ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನ್ ಕಿ ಮೂನ್ ಪುನರಾಯ್ಕೆ

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಐಎಎನ್‌ಎಸ್/ಪಿಟಿಐ): ಸತತ ಮುಂದಿನ ಐದು ವರ್ಷಗಳ ಅವಧಿಗೂ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿಯಾಗಿ ಬಾನ್ ಕಿ  ಮೂನ್ ಅವರನ್ನೇ ಮುಂದುವರಿಸುವ ಒಕ್ಕೊರಲಿನ ನಿರ್ಣಯಕ್ಕೆ ಭದ್ರತಾ ಮಂಡಳಿ ಶನಿವಾರ ಅನುಮೋದನೆ ನೀಡಿದೆ.

ಜೂನ್ ತಿಂಗಳಿಗೆ ಭದ್ರತಾ ಮಂಡಳಿಯ ಪರ್ಯಾಯ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಗ್ಯಾಬನ್‌ನ ವಿಶ್ವಸಂಸ್ಥೆ ರಾಯಭಾರಿ ನೊಯೆಲ್ ನೆಲ್ಸನ್ ಅವರು ವಿಶ್ವಸಂಸ್ಥೆಯ ಹಾಲಿ ಮಹಾಪ್ರಧಾನ ಕಾರ್ಯದರ್ಶಿ ಮೂನ್ ಅವರನ್ನೇ ಎರಡನೇ ಅವಧಿಗೂ ನೇಮಿಸಿರುವ ನಿರ್ಣಯವನ್ನು ಪ್ರಕಟಿಸಿದರು.

ಈ ಸಂಬಂಧದ ಶಿಫಾರಸನ್ನು ಪರಿಶೀಲಿಸಲು ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳು ರಹಸ್ಯ ಸಭೆ ನಡೆಸಿ, ಒಮ್ಮತದ ನಿರ್ಣಯ ಕೈಗೊಂಡ ನಂತರ ನೊಯೆಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಮೂನ್ ಅವರನ್ನು 2012ರ ಜನವರಿ 1ರಿಂದ 2016ರ ಡಿಸೆಂಬರ್ 31ರವರೆಗೆ ಮುಂದುವರಿಸುವ ಬಗ್ಗೆ ವಿಶ್ವಸಂಸ್ಥೆಯ ಮಹಾಸಭೆಗೆ ಭದ್ರತಾ ಮಂಡಳಿ ಶಿಫಾರಸು ಮಾಡಿರುವುದಾಗಿಯೂ ತಿಳಿಸಿದರು.

ವಿಶ್ವಸಂಸ್ಥೆಯ ನಿಯಮಾವಳಿ ಪ್ರಕಾರ, ಭದ್ರತಾ ಮಂಡಳಿಯ ಶಿಫಾರಸಿನ ಮೇರೆಗೆ ಮಹಾಸಭೆಯು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿಯನ್ನು ನೇಮಿಸಬೇಕಿದೆ. ಮುಂದಿನ ವಾರ ಪೂರ್ಣ 192 ಸದಸ್ಯರ ಮಹಾಸಭೆಯು ಔಪಚಾರಿಕ ಮತದಾನದ ಮೂಲಕ ಮೂನ್ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಲಿದೆ.

ದಕ್ಷಿಣ ಕೊರಿಯಾದ ಮಾಜಿ ವಿದೇಶಾಂಗ ಸಚಿವರಾದ 67 ವರ್ಷದ ಮೂನ್ ಅವರ ಈಗಿನ ವಿಶ್ವಸಂಸ್ಥೆಯ ಅಧಿಕಾರಾವಧಿ 2011ರ ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದೆ. ಅವರು ಕಳೆದ ವಾರವಷ್ಟೇ ಎರಡನೇ ಅವಧಿಗೂ ಪುನರಾಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದು, ಯಾರೂ ಪ್ರತಿಸ್ಪರ್ಧಿ ಇಲ್ಲದ ಕಾರಣ ಅವರನ್ನೇ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT