ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಲ್ಲಿ ಮೂಡಿತು ಚಂದದ ಚಿತ್ತಾರ!

Last Updated 17 ಜನವರಿ 2012, 8:50 IST
ಅಕ್ಷರ ಗಾತ್ರ

ವಿಜಾಪುರ: ಹುಣ್ಣಿಮೆ ಉರುಳಿ ವಾರದ ನಂತರವೂ ಗುಮ್ಮಟ ನಗರಿಯ ಬಾನಲ್ಲಿ ಮತ್ತೊಂದು ನಕ್ಷತ್ರಲೋಕ ತೆರೆದುಕೊಂಡಿತ್ತು.

ಪೈಪೋಟಿಗೆ ಬಿದ್ದವರಂತೆ ಪುಟಿಯುತ್ತಿದ್ದ ಪಟಾಕಿಗಳು ಬಾನಲ್ಲಿ ಬಣ್ಣ-ಬಣ್ಣದ ಚಿತ್ತಾರ ಬಿಡಿಸುತ್ತಿದ್ದವು; ಬಾನಿಗೇ ತೋರಣ ಕಟ್ಟುತ್ತಿದ್ದವು. ಅಲ್ಲಿ  ಮೈದೆಳೆದಿದ್ದ ರಂಗು-ರಂಗಾದ ರಂಗವಲ್ಲಿ ಕಂಡು ಪ್ರೇಕ್ಷಕರಿಂದ ಹೊರಹೊಮ್ಮುತ್ತಿದ್ದ ಹರ್ಷೋದ್ಘಾರ ದೂರದ ಗೋಲಗುಮ್ಮಟಕ್ಕೂ ಅಪ್ಪಳಿಸಿ ಮಾರ್ದನಿಗೊಳ್ಳುತ್ತಿತ್ತು!

ಸಿದ್ಧೇಶ್ವರ ಸಂಕ್ರಮಣ ಜಾತ್ರೆಯ ಅಂಗವಾಗಿ ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಮದ್ದು ಸುಡುವ ಕಾರ್ಯಕ್ರಮದ ಸಡಗರ-ಸಂಭ್ರಮವಿದು.

`ಮದ್ದಿನ ಕಾಶಿ~ ಎಂದೇ ಕರೆಯಲ್ಪಡುವ ತಮಿಳುನಾಡಿನ ಶಿವಕಾಶಿಯಿಂದ ಇದೇ ಮೊದಲ ಬಾರಿಗೆ ಬಂದಿದ್ದ ಪರಿಣಿತರು, ತಮ್ಮ `ಬತ್ತಳಿಕೆ~ಯಿಂದ ಒಂದೊಂದೇ `ಬಾನ~ ಬಿಡುತ್ತಿದ್ದಂತೆ ಬಾನಂಗಳದ ಸೊಬಗು ಹೆಚ್ಚುತ್ತಲೇ ಸಾಗಿತು. ಚಂದಿರನ ಅಂದವನ್ನೂ ಕ್ಷಣಕಾಲ ಮರೆಮಾಚಿಸಿತು.

ಇದು ಹವಾಮಾನ ವೈಪರಿತ್ಯದ ಕಾಲ. ಬರದ ನಾಡಲ್ಲೆಗ ಕೊರೆಯುವ ಚಳಿ. (ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್ ಇತ್ತು) `ಮೈ-ಚಳಿ ಬಿಟ್ಟು~ ಎಂಬ ಗಾದೆಯಂತೆ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಮಹಿಳೆಯರು-ಮಕ್ಕಳಾದಿಯಾಗಿ ಎಲ್ಲರೂ ಸಂಭ್ರಮಿಸಿದರು. ತಮ್ಮತ್ತ ತೂರಿ ಬರುತ್ತಿದ್ದ ಪಟಾಕಿಯ ಕಿಡಿಗಳನ್ನು ಮುಂಗಾರು ಮಳೆಯ ಹನಿಗಳನ್ನು ಹಿಡಿದಂತೆ ಹಿಡಿಯಲು ಯತ್ನಿಸುತ್ತಿದ್ದರು.

ಶಿವಕಾಶಿಯ ಕಾಲೇಶ್ವರಿ ಫೈರ್ ವರ್ಕ್ಸ್ ಮತ್ತು ಚಕ್ರವರ್ತಿ ಟ್ರೇಡರ್ಸ್‌ನವರು ಪ್ರಸ್ತುತ ಪಡಿಸಿದ ಜಾಲಿ ಜಿಂಗಲ್ಸ್, ಟೈಟಾನಿಯಾ-72, ಗ್ರಾಫಿಕ್ಸ್-180 ಮಾದರಿಗಳು ಜನರ ಮನಸೂರೆಗೊಂಡವು. ಪಟಾಕಿಯ ಕಿಡಿಗಳು ನಕ್ಷತ್ರಗಳಂತೆ ಮಿನುಗುತ್ತ ಆಗಸದತ್ತ ನೆಗೆಯುತ್ತಿದ್ದರೆ, ಇತ್ತ ಪ್ರೇಕ್ಷಕರಿಂದ ಚಪ್ಪಾಳೆಯ ಸುರಿಮಳೆ...

ಸ್ಥಳೀಯರೇ ಆಗಿರುವ ಸುರೇಶ ಕೇಶೆಟ್ಟಿ ತಂಡದವರು ಮದ್ದಿನಲ್ಲಿ ಸಿದ್ಧೇಶ್ವರ ಮಂದಿರದ ಪ್ರತಿರೂಪವನ್ನು ಬೆಳಗಿಸಿದರು. ಮದ್ದಿನಲ್ಲಿಯೇ ಜಲಪಾತದ ದರ್ಶನ ಮಾಡಿಸಿದರು. ತೆರೆದುಕೊಂಡ ಅಗಸಿ ಬಾಗಿಲು,  ತ್ರೀಶೂಲ್, ಓಂ ಫಲಕ, ಮ್ಯೋಜಿಕ್ ಮತ್ತು ವಂಡರಫುಲ್ ಟ್ರಿ, ವ್ಹಿಜಲಿಂಗ್ ಟ್ರಿ... ಮದ್ದಿನಲ್ಲಿ `ಮುಂಗಾರು ಮಳೆ~ಯನ್ನೂ ಸುರಿಸಿದರು.

ಎರಡು ಗಂಟೆಗೂ ಹೆಚ್ಚುಕಾಲ ನಡೆದ ಈ ಸಿಡಿಮದ್ದಿನ ಚಿತ್ತಾರವನ್ನು ನೆರೆದಿದ್ದ ಲಕ್ಷಾಂತರ ಜನರು ಕಣ್ಣಲ್ಲಿ ತುಂಬಿಕೊಂಡರು. ಮೈ-ಮನ ಹಗುರಮಾಡಿಕೊಂಡರು.

ಋಣ ತೀರಿಸುತ್ತೇನೆ
ಕಾರ್ಯಕ್ರಮ ಉದ್ಘಾಟಿಸಿದ ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲ, ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ ಕಾರಜೋಳ ಶುಭ ಕೋರಿದರು.

ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ, ತೋಟಗಾರಿಕೆ ವಿವಿಯ ರ‌್ಯಾಂಕ್ ವಿಜೇತ ವಿದ್ಯಾರ್ಥಿ ಸಚೀನ್ ಉಟಗಿ ಅವರನ್ನು ಸಿದ್ಧೇಶ್ವರ ಸಂಸ್ಥೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ (ಯತ್ನಾಳ) ದಂಪತಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಕರ ಬಿದರಿ, `ನೀವೆಲ್ಲ ನನ್ನ ಮೇಲಿಟ್ಟಿರುವ ಅಭಿಮಾನಕ್ಕೆ ಚಿರಋಣಿ. ನನ್ನ ಜೀವ ಇರುವವರೆಗೂ ಈ ನಾಡಿನ ಸೇವೆ ಮಾಡಿ ತಾಯ್ನಾಡಿನ ಋಣ ತೀರಿಸುತ್ತೇನೆ~ ಎಂದರು.

`ಶಂಕರ ಬಿದರಿ ಅವಳಿ ಜಿಲ್ಲೆಯ ಹೆಮ್ಮೆಯ ಸುಪುತ್ರ. ಅವರಿಂದ ಈ ನಾಡಿನ ಕೀರ್ತಿ ಮತ್ತುಷ್ಟು ಹೆಚ್ಚಿದೆ~ ಎಂದು ಬಸನಗೌಡ ಪಾಟೀಲ ಯತ್ನಾಳ ಶ್ಲಾಘಿಸಿದರು. ಶ್ರೀಮತಿ ಬಿದರಿ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಐಜಿಪಿ, ಎಸ್ಪಿ ಡಾ.ಡಿ.ಸಿ. ರಾಜಪ್ಪ, ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ ಮುಖ್ಯ ಅತಿಥಿಯಾಗಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT