ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಪರಿಸ್ಥಿತಿ; ದುಡಿಯುವ ಕೈಗೆ ಕೆಲಸ ಕೊಡಿ

Last Updated 13 ಅಕ್ಟೋಬರ್ 2011, 10:40 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ತಲೆದೋರಿರುವ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ನಿಯಮಗಳ ಉಲ್ಲಂಘನೆಯಾಗದಂತೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಕೈಗೊಂಡು ಕೂಲಿಕಾರ್ಮಿಕರಿಗೆ ಉದ್ಯೋಗ ಒದಗಿಸಬೇಕು ಎಂದು ಸಂಸತ್ ಸದಸ್ಯ ಜನಾರ್ದನಸ್ವಾಮಿ ಸೂಚಿಸಿದರು.

ಬುಧವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಮತ್ತು ಉದ್ಯೋಗ ಖಾತ್ರಿ ಯೋಜನೆಯನ್ನು ವಿಲೀನ ಮಾಡಿ ಕಾಮಗಾರಿ ಕೈಗೊಳ್ಳಲು ಅವಕಾಶವಿಲ್ಲ. ಈ ಬಗ್ಗೆ ಸ್ಪಷ್ಟವಾದ ನಿಯಮಾವಳಿಗಳಿವೆ. ಈ ಎರಡು ಯೋಜನೆಗಳ ಉದ್ದೇಶವೇ ಬೇರೆಯಾಗಿದೆ ಎಂದು ವಿವರಿಸಿದರು.

ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರಿಗೆ ಸಕಾಲಕ್ಕೆ ಕೂಲಿ ಪಾವತಿಸುತ್ತಿಲ್ಲ. ಸಕಾಲಕ್ಕೆ ಕೂಲಿ ನೀಡದ ಕಾರಣ ಕಾರ್ಮಿಕರು ಮುಂದೆ ಬರುತ್ತಿಲ್ಲ. ಕೂಲಿ ಆಧಾರದ ಮೇಲೆ ಬದುಕುವ ಕಾರ್ಮಿಕರಿಗೆ ಕೂಲಿ ದೊರೆಯದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಕೆಲವೆಡೆ ಯಂತ್ರಗಳನ್ನು ಬಳಸಿ ಕಾಮಗಾರಿಗಳನ್ನು ಕೈಗೊಂಡ ಪ್ರಕರಣಗಳು ನಡೆದಿವೆ. ಕೆಲಸ ಇದ್ದರೂ ಜನರನ್ನು ಬಳಸಿಕೊಳ್ಳುತ್ತಿಲ್ಲ. ಆದ್ದರಿಂದ, 10-15 ದಿನಗಳ ಒಳಗೆ ಹಣ ಪಾವತಿಸಬೇಕು. ತಿಂಗಳ ಕಾಲ ಕಾಯಿಸಿರುವುದರಿಂದ ಕಾರ್ಮಿಕರು ರೋಸಿ ಹೋಗಿದ್ದಾರೆ ಎಂದು ಮಹಾಲಿಂಗಪ್ಪ ನುಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಇಒ ಜಯರಾಂ, ಈ ಯೋಜನೆಗೆ ಹಣದ ಕೊರತೆ ಇಲ್ಲ. 2.35 ಲಕ್ಷ ಜನರಿಗೆ ಜಾಬ್ ಕಾರ್ಡ್ ನೀಡಲಾಗಿದೆ. ಪ್ರಸಕ್ತ ವರ್ಷ ಉದ್ಯೋಗಖಾತ್ರಿ ಯೋಜನೆಯಡಿ ಜಿಲ್ಲೆಯ 185 ಗ್ರಾಮ ಪಂಚಾಯ್ತಿಗಳಿಗೆ ರೂ 148 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ಗ್ರಾಮ ಪಂಚಾಯ್ತಿಗೆರೂ 60 ರಿಂದ 70 ಲಕ್ಷ ಕ್ರಿಯಾಯೋಜನೆ ತಯಾರಿಸಿದ್ದು, ಅನುದಾನ ಹಂಚಿಕೆ ಮಾಡಲಾಗಿದೆ. ಕಾಮಗಾರಿಗಳ ಅನುಷ್ಠಾನವನ್ನು ತ್ವರಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.

ಕೆಲಸ ಕೊಡಲು ತೊಂದರೆ ಇಲ್ಲ. ಜನರು ಬರುತ್ತಿಲ್ಲ ಎನ್ನುವ ದೂರುಗಳಿವೆ. ಈಗ ಬರ ಇರುವುದರಿಂದ ಹೆಚ್ಚಿನ ಜನರನ್ನು ಈ ಯೋಜನೆ ಅಡಿಯಲ್ಲಿ ಬಳಸಿಕೊಳ್ಳಬಹುದು. ಆದರೆ, ಇನ್ನೂ ಜಿಲ್ಲೆಯಲ್ಲಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದರು.

ಕೆಲವೆಡೆ ನಿಯಮ ಉಲ್ಲಂಘಿಸಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ. ಇನ್ನೂ ಕೆಲವೆಡೆ ಬೇರೆ ಬೇರೆ ಕಾರಣಗಳಿಂದ ಕಾಮಗಾರಿಗಳನ್ನು ಆರಂಭಿಸಿಲ್ಲ. ಆದರೆ, ಕೂಲಿಕಾರ್ಮಿಕರಿಗೆ ತ್ವರಿತಗತಿಯಲ್ಲಿ ಹಣ ಪಾವತಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
 

ವಸತಿ ಯೋಜನೆಗೆ ಹಿನ್ನಡೆ: ಗ್ರಾಮೀಣ ವಸತಿ ಯೋಜನೆಗೆ ಹಿನ್ನಡೆಯಾಗಿರುವ ಬಗ್ಗೆ ಸಂಸತ್ ಸದಸ್ಯ ಜನಾರ್ದನಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.ಹೊಳಲ್ಕೆರೆ ತಾಲ್ಲೂಕಿನಲ್ಲಿ 2010-11ನೇ ಸಾಲಿನಲ್ಲಿ ಕೇವಲ 11 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಇದು ಆಶ್ಚರ್ಯಕರ ಎಂದು ನುಡಿದರು.
ಆದರೆ, ಈ ಬಗ್ಗೆ ಹೊಳಲ್ಕೆರೆ ತಾ.ಪಂ. ಇಒ ಸಮರ್ಪಕವಾಗಿ ಉತ್ತರ ನೀಡಲಿಲ್ಲ.

ಹೊಳಲ್ಕೆರೆ ತಾ.ಪಂ. ಅಧ್ಯಕ್ಷೆ ಪ್ರೇಮಾ ಧನಂಜಯ ಸಹ ಇಒ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ತಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ನುಡಿದರು.ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ 2008-09ನೇ ಸಾಲಿನ ಇಂದಿರಾ ಆವಾಸ್ ಯೋಜನೆ ಅಡಿ 4,142 ಮನೆಗಳು, 2009-10ನೇ ಸಾಲಿನಲ್ಲಿ 4,038 ಮನೆಗಳು ಪೂರ್ಣಗೊಂಡಿದ್ದು, 2010-11 ನೇ ಸಾಲಿನಲ್ಲಿ ಒಟ್ಟು ಆಯ್ಕೆಯಾದ 7,934 ಮನೆಗಳ ಪೈಕಿ 2,698 ಮನೆಗಳು ಪೂರ್ಣಗೊಂಡಿದ್ದು, 5,236 ಮನೆಗಳ ಕಾಮಗಾರಿ ಪ್ರಾರಂಭವಾಗಬೇಕಾಗಿದೆ.

ಪ್ರಸಕ್ತ 2011-12ನೇ ಸಾಲಿಗೆ 10,175 ಮನೆಗಳನ್ನು ನಿರ್ಮಿಸುವ ಗುರಿ ಇದ್ದು, ಇದರಲ್ಲಿ 7,487 ಮನೆ ನಿರ್ಮಿಸಲು ಫಲಾನುಭವಿಗಳ ಆಯ್ಕೆಯಾಗಿದೆ. ಹಿರಿಯೂರು ಮತ್ತು ಹೊಳಲ್ಕೆರೆ ತಾಲ್ಲೂಕಿನ ಫಲಾನುಭವಿಗಳ ಆಯ್ಕೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಎಚ್. ಲಕ್ಷ್ಮೀನಾರಾಯಣ ಸಭೆಗೆ ಮಾಹಿತಿ ನೀಡಿದರು.

ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಪಟ್ಟಿಯನ್ನು ಸಂಬಂಧಪಟ್ಟ ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು ಕೂಡಲೇ ಸಲ್ಲಿಸುವಂತೆ ಲೋಕಸಭಾ ಸದಸ್ಯರು ಸೂಚನೆ ನೀಡಿದರು.
 
ಜಲಾನಯನ ಅಭಿವೃದ್ದಿ ಯೋಜನೆಯಲ್ಲಿ ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮದ ಹಂತ-1 ಮತ್ತು ಹಂತ-2 ನೇ ಕಾರ್ಯಕ್ರಮಗಳಿಗೆ ಒಟ್ಟು ರೂ415 ಲಕ್ಷ ಬಿಡುಗಡೆಯಾಗಿದ್ದು, ಇದರಲ್ಲಿ ರೂ 206 ಲಕ್ಷ ವೆಚ್ಚವಾಗಿದೆ ಎಂದು ಜಲಾನಯನ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕರು ಸಭೆಗೆ ತಿಳಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT