ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕನಿಗೆ ಬಲ ಭಾಗದಲ್ಲಿ ಹೃದಯ!

Last Updated 12 ಜೂನ್ 2011, 19:30 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ:   ಮನುಷ್ಯರಿಗೆ ಹೃದಯ ಎಡ ಭಾಗದಲ್ಲಿರುವುದು ಸಾಮಾನ್ಯ. ಆದರೆ ಅರಳಕುಪ್ಪೆಯ ಬಾಲಕನೊಬ್ಬನಿಗೆ ಹೃದಯ ಎಡ ಭಾಗದಲ್ಲಿ ಇರುವ ಬದಲು ಬಲ ಭಾಗದಲ್ಲಿ ಇರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.

ಅರಳಕುಪ್ಪೆಯ ರಾಮೇಗೌಡ ಮತ್ತು ಸವಿತಾ ದಂಪತಿಗಳ ಪುತ್ರ, ಗ್ರಾಮದ ವಿವೇಕಾನಂದ ಕಾನ್ವೆಂಟ್‌ನ 3ನೇ ತರಗತಿ ವಿದ್ಯಾರ್ಥಿ ಶಶಾಂಕ್‌ನ ಹೃದಯ ಬಲ ಭಾಗದಲ್ಲಿರುವುದು ಪರೀಕ್ಷೆಯಿಂದ ತಿಳಿದು ಬಂದಿದೆ. ತುಸು ದೂರ ಓಡಿದರೆ ಎದೆ ಜೋರಾಗಿ ಬಡಿದುಕೊಳ್ಳುವುದು, ಮೇಲಿಂದ ಮೇಲೆ ನೋವು ಕಾಣಿಸಿಕೊಳ್ಳುವುದು ಇತರ ಸಮಸ್ಯೆ ಕಂಡುಬರುತ್ತಿದ್ದ ಕಾರಣಕ್ಕೆ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಹೃದಯ ಹಾಗೂ ಯಕೃತ್ ಎರಡೂ ಬಲಭಾಗದಲ್ಲಿ ಇರುವುದು ಗೊತ್ತಾಗಿದೆ.

ಹುಟ್ಟಿನಿಂದಲೇ ಈ ಬಾಲಕನಿಗೆ ಹೃದಯ ಬಲಭಾಗದಲ್ಲಿದ್ದು, ಪರೀಕ್ಷೆಯ ನಂತರವಷ್ಟೇ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಇತರ ಮಕ್ಕಳಂತೆ ಚಟುವಟಿಕೆಯಿಂದ ಇರುವ ಶಶಾಂಕ್ ದೈಹಿಕ ಶ್ರಮದ ಕೆಲಸ ಮಾಡಿದರೆ ಸೋತು ಹೋಗುತ್ತಾನೆ. ಎದೆ ಹಿಡಿದುಕೊಂಡು ಅಳುತ್ತಾನೆ. ಕೆಲವೊಮ್ಮೆ ರಾತ್ರಿ ವೇಳೆ ನಿದ್ದೆ ಮಾಡಲಾಗದೆ ವಿಲಿವಿಲಿ ಒದ್ದಾಡುತ್ತಾನೆ ಎಂದು ಶಶಾಂಕ್ ತಂದೆ ರಾಮೇಗೌಡ ಹೇಳುತ್ತಾರೆ.

`ಬೆಂಗಳೂರಿಗೆ ಕರೆದೊಯ್ದು ತಜ್ಞ ವೈದ್ಯರಿಂದ ಮತ್ತೆ ಪರೀಕ್ಷೆ ಒಳಪಡಿಸಿ ಚಿಕಿತ್ಸೆ ಕೊಡಿಸುವಂತೆ ಮೈಸೂರು ಜಯದೇವ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಆದರೆ ಕೂಲಿಯನ್ನೇ ನೆಚ್ಚಿ ಬದುಕುವ ನನಗೆ ಚಿಕಿತ್ಸೆ ಕೊಡಿಸಲು ಕಷ್ಟವಾಗಿದೆ.
 
ದಾನಿಗಳಿದ್ದರೆ ನನ್ನ ಮಗನಿಗೆ ಚಿಕಿತ್ಸೆಗೆ ನೆರವಾಗಬೇಕು~ ಎಂದು ರಾಮೇಗೌಡ ಮನವಿ    ಮಾಡಿದ್ದಾರೆ. ಶಶಾಂಕನ ಚಿಕಿತ್ಸೆಗೆ ನೆರವು ನೀಡುವವರು ರಾಮೇಗೌಡ ಅವರನ್ನು (ಮೊ: 81052 15434) ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT