ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ, ಸೋಮಣ್ಣ ವಿರುದ್ಧ ಇನ್ನೊಂದು ದೂರು

Last Updated 24 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾನೂನು ಬಾಹಿರವಾಗಿ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ (ಡಿನೋಟಿಫೈ) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ವಿ.ಸೋಮಣ್ಣ ಅವರ ವಿರುದ್ಧ ಇನ್ನೊಂದು ಸುತ್ತಿನ ಕಾನೂನು ಸಮರ ಆರಂಭಗೊಂಡಿದೆ.

ಜ್ಞಾನಭಾರತಿ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ನಾಗದೇವನಹಳ್ಳಿ ಬಳಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನನ್ನು ಕಾನೂನು ಬಾಹಿರವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪ ಇದಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಕೀಲ ಎಚ್.ಯೋಗೇಂದ್ರ ಅವರು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲು ಮಾಡಿದ್ದಾರೆ. ಈ ದೂರನ್ನು ವಿಚಾರಣೆಗೆ ಅಂಗೀಕರಿಸುವ ಸಂಬಂಧ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಇದೇ 29ರಂದು ಆದೇಶ ಹೊರಡಿಸಲಿದ್ದಾರೆ.

`ಸರ್ವೇ ನಂ.77ರಲ್ಲಿನ ಸುಮಾರು 33 ಗುಂಟೆ ಜಮೀನಿಗೆ ದೇವೇಗೌಡ ಎಂಬುವರು ಮಾಲೀಕರಾಗಿದ್ದರು. ಇದನ್ನು ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡು 2010ರಲ್ಲಿ ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿದೆ. ಮಾಲೀಕರಿಗೆ ಪರಿಹಾರ ಕೂಡ ನೀಡಲಾಗಿದೆ. ಆದರೆ ಈ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಆಗ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರಲ್ಲಿ ದೇವೇಗೌಡರ ಪತ್ನಿ ಲಿಂಗಮ್ಮ ಕೋರಿಕೊಂಡರು.

ಜಮೀನನ್ನು ಸ್ವಾಧೀನ ಪಡಿಸಿಕೊಂಡಿರುವ ಸತ್ಯಾಂಶ ತಿಳಿದಿದ್ದರೂ ಯಡಿಯೂರಪ್ಪನವರು ಇದನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಆದೇಶಿಸಿದರು. ನಂತರ ಈ ಜಮೀನನ್ನು ಸೋಮಣ್ಣ ಕುಟುಂಬದ ಒಡೆತನದ ವಿಎಸ್‌ಎಸ್ ಎಜುಕೇಷನ್ ಟ್ರಸ್ಟ್‌ಗೆ ಮಾರಾಟ ಮಾಡಲಾಗಿದೆ~ ಎಂದು ಯೋಗೇಂದ್ರ ಆರೋಪಿಸಿದ್ದಾರೆ. ಈ ದೂರಿನಲ್ಲಿ ಸೋಮಣ್ಣ ಅವರ ಪತ್ನಿ ಶೈಲಜಾ ಹಾಗೂ ಪುತ್ರ ಬಿ.ಎಸ್.ನವೀನ್ ಅವರನ್ನೂ ಆರೋಪಿಯನ್ನಾಗಿಸಲಾಗಿದೆ.

ಈ ಮಧ್ಯೆ, ವಕೀಲ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ 6ನೇ ಖಾಸಗಿ ದೂರಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಹಾಗೂ ಅವರ ಪುತ್ರರು ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಗುರುವಾರ ಹಾಜರಾಗಿದ್ದರು.
ಸಿಬಿಐ ಕೋರ್ಟ್‌ನಲ್ಲಿ ಇವರ ವಿರುದ್ಧ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ನಡೆಯುತ್ತಿರುವ ಎಲ್ಲ ಪ್ರಕರಣಗಳ ವಿಚಾರಣೆಗೆ ತಡೆ ನೀಡಲಾಗಿದೆ. ಇದರಿಂದ ಖಾಸಗಿ ದೂರಿನ ವಿಚಾರಣೆಯನ್ನು ಮುಂದೂಡಲಾಯಿತು.

ಹಾಜರಾಗಲು ಎಚ್‌ಡಿಕೆಗೆ ಆದೇಶ
ಥಣಿಸಂದ್ರ ಗ್ರಾಮದಲ್ಲಿನ 3.08 ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ವಿವಾದದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಲೋಕಾಯುಕ್ತ ವಿಶೇಷ ಕೋರ್ಟ್ ಮುಂದೆ ಇದೇ 31ರಂದು ಹಾಜರಾಗುವಂತೆ ಹೈಕೋರ್ಟ್ ಬುಧವಾರ ಆದೇಶಿಸಿದೆ.

ಬಿಎಸ್‌ವೈ ಅರ್ಜಿ: ಇಂದು ವಿಚಾರಣೆ
ಜಿಂದಾಲ್ ಸಮೂಹದ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿಯಿಂದ ಸಂಶಯಾಸ್ಪದ ರೀತಿಯಲ್ಲಿ ಹಣ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ನಡೆಸಲಿದೆ.
ಯಡಿಯೂರಪ್ಪ ಸೇರಿದಂತೆ ಅವರ ಪುತ್ರರಾದ ಬಿ.ವೈ,ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಸೋಹನ್‌ಕುಮಾರ್ ಹಾಗೂ ಇತರರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ. ಆದುದರಿಂದ ಸಿಬಿಐ ಪೊಲೀಸರು ತಮ್ಮನ್ನು ಬಂಧಿಸುವ ಭೀತಿಯಿಂದ ಅವರೆಲ್ಲ ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಕಳೆದ ಬಾರಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಶುಕ್ರವಾರ ಹಾಜರು ಆಗುವಂತೆ ಎಲ್ಲರಿಗೂ ನಿರ್ದೇಶಿಸಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT