ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಹಸನಾಗಿಸಿದ ಇಬ್ಬುಡಲು

Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಹೊನ್ನಾವರ ತಾಲ್ಲೂಕಿನ ಗುಣವಂತೆಯಿಂದ ಅನತಿ ದೂರದಲ್ಲಿನ ಪುಟ್ಟ ಹಳ್ಳಿ ನೆಲವಂಕಿ. ಗುಣವಂತೆಯ ಶಂಭುಲಿಂಗೇಶ್ವರ ದೇಗುಲದ ಸನಿಹದ ಬೆಟ್ಟವನ್ನು ಏರುತ್ತ 3 ಕಿ.ಮೀ. ಕ್ರಮಿಸಿದಾಗ ಸಿಗುತ್ತದೆ ಈ ಕುಗ್ರಾಮ. ಬೆಟ್ಟವನ್ನು ಇಳಿಯುತ್ತಿದ್ದಂತೆ ಅಲ್ಲಿಯ ತೋಟದಲ್ಲಿ ಬಿಳಿಯ ಕಲ್ಲುಗಳ ದರ್ಶನ! ಸನಿಹ ಹೋದಾಗಲೇ ತಿಳಿಯುವುದು ಇದು ಕಲ್ಲಲ್ಲ, ಬದಲಿಗೆ ಇಬ್ಬುಡಲು ಹಣ್ಣು ಎಂದು!

ಅಕ್ಷರಶಃ ನಿಸರ್ಗದ ಮಡಿಲಿನಲ್ಲಿ ಇರುವ ಈ ಗ್ರಾಮದಲ್ಲಿ ಮೂಲ ಸೌಕರ್ಯ ಮಾತ್ರ ಮರೀಚಿಕೆ. ಕೇವಲ 15 ಒಕ್ಕಲಿಗರ ಕುಟುಂಬ ವಾಸಿಸುತ್ತಿರುವ ಈ ಗ್ರಾಮದ ಜನತೆಗೆ ಕೃಷಿ, ಕೂಲಿಯೇ ಜೀವನಾಧಾರ. ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಭತ್ತ ಹಾಗೂ ತರಕಾರಿಗಳನ್ನು ಬೆಳೆಯುವ ಇಲ್ಲಿನ ಜನ ಕಷ್ಟ ಸಹಿಷ್ಣುಗಳಲ್ಲದೇ ಸ್ವಾವಲಂಬಿ ಕೂಡಾ. ಇಂಥ ಒಬ್ಬ ರೈತ ತಿಮ್ಮಪ್ಪ ಗೌಡರು. ಇರುವ 2 ಎಕರೆ ಜಮೀನಿನಲ್ಲಿಯೇ ಇಬ್ಬುಡಲು ಬೆಳೆ ಬೆಳೆದು ಸ್ವಾವಲಂಬನೆಯ ಬದುಕು ಕಂಡಿದ್ದಾರೆ ಇವರು.

ಇಬ್ಬುಡನ್ನು ಸ್ಥಳೀಯವಾಗಿ ಇಬ್ಬಳೆ, ಚಿಬ್ಬಳು, ಮೆಕ್ಕಿಹಣ್ಣು ಎಂದೆಲ್ಲ ಕರೆಯುತ್ತಾರೆ. ಬಲಿತ ಹಣ್ಣು ತಿಳಿ ಹಳದಿ ಬಣ್ಣಕ್ಕೆ ತಿರುಗಿ ಬಳ್ಳಿಯಲ್ಲಿದ್ದಾಗಲೇ ಬಿರಿಯುತ್ತದೆ. ಬಲಿತ ಹಣ್ಣಿನ ಸುವಾಸನೆ ಅದ್ಭುತವಾದುದು. ಹಣ್ಣಿನ ರಸಾಯನ ಅತ್ಯಂತ ರುಚಿಕರ. ಬೇಸಿಗೆಯಲ್ಲಿ ಅಮೃತ. ಬೀಜವನ್ನು ನುಣ್ಣಗೆ ಅರೆದು ಬೆಲ್ಲ ಮತ್ತು ತೆಂಗಿನ ತುರಿಯ ಹಾಲಿನೊಂದಿಗೆ ಸೇರಿಸಿ ಮಾಡಿದ ಪಾನಕ ವಾಹ್! ಕುಡಿದವನೇ ಬಲ್ಲ ಅದರ ಸವಿಯ. ದೇಹದ ಉಷ್ಣತೆ ಕಡಿಮೆಗೊಳಿಸುವಲ್ಲಿ ಇದರದ್ದು ಎತ್ತಿದ ಕೈ.

ಕೃಷಿ ಹೇಗೆ?
ಕೇವಲ ಗುದ್ದಲಿ ಬಳಸಿ ಸುಮಾರು 25 ಅಡಿ ಉದ್ದ, 2 ಅಡಿ ಅಗಲ ಹಾಗೂ ಅರ್ಧ ಅಡಿ ಎತ್ತರದ ಮಡಿಗಳನ್ನು ಮಾಡುತ್ತಾರೆ.  ಇದು ಸ್ಥಳೀಯವಾಗಿ `ಓಳಿ' ಎಂದು ಕರೆಯಲಾಗುತ್ತದೆ. ಈ ಓಳಿಗಳಲ್ಲಿ 2 ಅಡಿ ಅಂತರದಲ್ಲಿ ಸಣ್ಣಗುಳಿ ಮಾಡಿ ಸಗಣಿ ಗೊಬ್ಬರ ಹಾಕಿ ಬೀಜ ಬಿತ್ತುತ್ತಾರೆ. ಬೀಜ ಮೊಳಕೆಯೊಡೆದು ಮೂರರಿಂದ ನಾಲ್ಕು ಎಲೆ ಬೆಳೆಯುತ್ತದೆ. ಆಗ ಸಗಣಿ ಗೊಬ್ಬರವನ್ನು ಹಾಕಿ ನಂತರ ಪ್ರತಿ 15 ದಿನಕ್ಕೊಮ್ಮೆ ಮತ್ತೆರಡು ಸಲ ಗೊಬ್ಬರ ನೀಡುತ್ತಾರೆ.

ಗಿಡವು ಬಳ್ಳಿಯಾಗಿ ನೆಲದಲ್ಲಿ ಹಬ್ಬಲು ಪ್ರಾರಂಭವಾದ ಮೇಲೆ ಒಮ್ಮೆ ಮಾತ್ರ ಪ್ರತಿ ಗಿಡಕ್ಕೆ ಸರಾಸರಿ 10 ಗ್ರಾಂನಷ್ಟು ಗೊಬ್ಬರವನ್ನು ಹಾಕುತ್ತಾರೆ. (ಸುಮಾರು 100 ಮೀಟರ್ ದೂರದಲ್ಲಿರುವ 30 ಅಡಿ ಆಳದ ಬಾವಿಯಿಂದ ಪೈಪ್‌ಗಳ ಮೂಲಕ ನೀರನ್ನು ಹರಿಸುವ ವ್ಯವಸ್ಥೆಯನ್ನು ಕಲ್ಪಿಸಿಕೊಂಡಿರುವ ಇವರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಇಬ್ಬುಡಲು ಬಳ್ಳಿಗೆ ನೀರು ಹರಿಸುತ್ತಾರೆ). ಇವರದ್ದು ಒಂಟಿ ಮನೆ. ಸುಮಾರು 250 ಮೀ.ಗಿಂತಲೂ ದೂರದಲ್ಲಿ ಉಳಿದ ಮನೆಗಳಿವೆ. ರಾತ್ರಿಯ ವೇಳೆ ಕಾಡುಹಂದಿ, ನರಿ, ಆಕಳು, ಎತ್ತುಗಳು ದಾಳಿ ಮಾಡುವುದರಿಂದ ಮನೆಯ ಯಜಮಾನ ಗದ್ದೆಯ ಮಧ್ಯದಲ್ಲಿಯೇ ಸಣ್ಣ ಮಾಳ (ಗುಡಿಸಲು) ಮಾಡಿ ರಾತ್ರಿಯ ವೇಳೆ ಅಲ್ಲಿಯೇ ಕಾವಲು ಕಾಯುತ್ತಾರೆ.

ಪ್ರತಿದಿನವೂ ಸುಮಾರು 100 ರಿಂದ 150 ರಷ್ಟು ಬಲಿತ ಹಣ್ಣನ್ನು ಆಯ್ದು ಹೊನ್ನಾವರಕ್ಕೆ ಕೊಂಡೊಯ್ದು ಪೇಟೆಯ ರಸ್ತೆಯಂಚಿನಲ್ಲೇ ಕುಳಿತು ಮಾರಾಟ ಮಾಡುತ್ತಾರೆ. ಈ ಜವಾಬ್ದಾರಿಯನ್ನು ತಿಮ್ಮಪ್ಪ ಗೌಡರ ಹೆಂಡತಿ ಶಾಂತಕ್ಕ ವಹಿಸಿಕೊಂಡಿದ್ದಾರೆ. ಮುಂಚೆಲ್ಲ ಕರಾವಳಿ ಭಾಗದಲ್ಲಿ ಸೆಪ್ಟೆಂಬರ್‌ನಿಂದ ನವೆಂಬರ್ ತಿಂಗಳವರೆಗೆ ಮಾತ್ರ ಈ ಹಣ್ಣು ದೊರೆಯುತ್ತಿತ್ತು. ಆದರೆ ತಿಮ್ಮಪ್ಪ ಗೌಡರ ಅವಿರತ ಪರಿಶ್ರಮದಿಂದಾಗಿ ಫೆಬ್ರುವರಿ, ಮಾರ್ಚ್ ತಿಂಗಳಿನಲ್ಲೂ ಸಿಗುವಂತಾಗಿದೆ. 

ಈ ಸಮಯದಲ್ಲಿ ಎಲ್ಲಿಯೂ ಇಬ್ಬುಡಲು ಹಣ್ಣು ದೊರೆಯದ ಕಾರಣ ಇದಕ್ಕೆ ಅತ್ಯಂತ ಬೇಡಿಕೆ ಇದೆ ಎನ್ನುವ ಹೆಮ್ಮೆ ಅವರದ್ದು. `ಅರ್ಧ ದಿನದಲ್ಲಿಯೇ ಸುಮಾರು 100ರಿಂದ 150 ಹಣ್ಣುಗಳು ಮಾರಾಟವಾಗುತ್ತವೆ. 2 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಬೆಳೆದ ಇಬ್ಬುಡಲ ಕೃಷಿಗೆ ಗೊಬ್ಬರ, ನೀರಾವರಿ ವ್ಯವಸ್ಥೆ, ಮಾರುಕಟ್ಟೆ ಸಾಗಾಟವನ್ನೆಲ್ಲಾ ಲೆಕ್ಕ ಹಾಕಿದರೆ ಸುಮಾರು 35 ರಿಂದ 40 ಸಾವಿರ ರೂ. ಖರ್ಚಾಗುತ್ತದೆ. ಆದರೆ ಇಬ್ಬುಡಲ ಹಣ್ಣೊಂದು ಅದರ ಗಾತ್ರಕ್ಕೆ ಅನುಗುಣವಾಗಿ 25 ರಿಂದ 80 ರೂಪಾಯಿ ತನಕ ಮಾರಾಟವಾಗುತ್ತದೆ' ಎನ್ನುತ್ತಾರೆ ಗೌಡರು.

ಇವರೇ ಹೇಳುವಂತೆ ಎಕರೆಗೆ 3000ದಷ್ಟು ಹಣ್ಣುಗಳು ಸಿಗುತ್ತವೆ. ಇದರಿಂದ ಸರಾಸರಿ ಲೆಕ್ಕ ಹಾಕಿದರೆ 3ಲಕ್ಷದಷ್ಟು ಆದಾಯ ದೊರೆಯುತ್ತದೆ. ಎಲ್ಲಾ ಖರ್ಚನ್ನು ಕಳೆದರೆ ನಾಲ್ಕು ತಿಂಗಳಿಗೆ ಕನಿಷ್ಠ 2.50 ಲಕ್ಷ ರೂಪಾಯಿ ಲಾಭ ಗಳಿಸಬಹುದು ಎಂಬುದು ತಿಮ್ಮಪ್ಪ ಗೌಡರ ಲೆಕ್ಕಾಚಾರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT