ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೂರಮಠ ಬೆಂಬಲಕ್ಕೆ ಮುಖ್ಯಮಂತ್ರಿ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರ ರಾಜೀನಾಮೆಯಿಂದ ತೆರವಾಗಿರುವ ರಾಜ್ಯ ಲೋಕಾಯುಕ್ತ ಸ್ಥಾನಕ್ಕೆ ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅವರ ಹೆಸರು ಅಂತಿಮಗೊಳಿಸಿದ್ದನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಬಲವಾಗಿ ಸಮರ್ಥಿಸಿಕೊಂಡರು.

ಗೃಹ ಕಚೇರಿ `ಕೃಷ್ಣಾ~ದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನೂರಕ್ಕೆ ನೂರರಷ್ಟು ಪರಿಪೂರ್ಣ ವ್ಯಕ್ತಿ ಸಿಗುವುದು ಕಷ್ಟ. ಎಲ್ಲರೂ ಒಂದಲ್ಲ ಒಂದು ತಪ್ಪು ಮಾಡುತ್ತಾರೆ~ ಎಂದು ಬನ್ನೂರಮಠ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

`ಬನ್ನೂರಮಠ ಅವರು ಕಾನೂನು ಮೀರಿ ನಿವೇಶನ ಪಡೆದಿದ್ದಾರೆ ಎಂಬ ಆರೋಪವನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಈ ಆರೋಪದ ಕುರಿತು ಹೆಚ್ಚಿನ ಮಾಹಿತಿ ನನ್ನಲ್ಲಿ ಇಲ್ಲದ ಕಾರಣ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಹೆಸರು ಅಂತಿಮಗೊಳಿಸಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಕಳುಹಿಸಲಾಗಿದೆ. ರಾಜ್ಯಪಾಲರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ~ ಎಂದರು.

`50 ಮೀರಲ್ಲ~: `ಈ ಬಾರಿ 50 ಮಂದಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ ನೀಡುವ ನಿಲುವಿನಿಂದ ಹಿಂದೆ ಸರಿಯುವಂತೆ ಒತ್ತಾಯಿಸಿ ನನ್ನ ಮೇಲೆ ಒತ್ತಡ ಬಂದಿರುವುದು ನಿಜ. ಆದರೆ ಯಾವುದೇ ಕಾರಣಕ್ಕೂ ಈ ಬಾರಿ ಪ್ರಶಸ್ತಿ ಪುರಸ್ಕೃತರ ಸಂಖ್ಯೆ 50 ಮೀರುವುದಿಲ್ಲ~ ಎಂದು ಖಚಿತಪಡಿಸಿದರು.

ಹಾಸನ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಯಾವುದೇ ತಾರತಮ್ಯ ಎಸಗಿಲ್ಲ. ಈ ಕುರಿತು ಹಾಸನ ಸಂಸದರೂ ಆಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೊಂದಿಗೆ ಚರ್ಚೆಗೆ ಸಿದ್ಧ. ಸಕಲೇಶಪುರ - ಗುಂಡ್ಯ ರಸ್ತೆ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

`ಹಾಸನ ಅಭಿವೃದ್ಧಿ ವಿಚಾರವಾಗಿ ಶಾಸಕ ಎಚ್.ಡಿ. ರೇವಣ್ಣ ಅವರು ನನ್ನ ನಿವಾಸದ ಎದುರು ಪ್ರತಿಭಟನೆ ನಡೆಸುವುದನ್ನು ಸ್ವಾಗತಿಸುತ್ತೇನೆ. ಜಿಲ್ಲೆಯ ವಿವಿಧ ಸಮಸ್ಯೆಗಳ ಕುರಿತು ಅವರೊಂದಿಗೆ ಮನೆಯಲ್ಲಿಯೇ ಚರ್ಚೆ ನಡೆಸಲು ಸಾಧ್ಯವಾಗುತ್ತದೆ~ ಎಂದರು.

ಸಿಬಿಐ ತನಿಖೆಗೆ ಒತ್ತಾಯ: ರಾಜ್ಯದಲ್ಲಿ ಚರ್ಚ್‌ಗಳ ಮೇಲೆ ನಡೆದ ದಾಳಿ ಪ್ರಕರಣಗಳ ಕುರಿತು ತನಿಖೆ ನಡೆಸಿದ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ್ ನೇತೃತ್ವದ ಆಯೋಗದ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು. ದಾಳಿ ಪ್ರಕರಣಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ನೇತೃತ್ವದ ನಿಯೋಗ ಸದಾನಂದ ಗೌಡರಿಗೆ ಶುಕ್ರವಾರ ಮನವಿ ಸಲ್ಲಿಸಿತು.

ಮೊರಾಸ್ ನೇತೃತ್ವದಲ್ಲಿ `ಕೃಷ್ಣಾ~ದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಕ್ರೈಸ್ತ ಸಮುದಾಯದ 13 ಧರ್ಮಗುರುಗಳ ನಿಯೋಗ ಚರ್ಚ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಸ್ತರ ಮೇಲೆ ದಾಖಲಾಗಿರುವ 150ಕ್ಕೂ ಹೆಚ್ಚು ಪ್ರಕರಣಗಳನ್ನು ಸರ್ಕಾರ ಹಿಂಪಡೆಯಬೇಕು ಎಂದೂ ಆಗ್ರಹಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT