ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾ... ಬ್ಯಾಂಕ್ ನೌಕರಿಗೆ

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಉದ್ಯಮ ಪ್ರಪಂಚ ಎನ್ನುವುದು ತರಗತಿಯ ಕಲಿಕೆಗಿಂತಲೂ ವಿಭಿನ್ನವಾಗಿದ್ದು, ಹಲವಾರು ವ್ಯತ್ಯಾಸಗಳಿವೆ. ಉದ್ಯಮ ರಂಗಕ್ಕೆ ನೀವು ಕಾಲಿಟ್ಟಾಗ ನಿಮಗೆ ನಿಮ್ಮದೇ ಆದ ಕಲ್ಪನೆಗಳಿರುತ್ತವೆ. ಆದರೆ ಜನರು ನೀವು ಊಹಿಸಿದ್ದಕ್ಕಿಂತಲೂ ಹೆಚ್ಚಿನದನ್ನು ಅಪೇಕ್ಷಿಸುವುದರಿಂದ ನಿಮಗೆ ಆಶಾಭಂಗ ಉಂಟಾಗಬಹುದು. ನೀವು ಕಲಿತದ್ದಕ್ಕಿಂತಲೂ ಜನರ ರೀತಿ ರಿವಾಜುಗಳು ಬೇರೆ ಆಗಿರುವುದೇ ಇದಕ್ಕೆ ಕಾರಣ. ಆದರೆ ಇದೆಲ್ಲವನ್ನೂ ನೀವಾಗಿಯೇ ಅನುಭವದಿಂದ ಕಲಿಯಬೇಕೇ ಹೊರತು ಮತ್ತೊಬ್ಬರನ್ನು ಅವಲಂಬಿಸಬಾರದು.

ಸಾಧಾರಣ ಪದವಿಯೊಂದನ್ನು ಪಡೆದಿರುವ ವ್ಯಕ್ತಿಗೂ ವೃತ್ತಿಪರ ಪದವಿಯನ್ನು ಪಡೆದಿರುವ ವ್ಯಕ್ತಿಗೂ ಅಂಥಾ ವ್ಯತ್ಯಾಸಗಳೇನೂ ಇರುವುದಿಲ್ಲ. ವೃತ್ತಿಪರ ಪದವೀಧರನಿಗಿಂತ ವಿಭಿನ್ನ ಮನಸ್ಥಿತಿಯನ್ನು ಸಾಮಾನ್ಯ ಪದವಿ ಪಡೆದ ವ್ಯಕ್ತಿ ಹೊಂದಿರುತ್ತಾನೆ. ಸಾಮಾನ್ಯ ಪದವೀಧರರಿಗಿಂತಲೂ ವೃತ್ತಿಪರರು ಹೆಚ್ಚಾಗಿ ಹೊಂದಿಕೊಳ್ಳಲ್ಲರು.

ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಬ್ಯಾಂಕಿಂಗ್ ಮಹತ್ವದ ಬೆಳವಣಿಗೆಯನ್ನು ಕಂಡಿದೆ. ಬ್ಯಾಂಕುಗಳು ಇಂದು ತಮ್ಮ ಚಟುವಟಿಕೆಗಳನ್ನು ವಿಭಿನ್ನಗೊಳಿಸಿದ್ದು, ವಿನೂತನ ಸೇವೆಗಳನ್ನು ನೀಡುತ್ತಿವೆ. ಅವುಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳು, ಗ್ರಾಹಕ ಸಾಮಗ್ರಿ ಖರೀದಿ ನೆರವು, ಆಸ್ತಿ ನಿರ್ವಹಣೆ, ಜೀವ ವಿಮೆ, ಬಂಡವಾಳ ಬ್ಯಾಂಕಿಂಗ್, ಮ್ಯೂಚುವಲ್ ಫಂಡ್, ಪಿಂಚಣಿ ನಿಧಿ ನಿರ್ವಹಣೆ, ಷೇರು ಮಧ್ಯವರ್ತಿ ಸೇವೆಗಳು, ಮೇಲ್ವಿಚಾರಕ ಸೇವೆಗಳು, ಖಾಸಗಿ ಷೇರು ಇತ್ಯಾದಿ ಸೇವೆಗಳು ಒಳಗೊಂಡಿವೆ.

ಇದಲ್ಲದೆ, ಭಾರತದ ಬಹುತೇಕ ಬ್ಯಾಂಕುಗಳು ವಿಶ್ವ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವಿದೇಶಗಳಲ್ಲಿ ತಾವೇ ನೇರವಾಗಿ ಅಥವಾ ಸಹಾಯಕ ಸಂಸ್ಥೆಗಳ ಮೂಲಕ ಕಚೇರಿಗಳನ್ನು ತೆರೆದಿವೆ. ಆದರೆ, ಭಾರತದ ಜನಸಂಖ್ಯೆಯ ಪ್ರಧಾನ ಭಾಗವಾದ ಗ್ರಾಮೀಣ ಪ್ರದೇಶಗಳ ಜನ ಸಮೂಹ ಅಧಿಕೃತ ಸಾಲ ಮಾರುಕಟ್ಟೆಯಿಂದ ಹೊರಗೇ ಉಳಿದಿದೆ. ಬ್ಯಾಂಕಿಂಗ್ ಸೇವೆಗಳ ವ್ಯಾಪ್ತಿ ಭಾರತದಲ್ಲಿ ಕೇವಲ ಶೇ 10. ಹೀಗಾಗಿ ಶೇ 90ರಷ್ಟು ಜನ ಬ್ಯಾಂಕಿಂಗ್ ಸೌಲಭ್ಯಗಳನ್ನೇ ಉಪಯೋಗಿಸುತ್ತಿಲ್ಲ.

ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಜನರಲ್ಲಿ ಖರ್ಚು ಮಾಡಲು ಹಣವಿದೆ ಹಾಗೂ ಕೊಳ್ಳುವ ಶಕ್ತಿ ಇದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗೆ ಸಾಕಷ್ಟು ಅವಕಾಶಗಳಿವೆ. ಈ ಕಾರಣಕ್ಕಾಗೇ ಐಸಿಐಸಿಐ, ಎಚ್‌ಡಿಎಫ್‌ಸಿಯಂಥ ಅಂತಾರಾಷ್ಟ್ರೀಯ ಬ್ಯಾಂಕುಗಳು ಸಹ ತಮ್ಮ ಶಾಖೆಗಳನ್ನು ಈ ಪ್ರದೇಶಗಳಲ್ಲಿ ತೆರೆಯುತ್ತಿವೆ.

ಕೋರ್ ಬ್ಯಾಂಕಿಂಗ್ ಸೌಲಭ್ಯದಿಂದಾಗಿ ಭಾರತದಲ್ಲಿ ಬ್ಯಾಂಕಿಂಗ್ ಸೇವೆಯು ಹೆಚ್ಚಿನ ಮೆರುಗು ಪಡೆದುಕೊಂಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆಯೇ ಮುಖ್ಯವಾಗಿ, ಪ್ರತ್ಯೇಕವಾಗಿ ಗುರುತಿಸಲ್ಪಡುತ್ತದೆ. ಬ್ಯಾಂಕ್‌ಗಳಿಗೆ ಹೋಗಿ ಅಲ್ಲಿ ಗಂಟೆಗಟ್ಟಲೆ ಕಾಯುವುದಕ್ಕೆ ಬದಲಾಗಿ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳನ್ನು ನೀಡುವ ಬ್ಯಾಂಕುಗಳತ್ತ ಜನ ಮುಖ ಮಾಡುತ್ತಿದ್ದಾರೆ. ಭೌತಿಕವಾಗಿ ಮುಖಾಮುಖಿ ಸೇವೆ ಪಡೆಯುವ ಬದಲಿಗೆ ವಾಸ್ತವಕ್ಕೆ ಹತ್ತಿರವಾದ ವಾತಾವರಣವು ನಿರ್ಮಾಣವಾಗಿದೆ.

ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಸರ್ಕಾರಿ ಸಂಸ್ಥೆಗಳು ನಡೆಸುತ್ತವೆ. ಸಾಲ ನೀಡಿಕಾ ಖಾಸಗಿ ಸಂಸ್ಥೆಗಳು ಆರ್‌ಬಿಐ ಅನುಮೋದನೆಯೊಂದಿಗೆ  ಖಾಸಗಿ ಕ್ಷೇತ್ರದ ಬ್ಯಾಂಕುಗಳನ್ನು ನಡೆಸುತ್ತವೆ. ಸಾರ್ವಜನಿಕ ಬ್ಯಾಂಕುಗಳಿಗಿಂತಲೂ ಈ ಬ್ಯಾಂಕುಗಳಲ್ಲಿ ಬಡ್ಡಿ ಸ್ವಲ್ಪ ಹೆಚ್ಚು. ಉದ್ಯೋಗದ ಮಾತು ಬಂದಾಗ, ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಖಾಸಗಿ ಬ್ಯಾಂಕುಗಳಲ್ಲಿ ಹೆಚ್ಚಿನ ಬೆಳವಣಿಗೆ ಉಂಟಾಗಿದೆ.

ಸಂಸ್ಥೆಯೊಂದರಲ್ಲಿ ಹಣಕಾಸು ನಿರ್ವಾಹಕನ ಪಾತ್ರ ಅತ್ಯಂತ ಮಹತ್ವಪೂರ್ಣ. ಹಣಕಾಸು ನಿರ್ವಹಣಕಾರನ ಮುಖ್ಯ ಹೊಣೆಗಾರಿಕೆ ಹಣವನ್ನು ಮೀಸಲಿಡುವುದು ಹಾಗೂ ನಿರ್ವಹಿಸುವುದು. ಜನ ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ, ರಕ್ತವಿಲ್ಲದೆ ಶರೀರ ಹೇಗೆ ಬದುಕಲು ಸಾಧ್ಯವಿಲ್ಲವೋ ಹಾಗೆ. ಹಣಕಾಸು ನಿರ್ವಹಣಕಾರ ಲೆಕ್ಕಪತ್ರಗಳನ್ನು ಕಾಯ್ದುಕೊಳ್ಳುವ ಹೊಣೆಗಾರಿಕೆಯೊಂದಿಗೆ ವಿಭಾಗಗಳು, ಅಪಾಯಗಳು, ನಗದು ಹಾಗೂ ಸಂಪನ್ಮೂಲವನ್ನೂ ನಿರ್ವಹಿಸುತ್ತಾನೆ.

ಆರಂಭಿಕ ಉದ್ಯೋಗ

ಬ್ಯಾಂಕಿಂಗ್‌ನಲ್ಲಿ ಇರುವ ಆರಂಭಿಕ ಹಂತದ ಉದ್ಯೋಗಗಳೆಂದರೆ ಕಾರ್ಯ ಚಟುವಟಿಕೆಗಳನ್ನು ನಿಭಾಯಿಸುವುದು ಹಾಗೂ ವ್ಯಾಪಾರ ಚಟುವಟಿಕೆಗಳು. ಕಾರ್ಯಚಟುವಟಿಕೆಗಳ ವಿಷಯಕ್ಕೆ ಬಂದಾಗ ನೀವು ಸದಾ ಸಿದ್ಧರಾಗಿದ್ದು, ಪ್ರಕ್ರಿಯೆಗಳನ್ನು ಅನುಸರಿಸಬೇಕು. ಏಕೆಂದರೆ, ಬ್ಯಾಂಕಿಂಗ್ ಕ್ಷೇತ್ರವು ಅತ್ಯಂತ ವ್ಯವಸ್ಥಿತವಾದ ಉದ್ಯಮ. ಇಲ್ಲಿ ನೀತಿಗಳು ಹಾಗೂ ವಿಧಾನಗಳನ್ನು ಗಮನದಲ್ಲಿ ಇಟ್ಟುಕೊಂಡೇ ಕರ್ತವ್ಯ ನಿರ್ವಹಿಸಬೇಕು.

ವ್ಯಾಪಾರ ವಿಭಾಗಕ್ಕೆ ಬಂದಾಗ, ವ್ಯಾಪಾರ ನಡೆಸುವ ವ್ಯಕ್ತಿಯು ಪ್ರಸನ್ನಶೀಲನಾಗಿದ್ದು, ಗ್ರಾಹಕರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಅರಿತಿರಬೇಕು. ಆತ ಬ್ಯಾಂಕ್‌ನ ಪ್ರತಿಬಿಂಬದಂತೆಯೇ ಆಗಿರುವುದರಿಂದ, ಸೇವೆಗಳ ಬಗ್ಗೆ ಎಲ್ಲ ಮಾಹಿತಿ ಹೊಂದಿರಬೇಕು.
ಪ್ರತಿಯೊಂದು ಬ್ಯಾಂಕೂ ಗ್ರಾಹಕರ ಜೊತೆ ಆತ್ಮೀಯ ಸಂಬಂಧವನ್ನು ಹೊಂದುವುದು ಅವಶ್ಯಕ. ಹೀಗಾಗಿ ಆರಂಭಿಕ ಹಂತದ ಸಿಬ್ಬಂದಿ ಮುಖ್ಯವಾಗುತ್ತಾರೆ.

ಅವಶ್ಯ ಕೌಶಲಗಳು

ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಸದಾ ಅತ್ಯಂತ ಅಪೇಕ್ಷಣೀಯ ಉದ್ಯೋಗ ಕ್ಷೇತ್ರವೆನಿಸಿದೆ. ಈ ಕ್ಷೇತ್ರದಲ್ಲಿ ನೌಕರಿ ಬಯಸುವವರು ಅಂಕಿಗಳನ್ನು ಲೀಲಾಜಾಲವಾಗಿ ಬಳಸುವುದನ್ನು ಅರಿತಿರಬೇಕು. ಏಕೆಂದರೆ ಇಲ್ಲಿ ಎಲ್ಲವೂ ಅಂಕಿಗಳದ್ದೇ ಸಾಮ್ರೋಜ್ಯ. ಅದು ಗುರಿ ಸಾಧನೆ ಇರಲಿ, ಆದಾಯವಿರಲಿ, ಎಲ್ಲವೂ ಅಂಕಿಗಳಲ್ಲೆೀ ವ್ಯಕ್ತವಾಗುತ್ತದೆ. ಹಾಗಾಗಿ ನೀವು ಸುಲಭವಾಗಿ ಅಂಕಿಗಳನ್ನು ಬಳಸಲು ಶಕ್ತರಾಗಬೇಕಲ್ಲದೆ ಅತ್ಯಂತ ಸ್ನೇಹಶೀಲರಾಗಿರಬೇಕು.

ಮೇಲಿಂದ ಬಂದ ಸೂಚನೆಗಳನ್ನು ಬ್ಯಾಂಕ್ ಸಿಬ್ಬಂದಿ ಕಟ್ಟುನಿಟ್ಟಾಗಿ ಅನುಸರಿಸಬೇಕು. ಕಾರ್ಯನಿಷ್ಠೆಯನ್ನು ಹೊಂದಿರಬೇಕು. ಹಣಕಾಸಿನ ವ್ಯವಹಾರದಲ್ಲಿ ನಿಷ್ಠೆಗೆ ಅತ್ಯಂತ ಪ್ರಮುಖ ಸ್ಥಾನ. ಹೊಸ ಗ್ರಾಹಕರನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿರಬೇಕು. ಹಣಕಾಸಿನ ವಹಿವಾಟಿನಲ್ಲಿ ಪ್ರತಿಯೊಬ್ಬ ಗ್ರಾಹಕರ ಜೊತೆಗೂ ಪ್ರತ್ಯೇಕವಾಗಿ ವ್ಯವಹರಿಸುವ ಸಾಮರ್ಥ್ಯ ಇರಬೇಕು. ನಿಮ್ಮ ಮುಂದೆ ಹಲವು ಗ್ರಾಹಕರಿದ್ದು, ಅವರಿಗೆ ಅಗತ್ಯವಾದ ಸೇವೆಗಳಾದ ಉಳಿತಾಯ ಖಾತೆ, ಚಾಲ್ತಿ ಖಾತೆ, ಮ್ಯೂಚುವಲ್ ಫಂಡ್, ವಿಮೆ ಇತ್ಯಾದಿಗಳನ್ನು ನೀಡಬೇಕಾಗುತ್ತದೆ. ಇವೆಲ್ಲವುಗಳ ಸಂಪೂರ್ಣ ಜ್ಞಾನ ನಿಮಗಿರಬೇಕು.

ಆದರೆ, ಹೊಸಬನಿಗೆ ಈ ಎಲ್ಲವೂ ತಿಳಿದಿರುವುದು ಸಾಧ್ಯವಿಲ್ಲ. ಇದಕ್ಕಾಗಿ ಆತ ಕೆಲಸ ಕಾರ್ಯಗಳ ಹೊಸ ಅಂಶಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಪ್ರದರ್ಶಿಸಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು.

ಬೇರೆ ವೃತ್ತಿ ಕ್ಷೇತ್ರಗಳಲ್ಲಿ ವೃತ್ತಿಗಳನ್ನು ಕೈಗೊಳ್ಳಲು ನಿರ್ದಿಷ್ಟ ವಿಷಯದ ಕಲಿಕೆ ಅವಶ್ಯಕ. ಆದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯಾವುದೇ ವಿಷಯದಲ್ಲಿ ಕಲಿತವರೂ ನೌಕರಿ ಮಾಡಬಹುದು. ಇಲ್ಲಿ ಎಲ್ಲರಿಗೂ ಅವಕಾಶವಿದೆ. ಆದರೆ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಅಂಶವೆಂದರೆ, ಅಂಕಿಗಳೊಡನೆ ಲೀಲಾಜಾಲವಾಗಿ ವ್ಯವಹರಿಸುವುದು.

ಸಂದರ್ಶನಕ್ಕೆ ಸಿದ್ಧತೆ

ನೇಮಕಾತಿ ಸಂದರ್ಶನವು ಉದ್ಯೋಗದಾತನಿಗೆ ನೀವು ಯಾವ ರೀತಿಯ ಉದ್ಯೋಗಿ ಎಂಬುದನ್ನು ತಿಳಿಯುವ ಅವಕಾಶ ಕಲ್ಪಿಸುತ್ತದೆ. ಈ ಕಾರಣಕ್ಕಾಗಿಯೇ ಉದ್ಯೋಗ ಸಂದರ್ಶನಕ್ಕೆ ಹಾಜರಾಗಲು ಚೆನ್ನಾಗಿ ಸಿದ್ಧತೆ ಮಾಡಬೇಕಾಗುತ್ತದೆ. ಸಿದ್ಧಗೊಳ್ಳುವುದು ಎಂದರೆ, ಆ ಉದ್ಯಮ ಕ್ಷೇತ್ರದ ಬಗ್ಗೆ, ಉದ್ಯೋಗ ಕೊಡುವವರ ಬಗ್ಗೆ ಹಾಗೂ ಸ್ವತಃ ನಿಮ್ಮ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರುವುದು.

ಜ್ಞಾನವು ನೀವು ಹೊಂದಿರುವ ಪ್ರಬಲವಾದ ಅಸ್ತ್ರ. ಇದನ್ನು ನಿಮ್ಮ ರಕ್ಷಣೆಗೆ  ಬಳಸಬೇಕು. ನಿಷ್ಠೆ, ಭರವಸೆ ಇತ್ಯಾದಿ ಗುಣಗಳನ್ನು ಉದ್ಯೋಗದಾತನು ನಿಮ್ಮಿಂದ ಅಪೇಕ್ಷಿಸುತ್ತಾನೆ. ನಿಮಗೆ ತರಬೇತಿ ನೀಡುವ ಸಲುವಾಗಿ ಸಂಸ್ಥೆಯು ಸಾಕಷ್ಟು ವ್ಯಯಿಸುವುದರಿಂದ, ನಿಮ್ಮ ಸಾಮರ್ಥ್ಯ ನಿರೀಕ್ಷಿತ ಮಟ್ಟದಲ್ಲಿ ಇರಬೇಕೆಂದು ಅದು ಅಪೇಕ್ಷಿಸುತ್ತದೆ. ಹಾಗಾಗಿ ಯಾವುದೇ ವೃತ್ತಿಯನ್ನು ಕೈಗೊಳ್ಳಲು ನಿರ್ಧರಿಸುವ ಮುನ್ನ ಶಿಕ್ಷಣ ಕ್ಷೇತ್ರದ ವಿಭಿನ್ನ ಜ್ಞಾನ ಹಾಗೂ ಕೌಶಲ್ಯಗಳ ಬಗ್ಗೆ ಸ್ವವಿಮರ್ಶೆ ಮಾಡಿಕೊಳ್ಳುವುದು ಉಚಿತ. ನಿಮ್ಮಲ್ಲಿರುವ ಸಾಮರ್ಥ್ಯ, ಕೌಶಲ್ಯ ಹಾಗೂ ನೀವು ಕೈಗೊಳ್ಳಬಯಸುವ ವೃತ್ತಿಗಳೇನು ಎಂಬುದನ್ನು ನೀವು ಅರಿತಿರಬೇಕು. ಅದಕ್ಕೆ ತಕ್ಕಂತೆ ನಿಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಬೇಕು. ಇದರಿಂದಾಗಿ ನೀವು ಯಾವುದರಲ್ಲಿ ಅತ್ಯಂತ ಸಮರ್ಥರು ಹಾಗೂ ನೀವು ಎಲ್ಲಿ ಸುಧಾರಿಸಬೇಕು ಎಂಬುದು ಸ್ಪಷ್ಟವಾಗುತ್ತದೆ.

ಪದವೀಧರರಿಗೆ ಹಾಗೂ ಸ್ನಾತಕೋತ್ತರ ಪದವೀಧರರಿಗೆ ವಿಮೆ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ 1 ಅಥವಾ 2 ವರ್ಷಗಳ ವಿಶೇಷ ಶಿಕ್ಷಣಗಳನ್ನು ನೀಡುವ ಹಲವಾರು ಸಂಸ್ಥೆಗಳಿವೆ. ಅಲ್ಲಿ ನಿಮಗೆ ಬ್ಯಾಂಕಿಂಗ್ ಕುರಿತಂತೆ ಮೂಲ ಮತ್ತು ಹೆಚ್ಚಿನ ವಿಷಯಗಳನ್ನು ಕಲಿಸಲಾಗುತ್ತದೆ. ಬ್ಯಾಂಕಿಂಗ್ ಕುರಿತ ಮೂಲ ಜ್ಞಾನವನ್ನು ಬೋಧಿಸುವ ಹಲವಾರು ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯ.

ಇತ್ತೀಚಿನ ಬೆಳವಣಿಗೆಗಳಿಂದಾಗಿ ಬ್ಯಾಂಕಿಂಗ್ ಅತ್ಯಂತ ಲಾಭದಾಯಕ ಕ್ಷೇತ್ರವಾಗಿ ಪರಿಣಮಿಸಿದೆ. ಇದರಲ್ಲೆೀ ಉದ್ಯಮ ಬ್ಯಾಂಕಿಂಗ್, ಹೋಲ್‌ಸೇಲ್ ಬ್ಯಾಂಕಿಂಗ್, ರೀಟೇಲ್ ಬ್ಯಾಂಕಿಂಗ್ ಇತ್ಯಾದಿ ವಿಭಾಗಗಳಿವೆ. ನೀವು ಬ್ಯಾಂಕಿಂಗ್ ವೃತ್ತಿ ಸೇರುವ ನಿರ್ಧಾರ ಕೈಗೊಳ್ಳುವ ಮುನ್ನ ಇಡೀ ಬ್ಯಾಂಕಿಂಗ್ ಉದ್ಯಮ, ಅದರ ವಿಶೇಷತೆಗಳು, ಕೆಲಸದ ಹೊಣೆಗಾರಿಕೆ ಹಾಗೂ ಅದರ ವ್ಯಾಪ್ತಿಯ ಬಗ್ಗೆ ಪರಿಪೂರ್ಣ ಜ್ಞಾನವನ್ನು ಹೊಂದಿರಬೇಕು.

(ಲೇಖಕರು ಐಸಿಐಸಿಐ ರಿಟೇಲ್ ಬ್ಯಾಂಕಿನ ಶಾಖಾ ಮುಖ್ಯಸ್ಥರು.
ಐಐಜೆಟಿ ಆಯೋಜಿಸಿದ್ದ ವೃತ್ತಿ ಕುರಿತ  ಇಂಡಿಯಾ ಮೆಂಟರ್ಸ್ ಇಂಡಿಯಾ ಸರಣಿ ಸಮ್ಮೇಳನದಲ್ಲಿ  ಮಾಡಿದ ಭಾಷಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT