ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆಗೆ ಬಾರದ ಶೌಚಾಲಯ!

Last Updated 2 ಡಿಸೆಂಬರ್ 2013, 8:33 IST
ಅಕ್ಷರ ಗಾತ್ರ

ಮಂಡ್ಯ: ಶೌಚಾಲಯ ನಿರ್ಮಾಣಕ್ಕಿಂತಲೂ ಅದರ ನಿರ್ವಹಣೆಯದೇ ದೊಡ್ಡ ಸಮಸ್ಯೆ. ಆದರೆ, ನಗರದಲ್ಲಿ ನಿರ್ಮಿಸಿರುವ ಕೆಲ ‘ಪೇ ಅಂಡ್ ಯೂಸ್’ ಶೌಚಾಲಯಗಳಲ್ಲಿ ನಿರ್ವಹಣೆಯ ಸಮಸ್ಯೆಯೇ ಇಲ್ಲ. ಏಕೆಂದರೆ, ಅಲ್ಲಿ ಬಳಕೆದಾರರೇ ಇಲ್ಲ..!

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಂದರ ಮತ್ತು ಆಕರ್ಷಕ ಶೌಚಾಲಯದ ಕಟ್ಟಡಗಳಿಗೆ ಬೀಗ ಜಡಿಯಲಾಗಿದ್ದು, ಹೊಳೆಯಲ್ಲಿ ಹುಣಸೆ ಹಣ್ಣು ತೇಯ್ದಂತೆ, ಹಣವೂ ಪೋಲಾಗಿದೆ.

ನಗರದ ಪೊಲೀಸ್‌ ಪೆರೇಡ್‌ ಮೈದಾನ ಸಮೀಪ ಎಡಿಬಿ ನೆರವಿನಡಿ ನಿರ್ಮಿತಿ ಕೇಂದ್ರವು ನಿರ್ಮಿಸಿರುವ ಹಾಗೂ ಲೇಬರ್ ಕಾಲೊನಿಗೆ ಹೊಂದಿಕೊಂಡಂತೆ, ನೆಹರು ನಗರದ ಪೌರ ಕಾರ್ಮಿಕರಯಲ್ಲಿ ಕಾಲೊನಿಯಲ್ಲಿ ನಗರಸಭೆ ನಿರ್ಮಿಸಿರುವ ‘ಪೇ ಅಂಡ್‌ ಯೂಸ್‌’ ಶೌಚಾಲಯಗಳಿಗೆ ಐದು  ವರ್ಷಗಳಿಂದ ಬೀಗ ಜಡಿಯಲಾಗಿದೆ.

ಈ ಶೌಚಾಲಯಗಳು ಇದ್ದೂ ಇಲ್ಲದಂತಿವೆ. ಹೊರ ಆವರಣ ಕೊಟ್ಟಿಗೆಯಂತಿವೆ. ವಿದ್ಯುತ್‌ ದೀಪಗಳು ಒಡೆದಿದ್ದು ಸುತ್ತಲಿನ ಪ್ರದೇಶ ಅನೈರ್ಮಲ್ಯದಿಂದ ಕೂಡಿದೆ. ಬಳಕೆಗೆ ಸಿದ್ಧವಿದ್ದರೂ ಉಪಯೋಗಿಸಲ್ಪಡದ ಈ ಶೌಚಾಲಯಗಳನ್ನು ನಗರಸಭೆಯೂ ಗಂಭೀರವಾಗಿ ಪರಿಗಣಿಸಿಲ್ಲ.

ಇನ್ನು, ಜಿಲ್ಲಾ ಕೇಂದ್ರ ಗ್ರಂಥಾಲಯ, ಮಹಾವೀರ ವೃತ್ತದ ಬಳಿ ಇರುವ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ಎದುರಿನ ಜನನಿಬಿಡ ಸ್ಥಳದಲ್ಲಿ ‘ಪೇ ಅಂಡ್ ಯೂಸ್’ ಶೌಚಾಲಯಗಳಿದ್ದರೂ, ಅಲ್ಲಿ ನಿರ್ವಹಣೆಯದೇ ಸಮಸ್ಯೆ.

ಬಯಲೇ ಶೌಚಾಲಯ: ದೇಶದಲ್ಲಿನ ನಗರಗಳ ಪೈಕಿ ‘ನಿರ್ಮಲ ನಗರ’ ಎಂದು 15ನೇ ಸ್ಥಾನ ಪಡೆದಿದ್ದ ಮಂಡ್ಯ ನಗರದ ಅಲ್ಲಲ್ಲಿ ಜನ ನೈಸರ್ಗಿಕ ಕರೆಗೆ ಬಯಲನ್ನೇ ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ.

ಜನ ಮತ್ತು ವಾಹನ ಸಂಚಾರಕ್ಕೆ ಹೆಚ್ಚು ಅನುಕೂಲಕರವಾದ ಮತ್ತು ಸಹನೀಯ ವಾತಾವರಣವನ್ನು ಕಲ್ಪಿಸುವ ಉದ್ದೇಶವೇ ಅನೇಕ ಸ್ಥಳಗಳಲ್ಲಿ ಮೂಲೆಗುಂಪಾಗಿದ್ದು, ನಗರವನ್ನು ನಿರ್ಮಲವಾಗಿಡುವ ಯೋಜನೆಯೂ ಹಳಿ ತಪ್ಪಿದೆ.

ಶೌಚಾಲಯಗಳನ್ನು ನಿರ್ಮಿಸಿ ಹಲವು ವರ್ಷಗಳಾಗಿವೆ. ಆದರೂ ಏಕೆ ಬಳಕೆ ಆಗುತ್ತಿಲ್ಲವೆಂದು ಸುತ್ತಮುತ್ತಲಿನ ಜನರನ್ನು ಪ್ರಶ್ನಿಸಿದರೆ, ‘ಇದನ್ನು ಕಟ್ಟಿ ನಾಲ್ಕೈದು ವರ್ಷಗಳಾದೋ. ಅದ್ಯಾಕೆ ಕಟ್ಟಿದರೋ, ಅದ್ಯಾಕೆ ಬೀಗ ಜಡಿದರೋ ಗೊತ್ತಿಲ್ಲ’ ಎಂದು ಉತ್ತರಿಸುತ್ತಾರೆ.  ‘ಶೌಚಾಲಯ ಬಳಸಲು ಹಣ ಪಾವತಿಸುವುದು ಕಡ್ಡಾಯ. ಜೊತೆಗೆ ಇಲ್ಲಿ ಜನಸಂಚಾರವೂ ಹೆಚ್ಚಿಲ್ಲ. ಹೀಗಾಗಿ ಅದನ್ನು ಅವಲಂಬಿಸಿರುವವರ ಸಂಖ್ಯೆಯೂ ಕಡಿಮೆ’ ಎಂದು ರಾಮಣ್ಣ, ಮೋಹನ್‌ ಪ್ರತಿಕ್ರಿಯಿಸುತ್ತಾರೆ.

ಬಯಲು ಪ್ರದೇಶವನ್ನು ಶೌಚಾಲಯವಾಗಿ ಬಳಸುವುದು ಅಸಹ್ಯಕರ, ಅವಮಾನಕರ ಮತ್ತು ಅನಾರೋಗ್ಯಕರ ಎಂಬ ಸಾಲುಗಳಿರುವ ಜಾಗೃತಿ ಫಲಕವನ್ನು ಈ ಶೌಚಾಲಯದ ಮೇಲೆ ತೂಗು ಹಾಕಲಾಗಿದೆ. ಆದರೆ ಏಕೋ, ನಗರಸಭೆಗೆ ಮಾತ್ರ ಇದು ತಿಳಿಯುತ್ತಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT