ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ ಮೂಡಿಸಿದ ಏಲಿಟಾ

Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಏಲಿಟಾ ಆ್ಯಂಡ್ರೆ ಹುಟ್ಟಿದ್ದು ಜನವರಿ 9, 2007. ಒಂಬತ್ತು ತಿಂಗಳ ಮಗುವಾಗಿದ್ದಾಗಲೇ ಅವಳು ಚಿತ್ರ ಬಿಡಿಸಲು ಪ್ರಾರಂಭಿಸಿದಳು. ನೋಡನೋಡುತ್ತಲೇ `ಅಬ್‌ಸಟ್ಯೆಾಕ್ಟ್ ಚಿತ್ರಕಲೆ'ಯಲ್ಲಿ ಅವಳ ಹೆಸರು ಜನಪ್ರಿಯವಾಯಿತು. ಏಲಿಟಾ ಬಿಡಿಸಿದ ಚಿತ್ರಗಳು ವಿಶ್ವದ ವಿವಿಧ ಭಾಗಗಳಲ್ಲಿ ಪ್ರದರ್ಶನ ಕಂಡಿವೆ.

ಈ ಬಾಲಕಿಯದು ಆರನೇ ವಯಸ್ಸಿಗೇ ಅಸಾಧಾರಣ ಸಾಧನೆ. ಏಲಿಟಾ ತಂದೆ ಆಸ್ಟ್ರೇಲಿಯಾ ಮೂಲದ ಮೈಕಲ್ ಆ್ಯಂಡ್ರೆ. ತಾಯಿ ನಿಕ್ಕಾ ಕಲಾಶ್ನಿಕೋವಾ ರಷ್ಯಾದವರು. ಈ ಇಬ್ಬರೂ ಕಲಾವಿದರು. ಕ್ಯಾನ್‌ವಾಸ್ ಮೇಲೆ ಚಿತ್ರಗಳನ್ನು ಮೂಡಿಸುತ್ತಿದ್ದ ಅಪ್ಪ-ಅಮ್ಮನನ್ನು ಶೈಶವಾವಸ್ಥೆಯಲ್ಲೇ ಏಲಿಟಾ ನೋಡಿ ಬೆಳೆದಳು. ಅಂಬೆಗಾಲಿಕ್ಕುವಾಗಲೇ ಚಿತ್ರಕಲೆ ಮೂಡಿಸಿದ ಮಗು ಈಗ ಮೆಲ್ಬರ್ನ್‌ನಲ್ಲಿ ವಾಸ ಮಾಡುತ್ತಿದೆ.

ಮೆಲ್ಬರ್ನ್‌ನಲ್ಲಿ ಕಲಾ ಪ್ರದರ್ಶನದ ಆಯೋಜಕರೊಬ್ಬರಿಗೆ ನಿಕ್ಕಾ ತಮ್ಮ ಮಗು ಬಿಡಿಸಿದ ಚಿತ್ರಗಳನ್ನು ಕೊಟ್ಟರು. ಅದನ್ನು ರಚಿಸಿದ್ದು ಯಾರೆಂದು ಅವರು ಹೇಳದೆ, ಅಭಿಪ್ರಾಯವನ್ನು ಮಾತ್ರ ಕೇಳಿದರು. ಆ ಚಿತ್ರಗಳನ್ನು ನೋಡಿದ ಪ್ರದರ್ಶಕರು ತಮ್ಮ `ಬ್ರುನ್‌ಸ್ವಿಕ್ ಸ್ಟ್ರೀಟ್ ಗ್ಯಾಲರಿ'ಯಲ್ಲಿ ನಡೆಯಲಿದ್ದ ಹಲವು ಕಲಾವಿದರ ಚಿತ್ರಕಲಾ ಪ್ರದರ್ಶನದಲ್ಲಿ ಆ ಚಿತ್ರಗಳನ್ನೂ ಸೇರಿಸಿಕೊಳ್ಳಲು ನಿರ್ಧರಿಸಿದರು. ಈ ವಿಷಯ ಕೇಳಿ ನಿಕ್ಕಿ ಚಕಿತಗೊಂಡು, ಅದನ್ನು ರಚಿಸಿದ್ದು 22 ತಿಂಗಳ ತಮ್ಮ ಮಗು ಎಂಬ ಸತ್ಯವನ್ನು ಹೇಳಿಬಿಟ್ಟರು.

`ಮಗು ಸುಮ್ಮನೆ ಬಣ್ಣದಲ್ಲಿ ಏನೋ ಆಟವಾಡಿದೆ ಎಂದೇನಾದರೂ ಅನಿಸುತ್ತಿದೆಯೇ' ಎಂದು ಕಲಾ ಪ್ರದರ್ಶಕರನ್ನು ಕೇಳಿದರು. ಇದನ್ನು ಕೇಳಿ ಆ ಪ್ರದರ್ಶಕರಿಗೆ ಅಚ್ಚರಿಯಾಯಿತು. ಅವೆಲ್ಲವೂ ನಿಜಕ್ಕೂ ಕಲಾಕೃತಿಗಳೇ ಎಂಬುದನ್ನು ಅವರು ಹಲವು ಕಲಾವಿದರ ನೆರವು ಪಡೆದು ಅನುಮೋದಿಸಿದರು. ಪ್ರದರ್ಶನದಲ್ಲಿ ಏಲಿಟಾ ಚಿತ್ರಗಳೂ ಇದ್ದವು. ಆನಂತರ ಹಾಂಕಾಂಗ್‌ನಲ್ಲಿ ನಡೆದ ಇನ್ನೊಂದು ಪ್ರದರ್ಶನಕ್ಕೂ ಚಿತ್ರಗಳು ಆಯ್ಕೆಯಾದವು. ಅಲ್ಲಿ 24,000 ಡಾಲರ್ (ಸುಮಾರು ಹತ್ತೂವರೆ ಲಕ್ಷ ರೂಪಾಯಿ) ಬೆಲೆಗೆ ಒಂದು ಪೇಂಟಿಂಗ್ ಮಾರಾಟವಾಯಿತು.

ಏಲಿಟಾ ನಾಲ್ಕು ವರ್ಷದ ಹುಡುಗಿಯಾಗಿದ್ದಾಗ ನ್ಯೂಯಾರ್ಕ್‌ನಲ್ಲಿ ಆಕೆಯ ಕಲಾಕೃತಿಗಳ ಚೊಚ್ಚಿಲ ಪ್ರದರ್ಶನ ನಡೆಯಿತು. ಆ ಪ್ರದರ್ಶನವೊಂದರಲ್ಲಿ ಅವಳು ರಚಿಸಿದ ಒಂಬತ್ತು ಪೇಂಟಿಂಗ್‌ಗಳು ಒಟ್ಟು 30 ಸಾವಿರ ಡಾಲರ್ (ಸುಮಾರು 13.25 ಲಕ್ಷ ರೂ.) ಬೆಲೆಗೆ ಮಾರಾಟಗೊಂಡವು. ಅಮೆರಿಕದ ಮಾಧ್ಯಮಗಳು ಈ ಪ್ರಚಂಡ ಪುಟಾಣಿಯನ್ನು ಏಲಿಟಾಳನ್ನು `ದಿ ಪೀ-ವೀ ಪಿಕಾಸೋ' (ಪುಟ್ಟ ಪಿಕಾಸೋ) ಎಂದೇ ಬಣ್ಣಿಸಿವೆ. ಇಷ್ಟು ದೊಡ್ಡ ಮೊತ್ತಕ್ಕೆ ಪೇಂಟಿಂಗ್‌ಗಳನ್ನು ಮಾರಿದ ಅತಿ ಕಿರಿಯ ಕಲಾವಿದೆ ಎಂದು ಬಿ.ಬಿ.ಸಿ (ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್) ಹೊಗಳಿದೆ.

ಆಕ್ರಿಲಿಕ್ ಬಣ್ಣಗಳಿಂದ ಏಲಿಟಾ ರಚಿಸಿದ ಪೇಂಟಿಂಗ್‌ಗಳನ್ನು ಕಲಾ ವಿಮರ್ಶಕರು ಗಂಭೀರವಾಗಿ ಗಮನಿಸಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಮರದ ತೊಗಟೆ, ಹಕ್ಕಿಗರಿ ಮೊದಲಾದವುಗಳನ್ನು ಏಲಿಟಾ ತನ್ನದೇ ಕಲ್ಪನೆಯಲ್ಲಿ ಮೂಡಿಸುತ್ತಾಳೆ. ಈ ಕಲೆಯಲ್ಲಿ ಮೋಸ, ತಟವಟ ಇಲ್ಲ. ಅವಳ ಅಪ್ಪ-ಅಮ್ಮನ ಕೈವಾಡವೂ ಇದರಲ್ಲಿ ಇಲ್ಲ ಎಂಬುದನ್ನು ಅನೇಕರು ಪರೀಕ್ಷೆ ನಡೆಸಿ ಖಾತರಿಪಡಿಸಿ ಕೊಂಡಿದ್ದಾರೆ. ಬಣ್ಣಗಳು ಹಾಗೂ ಕ್ಯಾನ್ವಾಸ್ ಸಿಕ್ಕರೆ ತನ್ನದೇ ಲೋಕ ಪ್ರವೇಶಿಸಿದಂತೆ ಸುಖಿಸುವ ಏಲಿಟಾ ನಿಜಕ್ಕೂ ಇತ್ತೀಚಿನ ಅಚ್ಚರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT