ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ದಿನಾಚರಣೆಗೆ ತಾರಾ ಮೆರಗು

Last Updated 5 ಜನವರಿ 2011, 5:30 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ವರ್ಷ ತುಂಬಿದ ಬಿಎಂಟಿಸಿ ಬಸ್ ದಿನಾಚರಣೆಗೆ ಮಂಗಳವಾರ ತಾರಾ ಮೆರಗು ದೊರಕಿತ್ತು. ನಟ ಯಶ್ ಹಾಗೂ ‘ಮೊದಲ ಸಲ’ ಚಲನಚಿತ್ರ ತಂಡ ಜಯನಗರ ನಾಲ್ಕನೇ ಬ್ಲಾಕ್ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್‌ವರೆಗೆ ಬಸ್‌ನಲ್ಲಿ ಪ್ರಯಾಣಿಸಿ ಹುರುಪು ಮೂಡಿಸಿತು. ಇದೇ ವೇಳೆ ಬಿಎಂಟಿಸಿ ಬಹುತೇಕ ಅಧಿಕಾರಿಗಳು ಖಾಸಗಿ ವಾಹನಗಳನ್ನು ತೊರೆದು ಬಸ್‌ನಲ್ಲಿ ಪ್ರಯಾಣಿಸಿದ್ದು ವಿಶೇಷವಾಗಿತ್ತು.

ಬೆಳಿಗ್ಗೆ 11 ಗಂಟೆಗೆ ಜಯನಗರ ಬಸ್ ನಿಲ್ದಾಣದಲ್ಲಿ ಕರಪತ್ರ ಹಂಚುವ ಮೂಲಕ ಯಶ್ ಬಸ್ ದಿನದ ಮಹತ್ವ ಸಾರಿದರು. ನೀಲಿ ಟಿ-ಷರ್ಟ್ ಹಾಗೂ ನೀಲಿ ಕ್ಯಾಪ್ ತೊಟ್ಟ ಯಶ್, ‘ಬನ್ನಿ ಬನ್ನಿ ಬಸ್ ಹತ್ತಿ’ ಎಂದು ಪ್ರಯಾಣಿಕರನ್ನು ಆಹ್ವಾನಿಸುತ್ತಿದ್ದುದು ಪ್ರಯಾಣಿಕರ ಗಮನ ಸೆಳೆಯಿತು.

ಬಸ್‌ನಲ್ಲಿ ಟಿಕೆಟ್ ಖರೀದಿಸಿದ ಅವರು ‘ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುವುದರಿಂದ ಸಾಕಷ್ಟು ಅನುಕೂಲಗಳಿವೆ. ಸಂಚಾರ ಸಮಸ್ಯೆಯನ್ನು ಕಡಿಮೆ ಮಾಡಬಹುದು. ನಾನು ಹತ್ತಾರು ವರ್ಷಗಳಿಂದ ಬಸ್‌ನ ಪ್ರಯಾಣಿಕ. 20 ರೂಪಾಯಿ ಬಸ್‌ಪಾಸ್ ಪಡೆದು ಹಲವು ಬಾರಿ ಪ್ರಯಾಣಿಸಿದ್ದೇನೆ’ ಎಂದು ಹೇಳಿದರು.

‘ನನ್ನ ತಂದೆ ಜೆ. ಅರುಣ್‌ಕುಮಾರ್ ಬಿಎಂಟಿಸಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಅವರು ಕೆಎಸ್‌ಆರ್‌ಟಿಸಿ ನೌಕರರಾಗಿದ್ದರು. ಸಂಸ್ಥೆಯ ನೌಕರನ ಮಗ ಎಂಬ ಪ್ರೀತಿ ಇಲ್ಲಿನ ಸಿಬ್ಬಂದಿ ಮತ್ತು ಆಡಳಿತ ವರ್ಗಕ್ಕಿದೆ’ ಎಂದು ತಿಳಿಸಿದರು.

ಯಶ್ ಪ್ರಯಾಣಿಸುತ್ತಿದ್ದ ಮಾರ್ಗ ಸಂಖ್ಯೆ 2ರ ಬಸ್‌ನಲ್ಲಿ ಹಿರಿಯ ನಾಗರಿಕರು ಮಹಿಳೆಯರು ಸೇರಿದಂತೆ ಸುಮಾರು 60 ಮಂದಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಇದ್ದರು.

‘ಮೊದಲ ಸಲ’ ಚಿತ್ರದ ನಿರ್ದೇಶಕ ಪುರುಷೋತ್ತಮ್, ನಿರ್ಮಾಪಕ ಮಲ್ಲಿಕಾರ್ಜುನ ಸಂಕನಗೌಡರ್ ಕೂಡ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಿಎಂಟಿಸಿ ಭದ್ರತಾ ಮತ್ತು ಪರಿಸರ ವಿಭಾಗ ನಿರ್ದೇಶಕ ಅರುಣ್ ಚಕ್ರವರ್ತಿ, ಬೆಂಗಳೂರು ದಕ್ಷಿಣ ವಿಭಾಗದ ಡಿಸಿ ಶ್ರೀನಿವಾಸ್ ಉಪಸ್ಥಿತರಿದ್ದರು.

ಮತ್ತೊಂದೆಡೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಜಮೀರ್ ಅಹಮದ್ ಪಾಷಾ ಅವರು ಐಟಿಪಿಎಲ್, ವೈಟ್‌ಫೀಲ್ಡ್, ಮಾಗಡಿ ರಸ್ತೆ ಮುಂತಾದ ಕಡೆ ವೋಲ್ವೊ, ಸಾಮಾನ್ಯ ಬಸ್‌ಗಳಲ್ಲಿ ಸಂಚರಿಸಿ ಪ್ರಯಾಣಿಕರ ಅಹವಾಲು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಬಸ್ ದಿನಾಚರಣೆ ಹಿನ್ನೆಲೆಯಲ್ಲಿ 200 ಬಸ್‌ಗಳು ಹೆಚ್ಚುವರಿಯಾಗಿ ರಸ್ತೆಗಿಳಿದಿವೆ. ವಿಶ್ವದರ್ಜೆಯ ಬಸ್‌ಗಳಲ್ಲಿ ಸಂಚರಿಸಲು ಪ್ರಯಾಣಿಕರು ಉತ್ಸಾಹ ತೋರಿದ್ದಾರೆ. ಹೆಚ್ಚುವರಿ ಸೇವೆಗಳನ್ನು ಒದಗಿಸುವಂತೆ ಕೆಲವರು ಸೂಚಿಸಿದ್ದಾರೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಬಿಎಂಟಿಸಿ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಲಾಗುವುದು’ ಎಂದು ಹೇಳಿದರು. ವ್ಯವಸ್ಥಾಪಕ ನಿರ್ದೇಶಕರ ಆಪ್ತ ಕಾರ್ಯದರ್ಶಿ ರವಿ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಮದ್ರಾಸ್ ರಸ್ತೆ, ಬನ್ನೇರುಘಟ್ಟ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಹೊಸೂರು ರಸ್ತೆ, ಸರ್ಜಾಪುರ ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ, ಬಳ್ಳಾರಿ ರಸ್ತೆ, ಮಾಗಡಿ ರಸ್ತೆ, ಥಣಿಸಂದ್ರ ರಸ್ತೆ ಹಾಗೂ ಹೆಣ್ಣೂರು ರಸ್ತೆಗಳಲ್ಲಿ ಬಸ್ ದಿನಾಚರಣೆ ನಡೆಯಿತು.

ಬಸ್‌ನಲ್ಲೇ ಪ್ರಯಾಣ: ಬಸ್ ದಿನದ ಅಂಗವಾಗಿ ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯ ಬಹುತೇಕ ಸಿಬ್ಬಂದಿ ಖಾಸಗಿ ಬಸ್‌ಗಳನ್ನು ಬಳಸದೇ ಬಿಎಂಟಿಸಿ ಬಸ್‌ಗಳಲ್ಲಿ ಕಚೇರಿಗೆ ಆಗಮಿಸಿದ್ದು ವಿಶೇಷವಾಗಿತ್ತು.

‘ನಮ್ಮ ಸಂಸ್ಥೆಯೇ ಬಸ್ ದಿನ ಆಚರಿಸುವುದರಿಂದ ನಾವೂ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದೇವೆ. ಇದರಿಂದ ಪ್ರಯಾಣಿಕರಿಗೆ ಉತ್ತಮ ಸಂದೇಶ ತಲುಪಿಸಿದಂತಾಗುತ್ತದೆ’ ಎಂದು ಬಿಎಂಟಿಸಿ ಸಿಬ್ಬಂದಿ ಮುರಳಿ ತಿಳಿಸಿದರು.

ದಿನಾಚರಣೆ ಯಶಸ್ವಿ 
‘ಬಸ್ ದಿನಾಚರಣೆ ಯಶಸ್ವಿಯಾಗಿದ್ದು ಬೇರೆ ಬೇರೆ ರಾಜ್ಯಗಳು ಕಾರ್ಯಕ್ರಮವನ್ನು ಮಾದರಿಯಾಗಿ ಪರಿಗಣಿಸಿರುವುದು ಸಂತಸದ ವಿಚಾರವಾಗಿದೆ’ ಎಂದು ಸಾರಿಗೆ ಸಚಿವ ಆರ್. ಅಶೋಕ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಬಸ್ ದಿನಾಚರಣೆಯಿಂದಾಗಿ ಅಪಾಘಾತ ಸಂಖ್ಯೆ ಗಣನೀಯ ಇಳಿಮುಖವಾಗುತ್ತದೆ. ಸಂಚಾರ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT