ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ತೊಲಿಗೆ ಪ್ರಶಸ್ತಿ; ಲಿಸಿಕಿಗೆ ನಿರಾಸೆ

ಟೆನಿಸ್: ಇಂದು ಪುರುಷರ ಸಿಂಗಲ್ಸ್ `ಮಹಾಸಮರ'
Last Updated 6 ಜುಲೈ 2013, 19:59 IST
ಅಕ್ಷರ ಗಾತ್ರ

ಲಂಡನ್ (ರಾಯಿಟರ್ಸ್/ಎಎಫ್‌ಪಿ): ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಶನಿವಾರ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಕಿರೀಟಕ್ಕೆ ಮುತ್ತಿಕ್ಕಿದ ಫ್ರಾನ್ಸ್‌ನ ಮರಿಯನ್ ಬಾರ್ತೊಲಿ ಅವರ ಖುಷಿಗೆ ಅಂತ್ಯವೇ ಇರಲಿಲ್ಲ. ಆರು ವರ್ಷಗಳ ಹಿಂದೆ ಇದೇ ಕೋರ್ಟ್‌ನಲ್ಲಿ ನಡೆದ ಫೈನಲ್‌ನಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ ಎದುರು ಸೋತ ನಿರಾಸೆಯ ಆ ಕ್ಷಣ ಮತ್ತೆ ಅವರ ಮನದಂಗಳದಲ್ಲಿ ಹಾದು ಹೋಯಿತು. ಆದರೆ ಈ ಬಾರಿ ಯಶಸ್ಸು ಕಂಡ ಬಾರ್ತೊಲಿ ಕಂಗಗಳಲ್ಲಿ ಇದ್ದದ್ದು ಸಾಧನೆಯ ಹೊಳಪು.

ವಿಶೇಷವೆಂದರೆ ಬಾರ್ತೊಲಿ ಫೈನಲ್ ಹೋರಾಟದಲ್ಲಿ ನಿರೀಕ್ಷಿಸಿದ್ದಕ್ಕಿಂತ ಸುಲಭವಾಗಿ ಗೆದ್ದರು. ಜರ್ಮನಿಯ ಸಬಿನ್ ಲಿಸಿಕಿ ಅವರನ್ನು ಸೋಲಿಸಲು ಕೇವಲ 81 ನಿಮಿಷ ತೆಗೆದುಕೊಂಡರು.  ಈ ಟೂರ್ನಿಯಲ್ಲಿ ಬಾರ್ತೊಲಿ ಒಂದೂ ಸೆಟ್ ಸೋಲದೆ ಚಾಂಪಿಯನ್ ಆಗಿದ್ದು ಮತ್ತೊಂದು ವಿಶೇಷ.

ನಾಲ್ಕನೇ ಸುತ್ತಿನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ ಅವರನ್ನು ಸೋಲಿಸ್ದ್ದಿದ ಲಿಸಿಕಿ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ ಅವರು ಫೈನಲ್‌ನಲ್ಲಿ ಸುಲಭವಾಗಿ ಶರಣಾದರು. ಈ ಮೂಲಕ 28 ವರ್ಷ ವಯಸ್ಸಿನ ಬಾರ್ತೊಲಿ ವಿಂಬಲ್ಡನ್ ಟ್ರೋಫಿ ಗೆದ್ದ ಅತಿ ಹಿರಿಯ ವಯಸ್ಸಿನ ಐದನೇ ಮಹಿಳೆ ಎನಿಸಿದರು.

ಬಾರ್ತೊಲಿ ಅವರ ಪಾಲಿಗೆ ಇದು 47ನೇ ಗ್ರ್ಯಾನ್‌ಸ್ಲಾಮ್ ಟೂರ್ನಿಯಾಗಿತ್ತು. ಈ ಹಿಂದೆ ನೋವಾತ್ನಾ 45 ಗ್ರ್ಯಾನ್‌ಸ್ಲಾಮ್ ಟೂರ್ನಿ ಆಡಿದ ಮೇಲೆ ಚೊಚ್ಚಲ ಪ್ರಶಸ್ತಿ ಜಯಿಸಿದ್ದರು. ಆ ದಾಖಲೆಯನ್ನು ಬಾರ್ತೊಲಿ ಅಳಿಸಿ ಹಾಕಿದರು. 2006ರಲ್ಲಿ ಅಮೆಲಿ ಮೌರೆಸ್ಮೊ ಚಾಂಪಿಯನ್ ಆದ ಬಳಿಕ ಈ ಸಾಧನೆ ಮಾಡಿದ ಫಾನ್ಸ್‌ನ ಎರಡನೇ ಮಹಿಳೆ ಕೂಡ. ಮೌರೆಸ್ಮೊ ಕೂಡ ಅಂಗಳದಲ್ಲಿದ್ದು ಈ ಸುಂದರ ಸಂದರ್ಭಕ್ಕೆ ಸಾಕ್ಷಿಯಾದರು. ಅವರು ಎರಡು ವಾರಗಳಿಂದ ತರಬೇತಿ ವೇಳೆ ಬಾರ್ತೊಲಿಗೆ ಮಾರ್ಗದರ್ಶನ ನೀಡಿದ್ದರು.

ಮೊದಲ ಸೆಟ್‌ನಲ್ಲಿ ಲಿಸಿಕಿ ಅವರ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿದ ಫ್ರಾನ್ಸ್‌ನ ಆಟಗಾರ್ತಿ 6-1ರಲ್ಲಿ ಜಯಭೇರಿ ಮೊಳಗಿಸಿದರು. ಎರಡನೇ ಸೆಟ್‌ನಲ್ಲಿ ಲಿಸಿಕಿ ತಿರುಗೇಟು ನೀಡಲು ಪ್ರಯತ್ನಿಸಿದರು. ಆದರೆ 6-4ರಲ್ಲಿ ಬಾರ್ತೊಲಿ ಗೆಲ್ಲುತ್ತಿದ್ದಂತೆ ನಿರಾಸೆಯಿಂದ ಬಿಕ್ಕಳಿಸಿದರು. ಬಳಿಕ `ಗೆಲುವಿನ ಪೂರ್ಣ ಶ್ರೇಯ ಬಾರ್ತೊಲಿಗೆ ಸಲ್ಲಬೇಕು' ಎಂದು ಲಿಸಿಕಿ ನುಡಿದರು.

ಇಂದು ಪುರುಷರ ಫೈನಲ್: ಭಾನುವಾರ ಪುರುಷರ ಸಿಂಗಲ್ಸ್ ಫೈನಲ್ ನಡೆಯಲಿದ್ದು, ಆತಿಥೇಯ ಆಟಗಾರ ಆ್ಯಂಡಿ ಮರ‌್ರೆ ಹಾಗೂ ಸರ್ಬಿಯಾದ ನೊವಾಕ್ ಜೊಕೊವಿಚ್ ಪೈಪೋಟಿ ನಡೆಸಲಿದ್ದಾರೆ. 

77 ವರ್ಷಗಳಿಂದ ಬ್ರಿಟನ್‌ನ ಯಾರೂ ವಿಂಬಲ್ಡನ್ ಸಿಂಗಲ್ಸ್ ಗೆದ್ದಿಲ್ಲ. ಹಾಗಾಗಿ ಮರ‌್ರೆ ಮುಂದೆ ಈ ಬಾರಿ ದೊಡ್ಡ ಸವಾಲು ಇದು. ಇತ್ತೀಚಿನ ದಿನಗಳಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಅವರು ಹೋದ ವರ್ಷ ಇದೇ ಅಂಗಳದಲ್ಲಿ ನಡೆದ ಒಲಿಂಪಿಕ್ಸ್‌ನ ಟೆನಿಸ್ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು.

2011ರ ಚಾಂಪಿಯನ್ ಜೊಕೊವಿಚ್ ಸದ್ಯದ ಮಟ್ಟಿಗೆ ಫೇವರಿಟ್ ಎನಿಸಿದ್ದಾರೆ. ಆದರೆ ಸ್ಥಳೀಯ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯುತ್ತಿರುವ ಮರ್ರೆ ಅಪಾಯಕಾರಿ ಆಟಗಾರ.

ವಿಶ್ವ ಎರಡನೇ ರ‍್ಯಾಂಕ್‌ನ ಆಟಗಾರ ಮರ್ರೆ ಶುಕ್ರವಾರ ನಡೆದ ಎರಡನೇ ಸೆಮಿಫೈನಲ್‌ನಲ್ಲಿ 6-7, 6-4, 6-4, 6-3ರಲ್ಲಿ ಪೋಲೆಂಡ್‌ನ ಜರ್ಜಿ ಜಾನೊವಿಜ್ ಅವರನ್ನು ಮಣಿಸಿ ಅಂತಿಮ ಘಟ್ಟ ಪ್ರವೇಶಿಸಿದ್ದಾರೆ. ಈ ಹೋರಾಟ ಕಠಿಣ ಪೈಪೋಟಿಗೆ ಸಾಕ್ಷಿಯಾಯಿತು. ಮೊದಲ ಸೆಟ್‌ನಲ್ಲಿ ಗೆಲುವು ಸಾಧಿಸಿದ 24ನೇ ಶ್ರೇಯಾಂಕದ ಆಟಗಾರ ಜಾನೊವಿಜ್ ಅಚ್ಚರಿ ಪ್ರದರ್ಶನದ ಸುಳಿವು ನೀಡಿದ್ದರು. ಆದರೆ ತಕ್ಷಣವೇ ಎಚ್ಚೆತ್ತುಕೊಂಡ ಮರ‌್ರೆ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT