ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ ಮುಖ್ಯ ರಸ್ತೆಯಲ್ಲಿ ದೂಳು, ಮಣ್ಣು

Last Updated 21 ಜನವರಿ 2011, 9:15 IST
ಅಕ್ಷರ ಗಾತ್ರ

ಬಾಗೇಪಲ್ಲಿ: ರಸ್ತೆಯಲ್ಲಿ ಮೊಣಕಾಲುದ್ದ ಗುಂಡಿಗಳು, ಜೊತೆಗೆ ಸಿಮೆಂಟು ಮಿಶ್ರಿತ ಮಣ್ಣು. ವಾಹನಗಳು ವೇಗವಾಗಿ ಸಾಗಿದರೆ, ಆವರಣ ಪೂರ್ತಿ ದೂಳು. ತೊಟ್ಟ ಉಡುಪುಗಳೆಲ್ಲ ಕೆಲವೇ ನಿಮಿಷಗಳಲ್ಲಿ ಗಲೀಜು. ಇದು ಕುಗ್ರಾಮಕ್ಕೆ ಹೋಗುವ ರಸ್ತೆ ಚಿತ್ರಣವಲ್ಲ. ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿನ ಅವ್ಯವಸ್ಥೆ. ದೂಳು-ಮಣ್ಣಿನ ಸಮಸ್ಯೆಯಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಪಟ್ಟಣದ ನ್ಯಾಷನಲ್ ಕಾಲೇಜಿನಿಂದ ಸಿವಿಲ್ ನ್ಯಾಯಾಲಯದ ಮುಂಭಾಗದವರೆಗೆ ಮತ್ತು ಗೂಳೂರು ರಸ್ತೆಯಲ್ಲಿನ ರೆಡ್ಡಿಕೆರೆಯವರಗೆ ರಸ್ತೆಯಲ್ಲಿ ಮೊಣಕಾಲುದ್ದದಷ್ಟು ಗುಂಡಿಗಳು ನಿರ್ಮಾಣವಾಗಿದೆ. ಕನಿಷ್ಠ ದ್ವಿಚಕ್ರ ವಾಹನ ಸಂಚರಿಸಲು ಸಾಧ್ಯವಾಗದ ರೀತಿಯಲ್ಲಿ ನಿರ್ಮಾಣವಾಗಿದೆ. ಮುಖ್ಯ ರಸ್ತೆಯಲ್ಲಿನ ಕಾಮಗಾರಿಗಳು ಅತ್ಯಂತ ಕಳಪೆ ಕಾಮಗಾರಿಯಾಗಿದ್ದು, ಇದೀಗ ಗುಂಡಿಗಳು ನಿರ್ಮಾಣವಾಗಿದೆ.

ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಹಾಗೂ ದೂಳು ತುಂಬಿಕೊಂಡು ಸಾರ್ವಜನಿಕ ಹಾಗೂ ಮುಖ್ಯ ರಸ್ತೆಯಲ್ಲಿನ ವ್ಯಾಪಾರಸ್ಥರು ಮೂಗಿಗೆ ಕರವಸ್ತ್ರವನ್ನಿಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸಬೇಕಾದ ಅನಿವಾರ್ಯ ಪರಸ್ಥಿತಿ ಇದೆ.15 ವರ್ಷಗಳಿಂದ ಪಟ್ಟಣದ ಮುಖ್ಯ ರಸ್ತೆಯ ವಿಸ್ತರಣೆ ಹಿನ್ನೆಲೆಯಲ್ಲಿ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು.ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆ ಬಾಗೇಪಲ್ಲಿ-ಬಂಗಾರಪೇಟೆ ರಾಜ್ಯ ಹೆದ್ದಾರಿಯಾಗಿರುವ ಕಾರಣ ರಸ್ತೆ ವಿಸ್ತರಣೆಗೊಳಿಸುವಂತೆ ನ್ಯಾಯಾಲಯ ತಾಲ್ಲೂಕು ಲೋಕೋಪಯೋಗಿ ಇಲಾಖೆಗೆ ಆದೇಶಿಸಿತ್ತು.

ಇದರ ಹಿನ್ನೆಲೆಯಲ್ಲಿ ಮುಖ್ಯರಸ್ತೆಯ ಅಂಗಡಿಗಳನ್ನು ಹಂತಹಂತವಾಗಿ ತೆರವುಗೊಳಿಸಲಾಯಿತು. ತದನಂತರದಲ್ಲಿ ಮುಖ್ಯರಸ್ತೆಯ ಕೆಲ ಅಂಗಡಿ ಮಾಲೀಕರು ರಸ್ತೆಗೆ ಹೊಂದಿಕೊಂಡಂತೆ ಒಂದು-ಎರಡು ಅಡಿ ಮುಂದೆ ಕಟ್ಟೆ ಕಟ್ಟಿಕೊಂಡರು. ಮತ್ತೊಮ್ಮೆ ಕಾರ್ಯಾಚರಣೆ ನಡೆಸಿ, ಕಟ್ಟೆಗಳನ್ನು ತೆರವುಗೊಳಿಸಲಾಯಿತು.

ಆದರೆ ತೆರವು ಕಾರ್ಯಾಚರಣೆ ಸಮರ್ಪಕವಾಗಿ ಆಗದ ಕಾರಣ ಮಣ್ಣು ಹಾಗೂ ಕಲ್ಲುಗಳನ್ನು ಪಾದಚಾರಿ ಮಾರ್ಗದ ಮೇಲೆಯೇ ಹಾಕಲಾಗಿದ್ದು, ಸಾರ್ವಜನಿಕರು ರಸ್ತೆಯ ಮಧ್ಯಭಾಗದಲ್ಲಿ ದೂಳಿನಲ್ಲೇ ನಡೆದಾಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಪುಟ್‌ಪಾತ್ ಇಲ್ಲದೆ ಸಾರ್ವಜನಿಕರು ಮಧ್ಯಭಾಗದಲ್ಲಿ ಸಂಚರಿಸಬೇಕಾಗಿದೆ. ಇಕ್ಕೆಲಗಳಲ್ಲಿನ ಪುಟ್‌ಪಾತ್ ತರಕಾರಿ ಹಾಗೂ ನೂಕುವ ಬಂಡಿಗಳ ತ್ಯಾಜ್ಯಗಳ ದುರ್ವಾಸನೆ ಒಂದಡೆಯಾದರೆ, ಮತ್ತೊಂದೆಡೆ ಸೀಮೆಎಣ್ಣೆ ಹಾಕಿಕೊಂಡು ಸಾಗುವ ವಾಹನಗಳು ಬಿಡುವ ಹೊಗೆಯಿಂದ ಸಾರ್ವಜನಿಕರ ಆರೋಗ್ಯ ಹದಗೆಡುತ್ತಿದೆ. ಪರಿಸರ ಮಾಲಿನ್ಯದಿಂದ ವೃದ್ಧರು, ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ನಡೆದಾಡಲು ಸಂಕಷ್ಟ ಪಡುತ್ತಿದ್ದಾರೆ.

ಪಟ್ಟಣದ ಮುಖ್ಯರಸ್ತೆ ವಿಸ್ತರಣೆಗೆ ಚಾಲನೆ ನೀಡಬೇಕಾದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಮುಖ್ಯ ರಸ್ತೆಯಲ್ಲಿನ ವಿದ್ಯುತ್ ಕಂಬಗಳನ್ನು ತೆಗೆದು ಪಕ್ಕಕ್ಕೆ ಹಾಕಿಸಲು ಸುಮಾರು 40 ಲಕ್ಷ ಹಣ ನೀಡುವಂತೆ ಬೆಸ್ಕಾಂ ಇಲಾಖೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದೆ. ಸರ್ಕಾರದಿಂದ ಹಣ ತರಿಸಿ, ವಿದ್ಯುತ್ ಕಂಬ ತೆರವುಗೊಳಿಸುವುದರಲ್ಲಿ ಲೋಕೋಪಯೋಗಿ ಇಲಾಖೆ ನಿರಾಸಕ್ತಿ ತೋರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

‘ರಸ್ತೆ ವಿಸ್ತರಣೆಗಾಗಿ ಶಾಸಕರು ಹಾಗೂ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ರಸ್ತೆ ವಿಸ್ತರಣೆಗೊಳಿಸುವಂತೆ ಮತ್ತು ದೂಳು ಮುಕ್ತ ನಗರವನ್ನು ಮಾಡುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಮುಖ್ಯರಸ್ತೆ ಹಿತ ರಕ್ಷಣಾ ಸಮಿತಿ ಸಂಚಾಲಕ ಗೋವರ್ಧನಚಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT