ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಮಾತು ಬೇಡ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಿದೇಶಗಳಿಗೆ ಹೋಗಿ ಬರುವ ಮಂತ್ರಿಮಾನ್ಯರು ಅಲ್ಲಿನ ಆಧುನಿಕ ಸೌಲಭ್ಯಗಳನ್ನು ನೋಡಿ ಉತ್ತೇಜನಗೊಂಡು ಅಂತಹ ವ್ಯವಸ್ಥೆಯನ್ನು ನಮ್ಮ ರಾಜ್ಯದಲ್ಲೂ ಅನುಷ್ಠಾನಕ್ಕೆ ತರುವ ಮಾತುಗಳನ್ನಾಡುವುದು ಹೊಸ­ದಲ್ಲ. ಬೆಂಗಳೂರನ್ನು ಸಿಂಗಪುರದಂತೆ ಅಭಿವೃದ್ಧಿಪಡಿಸುವ, ವೃಷಭಾವತಿ­ಯನ್ನು ಥೇಮ್ಸ್‌ ನದಿ ಮಾದರಿಯಲ್ಲಿ ಶುದ್ಧಿಗೊಳಿಸುವಂತಹ ಬಣ್ಣದ ಮಾತುಗಳಿಗೆ ಬರವಿಲ್ಲ. ಈಚೆಗೆ ಚೀನಾಕ್ಕೆ ಹೋಗಿ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅಂತಹ ಮಾತುಗಳನ್ನಾಡಿದ್ದಾರೆ.

ಜಪಾನ್‌ ದೇಶದಲ್ಲಿ ಜನಪ್ರಿಯವಾಗಿರುವ ಬುಲೆಟ್‌ ರೈಲು ತಂತ್ರಜ್ಞಾನವನ್ನು ಕರ್ನಾಟಕ­ಕ್ಕೆ ತರುವುದಾಗಿ ತಿಳಿಸಿದ್ದಾರೆ! ಚೀನಾದಲ್ಲಿ, ಜಪಾನಿನ ಸಚಿವ­ರೊಬ್ಬರನ್ನು ಭೇಟಿ ಮಾಡಿ ಗಂಟೆಗೆ 250 ಕಿ.ಮೀ. ವೇಗದಲ್ಲಿ ಓಡುವ ಬುಲೆಟ್‌ ರೈಲನ್ನು ಬೆಂಗಳೂರು–ಮೈಸೂರು ನಡುವೆ ಓಡಿಸುವಂತೆ ಮನವಿ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.  ಬುಲೆಟ್‌ ರೈಲು ಮೈಸೂರು– ಬೆಂಗ­ಳೂರು ನಡುವೆ ಸಂಚರಿಸಬೇಕು ಎಂಬುದು ಮುಖ್ಯಮಂತ್ರಿಯವರ ಬಯಕೆ. ಯಾವುದೇ ಹೊಸ ಸೌಲಭ್ಯ ಮೊದಲು ತಮ್ಮ  ಜಿಲ್ಲೆಗೆ ಬರಬೇಕು ಎಂಬುದು ಎಲ್ಲ ರಾಜಕಾರಣಿಗಳ ಆಸೆ. ಸಿದ್ದರಾಮಯ್ಯ ಅದಕ್ಕೆ ಹೊರತಲ್ಲ. ತಂತ್ರ­ಜ್ಞಾನದ ಜತೆಗೆ ಬಂಡವಾಳವನ್ನೂ ಜಪಾನ್‌ ಸರ್ಕಾರವೇ ಹಾಕಿಕೊಂಡು ಬುಲೆಟ್‌ ರೈಲು ಓಡಿಸುವ ಯೋಜನೆ ಯಾವಾಗ ಕಾರ್ಯರೂಪಕ್ಕೆ ಬಂದೀತು ಎಂಬುದನ್ನು ಅವರೇ ಹೇಳಬೇಕು. ರೈಲ್ವೆ, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ವಿಷಯ ಎಂಬುದು ಗೊತ್ತಿದ್ದೂ ಸಿದ್ದರಾಮಯ್ಯ  ‘ರೈಲು’ ಓಡಿಸುವ ಮಾತುಗಳನ್ನಾಡಿರುವುದು ದೊಡ್ಡ ತಮಾಷೆ.

 ಕರ್ನಾಟಕಕ್ಕೆ ಮಂಜೂರಾದ ಹಲವು ರೈಲ್ವೆ ಯೋಜನೆಗಳು ನನೆಗುದಿಗೆ ಬಿದ್ದಿವೆ. ಬೆಂಗಳೂರು–ಮೈಸೂರು ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಆರಂಭವಾಗಿ ದಶಕ ಕಳೆದಿದೆ. ಈ ಕಾಮಗಾರಿಗೆ ಬೇಕಾದ ಭೂಸ್ವಾಧೀನ ಪ್ರಕ್ರಿಯೆ ಅಲ್ಲಲ್ಲಿ ವಿವಾದಕ್ಕೆ ಒಳಗಾಗಿದೆ. ಅಷ್ಟೇ ಅಲ್ಲ; ಅನೇಕ ಜಿಲ್ಲೆಗಳಲ್ಲಿ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಆಸಕ್ತಿಯನ್ನೇ ತೋರಿಸುತ್ತಿಲ್ಲ ಎಂದು ರೈಲ್ವೆ ಸಚಿವಾಲಯ ಆರೋಪಿಸುತ್ತಲೇ ಇದೆ. ಈ ಯೋಜನೆಗಳತ್ತ ಗಮನ ಹರಿಸಿ ರಾಜ್ಯದಲ್ಲಿ ರೈಲ್ವೆ ವ್ಯವಸ್ಥೆ ಸುಧಾರಣೆಗೆ ಗಮನ ಕೊಡಬೇಕಾದ ಮುಖ್ಯಮಂತ್ರಿಯವರು ಆ ಕುರಿತು ಮೌನ ತಾಳಿ­ರುವುದು ದುರದೃಷ್ಟಕರ.

ರಾಜ್ಯದವರೇ ಆದ  ರೈಲ್ವೆ  ಸಚಿವ  ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವ ಬಳಸಿಕೊಂಡು ರಾಜ್ಯದ ರೈಲ್ವೆ ಯೋಜನೆಗಳನ್ನು ಮಾಡಿ ಮುಗಿಸಬೇಕಿದೆ.  ಅವರು ಅತ್ತ ಗಮನವನ್ನೇ ಕೊಡದೆ ವಿದೇಶಿ ತಂತ್ರಜ್ಞಾನದ ದುಬಾರಿ ರೈಲಿನ ಮಾತು ಆಡುತ್ತಿರುವುದು ಪರಿಸ್ಥಿತಿಯ ವ್ಯಂಗ್ಯವೇ ಹೌದು. ರಾಜ್ಯದಲ್ಲಿ  ರೈಲು ಮಾತ್ರವಲ್ಲ; ರಸ್ತೆ ಸಂಪರ್ಕವೂ ಚೆನ್ನಾಗಿಲ್ಲ. ಮೈಸೂರು–ಬೆಂಗಳೂರು ಕಾರಿಡಾರ್‌ ಯೋಜನೆ ನನೆಗುದಿಗೆ ಬಿದ್ದಿದೆ. ತುರ್ತಾಗಿ ಆಗಲೇಬೇಕಾದ, ಆದರೆ ಅರ್ಧಕ್ಕೇ ನಿಂತಿರುವ ಅನೇಕ  ಯೋಜನೆಗಳು ಇವೆ. ಒಂದಷ್ಟು ಹೆಚ್ಚಿನ ಅನುದಾನ ಮತ್ತು ತುಸು ಮುತುವರ್ಜಿ ವಹಿಸಿದರೆ ಅವುಗಳು ಪೂರ್ಣಗೊಳ್ಳುತ್ತವೆ.

ಹಿಂದಿನ ಸರ್ಕಾರ­ಗಳು ಚುನಾವಣೆಗಳ ಮೇಲೆ ಕಣ್ಣಿಟ್ಟು ಜನಪ್ರಿಯ ಯೋಜನೆಗಳಿಗೆ ಒತ್ತು ಕೊಟ್ಟು ಮೂಲ ಸೌಕರ್ಯ ಯೋಜನೆಗಳನ್ನು ನಿರ್ಲಕ್ಷಿಸಿವೆ. ಈ ಹೊತ್ತಿನಲ್ಲಿ ಕಾರ್ಯಸಾಧುವಲ್ಲದ ಯೋಜನೆಯನ್ನು ಜಾರಿಗೆ ತರುವ ಮಾತನಾಡುತ್ತ ಜನರ ಮೂಗಿಗೆ ತುಪ್ಪ ಹಚ್ಚುವ ಬದಲು ಕುಂಟುತ್ತಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಬದ್ಧತೆಯನ್ನು ಮುಖ್ಯಮಂತ್ರಿ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT