ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಡು ನೆಲದಲ್ಲಿ ಭರ್ಜರಿ ಕಬ್ಬು

Last Updated 8 ಜನವರಿ 2014, 6:47 IST
ಅಕ್ಷರ ಗಾತ್ರ

ಸಿಂದಗಿ (ಜಿ. ವಿಜಾಪುರ):  ‘20 ವರ್ಷಗಳಿಂದ ಬರಡಾಗಿದ್ದ 13 ಎಕರೆ ಭೂಮಿಯನ್ನು ಹದಗೊಳಿಸುವ ಮೂಲಕ ಉತ್ತಮ ಫಸಲು ಬೆಳೆಯಲು ನಾನು ಪಟ್ಟ ಶ್ರಮ ಅಷ್ಟಿಷ್ಟಲ್ಲ. ವಿಶೇಷ ತಳಿಯ ಕಬ್ಬು ತಂದು ನೆಟ್ಟಾಗ ಅಪಹಾಸ್ಯ ಮಾಡಿದವರೇ ಹೆಚ್ಚು. ಈಗ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಸಿಂದಗಿ ತಾಲ್ಲೂಕಿನ ನಾಗರಹಳ್ಳಿ ಗ್ರಾಮದ ಪ್ರಗತಿಪರ ರೈತ ನಾನಾಗೌಡ ಶ್ರೀಮಂತರಾಯಗೌಡ ಪಾಟೀಲ ಮಾತು ಆರಂಭಿಸಿದರು.

ಪಿಯುಸಿ ವರೆಗೆ ಶಿಕ್ಷಣ ಪಡೆದಿರುವ ಇವರು, 2002ರಿಂದ ಸಾವಯವ ಪದ್ಧತಿಯಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ 2010ರಲ್ಲಿ ಶ್ರೇಷ್ಠ ಕೃಷಿಕ, ಮುರುಘಾಶ್ರೀ ಕೃಷಿ ಪ್ರಶಸ್ತಿ ಲಭಿಸಿವೆ.

12 ಕಿಲಾರಿ ಆಕಳ ಕೊಟ್ಟಿಗೆ, ಅಮೂಲ್ಯ ರಸಸಾರ ಘಟಕ ಮತ್ತು ಗೋಬರ್ ಗ್ಯಾಸ್ ಘಟಕಗಳಿಗೆ ಒಂದು ಎಕರೆ ಜಾಗ ಬಳಸಿಕೊಂಡಿದ್ದಾರೆ. ಸಾವಯವ ಜೊತೆಗೆ ರಾಸಾಯನಿಕ ಗೊಬ್ಬರ ಬಳಸುವ ಮೂಲಕ ಹನಿ ನೀರಾವರಿ ಪದ್ಧತಿಯಿಂದ ಎಂಟು ಎಕರೆ ಜಮೀನಿನಲ್ಲಿ ವಿಶೇಷ ತಳಿ (0265, 86032) ಕಬ್ಬು ಬೆಳೆದಿದ್ದಾರೆ. ಒಂದು ಕಬ್ಬು 4 ಕೆ.ಜಿ ಯಷ್ಟು ಭಾರವಾಗಿದೆ. ಒಂಬತ್ತು ಅಡಿ ಎತ್ತರವಾಗಿದೆ. ಅಪರೂಪವಾಗಿ ಬೆಳೆದ ಈ ಕಬ್ಬನ್ನು ನೋಡಲು ತಾಲ್ಲೂಕಿನ ರೈತರು ಈ ತೋಟಕ್ಕೆ ಭೇಟಿ ನೀಡುವುದು ಸಾಮಾನ್ಯವಾಗಿದೆ.

ಹನಿ ನೀರಾವರಿ ಮೂಲಕ ಪ್ರತಿಯೊಂದು ಕಬ್ಬಿನ ಬೆಳೆಗೂ ನೀರು ತಲುಪುವ ವ್ಯವಸ್ಥೆ ಮಾಡಿದ್ದಾರೆ. ಹನಿ ನೀರಾವರಿ ನೀರು ಸರಬರಾಜು ಮತ್ತು ಗೊಬ್ಬರ ಪೂರೈಕೆಗಾಗಿ ಇಸ್ರೇಲ್ ಮಾದರಿಯ ತಂತ್ರಜ್ಞಾನ ಸ್ಯಾಂಡ್ ಫಿಲ್ಟರ್ ಮತ್ತು ವೆಂಚುರಿ ಯಂತ್ರಗಳನ್ನು ಉಪಯೋಗಿ ಸುತ್ತಿದ್ದಾರೆ.

ಈ ತೋಟದಲ್ಲಿ ಒಂದು ಬಾವಿ ಮಾತ್ರ ಇದೆ. ಅದರಿಂದಲೇ ಬೆಳೆಗಳಿಗೆ ನೀರು ಸರಬರಾಜು ಆಗುತ್ತದೆ. ಹನಿ ನೀರಾವರಿಯಿಂದಾಗಿ ಸಂಪೂರ್ಣವಾಗಿ ನೀರಿನ ಸದ್ಬಳಕೆ ಆಗಿದೆ. ಆಕಳ ಕೊಟ್ಟಿಗೆಯಿಂದ ಗೋಮೂತ್ರ ನೇರವಾಗಿ ಅಮೂಲ್ಯ ರಸಸಾರ ಘಟಕಕ್ಕೆ ತಲುಪುವ ವ್ಯವಸ್ಥೆ ಮಾಡಲಾಗಿದೆ.

ಆಕಳ ಸಗಣಿಯನ್ನು ಎರೆ ಗೊಬ್ಬರ ಉತ್ಪಾದನೆ, ಗೊಬ್ಬರ ಅನಿಲ ಘಟಕಕ್ಕೆ ಉಪಯೋಗಿಸಲಾಗುತ್ತಿದೆ. ಅನಿಲ ಘಟಕದಿಂದ ಬಂದ ತ್ಯಾಜ್ಯ ಸಗಣಿಯನ್ನು ರಸಸಾರ ಘಟಕಕ್ಕೆ ಸಾಗಿಸಿ, ರಸಸಾರ ತಯಾರಿಸಲಾಗುತ್ತಿದೆ. ಈ ರಸಸಾರವನ್ನು ವಿವಿಧ ಬೆಳೆಗಳಿಗೆ ಹನಿ ನೀರಾವರಿ ಪೈಪುಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ.

100 ಟನ್ ಗಳಷ್ಟು ಸಗಣಿ ಗೊಬ್ಬರ ಹಾಗೂ 40 ಟನ್‌ಗಳಷ್ಟು ಎರೆ ಗೊಬ್ಬರ ಉತ್ಪಾದನೆ ಮಾಡುತ್ತಿದ್ದಾರೆ. ಈ ಗೊಬ್ಬರ ಸಂಪೂರ್ಣವಾಗಿ ಇದೇ ಜಮೀನಿಗೆ ಬಳಸಲಾಗುತ್ತಿದೆ.

ತೋಟದಲ್ಲಿ ದಾಳಿಂಬೆ, ಕಡಲೆ, ಕಲ್ಲಂಗಡಿ, ತೆಂಗು, ನಿಂಬೆ, ಮಾವು, ಚಿಕ್ಕು, ಸಾಗವಾನಿ... ಹೀಗೆ ತೋಟಗಾರಿಕೆ ಬೆಳೆಗಳು ಸಹ ಇವೆ. ತೋಟದಲ್ಲಿ ರೈತರ ವಾಸ್ತವ್ಯಕ್ಕಾಗಿ ಸುಸಜ್ಜಿತವಾದ ವಿಶ್ರಾಂತಿ ಕೋಣೆ ಇದೆ, ವನಭೋಜನಕ್ಕೆ ಬರುವ ವಿದ್ಯಾರ್ಥಿಗಳಿಗಾಗಿ ಸುಂದರ ಕೈ ತೋಟವಿದೆ.

ಬಂಜರು ಭೂಮಿಯಾಗಿದ್ದ ಈ ಜಮೀನು ಈಗ ನಂದನವನವಾಗಿದೆ. ಇದಕ್ಕೆ ಕಾರಣ ಸ್ವತಃ ಆಳಾಗಿ ದುಡಿಯುವ ತೋಟದ ಮಾಲೀಕ ನಾನಾಗೌಡ ಎನ್ನುತ್ತಾರೆ ಗ್ರಾಮದ ಪ್ರಗತಿಪರ ರೈತ ಶಂಕರಗೌಡ ಸೋಮಶೇಖರ ಭೈರೋಡಗಿ. ನಾನಾಗೌಡ ಪಾಟೀಲರ ದೂರವಾಣಿ ಸಂಖ್ಯೆ:9972298257, 9880541317.

ಶ್ರದ್ಧೆಯ ದುಡಿಮೆ
ಇಡೀ ತಾಲ್ಲೂಕಿನಲ್ಲಿಯೇ ವಿಶೇಷವಾಗಿ ಉತ್ತಮ ತಳಿ ಕಬ್ಬು ಬೆಳೆದ ರೈತರಲ್ಲಿ ನಾನಾಗೌಡ ಒಬ್ಬರು. ಇವರು ಕೃಷಿ ಕಾಯಕವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ.
– ಎಚ್.ವೈ. ಸಿಂಗೆಗೋಳ, ಸಹಾಯಕ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT