ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ, ರಾಷ್ಟ್ರೀಯ ಕೃಷಿ ಹಬ್ಬಕ್ಕೆ

Last Updated 9 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವೆಂಬರ್ ಒಂಥರಾ ಸಂಭ್ರಮದ ಮಾಸ. ಒಂದೆಡೆ ರಾಜ್ಯೋತ್ಸವದಂತಹ ಸಾಂಸ್ಕೃತಿಕ ಸಂಭ್ರಮ. ಇನ್ನೊಂದೆಡೆ ಪ್ರಶಸ್ತಿ ಪ್ರದಾನ ಸಮಾರಂಭಗಳ ಸಾಲು ಸಾಲು. ದೇಗುಲಗಳಲ್ಲಿ ಕಾರ್ತೀಕ ದೀಪೋತ್ಸವ. ಹೊಲ- ಗದ್ದೆಗಳಲ್ಲಿ ತೆನೆಗಟ್ಟಿನಿಂತ ಬೆಳೆಗಳ ಹಸಿರಿನ ಉತ್ಸವ!

ಈ ಸಂಭ್ರಮ, ಉತ್ಸವಗಳೊಂದಿಗೆ ~ಕೃಷಿ ಮೇಳ~ವೂ ಮೇಳೈಸುತ್ತದೆ. ವರ್ಷಪೂರ್ತಿ ದುಡಿದ ಅನ್ನದಾತರು ಮೇಳದಲ್ಲಿ ಗೆಳೆಯರೊಂದಿಗೆ ಸೋಲು-ಗೆಲುವಿನ ಪರಾಮರ್ಶೆ ಮಾಡುತ್ತಾರೆ.
 
ಹೊಸ ಸ್ನೇಹಿತರೊಂದಿಗೆ ಅನುಭವ, ಸಾಧನೆ ಹಂಚಿಕೊಳ್ಳುತ್ತಾರೆ. ತಜ್ಞರೊಂದಿಗೆ ಸಮಾಲೋಚಿಸುತ್ತಾರೆ. ಮಾರುಕಟ್ಟೆಯವರೊಂದಿಗೆ ~ಒಪ್ಪಂದ~ ಮಾಡಿಕೊಂಡು, ಟ್ರ್ಯಾಕ್ಟರ್, ಟಿಲ್ಲರ್ ಟ್ರಯಲ್ ನೋಡಿ, ನಾಟಿ ಯಂತ್ರಗಳ ಪ್ರಾತ್ಯಕ್ಷಿಕೆಯಲ್ಲಿ ನಾಟಿ ಮಾಡಿ, ಡ್ರಿಪ್ ಪೈಪುಗಳಿಗೆ ಅಡ್ವಾನ್ಸ್ ಕೊಟ್ಟು ಬುಕ್ ಮಾಡಿ, ಹೊಸ ಕನಸುಗಳೊಂದಿಗೆ ಮರಳುತ್ತಾರೆ!

ಅಂಥ ~ಕೃಷಿ ಹಬ್ಬ~ ಮತ್ತೆ ಬಂದಿದೆ. ನವೆಂಬರ್ 16 ರಿಂದ 20ರವರೆಗೆ ಬೆಂಗಳೂರಿನ ಗಾಂಧಿ ಕೃಷಿ ವಿಶ್ವ ವಿದ್ಯಾಲಯದ ಅಂಗಳದಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ. ಪ್ರತಿ ವರ್ಷ ಮೂರು ದಿನಗಳ ಕಾಲ ನಡೆಯುತ್ತಿದ್ದ ಮೇಳವನ್ನು ಐದು ದಿನಗಳಿಗೆ ವಿಸ್ತರಿಸಿದೆ.

ರಾಜ್ಯವಷ್ಟೇ ಅಲ್ಲದೇ, ರಾಷ್ಟ್ರದ ವಿವಿಧ ಭಾಗಗಳಿಂದ ರೈತರು, ತಜ್ಞರು, ಪರಿಣತರು, ಸಂಶೋಧಕರು, ವಿವಿಧ ಕಂಪೆನಿಗಳು ಮೇಳಕ್ಕೆ ಆಗಮಿಸಲಿವೆ. ಹಾಗಾಗಿ ಈ ಬಾರಿಯದ್ದು  `ರಾಷ್ಟ್ರೀಯ ಕೃಷಿಮೇಳ~

ಮೌಲ್ಯವರ್ಧನೆಗೆ ಒತ್ತು
ಟೊಮೆಟೊ ಬೆಲೆ ಕುಸಿತ. ಆಲೂಗೆಡ್ಡೆಗೆ ಸಿಗದ ಬೆಂಬಲ ಬೆಲೆ. ಬೀದಿಗೆ ಬೆಳೆ ಸುರಿದು ರೈತರ ಪ್ರತಿಭಟನೆ ಪ್ರತಿ ವರ್ಷ ರೈತರು ಅನುಭವಿಸುವ ಇಂಥ ಸಂಕಷ್ಟಗಳಿಗೆ ಪರಿಹಾರ ನೀಡುವುದಕ್ಕಾಗಿ ಮೇಳದಲ್ಲಿ ಬೆಳೆ ಸಂಸ್ಕರಿಸುವ ಹಾಗೂ ಮೌಲ್ಯವರ್ಧಿಸುವ ವಿಧಾನಗಳನ್ನು ಪರಿಚಯಿಸಲಾಗುತ್ತಿದೆ. ಇದಕ್ಕಾಗಿಯೇ ಪ್ರತ್ಯೇಕ ವಿಭಾಗ ತೆರೆಯಲಾಗಿದ್ದು, ಮೌಲ್ಯವರ್ಧನೆ ಕುರಿತ ಪ್ರಾತ್ಯಕ್ಷಿಕೆಗಳು, ವಿವರಣೆ ನೀಡುವ ತಜ್ಞರು, ಸಂಶೋಧಕರು ಮಾರ್ಗದರ್ಶನ ನೀಡುತ್ತಾರೆ.

`ಕಳೆ ತೆಗೆಯುವವರಿಲ್ಲ. ಬೆಳೆ ಕೊಯ್ಯುವವರಿಲ್ಲ. ಮರ ಏರಿ ತೆಂಗು, ಅಡಿಕೆ ಬಿಡಿಸುವವರಿಲ್ಲ. ಮರದಲ್ಲೇ ಕಾಯಿ ಬಲಿತು, ಹಣ್ಣಾಗಿ ಜೋತಾಡಿ, ಉದುರುತ್ತಿದ್ದರೂ ಕೊಯ್ಲು ಮಾಡಲು ಕೂಲಿ ಕಾರ್ಮಿಕರಿಲ್ಲ~- ಈ ಇಲ್ಲಗಳ ಪರಿಣಾಮ ಮಧ್ಯಮ ಹಿಡುವಳಿದಾರರೆಲ್ಲ ಬೇಸಾಯ ಬಿಟ್ಟು, ನಗರದತ್ತ ಕೂಲಿಗಾಗಿ ವಲಸೆ ಬರುತ್ತಿದ್ದಾರೆ. ಪ್ರಸ್ತುತ ಬೇಸಾಯ ಕ್ಷೇತ್ರದಲ್ಲಿ ~ಯಾಂತ್ರೀಕರಣ~ವಾಗದಿದ್ದರೆ, ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ.

ಈ ದೃಷ್ಟಿಯಲ್ಲಿಟ್ಟುಕೊಂಡು ರೈತರಿಗೆ ಅನುಕೂಲವಾಗವಂತಹ ಯಂತ್ರೋಪಕರಣಗಳ ಪ್ರದರ್ಶನವನ್ನು ಮೇಳದಲ್ಲಿ ಆಯೋಜಿಸಲಾಗಿದೆ. ಕೃಷಿ ವಿವಿ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು, ಸಂಶೋಧಕರು ಆವಿಷ್ಕರಿಸಿರುವ ಮಾನವ ಚಾಲಿತ ಕಳೆಯಂತ್ರದಿಂದ ಹಿಡಿದು, ಕಂಪೆನಿಗಳು ತಯಾರಿಸುವ ಹೈಟೆಕ್ ಯಂತ್ರಗಳೂ ಮೇಳದಲ್ಲಿರುತ್ತವೆ. 

 ಸಾವಯವ ಕೃಷಿ ಆಕರ್ಷಣೆ
ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ವ್ಯಾಪ್ತಿಯ 17 ಜಿಲ್ಲೆಗಳ ಸಾವಯವ ರೈತರು ಮೇಳದಲ್ಲಿ ಭಾಗವಹಿ ಸುತ್ತಾರೆ. ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲಿ ಸಾವಯವ ಬೇಸಾಯ ಪದ್ಧತಿ ಅನುಷ್ಠಾನಗೊಳಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ಸಂಬಂಧಿಸಿದ ಗ್ರಾಮಗಳ ರೈತರು, ಸ್ವ ಸಹಾಯ ಸಂಘಗಳ ಸದಸ್ಯರು ಪ್ರದರ್ಶನದಲ್ಲಿರುತ್ತಾರೆ.

ಎರೆಗೊಬ್ಬರ, ಅಜೋಲಾ, ಮೇವಿನ ಬೆಳೆಗಳು, ನಾಟಿ ಬೀಜಗಳು, ತರಕಾರಿ ಬೆಳೆ, ದೇಸಿ ಬತ್ತ, ರಾಗಿ, ತರಕಾರಿ ಬೀಜಗಳ ಮಾರಾಟವಿರುತ್ತದೆ. ಸಾವಯವ ಕೃಷಿಯಲ್ಲಿ ಇಳುವರಿ ಹೆಚ್ಚಿಸಿಕೊಳ್ಳುವ ವಿಧಾನಗಳು, ರೈತರೇ ಆವಿಷ್ಕರಿಸಿದ ಸಸ್ಯಜನ್ಯ ಕೀಟನಾಶಕ, ದ್ರವರೂಪಿ ಗೊಬ್ಬರಗಳು, ಮೌಲ್ಯವರ್ಧಿತ ಉತ್ಪನ್ನಗಳು, ಬೆಳೆ ರಕ್ಷಣೆಗೆ ಪರಿಹಾರಗಳು.. ಹೀಗೆ ~ರೈತ ಸ್ನೇಹಿ ಪರಿಹಾರಗಳು~ ಮೇಳದಲ್ಲಿ ಲಭ್ಯವಿದೆ.  

  ಇದರ ಜೊತೆಗೆ ವಿಶ್ವವಿದ್ಯಾಲಯ ಹಾಗೂ ಇಲಾಖೆಗಳ ಸಹಯೋಗದಲ್ಲಿ ಸಾವಯವ ಕೃಷಿಯಲ್ಲಿ ಮಿಶ್ರಬೆಳೆ ಪದ್ಧತಿ, ಕೃಷಿ ಅರಣ್ಯ ಪದ್ಧತಿಯ ವಿಧಾನಗಳು, ಜೈವಿಕ ಇಂಧನ, ಬೆಲ್ಲದ ಪಾರ್ಕ್, ಜೈವಿಕ ತಂತ್ರಜ್ಞಾನ, ಬೇಸಾಯ ತಾಂತ್ರಿಕತೆ ಸೇರಿದಂತೆ ಸಾವಯವ ಕೃಷಿಯ ಪೂರಕ ಚಟುವಟಿಕೆಗಳ ಕುರಿತು ಮಾಹಿತಿ ಜೊತೆಗೆ ಪ್ರಾತ್ಯಕ್ಷಿಕೆ ಕೂಡ ಲಭ್ಯವಿದೆ.

ತರಕಾರಿ, ಸಿರಿಧಾನ್ಯಗಳ ತಾಕು
ಹವಾಮಾನ ವೈಪರೀತ್ಯ, ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ನೀಗಿಸುವ ಸಿರಿಧಾನ್ಯ ಅಥವಾ ಕಿರುಧಾನ್ಯಗಳಾದ ನವಣೆ, ಸಾಮೆ, ಸಜ್ಜೆ, ಆರಕ, ಬರಗು, ಕೊರಲೆಯ ಪ್ರಾತ್ಯಕ್ಷಿಕೆ ತಾಕುಗಳು ಈ ಬಾರಿಯ ವಿಶೇಷ.

ಸಂಸ್ಕರಣೆಯ ಸಂಕಷ್ಟದಿಂದಾಗಿ ರೈತರ ಹೊಲಗಳಿಂದ ನಾಪತ್ತೆಯಾಗುತ್ತಿರುವ ಶ್ರಮವಿಲ್ಲದೆ ಬೆಳೆಯುವ ಈ ಬೆಳೆಗಳ ಬಗ್ಗೆ ಈ ಪ್ರಾತ್ಯಕ್ಷಿಕೆಯಲ್ಲಿ ಮಾಹಿತಿಗಳು ಲಭ್ಯವಿವೆ. ಕಿರುಧಾನ್ಯಗಳ ಕೃಷಿ ವಿಸ್ತರಣೆ ಸಾಧ್ಯತೆ, ಈ ಧಾನ್ಯಗಳನ್ನು ಬೆಳೆಯುವ ರೈತರಿಂದ ಮಾಹಿತಿ - ವಿನಿಮಯದ ಜೊತೆಗೆ ಬೀಜಗಳ ಖರೀದಿಗೂ ವಿಶ್ವ ವಿದ್ಯಾಲಯ ಅವಕಾಶ ನೀಡಿದೆ.

ಈ ತಾಕಿನಿಂದ ಮುಂದೆ 200 ಮೀಟರ್ ಕ್ರಮಿಸಿದರೆ ಅಲ್ಲಿ ಸಿಗುವುದೇ ತರಕಾರಿ ತಾಕು. ಕೃಷಿ ಮೇಳಕ್ಕಾಗಿಯೇ ಅಭಿವೃದ್ಧಿ ಪಡಿಸಿರುವ ಈ ತಾಕಿನಲ್ಲಿ ಚಪ್ಪರಗಳ ಅಡಿಯಲ್ಲಿ ಹೀರೆ, ಹಾಲು ಸೋರೆ, ಸೌತೆಕಾಯಿ, ಪಡವಲಕಾಯಿ ಸ್ಟಾರ್ ಕುಂಬಳಂತಹ ವೈವಿಧ್ಯಮಯ ಬಳ್ಳಿ ತರಕಾರಿಗಳಿವೆ. ಸಮೀಪದಲ್ಲೇ ಔಷಧಿ ಸಸ್ಯ ಗಳ ತಾಕು ಇದೆ. ಯಾವ ರೋಗಕ್ಕೆ ಯಾವ ಗಿಡ ಔಷಧಿಯಾ ಗುತ್ತದೆ ಎಂಬ ಮಾಹಿತಿ ನೀಡುವ ಅಧಿಕಾರಿಗಳು ನೆರವಿಗಿರುತ್ತಾರೆ.

ಮಾಹಿತಿ ಕೇಂದ್ರ
ಕೃಷಿ ವಿಶ್ವವಿದ್ಯಾಲಯ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ಹೊಸ ತಳಿಗಳ ಪ್ರಾತ್ಯಕ್ಷಿಕೆ ಇದೆ. ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳ ವಿವರಣೆ ನೀಡುವ ತಾಕುಗಳಿವೆ. ಜಲಾನಯನ ನಿರ್ವಹಣೆ, ಸಮಗ್ರ ಹಿಡುವಳಿ ಪದ್ಧತಿಯ ಪ್ರಾತ್ಯಕ್ಷಿಕೆ, ರೋಗ/ಪೀಡೆ ನಿರ್ವಹಣೆ ಹಾಗೂ ಸಮಗ್ರ ಪೋಷಕಾಂಶಗಳ ಕುರಿತು ಚಿತ್ರ ಸಹಿತ ವಿವರಣೆ ನೀಡುವ ಮಾಹಿತಿ ಕೇಂದ್ರಗಳು ಐದು ದಿನಗಳ ಮೇಳದಲ್ಲಿ ಲಭ್ಯವಿದೆ.

  ಗ್ರಾಮೀಣ ಜೈವಿಕ ಸಂಪನ್ಮೂಲ ಸಂಕೀರ್ಣ ಮಾದರಿಯ ಪ್ರಚಾರಕ್ಕಾಗಿ ವಿಶೇಷ ಮಳಿಗೆ ವ್ಯವಸ್ಥೆ ಮಾಡಲಾಗಿದೆ. ಸಮುದಾಯಾಧಾರಿತ ಕೆರೆ ನಿರ್ವಹಣೆ, ಔಷಧೀಯ ಸುಗಂಧ ದ್ರವ್ಯಗಳ ತಾಕುಗಳು, ಹವಾಮಾನ ವೈಪರೀತ್ಯದಲ್ಲಿ ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳು ಮಳೆನೀರು ಸಂಗ್ರಹ ವಿಷಯ ಕುರಿತ ಪ್ರಾತ್ಯಕ್ಷಿಕೆಗಳಿವೆ. ಇವೆಲ್ಲದರ ಜೊತೆಗೆ  `ರೈತರು- ವಿಜ್ಞಾನಿಗಳು ಸಲಹಾ ಕೇಂದ್ರಗಳನ್ನು~ ತೆರೆಯಲಾಗಿದ್ದು, ಇಲ್ಲಿ ರೈತರ ಬೇಸಾಯ ಸಮಸ್ಯೆಗಳಿಗೆ ತಜ್ಞರು ಸಲಹೆ ನೀಡಲಿದ್ದಾರೆ.

ಇಂಥ ವಿಶಿಷ್ಟ ಮೇಳಕ್ಕೆ ಆಗಮಿಸುವವರಿಗೆ ವಿಶ್ವ ವಿದ್ಯಾಲಯ ಆವರಣದಿಂದ ವಿವಿಧ ತಾಕುಗಳಿಗೆ ಕರೆದೊಯ್ಯಲು ಸಾರಿಗೆ ಸೌಲಭ್ಯವಿದೆ. ನಿಗದಿತ ದರದಲ್ಲಿ ಊಟ, ವಸತಿ ವ್ಯವಸ್ಥೆ ಕೂಡ ಇದೆ. ರೈತರಿಗೆ, ಪ್ರದರ್ಶಕರಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಲು ಕೃಷಿ ವಿವಿ ವಿದ್ಯಾರ್ಥಿ ಸ್ವಯಂ ಸೇವಕರ ಪಡೆಯೊಂದು ಸಜ್ಜಾಗಿದೆ.

ಹತ್ತಾರು ಇಲಾಖೆಗಳು, ಅಧಿಕಾರಿಗಳು, ಸಂಶೋಧಕರು ಸೇರಿ ಆಯೋಜಿಸುತ್ತಿರುವ ಈ ಮೇಳ ಯಶಸ್ವಿಯಾಗಲು ರೈತರ ಪಾಲ್ಗೊಳ್ಳುವಿಕೆ ಬಹಳ ಮುಖ್ಯವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮೇಳಕ್ಕೆ ಬರಬೇಕು. ಸಲಹೆ ನೀಡಬೇಕು ಎನ್ನುವುದು ಮೇಳದ ಆಯೋಜಕರ ಅಭಿಪ್ರಾಯವಾಗಿದೆ.

ಒಂದು ಎಕರೆಯಲ್ಲಿ ಸಮಗ್ರ ಕೃಷಿ
ಐದು ವರ್ಷಗಳ ಹಿಂದೆ ಸಣ್ಣ ರೈತರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿರುವ `ಒಂದು ಎಕರೆ ಮಾದರಿ ತಾಕಿನಲ್ಲಿ ಬಹು ಬೆಳೆಗಳಿವೆ. ರಾಗಿ, ತೊಗರಿ, ಜೋಳ, ಎಳ್ಳು ಬೆಳೆಗಳನ್ನು ಮಿಶ್ರ ಕೃಷಿ ಪದ್ಧತಿಯಲ್ಲಿ ಬಿತ್ತನೆ ಮಾಡಲಾಗಿದೆ. ಧಾನ್ಯಗಳ ಜೊತೆಗೆ ತೋಟಗಾರಿಕಾ ಬೆಳೆಗಳಿವೆ. ಆರ್ಥಿಕ ನೆರವಿಗಾಗಿ ಹಿಪ್ಪುನೇರಳೆ ಗಿಡಗಳನ್ನು ಬೆಳೆಸಲಾಗಿದೆ.
 
ತರಕಾರಿ ಕೃಷಿ, ಪುಷ್ಪ ಕೃಷಿಯೂ ಇದೆ. ಕೃಷಿಗೆ ಅಗತ್ಯವಾದ ನೀರಿಗಾಗಿ ಕೃಷಿ ಹೊಂಡ, ಮಳೆ ನೀರು ಸಂಗ್ರಹ ವಿಧಾನವಿದೆ. ಸಾವಯವ ಕೃಷಿಗೆ ಪೂರಕವಾದ ಎರೆಗೊಬ್ಬರ ತಯಾರಿಕಾ ಘಟಕಗಳಿವೆ. ತಾಕಿನಲ್ಲೇ ವಾಸಿಸಲು ಮನೆಯೊಂದನ್ನು ನಿರ್ಮಿಸಲಾಗಿದೆ. ಆ ಮನೆಯಲ್ಲಿದ್ದುಕೊಂಡೇ ಬೆಳೆ ನಿರ್ವಹಣೆ ಮಾಡಬೇಕೆನ್ನುವುದು ಈ ಮಾದರಿಯ ಉದ್ದೇಶ. ಒಂದು ವರ್ಷಕ್ಕೆ ಒಂದು ಎಕರೆಯಿಂದ ದೊರೆಯುವಂತಹ ಲಾಭಾಂಶಗಳನ್ನು ಫಲಕವೊಂದರಲ್ಲಿ ನಮೂದಿಸಲಾಗಿದೆ.

ಸಂಸ್ಕರಣೆ, ಮೌಲ್ಯವರ್ಧನೆ
ರಾಗಿಯೊಂದರಲ್ಲೇ 20ಕ್ಕೂ ಹೆಚ್ಚು ಪದಾರ್ಥಗಳನ್ನು ತಯಾರಿಸಲಾಗಿದೆ. ರಾಗಿ ಮಾಲ್ಟ್, ಹುರಿಹಿಟ್ಟು, ಹಪ್ಪಳ ಇತ್ಯಾದಿಗಳನ್ನು ಪ್ರದರ್ಶ ನಕ್ಕಿಡಲಾಗಿದೆ. ಈ ಉತ್ಪನ್ನಗಳ ಮೌಲ್ಯವರ್ಧನೆಗೆ ಅಗತ್ಯವಾದ ವಸ್ತುಗಳು, ತಯಾರಿಸುವ ವಿಧಾನ ಕುರಿತ ಕರಪತ್ರಗಳನ್ನು ಮೇಳದಲ್ಲಿ ವಿತರಿಸಲಾಗುತ್ತದೆ. ಮುಸುಕಿನ ಜೋಳ, ಕಿರುಧಾನ್ಯಗಳ ಉತ್ಪನ್ನಗಳು ಪ್ರದರ್ಶನದಲ್ಲಿವೆ. ಒಟ್ಟಾರೆ 100ಕ್ಕೂ ಹೆಚ್ಚು ಉತ್ಪನ್ನಗಳು ಪ್ರದರ್ಶನದಲ್ಲಿವೆ. ಈ ಎಲ್ಲ ವಿಚಾರಗಳನ್ನು ಕರಪತ್ರಗಳ ಮೂಲಕ ರೈತರಿಗೆ ವಿತರಿಸಲಾಗುತ್ತದೆ.

`ಪ್ರತಿ ವರ್ಷ ಒಂದೆರಡು ಕಿ.ಮೀ ದೂರದಲ್ಲಿದ್ದ `ಪ್ರಾತ್ಯಕ್ಷಿಕೆ ತಾಕು~ಗಳು ಈ ಬಾರಿ ಮೇಳದ ಮಳಿಗೆಗಳ ಸಮೀಪದಲ್ಲೇ ವಿನ್ಯಾಸಗೊಳಿಸಲಾಗಿದೆ. ಮಳಿಗೆ ಹಿಂಭಾಗದಲ್ಲಿ 20 ಎಕರೆ ಪ್ರದೇಶದಲ್ಲಿ 20ಕ್ಕೂಹೆಚ್ಚು ತಾಕುಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ರೈತರಿಗೆ ಸುತ್ತಾಟದ ಶ್ರಮ ಕಡಿತಗೊಳಿಸಲಿಕ್ಕಾಗಿ ಈ ವಿಧಾನ ಅನುಸರಿಸುತ್ತಿದ್ದೇವೆ~ ಎನ್ನುತ್ತಾರೆ ಕೃಷಿ ವಿಸ್ತರಣಾ ವಿಭಾಗದ ಸಂಶೋಧನಾ ನಿರ್ದೇಶಕ ಡಾ. ಎಚ್.ಶಿವಣ್ಣ.

ಪಶುಸಂಗೋಪನೆ ಹಾಗೂ ಉಪ ಕಸುಬು ಪ್ರದರ್ಶನಕ್ಕಾಗಿ 50 ಮಳಿಗೆಗಳನ್ನು ಮೀಸಲಿಡಲಾಗಿದೆ. ರಾಮಚಂದ್ರಾಪುರ ಮಠದವರು ನಾಟಿ ತಳಿಯ ಹಸುಗಳನ್ನು ಪ್ರದರ್ಶನಕ್ಕಿಡುತ್ತಿದ್ದಾರೆ. ರೈತರೇ ಅಭಿವೃದ್ಧಿಪಡಿಸಿರುವ ಕುರಿ, ಮೇಕೆ ತಳಿಗಳು, ಹಳ್ಳಿಕಾರ್, ಅಮೃತಮಹಲ್ ಹೋರಿಗಳು, ಏಮು ಪಕ್ಷಿ ಸಾಕಿ ಯಶಸ್ವಿಯಾಗಿರುವ ರೈತರು,  `ಅಲಂಕಾರಿಕ ಮೀನುಗಳನ್ನು~ ಸಾಕಣಿಕೆ ಮಾಡಿ ಆದಾಯಗಳಿಸುತ್ತಿರುವ ರಾಜ್ಯದ ವಿವಿಧ ಭಾಗಗಳಲ್ಲಿರುವ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ತಮ್ಮ ಉತ್ಪನ್ನಗಳೊಂದಿಗೆ ಮೇಳದಲ್ಲಿ ಭಾಗವಹಿಸಲಿದ್ದಾರೆ.

 ಯುವ ರೈತರಿಗೆ ಪ್ರೋತ್ಸಾಹ
~ವ್ಯಕ್ತಿ ಗೌರವ~ದ ಕೊರತೆಯಿಂದ ಯುವಕರು ಬೇಸಾಯ ತೊರೆಯುತ್ತಿದ್ದಾರೆ. ಹಳ್ಳಿಗಳು ಬರಿದಾಗುತ್ತಿವೆ. ಎಕರೆ ಜಮೀನುಳ್ಳ ರೈತರೂ ಪಟ್ಟಣದಲ್ಲಿ ತಿಂಗಳ ಸಂಬಳಕ್ಕೆ ದುಡಿಯುವ ಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಯುವ ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ಕೃಷಿ ಮೇಳದಲ್ಲಿ ~ಯುವ ರೈತ ಪ್ರಶಸ್ತಿ~ ನೀಡು ಗೌರವಿಸುತ್ತಿದೆ.

ಪ್ರಶಸ್ತಿಗಾಗಿ ತನ್ನ ವ್ಯಾಪ್ತಿಯ  ಎಲ್ಲ ತಾಲ್ಲೂಕುಗಳಿಂದ ಒಬ್ಬೊಬ್ಬ ಯುವ ರೈತ ಹಾಗೂ ರೈತ ಮಹಿಳೆಯನ್ನು ಗುರುತಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಸಂಪ್ರದಾಯದಂತೆ 17 ಜಿಲ್ಲೆಗಳಿಂದ ಜಿಲ್ಲೆಗೊಬ್ಬ ಸಾಧಕ ರೈತ/ರೈತ ಮಹಿಳೆಯನ್ನು ಗುರುತಿಸಿ ಅವರಿಗೆ ~ಉತ್ತಮ ರೈತ ಪ್ರಶಸ್ತಿ~ ನೀಡಲಾಗುತ್ತಿದೆ.

ಈ ವರ್ಷ ಡಾ.ಎಂ.ಎಚ್.ಮರಿಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾರೈತ ಪ್ರಶಸ್ತಿ ಮತ್ತು ಸಮಗ್ರ ಬೇಸಾಯ ಪದ್ಧತಿಯಲ್ಲಿ ಸಾಧನೆ ಮಾಡಿರುವ ರೈತರಿಗೆ ಕಾರ್ಪೊರೇಷನ್ ಬ್ಯಾಂಕ್ ಪ್ರಾಯೋಜಿತ ~ಕಾರ್ಪ್ ರೈತ ಪ್ರಶಸ್ತಿ~ಯನ್ನು  ಇದೇ ಕೃಷಿ ಮೇಳದಲ್ಲಿ ವಿತರಿಸಲಾಗುತ್ತಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT