ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಲಹ ಬಹಿರಂಗ; ಹೊಸ ಬಣ ಸೃಷ್ಟಿ

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಮುಂಬೈ (ಐಎಎನ್‌ಎಸ್): ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಆಂತರಿಕ ಕಲಹ ಬಹಿರಂಗಗೊಂಡಿದ್ದು, ಅಧ್ಯಕ್ಷ ನಿತಿನ್ ಗಡ್ಕರಿ ಎರಡನೇ ಅವಧಿಗೂ ಮುಂದುವರಿಯಲು ನಿರ್ಧರಿಸಿರುವುದು ಎಲ್ಲರಿಗೂ ಸಂತಸವನ್ನು ನೀಡಿಲ್ಲ.

ಪಕ್ಷದ ಕೇಂದ್ರೀಯ ನಾಯಕತ್ವವು ಇಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿ ಸಭೆಗೂ ಮುನ್ನ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗಿದ್ದ ಭಿನ್ನಮತವನ್ನು ಬಗೆಹರಿಸಲು ಪ್ರಯತ್ನಿಸಿತು. ಆದರೆ ಪಕ್ಷದ ಅಧ್ಯಕ್ಷ ಮತ್ತು ಇತರ ಕೇಂದ್ರ ನಾಯಕರ ನಡುವಿನ ಭಿನ್ನಾಭಿಪ್ರಾಯವು ಪಕ್ಷದೊಳಗೆ ಹೊಸ ಬಣವನ್ನು ಸೃಷ್ಟಿಸಿರುವಂತೆ ಕಾಣುತ್ತಿದೆ.

ಎಲ್ಲರಿಗಿಂತಲೂ ಮುಖ್ಯವಾಗಿ ಗಡ್ಕರಿ ಎರಡನೇ ಅವಧಿಗೆ ಮುಂದುವರಿದಿರುವುದು ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಆಘಾತ ಉಂಟುಮಾಡಿದೆ. ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ, ಆ ಬಗೆಗಿನ ನಿರ್ಣಯದಲ್ಲಿ ಅವರು ಭಾಗವಹಿಸಿಲ್ಲ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ದ ನಿರ್ದೇಶನ ಪಡೆದು ಗಡ್ಕರಿ ಅಧಿಕಾರದಲ್ಲಿ ಮುಂದುವರಿಯಲು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ಅಡ್ವಾಣಿಯವರ ಭಾವನೆಯಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದರೊಂದಿಗೆ, ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಕೂಡ ಗಡ್ಕರಿ ಮಾತ್ರವಲ್ಲದೆ ಮೋದಿ ಅವರೊಡನೆಯೂ ಅಸಮಾಧಾನ ಹೊಂದಿರುವುದಾಗಿ ಈ ಮೂಲಗಳು ಹೇಳಿವೆ. ಇದಲ್ಲದೆ, ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಅವರೂ ಗಡ್ಕರಿ ವಿರುದ್ಧ ಇರುವುದಾಗಿ ಮೂಲಗಳು ವಿವರಿಸಿವೆ.

ಸಮಸ್ಯೆಯ ಮೂಲವೆಂದರೆ, ಗಡ್ಕರಿ ಆರ್‌ಎಸ್‌ಎಸ್‌ಗೆ ಆಪ್ತವಿರುವುದು. ನಾಗಪುರದಲ್ಲಿರುವ ಆರ್‌ಎಸ್‌ಎಸ್ ಮುಖ್ಯ ಕೇಂದ್ರದಿಂದಲೇ ನೇರವಾಗಿ ಅವರು ನಿರ್ದೇಶನ ಪಡೆಯುತ್ತಿರುವುದರಿಂದ ಪಕ್ಷದ ಹಿರಿಯ ನಾಯಕರು ಅಸಂತೋಷಗೊಂಡಿರುವುದಾಗಿ ಹೆಸರು ಹೇಳಲಿಚ್ಛಿಸದ ಮುಖಂಡರೊಬ್ಬರು ಹೇಳುತ್ತಾರೆ.

ಯಡಿಯೂರಪ್ಪನವರು ಸಹ ಗಡ್ಕರಿ ಮತ್ತು ಅಡ್ವಾಣಿ ನಡುವಿನ ಭಿನ್ನಮತದ ಲಾಭ ಪಡೆಯಲು ಯತ್ನಿಸಿದ್ದಾರೆ. ಗಡ್ಕರಿ ಮತ್ತು ಮೋದಿ ಪರ ಹಾಗೂ ಅಡ್ವಾಣಿಗೆ ಆಪ್ತರಾದ ಪಕ್ಷದ ಇನ್ನೊಬ್ಬ ಮುಖಂಡ ಅನಂತಕುಮಾರ್ ವಿರುದ್ಧ ಮಾತನಾಡುವ ಮೂಲಕ ಇದನ್ನು ಬಹಿರಂಗಪಡಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನದಿಂದ ತಮ್ಮನ್ನು ಬಿಜೆಪಿ ಹಿರಿಯರು ಇಳಿಸಿದ್ದರಿಂದ ಗಡ್ಕರಿ ಮೂಲಕ ಮತ್ತೆ ಗದ್ದುಗೆ ಏರಲು ಯಡಿಯೂರಪ್ಪ ಪ್ರಯತ್ನಿಸಿದ್ದಾರೆ.

`ಬಿಎಸ್‌ವೈ ಮಾನವ ಬಾಂಬ್~

ಮುಂಬೈ (ಪಿಟಿಐ): ಬಿಜೆಪಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು `ಮಾನವ ಬಾಂಬ್~ ಆಗಿದ್ದು, ಅಧ್ಯಕ್ಷ ನಿತಿನ್ ಗಡ್ಕರಿ ಅವರ ಹಾದಿಯಲ್ಲಿ `ನೆಲಬಾಂಬ್~ಗಳನ್ನು ಹಾಸಲಾಗಿದೆ ಎಂದು ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಶನಿವಾರ ನುಡಿದಿದ್ದಾರೆ.

ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ತಮ್ಮ ಹಳೆಯ ಮಿತ್ರಪಕ್ಷ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಬಗ್ಗೆ ಸಂಪಾದಕೀಯ ಬರೆದಿರುವ ಅವರು, ಮೊದಲಿಗೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸುವುದಿಲ್ಲವೆಂದು ತಿಳಿಸಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಕರ್ನಾಟಕದ ಯಡಿಯೂರಪ್ಪ ಅವರು ಕೊನೆಗಳಿಗೆಯಲ್ಲಿ ಹಾಜರಾದ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಗಡ್ಕರಿ ಪಕ್ಷದ ವಿಶೇಷ ಆಹ್ವಾನಿತರಾಗಿದ್ದ ಸಂಜಯ್ ಜೋಷಿ ಅವರನ್ನು ಕೈಬಿಟ್ಟು ಮೋದಿ ಅವರನ್ನು ತೃಪ್ತಿಪಡಿಸಿದ್ದರೂ ಮತ್ತು ಎರಡನೇ ಬಾರಿ ಮುಖ್ಯಮಂತ್ರಿಯಾಗಬೇಕೆಂಬ ಯಡಿಯೂರಪ್ಪನವರ ಬಯಕೆಯನ್ನು ಈಡೇರಿಸುವ ಭರವಸೆ ನೀಡಿ ಸಮಾಧಾನ ಪಡಿಸಿದ್ದರೂ, ಮುಂದಿನ ದಿನಗಳಲ್ಲಿ ಅಪಾಯ ಎದುರಾಗುವ ನಿರೀಕ್ಷೆ ಇರುವುದರಿಂದ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ ಎಂದು ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT