ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಇಡಿ: ಶೇ 42 ಸೀಟು ಭರ್ತಿಯಾಗಿಲ್ಲ

Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಬೆಂಗಳೂರು:  ರಾಜ್ಯದಲ್ಲಿ 2012-13ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬಿ.ಇಡಿ ಪ್ರವೇಶ ಪ್ರಕ್ರಿಯೆ ವೇಳೆಗೆ ಸರ್ಕಾರಿ ಕೋಟಾಗೆ ಮೀಸಲಿಟ್ಟ ಸೀಟುಗಳ ಪೈಕಿ ಶೇ 42.5 ಸೀಟುಗಳು ಭರ್ತಿಯಾಗದೆ ಉಳಿದಿವೆ. ಈ ಸೀಟುಗಳು ಖಾಸಗಿ ಕಾಲೇಜುಗಳ ಪಾಲಾಗಲಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ  ಘಟಕ (ಸಿಎಸಿ)ವು ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಬಿ.ಇಡಿ ದಾಖಲಾತಿ ಪ್ರಕ್ರಿಯೆ ನಡೆಸುತ್ತಿದೆ. ರಾಜ್ಯದಲ್ಲಿ ಈ ವರ್ಷ 40,400 ಸೀಟುಗಳು ಲಭ್ಯವಿದ್ದವು. ಇದರಲ್ಲಿ ಸರ್ಕಾರಿ ಕೋಟಾದ ಅಡಿಯಲ್ಲಿ 404 ಬಿ.ಇಡಿ ಕಾಲೇಜುಗಳಲ್ಲಿ 21,750 ಸೀಟುಗಳನ್ನು ಮೀಸಲಿಡಲಾಗಿತ್ತು. ಈ ಪೈಕಿ 12,509 ವಿದ್ಯಾರ್ಥಿಗಳು (ಶೇ57.5) ಸರ್ಕಾರಿ ಕೋಟಾದಡಿ ದಾಖಲಾಗಿದ್ದಾರೆ. ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿ ಪ್ರಕ್ರಿಯೆ ನವೆಂಬರ್ 26ಕ್ಕೆ ಪೂರ್ಣಗೊಂಡಿದೆ.


`ಖಾಸಗಿ ಕಾಲೇಜುಗಳಿಗೆ ನೆರವಾಗುವ ಉದ್ದೇಶದಿಂದಲೇ ಅಧಿಕ ಪ್ರಮಾಣದಲ್ಲಿ ಸೀಟುಗಳು ಭರ್ತಿಯಾಗದಂತೆ ನೋಡಿಕೊಳ್ಳಲಾಗಿದೆ. ಈ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಿ.ಇಡಿ ಪದವಿಯ ಶೇ 70ರಷ್ಟು ಸೀಟುಗಳಿಗೆ ದಾಖಲಾತಿ ಮಾಡಿಕೊಳ್ಳಲು ಸ್ವತಂತ್ರ ದೊರಕಿದೆ ಎಂದು ಆರೋಪಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಬೆಂಗಳೂರು ವಿವಿ ಬಿ.ಇಡಿ ಕಾರ್ಯಪಡೆಯ ಅಧ್ಯಕ್ಷ ಎಚ್.ಕರಣ್ ಕುಮಾರ್ ಗುರುವಾರ ಪತ್ರ ಬರೆದು ಗಮನ ಸೆಳೆದಿದ್ದಾರೆ.

ಚಾಮರಾಜನಗರ, ಕೊಡಗು ಸೇರಿದಂತೆ 10 ಜಿಲ್ಲೆಗಳ 77 ಬಿ.ಇಡಿ ಕಾಲೇಜುಗಳಲ್ಲಿ ಶೇ 90ಕ್ಕಿಂತ ಅಧಿಕ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ಆರು ಜಿಲ್ಲೆಗಳ 66 ಬಿ.ಇಡಿ ಕಾಲೇಜುಗಳಲ್ಲಿ ಶೇ 80ಕ್ಕಿಂತ ಅಧಿಕ, ಗದಗ, ಚಿಕ್ಕಮಗಳೂರು ಸೇರಿದಂತೆ ಆರು ಜಿಲ್ಲೆಗಳ 74 ಬಿ.ಇಡಿ ಕಾಲೇಜುಗ   ಳಲ್ಲಿ ಶೆ 50ಕ್ಕಿಂತ ಅಧಿಕ ಸರ್ಕಾರಿ ಕೋಟಾದ ಸೀಟುಗಳು ಭರ್ತಿಯಾಗಿವೆ.

`ಬೆಂಗಳೂರು ಹಾಗೂ ಬೀದರ್ ಜಿಲ್ಲೆಯಲ್ಲಿ ಕನಿಷ್ಠ ಪ್ರಮಾಣದಲ್ಲಿ ಸೀಟುಗಳು ಭರ್ತಿಯಾಗಿವೆ. ಬೆಂಗಳೂರು ನಗರ ಜಿಲ್ಲೆಯ 94 ಬಿ.ಇಡಿ ಕಾಲೇಜುಗಳಲ್ಲಿ ಶೇ 20 ರಷ್ಟು ಹಾಗೂ ಬೀದರ್ ಜಿಲ್ಲೆಯ 31 ಬಿ.ಇಡಿ ಕಾಲೇಜುಗಳಲ್ಲಿ ಕೇವಲ ಶೇ 9ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಸೇರ್ಪಡೆಯಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಯ ಶೇ 27ರಷ್ಟು ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

`ಬಿ.ಇಡಿ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಬಿ.ಇಡಿ ಕಾರ್ಯಪಡೆ ನೀಡಿರುವ ಮಧ್ಯಂತರ ವರದಿಗೆ ನವೆಂಬರ್ 30ರಂದು ನಡೆದ ಬೆಂಗಳೂರು ವಿವಿಯ ವಿದ್ಯಾವಿಷಯಕ ಪರಿಷತ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ವಿವಿಯ ವ್ಯಾಪ್ತಿಯ 123 ಬಿ.ಇಡಿ ಕಾಲೇಜುಗಳ ಪೈಕಿ 26 ಕಾಲೇಜುಗಳಲ್ಲಿ ಈ ವರ್ಷ ಪ್ರವೇಶ ಪ್ರಕ್ರಿಯೆ ನಡೆಸಬಹುದು. 41 ಕಾಲೇಜುಗಳಿಗೆ ಎನ್‌ಸಿಟಿಇ ಮಾನ್ಯತೆ ಇಲ್ಲ. ಮೂಲಸೌಕರ್ಯ ಇಲ್ಲದ ಕಾರಣ 56 ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ನಡೆಸದಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು' ಎಂದು ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ.

`ಕೇಂದ್ರೀಕೃತ ದಾಖಲಾತಿ ಘಟಕ ನಡೆಸುತ್ತಿರುವ ಪ್ರವೇಶ ಪ್ರಕ್ರಿಯೆಯ ಬಗ್ಗೆ ಈ ಹಿಂದೆ ಮೂರು ಬಾರಿ ಪತ್ರ ಬರೆದು ಗಮನ ಸೆಳೆದರೂ ಇಲಾಖೆಯಿಂದ ಈ ವರೆಗೆ ಪೂರಕ ಸ್ಪಂದನ ದೊರಕಿರಲಿಲ್ಲ. ಈಗ ಮಾನ್ಯತೆ ಇಲ್ಲದ 97 ಕಾಲೇಜುಗಳಲ್ಲಿ 479 ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಪ್ರವೇಶ ಪಡೆದಿದ್ದಾರೆ. ಇದನ್ನು ರದ್ದುಪಡಿಸಿ ಮತ್ತೆ ಪ್ರವೇಶ ಪ್ರಕ್ರಿಯೆಯನ್ನು ನಡೆಸಬೇಕು' ಎಂದು ಅವರು ಒತ್ತಾಯಿಸಿದ್ದಾರೆ.

`ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ ಸರ್ಕಾರಿ ಕೋಟಾದಡಿ ಸೇರ್ಪಡೆಯಾಗಿರುವ ಶೇ 27 ವಿದ್ಯಾರ್ಥಿಗಳು ಮಾತ್ರ ನಿಜವಾದ ವಿದ್ಯಾರ್ಥಿಗಳು. ಉಳಿದ ವಿದ್ಯಾರ್ಥಿಗಳು ಕಾಲೇಜಿಗೆ ಬಾರದೆ ಪ್ರಮಾಣಪತ್ರ ಪಡೆಯುವವರು. ವಿವಿ ವ್ಯಾಪ್ತಿಯಲ್ಲಿ ತರಗತಿ ನಡೆಸದೆ, ಪರೀಕ್ಷೆ ನಡೆಸದೆ ಬಿ.ಇಡಿ ಪದವಿ ನೀಡುವ ದೊಡ್ಡ ಮಾಫಿಯಾ ಇದ್ದು, ಶಿಕ್ಷಣವನ್ನು ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಈ ಪ್ರವೃತ್ತಿಗೆ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿ ಆಯುಕ್ತರಿಗೆ ಪತ್ರ ಬರೆಯಲಾಗಿದೆ' ಎಂದು ಅವರು `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT