ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ವಿವಾಹ ತಡೆಗೆ ಆಸಕ್ತಿ ಇಲ್ಲದ ಆಡಳಿತ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಕಳೆದ ವಾರ ಗದಗಿನಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಹಲವು ಅಪ್ರಾಪ್ತ ಜೋಡಿ ಮಕ್ಕಳು ಇದ್ದರು ಎನ್ನುವುದು ನಮ್ಮ ರಾಜಕಾರಿಣಿಗಳಿಗೆ ಮಕ್ಕಳ ಬಗೆಗಿರುವ ತಾತ್ಸಾರದ ಒಂದು ಉತ್ತಮ ಉದಾಹರಣೆ. ರಾಜ್ಯದಲ್ಲಿ ಬಾಲ್ಯವಿವಾಹ ತಡೆಗಟ್ಟುವುದರ ಬಗ್ಗೆ ಉಚ್ಚ ನ್ಯಾಯಾಲಯವು ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಇತ್ತೀಚೆಗೆ ಸಮಿತಿ ರಚಿಸಿತ್ತು.

ರಾಜ್ಯದ ಎಲ್ಲೆಡೆ ಸಭೆ ನಡೆಸಿ ಸಮಿತಿಯು ಸಲಹೆಗಳನ್ನು ಪಡೆದು ನ್ಯಾಯಾಲಯ ಮತ್ತು ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಇದರಿಂದ ಪ್ರೇರಣೆ ಪಡೆದು ಮಕ್ಕಳ ಇಲಾಖೆಯ ಅನೇಕ ಅಧಿಕಾರಿಗಳು ಮತ್ತು ಸಂಘಸಂಸ್ಥೆಯ ಪದಾಧಿಕಾರಿಗಳು ಜತೆಗೂಡಿ ಬಾಲ್ಯವಿವಾಹಗಳನ್ನು ನಿಲ್ಲಿಸಲು ಕ್ರಮ ವಹಿಸಿರುವ ಉದಾಹರಣೆಗಳು ಇವೆ. ಕೆಲವೆಡೆ, ಅವರಿಗೆ ಧರ್ಮದೇಟು ಬಿದ್ದಿದ್ದೂ ಇದೆ. ಈಗ, ಮಕ್ಕಳ ಕಲ್ಯಾಣ ಸಚಿವರ ನೇತೃತ್ವದಲ್ಲಿಯೇ ಮಕ್ಕಳ ವಿವಾಹ ನಡೆಸುವುದು ಬಾಲ್ಯವಿವಾಹ ತಡೆ ಕಾರ್ಯಕ್ಕೆ ಹಿನ್ನಡೆಯಾಗಿದೆ.

ಬಾಲ್ಯವಿವಾಹದ ವಿರುದ್ಧ ಹೋರಾಡುತ್ತಿರುವ ಅನೇಕರಿಗೆ ಇದೊಂದು ನಾಚಿಕೆಗೇಡಿನ ಮಾದರಿಯಾಗಿದೆ. ಬಾಲ್ಯ ವಿವಾಹ ತಡೆಯಲು ನ್ಯಾಯಾಲಯವು ಸೇರಿದಂತೆ ಎಲ್ಲರೂ ಶತಪ್ರಯತ್ನ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಮಾಡಿದ ಈ  `ಕೆಲಸ~ ಅಕ್ಷಮ್ಯ ಅಪರಾಧವಾಗಿದೆ.

ಇನ್ನೊಂದೆಡೆ, ಬಾಲಕಾರ್ಮಿಕ ಪದ್ಧತಿ ರಾಜಾರೋಷವಾಗಿ ನಡೆಯುತ್ತಿದೆ. ಕರ್ನಾಟಕದ ಮಕ್ಕಳಲ್ಲದೆ, ಹೊರರಾಜ್ಯದಿಂದಲೂ ಅನೇಕ ಮಕ್ಕಳು ನಮ್ಮ ನಗರಗಳಿಗೆ ಬರುತ್ತಿದ್ದಾರೆ. ಸಣ್ಣಪುಟ್ಟ ಕಾರ್ಖಾನೆಗಳು, ಜ್ಯುಯಲರಿಗಳು, ಕಟ್ಟಡ ನಿರ್ಮಾಣ, ಮನೆ ಕೆಲಸ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಮಕ್ಕಳು ದುಡಿಯುತ್ತಿದ್ದಾರೆ. ಬಾಲಕಾರ್ಮಿಕ ಪದ್ಧತಿ ತಡೆಗೆಟ್ಟಲು ಕ್ರಿಯಾ ಯೋಜನೆಗಳನ್ನು ರೂಪಿಸಿ ಎಲ್ಲರೂ ಸುಸ್ತಾದಂತಿದೆ. 2007ರ ಹೊತ್ತಿನಲ್ಲಿ ರಾಜ್ಯವನ್ನು `ಬಾಲಕಾರ್ಮಿಕ ಪದ್ಧತಿ ಮುಕ್ತ~ ಮಾಡಲು ಸರ್ಕಾರ ಸಂಕಲ್ಪ ಮಾಡಿತ್ತು. ನಂತರ ಅದನ್ನು 2012ಕ್ಕೆ ಮುಂದೂಡಲಾಗಿತ್ತು. ಈಗಿನ ಸುದ್ದಿ ಪ್ರಕಾರ ಈ ಸಂಕಲ್ಪವನ್ನು 2015ಕ್ಕೆ ಮುಂದೂಡಲಾಗಿದೆಯಂತೆ!

ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವ ಜವಾಬ್ದಾರಿ ಕಾರ್ಮಿಕ ಇಲಾಖೆಗೆ ನೀಡಲಾಗಿದೆ. 1986ರ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯನ್ನು ಇಲಾಖೆ ಜಾರಿ ಮಾಡುತ್ತಿದೆ. ಇದಲ್ಲದೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ ಸೇರಿದಂತೆ 11 ಇಲಾಖೆಗಳ ಅಧಿಕಾರಿಗಳನ್ನು ನಿರೀಕ್ಷಕರು ಎಂದು ನೇಮಕ ಮಾಡಿ ಸುತ್ತೋಲೆ ಹೊರಡಿಸಲಾಗಿತ್ತು. ತಮ್ಮ ವ್ಯಾಪ್ತಿಯಲ್ಲಿ ಬಾಲಕಾರ್ಮಿಕರು ಸಿಕ್ಕಿದಾಗ ಅವರನ್ನು ರಕ್ಷಿಸಿ, ಮಾಲೀಕರ ವಿರುದ್ಧ ಮೊಕದ್ದಮೆ ದಾಖಲು ಮಾಡುವ ಅಧಿಕಾರ ನಿರೀಕ್ಷಕರುಗಳಿಗೆ ಈ ಮೂಲಕ ನೀಡಲಾಗಿತ್ತು. ಆದರೆ, ವ್ಯವಸ್ಥಿತವಾದ ತರಬೇತಿ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಅಪರೂಪಕ್ಕೆ ಮಾತ್ರ ನಡೆಯುವ ಒಂದು ಆಚರಣೆಯಾಗಿ ಇದೂ ಉಳಿದಿದೆ.

1986ರ ಕಾಯ್ದೆಯು ಈಗ 74 ಕ್ಷೇತ್ರಗಳನ್ನು ಗುರುತಿಸಿದ್ದು, ಸದರಿ ಕ್ಷೇತ್ರಗಳಲ್ಲಿ ಮಕ್ಕಳನ್ನು ದುಡಿಸಿದರೆ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದಾಗಿದೆ. 14 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಈ ಕಾಯ್ದೆಯು ಅನ್ವಯವಾಗುತ್ತದೆ.

ಮಕ್ಕಳ ರಕ್ಷಣೆ ಸರ್ಕಾರದ ಹೊಣೆ. ಯಾವುದೇ ಮಗು ಶೋಷಣೆಗೆ ಒಳಪಡದೆ ಅದನ್ನು ರಕ್ಷಿಸುವ ಕಾರ್ಯ ಕೈಗೊಳ್ಳಬೇಕಾದದ್ದು ಸರ್ಕಾರದ ಕರ್ತವ್ಯ. 1992ರಲ್ಲಿ ವಿಶ್ವ ಸಂಸ್ಥೆಯು ಘೋಷಿಸಿದ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿದ ಸರ್ಕಾರಕ್ಕೆ ಈ ಬದ್ಧತೆ ಇದೆ. ಇದರ ಬೆನ್ನಲ್ಲೇ 2000ದಲ್ಲಿ  ರಚನೆಯಾದ ಬಾಲನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆಯು ಇನ್ನೂ ಮಕ್ಕಳನ್ನು ತಲುಪುತ್ತಿಲ್ಲ ಎನ್ನುವುದರ ಸೂಚನೆ ಇವು.

ಮಕ್ಕಳ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಸರ್ಕಾರಕ್ಕೆ ಸಮಗ್ರವಾದ ದೃಷ್ಟಿಕೋನ ಇಲ್ಲದಿರುವುದು ಇಲ್ಲಿ  ಸ್ಪಷ್ಟ. ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಲೈಂಗಿಕ ಕಿರುಕುಳ, ಮಕ್ಕಳ ಸಾಗಾಣಿಕೆ, ಶಾಲೆಯಿಂದ ಹೊರಗುಳಿಯುವಿಕೆ, ಲಿಂಗಾನುಪಾತದ ಇಳಿಕೆ, ಭ್ರೂಣಹತ್ಯೆ, ಲಿಂಗತಾರತಮ್ಯ ಮುಂತಾದ ಅನೇಕ ಸಮಸ್ಯೆಗಳು ನಮ್ಮ ಕಣ್ಮುಂದೆ ಎದುರಾಗುತ್ತಿವೆ. ಇವುಗಳನ್ನು ವ್ಯವಸ್ಥಿತವಾಗಿ ಎದುರಿಸಲು ಸಮಗ್ರವಾದ ಒಂದು ನೀತಿ ರೂಪಿಸಲು ಸರ್ಕಾರ ಇನ್ನೂ ಮುಂದಾಗಿಲ್ಲ.

ಈಗ ನಮ್ಮ ಮುಂದೆ ಉಳಿದಿರುವ ದಾರಿಯೊಂದೇ. ಸದ್ಯದ ಪರಿಸ್ಥಿತಿಯಲ್ಲಿ ಪ್ರಗತಿಪರವಾದ ಕಾಯ್ದೆಯಾದ ಬಾಲನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ(2000)ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು. ಈ ಕಾಯ್ದೆಯಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ರಚಿಸಲಾಗಿರುವ ಬಾಲನ್ಯಾಯ ಮಂಡಳಿ ಮತ್ತು ಮಕ್ಕಳ ಕಲ್ಯಾಣ ಸಮಿತಿಗಳ ಸದಸ್ಯರಿಗೆ ಹೆಚ್ಚು ತರಬೇತಿ ನೀಡಿ ಮಕ್ಕಳ ರಕ್ಷಣೆಯನ್ನು ಬಲಗೊಳಿಸಬೇಕು. ಮಂಡಳಿ ಮತ್ತು ಸಮಿತಿಯು ಮೊದಲನೆಯ ದರ್ಜೆಯ ಮ್ಯಾಜಿಸ್ಟೀರಿಯಲ್ ಅಧಿಕಾರ ಇರುವ ನ್ಯಾಯಾಲಯಗಳು.

18 ವರ್ಷದ ವರೆಗಿನವರನ್ನು ಮಕ್ಕಳು ಎಂದು ಕಾಯ್ದೆಯು ಪರಿಗಣಿಸುತ್ತದೆ. ಬಾಲಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ಕ್ರೌರ್ಯ, ಬಾಲ್ಯವಿವಾಹ, ಮಕ್ಕಳ ಸಾಗಾಣಿಕೆ, ಭಿಕ್ಷಾಟನೆ ಮುಂತಾದವು ಕಾಯ್ದೆ ಪ್ರಕಾರ ಮಕ್ಕಳ ಮೇಲಿನ ಅಪರಾಧಗಳು. ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಯು ಮಕ್ಕಳನ್ನು 14 ವರ್ಷದೊಳಗಿನವರೆಂದು ಪರಿಗಣಿಸುವಾಗ ಬಾಲನ್ಯಾಯ ಕಾಯ್ದೆಯು 18 ಎಂದು ನಿಗದಿಪಡಿಸಿದೆ. ಮಕ್ಕಳಿಗೆ ಸೂಕ್ತವಾದ ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸುವ ಜವಾಬ್ದಾರಿ ಈ ಕಾಯ್ದೆಯಡಿಯಲ್ಲಿ ಕಲ್ಪಿಸಲಾಗಿದೆ. ದತ್ತು, ಸಾಕು ಪೋಷಕತ್ವ, ಪ್ರಾಯೋಜಕತ್ವ ಮುಂತಾದ ಪರ್ಯಾಯ ವ್ಯವಸ್ಥೆಗಳ ಮೂಲಕ ಅನಾಥ/ಅರೆ ಅನಾಥ ಮಕ್ಕಳಿಗೆ ರಕ್ಷಣೆ ಒದಗಿಸಬಲ್ಲ ಸಶಕ್ತ ಕಾಯ್ದೆ ಇದು. ತಮ್ಮ ಜಿಲ್ಲೆಯೊಳಗೆ ಯಾವುದೇ ಮಗು ಶೋಷಣೆಗೆ ಒಳಪಡದಂತೆ ಖಾತರಿಪಡಿಸಲು ಬಾಲನ್ಯಾಯ ವ್ಯವಸ್ಥೆ ರೂಪಿಸಲಾಗಿದೆ.

ದುರಂತವೆಂದರೆ, ಮಕ್ಕಳ ಪಾಲಿಗೆ ಇಷ್ಟು ಶಕ್ತಿಯುತವಾದ ಕಾಯ್ದೆ ಜಾರಿಯಲ್ಲಿದ್ದರೂ ಈ ಬಗ್ಗೆ ಸರ್ಕಾರ ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದಲೇ ಪ್ರತಿ ಜಿಲ್ಲೆಯಲ್ಲಿ ಬಾಲನ್ಯಾಯ ವ್ಯವಸ್ಥೆಯಲ್ಲಿ ಸಾಕಷ್ಟು ಕೊರತೆಗಳು ಕಾಣುತ್ತಿವೆ.

ಸರ್ಕಾರಕ್ಕೆ ಛಲವಿದ್ದರೆ ಪ್ರತಿ ಜಿಲ್ಲೆಯಲ್ಲಿನ ಬಾಲ ನ್ಯಾಯ ವ್ಯವಸ್ಥೆಯನ್ನು ಸದೃಢಗೊಳಿಸಿ ಮಕ್ಕಳ ಶೋಷಣೆ ತಪ್ಪಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT