ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಯರ ಸಾವು; ಡೆಂಗೆ ಶಂಕೆ

ಕುಷ್ಟಗಿ: ಆರೋಗ್ಯ ಇಲಾಖೆ ನಿರ್ಲಕ್ಷ್ಯ, ಗ್ರಾಮಸ್ಥರ ಆತಂಕ
Last Updated 5 ಡಿಸೆಂಬರ್ 2013, 6:38 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಕಂದಕೂರು ಗ್ರಾಮದಲ್ಲಿ ವಾರದ ಅವಧಿಯಲ್ಲಿ ಇಬ್ಬರು ಬಾಲಕಿಯರು ತೀವ್ರ ಜ್ವರ­ಬಾಧೆಯಿಂದ ಸಾವಿಗೀಡಾಗಿರು­ವುದು ಬೆಳಕಿಗೆ ಬಂದಿದ್ದು ಡೆಂಗೆ ರೋಗ ಇರಬಹುದು ಎಂದು ಶಂಕಿಸಲಾಗಿದೆ.

ಮೃತರನ್ನು ಶಾವಮ್ಮ ಶಶಿಧರಯ್ಯ ಸಾಹುಕಾರ (23) ಹಾಗೂ ಸಂಗೀತಾ ಸಿದ್ದಲಿಂಗಯ್ಯ ಮಠಪತಿ (8) ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ ಶಾವಮ್ಮ ಎಂಬ ಯುವತಿಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ಬಾಧೆ ನಿಯಂತ್ರಣಕ್ಕೆ ಬಾರದ ಕಾರಣ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಶಾವಮ್ಮ ಮೃತಪಟ್ಟಿದ್ದಾಳೆ ಎಂದು ತಿಳಿದಿದೆ.

ಅಲ್ಲದೇ ಎರಡು ದಿನಗಳಿಂದಲೂ ಜ್ವರದಿಂದ ಬಳಲುತ್ತಿದ್ದ ಸಂಗೀತಾ ಎಂಬ ಬಾಲಕಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬಾಲಕಿಯನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಅಸು ನೀಗಿದ್ದಾಳೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶರಣಪ್ಪ ಗೋಪಾಳಿ, ಆಂಜನೇಯ ಹಾದಿಮನಿ, ಮಾರುತಿ ಹಲಗೆ ‘ಪ್ರಜಾವಾಣಿ’ಗೆ ವಿವರಿಸಿದರು.

ಡೆಂಗೆದಿಂದ ಬಾಲಕಿಯರು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಇಷ್ಟಾದರೂ ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ಯಾವುದೇ ಮುಂಜಾ­ಗ್ರತೆ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದ್ದೊಬ್ಬ ಆರೋಗ್ಯ ಕಾರ್ಯಕರ್ತೆ­ಯನ್ನು ಐದಾರು ತಿಂಗಳ ಹಿಂದೆ ಬೇರೆಡೆ ವರ್ಗ ಮಾಡಲಾಗಿದೆ, ಇಲ್ಲಿಯವ­ರೆಗೂ ಬೇರೆಯವರನ್ನು ನಿಯೋಜಿಸದ ಕಾರಣ ಅನಾರೋಗ್ಯದ ಮಾಹಿತಿ ಆರೋಗ್ಯ ಇಲಾಖೆಗೆ ತಿಳಿಯುತ್ತಿಲ್ಲ, ಗರ್ಭಿಣಿಯರ ಗೋಳು ಹೇಳತೀರದ­ಷ್ಟಾಗಿದೆ. ಸಣ್ಣಪುಟ್ಟ ವಿಷಯಕ್ಕೂ ಪಟ್ಟಣಕ್ಕ ಬರಬೇಕಾಗುತ್ತದೆ. ಜನ ಅನಾರೋಗ್ಯಕ್ಕೆ ಈಡಾಗುತ್ತಿದ್ದರೂ ತಾಲ್ಲೂಕು ಆರೋಗ್ಯ ಅಧಿಕಾರಿ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ಎಲ್ಲೆಂದರಲ್ಲ ಕೊಳಚೆ ಮಡುಟ್ಟಿದ್ದು ಮಾಲಿನ್ಯದಿಂದ ಸೊಳ್ಳೆಗಳ ಸಂತತಿ ಹೆಚ್ಚಿದೆ, ಗ್ರಾಮವನ್ನು ಸ್ವಚ್ಛಗೊಳಿಸಲು ನೈರ್ಮಲ್ಯ ವ್ಯವಸ್ಥೆಗೆ ಆದ್ಯತೆ ನೀಡುವಂತೆ ಕೋರಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಮನವಿ ಮಾಡಿದರೂ ಅಧಿಕಾರಿ, ಸಿಬ್ಬಂದಿ ಮತ್ತು ಚುನಾಯಿತ ಪ್ರತಿನಿಧಿ­ಗಳು ನಿರ್ಲಕ್ಷಿಸಿದ್ದಾರೆ ಎಂದು ದೂರಿ­ರುವ ಗ್ರಾಮಸ್ಥರು ಇದೇ ಸ್ಥಿತಿ ಮುಂದು­ವರೆದರೆ ಪ್ರತಿಭಟನೆ ಮಾಡಬೇಕಾಗು­ತ್ತದೆ ಎಂದು ಎಚ್ಚರಿಸಿದ್ದಾರೆ.

ವೈದ್ಯಾಧಿಕಾರಿ ಸ್ಪಷ್ಟನೆ: ಕಂದಕೂರು ಗ್ರಾಮದಲ್ಲಿ ಇಬ್ಬರು ಬಾಲಕಿಯರ ಸಾವಿಗೆ ಸಂಬಂಧಿಸಿದಂತೆ ವಿವರ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರು, ಇಬ್ಬರು ಬಾಲಕಿ­ಯರು ಡೆಂಗೆದಿಂದಲೇ ಸಾವಿಗೀಡಾಗಿ­ದ್ದಾರೆ ಎಂಬ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ, ಪ್ಲೇಟ್‌ಲೆಟ್ಸ್‌ ಕಡಿಮೆಯಾದರೂ ಅದು ಡೆಂಗೆ ಆಗಿರದಿರಲೂ ಬಹುದು. ಬೇರೆ ಕಾರಣಗಳಿಂದಲೂ  ಸಾವು ಸಂಭವಿಸುವ ಸಾಧ್ಯತೆಯೂ ಇರುತ್ತದೆ ಎಂದು ಹೇಳಿದರು.

ಆದರೂ ಇಲಾಖೆ ಸಿಬ್ಬಂದಿಯನ್ನು ಗ್ರಾಮಕ್ಕೆ ಕಳುಹಿಸಿ ಜ್ವರದಿಂದ ಬಳಲುತ್ತಿರುವವರ ರಕ್ತದ ಮಾದರಿಗಳನ್ನು ಸಗ್ರಹಿಸಿ ಬಳ್ಳಾರಿಯ ಪ್ರಯೋಗಾಲಯಕ್ಕೆ ಕಳಿಸಲು ಕ್ರಮ ಕೈಗೊಳ್ಳುತ್ತೇವೆ. ಅಲ್ಲದೇ ಸ್ವಚ್ಛತೆಗೆ ಗಮನಹರಿಸುವುದು ಮತ್ತು ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಲು ಗ್ರಾಮ ಪಂಚಾಯಿತಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT