ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಮುಳುಗಿ ಹೋದ ಆ ಕ್ಷಣ...

ಬೇಲೂರು ತಾಲ್ಲೂಕಿನ 3ನೇ ಅತಿ ದೊಡ್ಡ ದುರಂತ!
Last Updated 24 ಜುಲೈ 2013, 5:57 IST
ಅಕ್ಷರ ಗಾತ್ರ

ಬೇಲೂರು: ಇಲ್ಲಿನ ವಿಷ್ಣುಸಮುದ್ರ ಕೆರೆಗೆ ಉರುಳಿ ಬಿದ್ದು 8 ಜನರ ಸಾವಿಗೆ ಕಾರಣವಾದ ಈ ಅಪಘಾತ ಬೇಲೂರು ತಾಲ್ಲೂಕಿನ ಮಟ್ಟಿಗೆ 3ನೇ ಅತಿದೊಡ್ಡ ಅಪಘಾತವಾಗಿದೆ. ಇದು ಜನರಲ್ಲಿ ದಿಗಿಲು ಮೂಡಿಸಿದೆ.

ಕಳೆದ 10 ವರ್ಷಗಳ ಹಿಂದೆ ಬೇಲೂರು- ಹಳೇಬೀಡು ರಸ್ತೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಜೀಪೊಂದು ಮರಕ್ಕೆ ಡಿಕ್ಕಿ ಹೊಡೆದು 11 ಜನರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿತ್ತು.

ಗೃಹ ಪ್ರವೇಶದ ಊಟ ಮುಗಿಸಿ ಬೇಲೂರಿಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಜೀಪ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಜೀಪ್‌ನಲ್ಲಿದ್ದ 11 ಶಿಕ್ಷಕರು ಮತ್ತು ಬಿಇಒ ಕಚೇರಿಯ ಸಿಬ್ಬಂದಿ ಸಾವನ್ನಪ್ಪಿದ್ದರು.

ಸುಮಾರು 20 ವರ್ಷಗಳ ಹಿಂದೆ ಕದುರೆಮುಖ ಕಬ್ಬಿಣ ಅದಿರುವ ಕಂಪನಿಯ ಟಿಪ್ಪರ್ ಲಾರಿಯೊಂದು ಅಪಘಾತಕ್ಕೀಡಾಗಿ 6ಜನರು ಮೃತಪಟ್ಟಿದ್ದರು.

ಬಂಧುಗಳ ಆಕ್ರಂದನ
ಇಂದು ಸಂಭವಿಸಿದ ಅಪಘಾತದಲ್ಲಿ 8 ಜನರು ಸಾವಿಗೀಡಾಗಿರುವುದು ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ.
ಬಸ್ ಕೆರೆಗೆ ಉರುಳಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಸಾಗರೋಪಾದಿಯಲ್ಲಿ ಕೆರೆಯ ಬಳಿ ಜಮಾಯಿಸಿದರು. ಸಂಜೆಯವರೆಗೂ ಬೇಲೂರು- ಸಕಲೇಶಪುರ ನಡುವಿನ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ನೀರಿನಲ್ಲಿ ಮುಳುಗಿದ್ದ ಬಸ್‌ನಿಂದ ಒಂದೋಂದೆ ಶವಗಳನ್ನು ಹೊರತೆಗೆಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪೂರ್ತಿ ಮಗುಚಿ ಬಿದ್ದಿದ್ದ ಬಸ್‌ನ್ನು ಒಂದು ಬದಿಗೆ ಉರುಳಿಸಿದ ಬಳಿಕ ಬಸ್ಸಿನಿಂದ ಒಂದೊಂದೇ ಶವವನ್ನು ಹೊರತೆಗೆದರು.

ಕಿಕ್ಕಿರಿದು ತುಂಬಿದ್ದ ಬಸ್‌ನಲ್ಲಿ ನೂರಕ್ಕೂ ಹೆಚ್ಚು ಜನರಿದ್ದರೆಂದು ಬಸ್‌ನಲ್ಲಿದ್ದ ಅರೇಹಳ್ಳಿಯ ದುಶ್ಯಂತ್ ತಿಳಿಸಿದರು. ಬಸ್ ಕರೆಗೆ ಬಿದ್ದ ಸನ್ನಿವೇಶವನ್ನು ಗಮನಿಸಿದರೆ ಸಾವಿನ ಸಂಖ್ಯೆ 25 ದಾಟಿರಬಹುದೆಂದು ಅಂದಾಜಿಸಲಾಗಿತ್ತು. ಆದರೆ ಬಹುತೇಕ ಜನ ಬಸ್‌ನ ಗ್ಲಾಸ್‌ಗಳನ್ನು ಒಡೆದು ಪರಸ್ಪರ ಸಹಕಾರದಿಂದ ಹೊರಬಂದಿರುವುದು ಸಾವಿನ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.

ಪುರಾತನ, ಪ್ರಸಿದ್ಧ ಕೆರೆ
ವಿಷ್ಣು ಸಮುದ್ರ ಕೆರೆ ಪುರಾತನ ಕೆರೆಗಳಲ್ಲಿ ಪ್ರಮುಖವಾದದು. ಹೊಯ್ಸಳ ಅರಸರಿಗೂ ಮುಂಚೆ ನಿರ್ಮಾಣಗೊಂಡಿರುವ ಈ ಕೆರೆ 800 ಎಕರೆ ವಿಸ್ತೀರ್ಣ ಹೊಂದಿದೆ. ಈ ಕೆರೆಯಲ್ಲಿ ಹಿಂದೆ ಯಾವ ಸಂದರ್ಭದಲ್ಲಿಯೂ ಯಾವುದೇ ವಾಹನ ಉರುಳಿ ಬಿದ್ದ ಉದಾಹರಣೆ ಇಲ್ಲ.

ಒಂದು ವಾರದ ಹಿಂದೆ ವಿಷ್ಣುಸಮುದ್ರ ಕೆರೆಯಲ್ಲಿ ನೀರು ತಳಮಟ್ಟದಲ್ಲಿತ್ತು. ವಾರದಿಂದ ಸುರಿದ ಮಳೆಯಿಂದಾಗಿ ಕೆರೆಗೆ ನೀರು ಬಂದಿತ್ತು. ಆದರೆ, ಪೂರ್ಣ ಪ್ರಮಾಣದಲ್ಲಿ ಬಂದಿರಲಿಲ್ಲ. ಇದೂ ಸಹ ಸಾವಿನ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ಕೆರೆ ಭರ್ತಿಯಾಗಿದ್ದರೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿತ್ತು.

ಸುಮಾರು 30 ಅಡಿ ವಿಸ್ತೀರ್ಣವುಳ್ಳ ಕೆರೆಯ ಏರಿಯ ಮೇಲೆ ರಸ್ತೆ ನಿರ್ಮಾಣಗೊಂಡಿದೆ. ರಸ್ತೆಯ ಒಂದು ಬದಿಯಲ್ಲಿ ಕೆರೆ ಇದ್ದರೆ ಮತ್ತೊಂದು ಬದಿಯಲ್ಲಿ ಸುಮಾರು 30 ಅಡಿ ಆಳದಲ್ಲಿ ಜಮೀನಿದೆ. ರಸ್ತೆಯ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಿರಲಿಲ್ಲ. ಇದು ಅಪಘಾತಕ್ಕೆ ಕಾರಣವಾಗಿದೆ.

ಅರೇಹಳ್ಳಿ: ಇಂದು ಬಂದ್ ಕರೆ
ಬೇಲೂರಿನಲ್ಲಿ ಬಸ್ ಅಪಘಾತಕ್ಕೀತಾಗಿ 8 ಜನ ಮೃತಪಟ್ಟ ಹಿನ್ನೆಲೆಯಲ್ಲಿ ಬುಧವಾರ ತಾಲ್ಲೂಕಿನ ಅರೇಹಳ್ಳಿ ಬಂದ್ ಕರೆ ನೀಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT