ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ನಾಡಿನ ಆಶಾಕಿರಣ ಮಹಿಳಾ ವಿವಿ

Last Updated 4 ಫೆಬ್ರುವರಿ 2011, 9:50 IST
ಅಕ್ಷರ ಗಾತ್ರ

ವಿಜಾಪುರ: ಮಹಿಳಾ ಸಬಲೀಕರಣದ ಆಶಯ ಹೊತ್ತು ಬರದ ನಾಡಿನಲ್ಲಿ ಸ್ಥಾಪನೆಯಾಗಿರುವ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೀಗ ಎಂಟು ವರ್ಷದ ಪ್ರಾಯ. ಹೆಸರು ‘ಕರ್ನಾಟಕ ರಾಜ್ಯ’ ಎಂದಿದ್ದರೂ ಮಹಿಳಾ ವಿವಿ ವ್ಯಾಪ್ತಿ ಮಾತ್ರ ಇನ್ನೂ 12 ಜಿಲ್ಲೆಗಳಿಗೇ ಸೀಮಿತವಾಗಿದೆ.

‘ವ್ಯಾಪ್ತಿ ವಿಸ್ತರಿಸಿ;
ಒಂದೇ ಬಾರಿ ಅನುದಾನ ನೀಡಿ ಅಭಿವೃದ್ಧಿಪಡಿಸಿ’ ಎಂಬ ಬೇಡಿಕೆ ಜೀವಂತವಾಗಿಯೇ ಉಳಿದಿದೆ. ಎಂಟು ವರ್ಷವಾದರೂ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಹೊಂದದ ಈ ವಿವಿಯನ್ನು ಕೇಂದ್ರೀಯ ಮಹಿಳಾ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಘಟಿಕೋತ್ಸವವನ್ನು ಕಳೆದ ವರ್ಷದಿಂದ ಆಚರಿಸಲಾಗುತ್ತಿದೆ. ಮಹಿಳಾ ವಿವಿಯ ಎರಡನೆಯ ಘಟಿಕೋತ್ಸವ ಫೆ. 4ರಂದು ಬೆಳಿಗ್ಗೆ 10ಕ್ಕೆ ಇಲ್ಲಿಯ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿದ್ದು, ಕೇಂದ್ರ ಸಚಿವೆ ಡಾ.ಡಿ. ಪುರಂದೇಶ್ವರಿ, ಸಾಹಿತಿ ನಾಡೋಜ, ಡಾ. ಸಾರಾ ಅಬೂಬಕ್ಕರ, ಉದ್ಯಮಿ ವಿದ್ಯಾ ಮುರಕುಂಬಿ, ಕ್ರೀಡಾಪಟು ಮಾಲತಿ ಹೊಳ್ಳ ಅವರಿಗೆ ಗೌರವ ಡಾಕ್ಟರೇಟ್ ಹಾಗೂ 60 ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ, ಒಟ್ಟಾರೆ 15,497 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ.

ಸಮಕುಲಾಧಿಪತಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕುಲಾಧಿ ಪತಿಯೂ ಆಗಿರುವ ರಾಜಪಾಲ ಭಾರದ್ವಾಜ್ ಕಳೆದ ಬಾರಿಯೂ ಆಗಮಿಸಿರಲಿಲ್ಲ. ಈ ಬಾರಿಯೂ ಅವರ ಬರುವಿಕೆಯ ಬಗ್ಗೆ ಜಿಲ್ಲಾ ಆಡಳಿತಕ್ಕೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಆಶಾಕಿರಣ: ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಇಲ್ಲಿ ಸ್ಥಾಪನೆಯಾಗಿದ್ದು 2003ರಲ್ಲಿ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ 2004ರ ಜನವರಿ 23ರಂದು ಉದ್ಘಾಟಿಸಿದ್ದರು. ರಾಜ್ಯದ ಏಕೈಕ ಹಾಗೂ ದೇಶದ ಆರನೆಯ ಮಹಿಳಾ ವಿಶ್ವವಿದ್ಯಾಲಯ ಇದು. ಯುಜಿಸಿಯ 12-ಎಫ್ ಮತ್ತು 12-ಬಿ ಯಾದಿಯಲ್ಲಿ ಸೇರ್ಪಡೆ ಆಗಿರುವುದು ಈ ವಿವಿಯ ಹೆಗ್ಗಳಿಕೆ.
ಈ ಭಾಗದ ಮಹಿಳೆಯರಿಗೆ ಶಿಕ್ಷಣ ಹಾಗೂ ತರಬೇತಿ ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವುದು ಮಹಿಳಾ ವಿವಿಯ ಬಹುಮುಖ್ಯ ಉದ್ದೇಶ. 2003ರಲ್ಲಿ ಕೇವಲ ಆರು ಸ್ನಾತಕೋತ್ತರ ಕೋರ್ಸ್‌ಗಳಿಂದ ಆರಂಭವಾದ ಈ ಮಹಿಳಾ ವಿವಿ, ಈಗ 20 ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸುತ್ತಿದೆ.

ಎಂಎಸ್ಸಿ ಜೈವಿಕ ತಂತ್ರಜ್ಞಾನ, ಎಂ.ಎ. ಹಿಂದಿ, ಎಂ.ಕಾಂ., ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ಗ್ರಂಥಾಲಯ ವಿಜ್ಞಾನ ಸೇರಿದಂತೆ ಇತರ ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಪ್ರಸಕ್ತ ಸಾಲಿನಿಂದ ದೂರ ಶಿಕ್ಷಣವನ್ನೂ ಆರಂಭಿಸಲಾಗಿದೆ. ಪಠ್ಯಕ್ರಮವೂ ವಿಶಿಷ್ಟವಾಗಿದೆ. ಜೈವಿಕ ಇಂಧನ, ಆಹಾರ ಸಂಸ್ಕರಣೆ ಮತ್ತಿತರ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.

ಕೇವಲ 227 ವಿದ್ಯಾರ್ಥಿನಿಯರಿಂದ ಆರಂಭವಾದ ಈ ವಿವಿಯಲ್ಲಿ ಈಗ ಸುಮಾರು ಸಾವಿರ ವಿದ್ಯಾರ್ಥಿನಿಯರು ಪ್ರತಿವರ್ಷ ಪ್ರವೇಶ ಪಡೆಯುತ್ತಿದ್ದಾರೆ. ಉತ್ತರ ಕರ್ನಾಟಕದ 12 ಜಿಲ್ಲೆಗಳ 71 ಮಹಿಳಾ ಕಾಲೇಜುಗಳು ವಿವಿ ವ್ಯಾಪ್ತಿಗೊಳಪಟ್ಟಿವೆ.

‘ತೊರವಿ ಗ್ರಾಮದ ಬಳಿ 286 ಎಕರೆ ಪ್ರದೇಶದ ‘ಜ್ಞಾನಶಕ್ತಿ’ ಕ್ಯಾಂಪಸ್‌ನಲ್ಲಿ ಈಗಿರುವ ಕಟ್ಟಡಗಳ ಜೊತೆಗೆ ಆಡಳಿತ ಕಟ್ಟಡ, ಸಮಾಜ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಹಾಸ್ಟೆಲ್ ಮುಂತಾದ ಕೋಟ್ಯಂತರ ರೂಪಾಯಿ ವೆಚ್ಚದ ಕಟ್ಟಡಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

‘ಮಹಿಳಾ ವಿವಿಯ ಕುಲಪತಿ ಡಾ.ಗೀತಾ ಬಾಲಿ ಅವರು ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಮಹಿಳಾ ವಿವಿಗೆ ಮತ್ತೊಂದು ಗರಿ ಬಂದಂತಾಗಿದೆ’ ಎಂಬ ಹೆಮ್ಮೆ ವಿದ್ಯಾರ್ಥಿನಿಯರದ್ದು.

‘ನಗರ ಕ್ಯಾಂಪಸ್‌ನಲ್ಲಿ ಅತ್ಯಂತ ಸುಸಜ್ಜಿತ ಗ್ರಂಥಾಲಯವಿದ್ದು, ಸುಮಾರು 60 ಸಾವಿರಕ್ಕೂ ಹೆಚ್ಚು ಪುಸ್ತಕಗಳು, 250ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ನಿಯತಕಾಲಿಕೆಗಳು ಲಭ್ಯ. ಇಂಟರ್‌ನೆಟ್ ಮತ್ತು ಇ-ಜರ್ನಲ್ ಸೌಲಭ್ಯವೂ ಉಂಟು.

ವಿದ್ಯಾರ್ಥಿನಿಯರಿಗೆ ಇಂಗ್ಲಿಷ್ ಭಾಷಾ ಪ್ರೌಢಿಮೆ ತರಬೇತಿ ನೀಡಲು ಸುಸಜ್ಜಿತ ಸಂಪೂರ್ಣ ಗಣಕೀಕೃತ  ‘ಲಾಂಗ್ವೇಜ್ ಲ್ಯಾಬ್’ ಸ್ಥಾಪಿಸಲಾಗಿದೆ. ಆರೋಗ್ಯ ಕೇಂದ್ರ, ಆಪ್ತ ಸಮಾಲೋಚನ ಕೇಂದ್ರ, ಮಕ್ಕಳ ಲಾಲನೆ-ಪಾಲನೆ ಕೇಂದ್ರ ತೆರೆಯಲಾಗಿದೆ. ಅಮೆರಿಕೆಯ ಟೆಕ್ಸಾಸ್ ವಿಶ್ವವಿದ್ಯಾಲಯ ಮತ್ತು ಟೆಕ್ಸಾಸ್ ರಾಜ್ಯ ವಿಶ್ವವಿದ್ಯಾಲಯ ಹಾಗೂ ತಮಿಳುನಾಡಿನ ಕೊಡೈಕೆನಾಲ್‌ನ ಮದರ್ ತೆರೆಸಾ ಮಹಿಳಾ ವಿವಿಯೊಂದಿಗೂ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕಂಪ್ಯೂಟ ರೀಕರಣಗೊಳಿಸಿದ್ದು, ಪರೀಕ್ಷಾ ಫಲಿತಾಂಶವನ್ನು ಅತ್ಯಂತ ಶೀಘ್ರಗತಿಯಲ್ಲಿ ಪ್ರಕಟಿಸಲಾಗುತ್ತಿದೆ’ ಎಂದು ವಿವಿಯ ಅಧಿಕಾರಿಗಳು ಸಾಧನೆಯ ಪಟ್ಟಿಯನ್ನು ಮುಂದಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT