ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಐಸಿ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಚಾಲನೆ....

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನೈಸ್ ಸಂಸ್ಥೆಯೊಂದಿಗೆ ಸರ್ಕಾರ ಮಾಡಿಕೊಂಡ ಜನ ವಿರೋಧಿ ಮೂಲ ಒಪ್ಪಂದವನ್ನು ರದ್ದು ಪಡಿಸಬೇಕು. ನೈಸ್ ರಸ್ತೆಯನ್ನು ರಾಷ್ಟ್ರೀಕರಣಗೊಳಿಸಬೇಕು~ ಎಂದು ಸಾಹಿತಿ ಡಾ. ಕೆ. ಮರುಳಸಿದ್ದಪ್ಪ ಒತ್ತಾಯಿಸಿದರು.

`ನ್ಯಾಯಕ್ಕಾಗಿ ನಾವು~- ಜನಪರ ಸಂಘಟನೆಗಳ ಒಕ್ಕೂಟ ಮತ್ತು ನೈಸ್ ಭೂಸ್ವಾಧೀನ ವಿರೋಧಿ ವೇದಿಕೆ ಆಶ್ರಯದಲ್ಲಿ ಶುಕ್ರವಾರ ನಗರದ ಕೋನಪ್ಪನ ಅಗ್ರಹಾರದಲ್ಲಿ ಆರಂಭವಾದ `ಬಿಎಂಐಸಿ ಯೋಜನೆಯಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಬಹಿರಂಗಗೊಳಿಸುವ ಮೂರು ದಿನಗಳ ಜನ ಜಾಗೃತಿ ಅಭಿಯಾನ~ವನ್ನು ಉದ್ದೇಶಿಸಿ ಅವರು ಮಾತನಾಡಿದರು.

`ಖೇಣಿ ಅವರಿಗೆ ಹಣದ ರೂಪದಲ್ಲಿ ಪರಿಹಾರ ಧನ ನೀಡಿ ಮೂಲ ಒಪ್ಪಂದವನ್ನು ರದ್ದು ಪಡಿಸಬೇಕು. ಸರ್ಕಾರವೇ ಖುದ್ದಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. ಹೆಚ್ಚಿನ ಪರಿಹಾರಕ್ಕೆ ರೈತರು ಒತ್ತಾಯಿಸದೇ ಇಡೀ ಒಪ್ಪಂದವನ್ನೇ ರದ್ದು ಪಡಿಸಲು ಒತ್ತಡ ಹೇರಬೇಕು~ ಎಂದು ಆಗ್ರಹಿಸಿದರು. 

`ಶಾಲೆ, ಆಸ್ಪತ್ರೆ, ರಸ್ತೆಗಳನ್ನು ನಿರ್ಮಿಸುವುದು ಸರ್ಕಾರದ ಕೆಲಸ. ಇದನ್ನು ಖಾಸಗಿಯವರಿಗೆ ವಹಿಸಿ ಸರ್ಕಾರ ಕರ್ತವ್ಯ ಭ್ರಷ್ಟವಾಗಿದೆ. ನೈಸ್ ರಸ್ತೆಗೆ ಅಕ್ರಮವಾಗಿ ಜಮೀನು ನೀಡಲು ಎಲ್ಲಾ ಸರ್ಕಾರಗಳು ಸಹಾಯ ಮಾಡಿವೆ. ಅಶೋಕ್ ಖೇಣಿ ಅವರೊಡನೆ ಮೂಲ ಒಪ್ಪಂದ ಮಾಡಿಕೊಂಡ ಸರ್ಕಾರ ಕೂಡ ವಂಚನೆ ಎಸಗಿದೆ. ಇದೆಲ್ಲದರಿಂದಾಗಿ ಕಾನೂನು ಬೇರೆ, ನ್ಯಾಯ ಬೇರೆ ಎಂಬಂತಾಗಿದೆ~ ಎಂದು ಟೀಕಿಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, `ನೈಸ್ ರಸ್ತೆಯಿಂದಾಗಿ ಸರ್ಕಾರದೊಳಗೊಂದು ಸರ್ಕಾರ ನಿರ್ಮಾಣವಾಗಿದೆ. ಈ ಕಂಪೆನಿ ಹುಟ್ಟಿರುವುದೇ ನೆಲಗಳ್ಳತನಕ್ಕೆ. ಮೂಲ ಒಪ್ಪಂದದಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ಇದೆಯೇ ಹೊರತು ವಶಪಡಿಸಿಕೊಂಡ ಭೂಮಿಯನ್ನು ಮಾರಲು ಅನುಮತಿ ಇಲ್ಲ~ ಎಂದರು.

`ಎಕರೆಗೆ 10ರೂಪಾಯಿಯಂತೆ ನೈಸ್ ಸಂಸ್ಥೆಗೆ ಭೂಮಿ ನೀಡಿರುವುದು ಅಕ್ರಮ. ಕೆಲವು ಕಡೆ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ರೈತರಿಗೆ ಭೂಮಾಲೀಕರಿಗೆ ಸರ್ಕಾರ ಪರಿಹಾರವನ್ನೇ ನೀಡಿಲ್ಲ. ತಲತಲಾಂತರದಿಂದ ವಾಸಿಸುತ್ತಿರುವ, ಉಳುತ್ತಿರುವ ಆಸ್ತಿಗೆ ದಾಖಲೆ ಎಲ್ಲಿಂದ ತರುವುದು?~ ಎಂದು ಪ್ರಶ್ನಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ `ಬ್ರಿಟಿಷರ ಕಾಲದ ಕಾನೂನನ್ನು ಹೇಳುವ ಸರ್ಕಾರ ಭೂಮಿಯನ್ನು ಸ್ವಯಂಪ್ರೇರಣೆಯಿಂದ ನೀಡಬೇಕು ಇಲ್ಲವಾದರೆ ಬಲವಂತವಾಗಿ ಕಿತ್ತುಕೊಳ್ಳಲಾಗುವುದು ಎಂದು ಬೆದರಿಸುತ್ತದೆ. ಹಾಗೆ ಹೇಳುವ ಮೂಲಕ ಭೂಮಿಯ ಮೇಲೆ ಸರ್ಕಾರ ಬಲಾತ್ಕಾರ ಎಸಗುತ್ತಿದೆ~ ಎಂದರು.

`ಆಹಾರ ಭದ್ರತೆಗಾಗಿ ಭೂಮಿಯನ್ನು ಪಾಳು ಬಿಡಬಾರದು ಎಂಬ ಮಾತಿದೆ. ಆದರೆ ರೈತರ ಕೃಷಿಭೂಮಿಯನ್ನು ಸರ್ಕಾರವೇ ಪಾಳು ಬಿಡುತ್ತಿದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಕ್ಕೂಟದ ಕಾರ್ಯಾಧ್ಯಕ್ಷ `ಅಗ್ನಿ~ ಶ್ರೀಧರ್, ಅಧ್ಯಕ್ಷ ಇಂದೂಧರ ಹೊನ್ನಾಪುರ, ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಡಿಎಸ್‌ಎಸ್ ಸಂಯೋಜಕ ಬಣದ ಅಧ್ಯಕ್ಷ ವಿ. ನಾಗರಾಜ್, ಅಹಿಂದ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಎನ್.ವಿ.ನರಸಿಂಹಯ್ಯ, ನೈಸ್ ಭೂ ಸ್ವಾಧೀನ ವಿರೋಧಿ ವೇದಿಕೆ ಅಧ್ಯಕ್ಷ ಪಂಚಲಿಂಗಯ್ಯ ಮಾತನಾಡಿದರು.

ಕರುನಾಡ ಸೇನೆ ರಾಜ್ಯ ಘಟಕದ ಅಧ್ಯಕ್ಷ ಪಟ್ಟಣಗೆರೆ ಜಯಣ್ಣ, ಡಿಎಸ್‌ಎಸ್ (ಭೀಮವಾದ) ಅಧ್ಯಕ್ಷ ಮೋಹನ್‌ರಾಜ್, ಜನಮತ ಸಂಘಟನೆ ಸಂಚಾಲಕ ಮಂಜುನಾಥ ಅದ್ದೆ ಇತರರಿದ್ದರು.

`ದೇವೇಗೌಡರ ಕೂಸು~

`ನೈಸ್ ಎನ್ನುವುದು ದೊಡ್ಡ ಮೋಸ. ಅದು `ನಯಸ್ಸಾದ~ ಮೋಸ~ ಎಂದು ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾರ್ಮಿಕವಾಗಿ ಹೇಳಿದರು.

`ಖೇಣಿ ಇದುವರೆಗೆ ಮೂರು ಸರ್ಕಾರಗಳಿಗೆ ವಂಚಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಪದೇ ಪದೇ ನೈಸ್ ದೇವೇಗೌಡರ ಕೂಸು ಎನ್ನುತ್ತಾರೆ. ಆದರೆ ಅವರು ಈ ಕೂಸನ್ನು ಯಾಕೆ ಹೆಗಲ ಮೇಲೆ ಕೂರಿಸಿಕೊಂಡಿದ್ದಾರೆ ಎಂಬುದಕ್ಕೆ ಉತ್ತರ ಬೇಕಿದೆ~ ಎಂದು ಅವರು ನುಡಿದರು.

`ರಸ್ತೆ ನಿರ್ಮಾಣ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ರಸ್ತೆಯ ಹೆಸರಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ವ್ಯವಹಾರ ನಿಲ್ಲಬೇಕು~ ಎಂದು ತಿಳಿಸಿದರು.

`ಕೋರ್ಟ್‌ನಿಂದಲೂ ನ್ಯಾಯ ಸಿಗದು~
`ರಾಜಕಾರಣಿಗಳು, ಅಧಿಕಾರಿಗಳು, ಕೋರ್ಟಿನ ಬಳಿಗೆ ಹೋದರೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಈಗ ಉಳಿದಿಲ್ಲ. ಸುಪ್ರೀಂಕೋರ್ಟ್‌ಗೆ ಹೋದರೂ ನ್ಯಾಯ ದೊರೆಯದ ಪರಿಸ್ಥಿತಿ ಇದೆ...~
-
ಇದು ಮುಂಬೈ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಕರ್ನಾಟಕದವರೇ ಆದ ಹೊಸಬೆಟ್ ಸುರೇಶ್ ಅವರು ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದ ಮಾತು.

ಈಸ್ಟ್ ಇಂಡಿಯಾ ಕಂಪೆನಿ ಮಾದರಿಯಲ್ಲಿ ನಮ್ಮವರೇ ನಮ್ಮನ್ನು ಆಳುತ್ತಿದ್ದಾರೆ. ಸರ್ಕಾರಕ್ಕೆ ರೈತರ ಕೃಷಿ ಜಮೀನನ್ನು ವಶಪಡಿಸಿಕೊಳ್ಳುವ ಹಕ್ಕು ಇಲ್ಲ. ಜನರನ್ನು ವಂಚಿಸಿ ಯೋಜನೆಗಳನ್ನು ರೂಪಿಸುವುದು ನಿಲ್ಲಬೇಕು~ ಎಂದು ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT