ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್‌ಗಳಲ್ಲೇ ಬ್ರುಯರಿ ಘಟಕಕ್ಕೆ ಅನುಮತಿ

Last Updated 18 ಜನವರಿ 2011, 18:40 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಹಕರಿಗೆ ತಾಜಾ ಬಿಯರ್ ಒದಗಿಸುವ ನಿಟ್ಟಿನಲ್ಲಿ ಬಾರ್, ಕ್ಲಬ್, ಲಾಡ್ಜಿಂಗ್ ಮತ್ತು ಸ್ಟಾರ್ ಹೋಟೆಲ್‌ಗಳಲ್ಲಿ ಸಣ್ಣ ಪ್ರಮಾಣದ ಪಾನೀಯ ಘಟಕಗಳನ್ನು ತೆರೆಯುವುದಕ್ಕೆ ಪರವಾನಗಿ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಂಗಳವಾರ ಇಲ್ಲಿ ತಿಳಿಸಿದರು.

ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ‘ಪಾಶ್ಚಿಮಾತ್ಯ ದೇಶಗಳಲ್ಲಿ ಇರುವ ಹಾಗೆ ನಮ್ಮಲ್ಲಿಯೂ ದೊಡ್ಡ ಹೋಟೆಲ್, ಬಾರ್‌ಗಳಲ್ಲಿ ಹೊಸ ವರ್ಷದ ಕೊಡುಗೆಯಾಗಿ ಬ್ರುಯರಿ ಘಟಕಗಳನ್ನು ತೆರೆಯಲು ಅನುಮತಿ ನೀಡುವ ಸಂಬಂಧ ಸೂಕ್ತ ತಿದ್ದುಪಡಿ ತರಲಾಗಿದೆ’ ಎಂದರು.ತಿದ್ದುಪಡಿಯಿಂದಾಗಿ ಕನಿಷ್ಠ 10 ಸಾವಿರ ಚದರ ಅಡಿ ಇರುವ ಬಾರ್ ಮತ್ತು ಕ್ಲಬ್‌ಗಳು, ಪಟ್ಟಣ ಪ್ರದೇಶಗಳಲ್ಲಿ 100 ಕೊಠಡಿಗಳನ್ನು ಹೊಂದಿರುವ ಲಾಡ್ಜಿಂಗ್ ಹೋಟೆಲ್ ಮತ್ತು ಸ್ಟಾರ್ ಹೋಟೆಲ್‌ಗಳಲ್ಲಿ ಬ್ರುಯರಿ ಘಟಕಗಳನ್ನು ತೆರೆಯಲು ಪರವಾನಗಿ ನೀಡಲಾಗುತ್ತದೆ. ಪರವಾನಗಿ ಶುಲ್ಕ ವಾರ್ಷಿಕ 2.5 ಲಕ್ಷ ರೂಪಾಯಿ ನಿಗದಿ ಮಾಡಿದ್ದು, ಇದರಿಂದ ಸರ್ಕಾರಕ್ಕೆ 4-5 ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

50ರಿಂದ 60 ಅರ್ಜಿಗಳು ಬರಬಹುದು ಎಂದು ಅಂದಾಜು ಮಾಡಲಾಗಿದೆ. ಬ್ರುಯರಿ ಘಟಕಗಳ ಉತ್ಪಾದನಾ ಸಾಮರ್ಥ್ಯವನ್ನು ಆಧರಿಸಿ ಪರವಾನಗಿ ನೀಡುವ ಸಮಯದಲ್ಲಿಯೇ ಸುಂಕ ವಸೂಲಿಗೂ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಲೀಟರ್ ಉತ್ಪಾದನಾ ಸಾಮರ್ಥ್ಯಕ್ಕೆ ರೂ. 5ರಂತೆ ಸುಂಕ ಮತ್ತು ರೂ 12.50ರಂತೆ ಹೆಚ್ಚುವರಿ ಅಬಕಾರಿ ಸುಂಕ ವಸೂಲಿ ಮಾಡಲು ಅವಕಾಶವಿದೆ ಎಂದರು.

ಇದುವರೆಗೆ ಗ್ರಾಹಕರಿಗೆ ಬಾಟಲಿ ಅಥವಾ ಕ್ಯಾನ್‌ಗಳಲ್ಲಿನ ಬಿಯರ್ ಸೇವನೆ ಮಾಡುವ ಅವಕಾಶವಿತ್ತು. ಅಲ್ಲದೆ ತಯಾರು ಮಾಡಿದ ಬಹಳ ದಿನಗಳ ನಂತರ ಲಭ್ಯವಾಗುತ್ತಿತ್ತು. ಆದರೆ ಇನ್ನು ಮುಂದೆ ಗ್ರಾಹಕರ ಎದುರಿಗೆ ಬಿಯರ್ ತಯಾರಾಗಲಿದ್ದು, ತಯಾರಾಗುವ ವಿಧಾನವನ್ನು ವೀಕ್ಷಿಸಬಹುದಾಗಿದೆ ಎಂದು ಅವರು ಹೇಳಿದರು.

ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ಬ್ರುಯರಿ ಘಟಕಗಳಿಗೆ ಅನುಮತಿ ನೀಡಲಾಗಿದೆ. ಘಟಕದ ಆವರಣಕ್ಕೆ ಭೇಟಿ ನೀಡುವ ಅತಿಥಿಗಳಿಗೆ ಮಾತ್ರ ಇದು ಸೀಮಿತವಾಗಿರುತ್ತದೆ. ಬಿಯರ್‌ನ ಗುಣಮಟ್ಟ ಮತ್ತು ಸುರಕ್ಷತೆ ಬಗ್ಗೆ ಷರತ್ತುಗಳನ್ನು ವಿಧಿಸಲಾಗುವುದು. ಮಾಲ್ ಮತ್ತು ದೊಡ್ಡ ವ್ಯಾಪಾರ ಕೇಂದ್ರಗಳಲ್ಲಿ ಸಹ ಸಣ್ಣ ಬ್ರುಯರಿ ಘಟಕ ಸ್ಥಾಪನೆಗೆ ಅವಕಾಶ ನೀಡಲಾಗುವುದು ಎಂದರು.

ಕಳ್ಳಬಟ್ಟಿ: ರಾಜ್ಯದಲ್ಲಿ ಒಟ್ಟು 1475 ಕಳ್ಳಬಟ್ಟಿ ಕೇಂದ್ರಗಳನ್ನು ಪತ್ತೆಹಚ್ಚಲಾಗಿದ್ದು, 219 ಕೇಂದ್ರಗಳ ನಿರ್ಮೂಲನೆಯ ಗುರಿ ಹೊಂದಲಾಗಿದೆ. 24,073 ಆರೋಪಿಗಳ ಪೈಕಿ 16 ಜನರಿಗೆ ಶಿಕ್ಷೆಯಾಗಿದೆ. ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ದಾವಣಗೆರೆ, ಬಾಗಲಕೋಟೆ, ವಿಜಾಪುರ ಮೊದಲಾದ ಕಡೆ ಕಳ್ಳಬಟ್ಟಿ ಕೇಂದ್ರಗಳಿವೆ ಎಂದರು.

ಹಿಂದಿನ ವರ್ಷಗಳ 251 ಕೋಟಿ ರೂಪಾಯಿ ಅಬಕಾರಿ ತೆರಿಗೆ ಬಾಕಿ ಇದೆ. ಕರ ಸಮಾಧಾನ ಯೋಜನೆಯಡಿ 16.57 ಕೋಟಿ ರೂಪಾಯಿ ಸಂಗ್ರಹವಾಗಿದೆ. ನಿಗದಿಗಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುವ 70 ಮಳಿಗೆಗಳ ವಿರುದ್ಧ ದೂರು ದಾಖಲಾಗಿದೆ. ಅಂತಹ ಮಳಿಗೆಗಳ ಪರವಾನಗಿ ರದ್ದುಪಡಿಸುವಂತೆ ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT