ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಫೆಲೊ; ನಯಾಗರದ ಹೆಬ್ಬಾಗಿಲು

Last Updated 6 ಜನವರಿ 2011, 11:05 IST
ಅಕ್ಷರ ಗಾತ್ರ

‘ಸೆ ನೋ ಟು ಬೆಂಗಳೂರು, ಇಂಡಿಯಾ; ಯಸ್ ಟು ಬಫೆಲೊ, ನ್ಯೂಯಾರ್ಕ್’.
ಇದು ಕಳೆದ ವರ್ಷದ ಮೇ ತಿಂಗಳಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಮಂತ್ರವಾಗಿತ್ತು. ಅಮೆರಿಕದ ಆಗಿನ ತೆರಿಗೆ ನೀತಿಯನ್ನು ಟೀಕಿಸಲು ಅವರು ಬೆಂಗಳೂರನ್ನು ದಾಳವಾಗಿ ಬಳಸಿಕೊಂಡಿದ್ದರು. ‘ನೀವು ನ್ಯೂಯಾರ್ಕ್‌ನ ಬಫೆಲೊ ಬದಲಾಗಿ ಭಾರತದ ಬೆಂಗಳೂರಲ್ಲಿ ಉದ್ಯೋಗ ಸೃಷ್ಟಿಸಿದರೆ ನಿಮಗೆ ಕಡಿಮೆ ತೆರಿಗೆ; ಇದು ನಮ್ಮ ತೆರಿಗೆ ನೀತಿ’ ಎಂದು ವ್ಯಂಗ್ಯವಾಡಿದ್ದರು.

ಅಷ್ಟಕ್ಕೂ ಈ ಬಫೆಲೊ ಏನು ಗೊತ್ತೇ? ಅದು ಅಮೆರಿಕದ ನ್ಯೂಯಾರ್ಕ್ ರಾಜ್ಯದ ಉತ್ತರ ತುದಿಯಲ್ಲಿರುವ ಎರಡನೇ ಅತಿ ದೊಡ್ಡ ನಗರ. ಜಗದ್ವಿಖ್ಯಾತ ನಯಾಗರ ಜಲಪಾತದ ಹೆಬ್ಬಾಗಿಲು. ಸಾಮಾನ್ಯವಾಗಿ ಪ್ರವಾಸಿಗಳು ಇಲ್ಲಿಂದಲೇ 32 ಕಿ.ಮೀ. ದೂರದ ನಯಾಗರಕ್ಕೆ ತೆರಳುತ್ತಾರೆ (ನ್ಯೂಯಾರ್ಕ್‌ನಿಂದ 620 ಕಿ.ಮೀ.).

ನಯಾಗರ ನದಿ ಅಮೆರಿಕದ ಬಫೆಲೊ ಮತ್ತು ಕೆನಡಾ ದೇಶವನ್ನು ಪ್ರತ್ಯೇಕಿಸುವ ಗಡಿ. ಬಫೆಲೊ ಇರುವುದು ಎರಿ ಸರೋವರದ ದಂಡೆಯ ಮೇಲೆ. ಕೈಗಾರಿಕಾ ನಗರ ಎಂದೇ ಹೆಸರುವಾಸಿ. ಅದೇ ಕಾರಣಕ್ಕಾಗಿ ಇಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯೂ ಜಾಸ್ತಿ.

ಕಲಾತ್ಮಕ ಭವ್ಯ ಕಟ್ಟಡಗಳು, ಗಗನಚುಂಬಿಗಳು ಈ ನಗರದ ಸೌಂದರ್ಯವನ್ನು ಹೆಚ್ಚಿಸಿವೆ. ಹೆಸರಾಂತ ವಾಸ್ತುಶಿಲ್ಪಿ ಫ್ರಾಂಕ್ ಲಾಯ್ಡಾ ರೈಟ್ ನಿರ್ಮಿಸಿದ ಎರಡು ಭವ್ಯ ಬಂಗಲೆಗಳು (ಡಾರ್ವಿನ್ ಮಾರ್ಟಿನ್ ಹೌಸ್ ಮತ್ತು ಗ್ರೇಕ್ಲಿಫ್), ಸಿಟಿ ಸೆಂಟರ್, ಸೆಂಟ್ ಪಾಲ್ಸ್ ಕ್ಯಾಥೆಡ್ರೆಲ್ ಇಲ್ಲಿನ ಪ್ರವಾಸಿ ಆಕರ್ಷಣೆಯ ಕೇಂದ್ರಗಳು.

ಇದು ಕಲಾ ಗ್ಯಾಲರಿಗಳ ತವರು ಕೂಡ. ಇಲ್ಲಿನ ಆಲ್‌ಬ್ರೈಟ್ ನಾಕ್ಸ್ ಆರ್ಟ್ ಗ್ಯಾಲರಿಯಲ್ಲಿ ವಿಶ್ವ ಪ್ರಸಿದ್ಧ ಕಲಾವಿದರಾದ ಪಿಕಾಸೊ, ಗಾರ್ಕಿ, ಪೊಲೋಕ್, ಜಾನ್ಸ್, ವಾರ್‌ಹೋಲ್, ಗೌಗಿನ್, ವ್ಯಾನ್‌ಗೊ ಮುಂತಾದವರ ಶ್ರೇಷ್ಠ ಕಲಾಕೃತಿಗಳನ್ನು ನೋಡಬಹುದು.

ಬಫೆಲೊ ಪ್ರಾಣಿಸಂಗ್ರಹಾಲಯ ಅಮೆರಿಕದಲ್ಲಿಯೇ ಅತ್ಯಂತ ಹಳೆಯದು. ಇದರಲ್ಲಿ ಸಾವಿರಕ್ಕೂ ಹೆಚ್ಚು ಪ್ರಾಣಿ, ಪಕ್ಷಿ ಪ್ರಭೇದಗಳಿವೆ. ಇಲ್ಲಿರುವ ಆನೆ, ಘೇಂಡಾ ಮೃಗ ಅಮೆರಿಕನ್ ಪ್ರವಾಸಿಗಳ ಪಾಲಿಗಂತೂ ಅಪರೂಪದ ಪ್ರಾಣಿಗಳು. ಗೊರಿಲ್ಲಾಗಳು, ಮಳೆ ಕಾಡಿನ ಪ್ರತಿರೂಪ ಇಲ್ಲಿನ ಪ್ರಧಾನ ಆಕರ್ಷಣೆಗಳಲ್ಲೊಂದು.
ಬಫೆಲೊದ ಹವಾಮಾನ ಮಾತ್ರ ಭಾರಿ ಏರುಪೇರು. ಬೇಸಿಗೆಯಲ್ಲಿ ವಿಪರೀತ ಸೆಖೆ, ಚಳಿಗಾಲದಲ್ಲಿ ಹಿಮಪಾತ.

ನಗರಕ್ಕೆ ಹೊಂದಿಕೊಂಡೇ ಸುಸಜ್ಜಿತ ವಿಮಾನ ನಿಲ್ದಾಣವಿದೆ. ಇದು ವಿಶ್ವ ವಿದ್ಯಾಲಯ ಕೇಂದ್ರವೂ ಹೌದು. ನಯಾಗರಕ್ಕಿಂತ ಕಡಿಮೆ ವೆಚ್ಚದ ಉತ್ತಮ ಹೋಟೆಲ್‌ಗಳು, ಭಾರತೀಯ ಶೈಲಿಯ ರೆಸ್ಟೊರೆಂಟ್‌ಗಳು ಇಲ್ಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT