ್ಷದಿಂದ ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದರು.ಕನ್ನಡ ರಂಗಭೂಮಿ ಕಂಡ ಅದ್ಭುತ ನಟರಲ್ಲಿ ಏಣಗಿ ನಟರಾಜ ಕೂಡ ಒಬ್ಬರಾಗಿದ್ದರು. ಆದರೆ ಅವರು ಅಸ್ವಸ್ಥರಾಗಿ ಆಗಾಗ ಆಸ್ಪತ್ರೆ ಸೇರುತ್ತಿದ್ದರು. 54 ಎಂದರೆ ಸಾಯುವ ವಯಸ್ಸಲ್ಲ; ಅದೂ ಶತಾಯುಷಿಯಾಗಲಿರುವ ತಂದೆ ಬಾಳಪ್ಪನವರ ಎದುರು!

ರಂಗಕರ್ಮಿ ಏಣಗಿ ನಟರಾಜ ನಿಧನ
ಹುಬ್ಬಳ್ಳಿ: ಖ್ಯಾತ ರಂಗಕರ್ಮಿ, ಧಾರವಾಡ ರಂಗಾಯಣದ ನಿರ್ದೇಶಕ ಏಣಗಿ ನಟರಾಜ (54) ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.ಅವರಿಗೆ ತಂದೆ, ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ,

ತಾಯಿ, ರಂಗ ಕಲಾವಿದೆ ಲಕ್ಷ್ಮಿಬಾಯಿ, ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಕಾಮಾಲೆ ರೋಗದಿಂದ ಬಳಲುತ್ತಿದ್ದ ಅವರನ್ನು ಕಳೆದ ಭಾನುವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟರು.

ಏಣಗಿಯಲ್ಲಿ ಅಂತ್ಯಕ್ರಿಯೆ(ಸವದತ್ತಿ ವರದಿ):  ನಟರಾಜರ ಅಂತ್ಯಕ್ರಿಯೆ ತಾಲ್ಲೂಕಿನ ಏಣಗಿಯಲ್ಲಿ ಶನಿವಾರ ಸಂಜೆ ನಡೆಯಿತು. ಅವರ ತಂದೆ ಏಣಗಿ ಬಾಳಪ್ಪ, ತಾಯಿ ಲಕ್ಷ್ಮಿಬಾಯಿ ಹಾಗೂ ಕುಟುಂಬದವರು, ಸ್ಥಳೀಯರು ಅಲ್ಲದೇ ಧಾರವಾಡ ಹಾಗೂ ಇತರ ಜಿಲ್ಲೆಗಳಿಂದ ಆಗಮಿಸಿದ್ದ ರಂಗಕರ್ಮಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT