ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೇಹೊಸೂರು: ಉದ್ಘಾಟನೆ ಆಗದ ಆಸ್ಪತ್ರೆ

Last Updated 19 ಡಿಸೆಂಬರ್ 2013, 6:12 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ಸಮೀಪದ ಬಾಳೇಹೊಸೂರು ಗ್ರಾಮದ ಹೊರ ವಲಯದಲ್ಲಿ 85 ಲಕ್ಷ ರೂಪಾಯಿ ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಿ ಒಂದು ವರ್ಷ ಕಳೆದಿದ್ದರೂ ಅದಕ್ಕೆ ಉದ್ಘಾಟನೆ ಭಾಗ್ಯ ಮಾತ್ರ ಕೂಡಿ ಬಂದಿಲ್ಲ. ದಾನಿಗಳ ಹೆಸರು ಇಡುವ ಸಂಬಂಧ ಉದ್ಭವಿಸಿದ ಸಮಸ್ಯೆಯೇ ಆಸ್ಪತ್ರೆ ಆರಂಭ ಆಗದಿರುವುದಕ್ಕೆ ಪ್ರಮುಖ ಕಾರಣವಾಗಿದೆ.

ಈ ಮೊದಲು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸಧ್ಯ ನಿವೃತ್ತಿ ಜೀವನ ನಡೆಸುತ್ತಿರುವ ಬಾಳೇಹೊಸೂರು ಗ್ರಾಮದ ನಿವಾಸಿ ಫಕ್ಕೀರೇಶ ಹನಮಪ್ಪ ಸಾಲಿ ಅವರು ಆಸ್ಪತ್ರೆಗೆ ತಮ್ಮ  ಹೆಸರು ಇಡಬೇಕು ಎಂಬ ಷರತ್ತಿನ ಮೇರೆಗೆ ಸ್ವಂತದ ಎರಡು ಎಕರೆ ಜಮೀನನ್ನು ಆಸ್ಪತ್ರೆ ನಿರ್ಮಾಣಕ್ಕೆ ಬಿಟ್ಟು ಕೊಟ್ಟಿದ್ದರು. ಭೂ ದಾನಿಗಳ ಷರತ್ತಿಗೆ ಒಪ್ಪಿ ಸಂಬಂಧಿಸಿದ ಇಲಾಖೆ ಸೂರಣಗಿ ರಸ್ತೆಗೆ ಹೊಂದಿಕೊಂಡಂತೆ ಭವ್ಯವಾದ ಆಸ್ಪತ್ರೆ ನಿರ್ಮಿಸಿದೆ. ಆದರೆ ನಾಮಕರಣ ಪ್ರಕ್ರಿಯೆ ಈಗ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿದ್ದು ಇದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಊರಲ್ಲಿ ದವಾಖಾನೆ ಇದ್ದರೂ ಅದು ಜನತೆಯ ಉಪಯೋಗಕ್ಕೆ ಬರುತ್ತಿಲ್ಲ. ಹೀಗಾಗಿ ಗ್ರಾಮಸ್ಥರಿಗೆ ಆರೋಗ್ಯ ಸೇವೆ ಮರೀಚಿಕೆ ಆಗಿದ್ದು ಅವರು ಬೇರೆ ಊರುಗಳಿಗೆ ಹೋಗಬೇಕಾಗಿದೆ.

‘ನಮ್ಮೂರಾಗ ದೊಡ್ಡ ದವಾಖಾನಿ ಕಟ್ಟ್ಯಾರ. ಆದರ ಅದು ಇನ್ನೂ ಚಾಲೂನ ಆಗಿಲ್ಲ. ಹಿಂಗಾಗಿ ನಮ್ಮೂರಿನ ಪೇಶೆಂಟ್‌ ಬ್ಯಾರೆ ಕಡೆ ಹೊಂಟಾರ. ಜಿಲ್ಲಾಧಿಕಾರಿಗಳು ಲಗೂನ ದವಾಖಾನಿ ಚಾಲೂ ಮಾಡಾಕ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ಯುವಕ ಶಿವಣ್ಣ ಕಬ್ಬೇರ ಹೇಳುತ್ತಾರೆ.

ಗ್ರಾಮದ ಅನಾರೋಗ್ಯ ಪೀಡಿತರು ಸದ್ಯ ಸೂರಣಗಿ ಅಥವಾ ದೂರದ ಲಕ್ಷ್ಮೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರಬೇಕಾಗಿದೆ.
ಬರುವ ಮಾರ್ಚ್‌ 7, 8 ಮತ್ತು 9ರಂದು ಬಾಳೇ ಹೊಸೂರಿನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ದಿಂಗಾಲೇಶ್ವರ ಮಠದ ಕಟ್ಟಡ ಹಾಗೂ ದಾಸೋಹ ಮಂದಿರ ಲೋಕಾರ್ಪಣೆಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಮಠಾಧೀಶ ರಾದ ಕುಮಾರ ದಿಂಗಾಲೇಶ್ವರ ಸ್ವಾಮೀಜಿ ಮೂರು ದಿನಗಳವರೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದು ಲಕ್ಷಾಂತರ ಭಕ್ತರು ಗ್ರಾಮದಲ್ಲಿ ಸೇರುವ ನಿರೀಕ್ಷೆ ಇದೆ.

ಕಾರಣ ಸಮಾರಂಭ ನಡೆಯುವ ಮುನ್ನವೇ ಆಸ್ಪತ್ರೆ ಆರಂಭವಾದರೆ ಜನತೆಗೆ ಬಹಳ ಉಪಯೋಗ ಆಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಹೆಚ್ಚಿನ ಗಮನ ಹರಿಸಿ ತುರ್ತು ಸೇವೆಗಳಲ್ಲಿ ಒಂದಾಗಿರುವ ಆರೋಗ್ಯ ಸೇವೆ ಒದಗಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕಾಗಿದೆ.

‘ನಮ್ಮೂರಾಗ ಮಾರ್ಚ್‌ ತಿಂಗಳದಾಗ ದೊಡ್ಡ ಕಾರ್ಯಕ್ರಮಗಳು ಅದಾವು. ಅಷ್ಟರೊಳಗ ನಮ್ಮೂರಿನ ದವಾಖಾನಿ ಚಾಲೂ ಮಾಡಿದರ ಭಾಳ ಚಲೋ ಆಕ್ಕೈತಿ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಫಕ್ಕೀರೇಶ ಮ್ಯಾಟಣ್ಣವರ ಹೇಳುತ್ತಾರೆ. ಈಗಲಾದರೂ ಜಿಲ್ಲಾಧಿಕಾರಿಗಳು ಬಾಳೇಹೊಸೂರಿನ ಆಸ್ಪತ್ರೆ ಉದ್ಘಾಟನೆಗೆ ಸೂಕ್ತ ಕ್ರಮ ಕೈಗೊಳ್ಳುವರೆ ಎಂಬುದನ್ನು ಕಾದು ನೋಡಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT