ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದ್ಧತೆ, ಉದ್ದೇಶ ಪ್ರಶ್ನಾರ್ಹ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಸ್ವಾಮಿ ವಿವೇಕಾನಂದರ `ದಡ್ಡ~ತನವನ್ನು 31 ಬಗೆಯ `ರೋಗ~ಗಳನ್ನು, `ವ್ಯಸನ~ ವನ್ನೂ ಪ್ರದರ್ಶಿಸುವ ದಿನೇಶ್ ಅಮಿನ್‌ ಮಟ್ಟು ಅವರ ಬುದ್ಧಿವಂತಿಕೆಯ ಲೇಖನ ಕಂಡು ಅಚ್ಚರಿಯಾಗಿದೆ.
 
ಅವರು ವಿವೇಕಾನಂದರ ವಿರುದ್ಧ ಹಾಕಿರುವ ಚಾರ್ಜ್‌ಶೀಟ್‌ನ ಸಾರಾಂಶ ದಡ್ಡತನ, ಬೋಧಿಸಲು ಬಾರದೆ ಶಿಕ್ಷಕನ ಉದ್ಯೋಗ ಕಳೆದು ಕೊಂಡದ್ದು, ಹುಟ್ಟಿನಿಂದಲೇ ರೋಗಿಷ್ಠರು, ತಿಂಡಿಪೋತ, ಮಾಂಸಾಹಾರಿ, ತಂಬಾಕು (ಸಿಗರೇಟ್/ ಹುಕ್ಕಾ) ವ್ಯಸನಿ, ಎಲ್ಲ ಧರ್ಮ- ಜಾತಿಯವರಲ್ಲಿ ಊಟ, ಹೋಟೆಲ್‌ಗಳ ಔತಣಕೂಟದಲ್ಲಿ ಭಾಗವಹಿಸುತ್ತಿದ್ದುದು. 

ಈ `ಚಾರ್ಜ್‌ಶೀಟ್~ಗೆ ಹೀಗೆ ಉತ್ತರಿಸಬಹುದು: ವಿವೇಕಾನಂದರನ್ನು ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹುದ್ದೆಗೂ ಆಹ್ವಾನಿಸಿದ್ದರು ಎಂಬುದು ಗೊತ್ತೆ? ಸಂನ್ಯಾಸದ ಸೆಳೆತ, ರಾಮಕೃಷ್ಣರ ಸೇವೆಯ ಕಾರಣಗಳಿಂದ ವಿವೇಕಾನಂದರು ಶಿಕ್ಷಕ ವೃತ್ತಿ ತ್ಯಜಿಸಿದರು.

`ವಿವೇಕಾನಂದರು ರೋಗಿಷ್ಠರು~ ಎಂಬುದು ಸುಳ್ಳು. ಮದ್ರಾಸಿನ ಸಿಂಗಾರವೇಲು ಮುದಲಿಯಾರ್ (ಕಿಡಿ) ವಿವೇಕಾನಂದರನ್ನು `ಪೈಲ್ವಾನ್ ಸ್ವಾಮಿ~ ಎಂದೇ ಕರೆಯುತ್ತಿದ್ದರು. ಅವರು ಉತ್ತಮ ಅಶ್ವಾರೋಹಿಯೂ ಆಗಿದ್ದರು. ಆದರೆ ನಿರಂತರ ಪ್ರವಾಸ, ಭಾಷಣಗಳ ಪರಿಣಾಮ ಅವರ ಆರೋಗ್ಯ ಕುಸಿಯಿತು.

`ವಿವೇಕಾನಂದರು ತಿಂಡಿಪೋತ, ಮಾಂಸಾಹಾರಿ~ ಎಂಬ ಆಪಾದನೆ ಸಲ್ಲದು. ಅವರು ಕ್ಷತ್ರಿಯ ಮನೆತನಕ್ಕೆ ಸೇರಿದವರು. ಬಂಗಾಳದಲ್ಲಿ ಮೀನನ್ನು ಸವರ್ಣೀಯರು, ಬ್ರಾಹ್ಮಣರೂ ತಿನ್ನುತ್ತಾರೆ. ಬ್ರಾಹ್ಮಣ - ಪುರೋಹಿತಶಾಹಿಯಂತೆ ಆಚಾರಗಳ ಚೌಕಟ್ಟಿನೊಳಗೆ ವಿವೇಕಾನಂದರನ್ನು ಬಂಧಿಸುವ ಪ್ರಯತ್ನ ಸಲ್ಲದು.

ಉತ್ತರ ಭಾರತದಲ್ಲಿ ಇಂದಿಗೂ ಸಾಧುಗಳು ತಂಬಾಕು ಸೇವಿಸುತ್ತಾರೆ. `ವ್ಯಸನಿ~ ಎಂಬ ಮಾತೂ ಕಠಿಣವೇ. ವಿವೇಕಾನಂದರ ಅಂತ್ಯದ ದಿನಗಳಲ್ಲಿ ವೈದ್ಯರು ನೀರು ಸೇವಿಸಬಾರದು ಎಂಬ ಪಥ್ಯ ವಿಧಿಸಿದಾಗ ಅವರು ದಿನಗಟ್ಟಲೆ ನೀರು ಸೇವಿಸಲಿಲ್ಲ.

`ವಿವೇಕಾನಂದರು ಅನ್ಯ ಧರ್ಮೀಯರ ಮನೆಗಳಲ್ಲಿ ನೆಲೆಸಿದ್ದರು, ಊಟ ಮಾಡಿದ್ದರು~ ಎಂಬುದು ಸ್ವಾಗತಾರ್ಹ ಅಂಶವೇ ಹೊರತು ಖಂಡನೀಯ ವಿಚಾರವಲ್ಲ. `ಹೋಟೆಲ್ ಔತಣಕೂಟದಲ್ಲಿ ವಿವೇಕಾನಂದರು ಭಾಗವಹಿಸುತ್ತಿದ್ದರು~ ಇದರಲ್ಲೇನು ತಪ್ಪು?

ವಿವೇಕಾನಂದರು ಹಿಂದೂಧರ್ಮದ ಬ್ರಾಂಡ್ ಅಂಬಾಸಿಡರ್ ಆದದ್ದು 1893ರಲ್ಲಿ, ಅದನ್ನು 2012 ರಲ್ಲಿ ಪ್ರಶ್ನಿಸುತ್ತಿದ್ದಾರೆ ದಿನೇಶ್! ವಿಶ್ವಧರ್ಮ ಸಮ್ಮೇಳನದಲ್ಲಿ ತಾನೇ ಅವರು ಹಿಂದೂಧರ್ಮದ ಪ್ರತಿನಿಧಿಯಾದದ್ದು!

 ಮಣಿಶಂಕರ್ ಮುಖರ್ಜಿ ಅವರ `ದಿ ಮಾಂಕ್ ಆ್ಯಸ್ ಮ್ಯಾನ್~ ಕೃತಿಯೊಂದನ್ನೇ ಆಧರಿಸಿ ಇಡೀ ಲೇಖನ ರಚಿತವಾಗಿದೆ.   ಲೇಖನದ ತುಂಬೆಲ್ಲ ವಿವೇಕಾನಂದರ `ನಕಾರಾತ್ಮಕ ವಿವರ~ ನೀಡಿ ಕಡೆಯ ಪ್ಯಾರಾದಲ್ಲಿ ತಿಪ್ಪೆಸಾರಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.

ಇಡೀ ದೇಶ ವಿವೇಕಾನಂದರ ಸಾಧನೆಯ ನೆನಪಿನಲ್ಲಿ ಸಂತೋಷ ಪಡುತ್ತಿರುವಾಗ ಈ ಲೇಖನದ ಬದ್ಧತೆಯನ್ನೂ ಉದ್ದೇಶವನ್ನೂ ನಾವು ಪ್ರಶ್ನಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT