ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬಿಜೆಪಿ ದುರಾಡಳಿತದಿಂದ ರಾಜ್ಯದ ಘನತೆಗೆ ಧಕ್ಕೆ'

Last Updated 23 ಏಪ್ರಿಲ್ 2013, 8:47 IST
ಅಕ್ಷರ ಗಾತ್ರ

ಹೂವಿನಹಡಗಲಿ: ಬಿಜೆಪಿಯ ದುರಾಡಳಿತದಿಂದ ಕರ್ನಾಟಕದ ಘನತೆಗೆ ಧಕ್ಕೆ ಬಂದಿದೆ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ.ಪರಮೇಶ್ವರನಾಯ್ಕ ಪರ ಮತಯಾಚಿಸಿ ಮಾತನಾಡಿದ ಅವರು, ಕರ್ನಾಟಕದ ಬಗ್ಗೆ ದೇಶದಲ್ಲಿಯೇ ಗೌರವ ಭಾವನೆ ಇತ್ತು. ದೇಶದ ಗಣ್ಯಾತಿಗಣ್ಯರನ್ನು ರಾಜ್ಯಕ್ಕೆ ಆಮಂತ್ರಿಸುವಾಗ ಖುಷಿಯಿಂದ ಒಪ್ಪಿಕೊಳ್ಳುವ ವಾತಾವರಣವಿತ್ತು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಬೆಳವಣಿಗೆಗಳಿಂದ ಸಜ್ಜನರು ರಾಜ್ಯ ಬಿಟ್ಟು ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದರು.

ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಲಾಗಿದೆ. ವಿದ್ಯುತ್ ಉತ್ಪಾದನೆಗೆ ಒತ್ತು ಕೊಡದೇ ಇದ್ದುದರಿಂದ ರಾಜ್ಯದ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅನುಕಂಪದಿಂದ ಅಧಿಕಾರಕ್ಕೆ ಬಂದು 7 ವರ್ಷ ಅಧಿಕಾರ ನಡೆಸಿದ ಬಿಜೆಪಿಯ ಕೊಡುಗೆಯಾದರೂ ಏನು ಎಂದು  ಎಂದು ತರಾಟೆಗೆ ತೆಗೆದುಕೊಂಡರು.

ಮಾಜಿ ಸಚಿವ ಸಗೀರ್ ಅಹ್ಮದ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿದರು. ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾ ನಂದ, ಎಂ.ಪರಮೇಶ್ವರಪ್ಪ, ತಾಪಂ ಅಧ್ಯಕ್ಷೆ ದುರುಗಮ್ಮ, ಯುವ ಕಾಂಗ್ರೆಸ್ ಅಧ್ಯಕ್ಷ ಬಾಹುಬಲಿ ಜೈನ್ ಇತರರು ಉಪಸ್ಥಿತರಿದ್ದರು.

ಪ್ರಚಾರ ಸಭೆ ರದ್ದು
ಹಗರಿಬೊಮ್ಮನಹಳ್ಳಿ: ಕ್ಷೇತ್ರ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರು ತೀವ್ರವಾಗಿ ಪ್ರತಿಭಟಿಸುವ ಖಚಿತ ಸುಳಿವಿನ ಮೇರೆಗೆ, ಸೋಮವಾರ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ನೇತೃತ್ವದ ಬಹಿರಂಗ ಚುನಾವಣಾ ಪ್ರಚಾರ ಸಭೆ ರದ್ದಾಯಿತು.

ಖರ್ಗೆ ಮತ್ತು ಧರ್ಮಸಿಂಗ್ ಸಮ್ಮುಖದಲ್ಲಿ, ಸ್ಥಳೀಯರನ್ನು ಕಡೆಗಣಿಸಿ ಹೊರಗಿನ ಅಭ್ಯರ್ಥಿಯನ್ನು ಪಕ್ಷದ ಕಾರ್ಯಕರ್ತರ ಮೇಲೆ ಹೇರುವಲ್ಲಿ ಯಶಸ್ವಿಯಾಗಿರುವ ಕೆ.ಸಿ.ಕೊಂಡಯ್ಯ ಮತ್ತು ಅಲ್ಲಂ ವೀರಭದ್ರಪ್ಪ ಅವರ ವಿರುದ್ಧ ತೀವ್ರವಾಗಿ ಪ್ರತಿಭಟಿಸಲು ಕಾರ್ಯಕರ್ತರು ಸಜ್ಜಾಗಿದ್ದರು. ಇದರ ಸುಳಿವು ದೊರೆತ ಇಲ್ಲಿನ ಸ್ಥಳೀಯ ಮುಖಂಡರು ಸಂಬಂಧಪಟ್ಟವರಿಗೆ ವರದಿ ಸಲ್ಲಿಸುತ್ತಿದ್ದಂತೆ ಹೆಲಿಕ್ಯಾಪ್ಟರ್ ತಾಂತ್ರಿಕ ದೋಷದ ನೆಪದಲ್ಲಿ ಸಭೆ ರದ್ದಾಗಿದೆ ಎಂದು ಪ್ರಕಟಿಸಲಾಯಿತು.

ಸಭೆಯ ವರದಿಗೆಂದು ತೆರಳಿದ್ದ ಪ್ರಜಾವಾಣಿಯೊಂದಿಗೆ ಹೆಸರು ಹೇಳಲಿಚ್ಛಿಸದ ಕಾರ್ಯಕರ್ತರೊಬ್ಬರು ಮಾತನಾಡಿ, ಸ್ಥಳೀಯವಾಗಿ   ಸ್ಪರ್ಧಿಸಲು ಪಕ್ಷದಲ್ಲಿ ಅರ್ಹ ಅಭ್ಯರ್ಥಿಗಳಿದ್ದರೂ ಬಳ್ಳಾರಿ ಮೂಲದ ಮಾರೆಣ್ಣನವರನ್ನು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮುಖಂಡ ಹೆಗ್ಡಾಳು ರಾಮಣ್ಣನವರ ಪತ್ನಿ ಶಾರದಮ್ಮ ರಾಮಣ್ಣ           ಅವರ ಹೆಸರು ಅಂತಿಮಗೊಳಿಸಲಾಗಿದ್ದರೂ ಕಡೆ ಗಳಿಗೆಯಲ್ಲಿ ಕೊಂಡಯ್ಯ ಮತ್ತು  ಅಲ್ಲಂ ವೀರಭದ್ರಪ್ಪ ಅವರು ಖರ್ಗೆ ಮತ್ತು ಧರ್ಮಸಿಂಗ್ ಅವರ ಮೇಲೆ ಒತ್ತಡ ಹೇರಿ ಮಾರೆಣ್ಣನವರ ಆಯ್ಕೆಯನ್ನು ಅಂತಿಮಗೊಳಿಸಿದರು ಎಂದು ಆರೋಪಿಸಿದರು.

ಇಂದಿನ ಸಭೆಯಲ್ಲಿ ತೀವ್ರವಾಗಿ ಆಕ್ರೋಶಗೊಂಡಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಖರ್ಗೆ ಮತ್ತು ಧರ್ಮಸಿಂಗ್ ಸಮ್ಮುಖದಲ್ಲಿ  ಗಲಾಟೆ ಆರಂಭಿಸುವ ಸೂಚನೆ ಇತ್ತು. ಇದೇ ಹಿನ್ನೆಲೆಯಲ್ಲಿ ಸಭೆ ರದ್ದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

`ಹೈಕಗೆ ವಿಶೇಷ ಸ್ಥಾನ: ಕಾಂಗ್ರೆಸ್ ಕೊಡುಗೆ'
ಹೊಸಪೇಟೆ: ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ನೀಡುವಲ್ಲಿ ಮಾಡಿದ ಪರಿಶ್ರಮ, ಆ ಪರಿಶ್ರಮಕ್ಕೆ ಪರಿಹಾರವಾಗಿ ಕಾಂಗ್ರೆಸ್‌ಗೆ ಓಟು ನೀಡುವ ಮೂಲಕ ಮತದಾರರು ಋಣ ತೀರಿಸಬೇಕು ಎಂದು ಕೇಂದ್ರ ಕಾರ್ಮಿಕ ಕಲ್ಯಾಣ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಭಾನುವಾರ ಹೊಸಪೇಟೆಯ ಗಾಂಧಿ ಚೌಕ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್‌ವಹಾಬ್ ಪರ ಚುನಾವಣಾ ಪ್ರಚಾರ ನಡೆಸಿದ ಅವರು ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ನೀಡುವಲ್ಲಿ ವಿಧಿ 371ಗೆ ದೊರೆತ ಮಾನ್ಯತೆಯನ್ನು ಮತದಾರರು ಮರೆಯದೆ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಬೆಂಬಲಿಸಬೇಕು. ಹಾಗೂ ಸಮರ್ಪಕ ಅನುಷ್ಠಾನ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರು.

ಬಿಜೆಪಿ ಸಾಧನೆ: ಡೀಲ್, ಬೇಲ್ ಮತ್ತು ಜೇಲ್ 5 ವರ್ಷದಲ್ಲಿ ಬಿಜೆಪಿ ಮಾಡಿದ ಸಾಧನೆ ಎಂದು ವ್ಯಂಗ್ಯವಾಡಿದ ಖರ್ಗೆ ತತ್ವ, ಆದರ್ಶ, ಸಿದ್ಧಾಂತಗಳ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದ ರಾಜ್ಯದ ಜನತೆಗೆ ಬಿಜೆಪಿ ಕಾನೂನು ಬಾಹಿರ     ವ್ಯವಹಾರಗಳಲ್ಲಿ ತೊಡಗಿ ದ್ರೋಹಮಾಡಿದೆ. ಸಮರ್ಥ ನಾಯಕತ್ವ ಹೊಂದಿದ ಕಾಂಗ್ರೆಸ್ ಬಿರುಗಾಳಿಯಲ್ಲಿ ಬಿಜೆಪಿ ದೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್‌ನ ಅಬ್ದುಲ್ ವಹಾಬ್‌ರನ್ನು ಬೆಂಬಲಿಸುವ ಮೂಲಕ ಹೊಸಪೇಟೆಯ ಸರ್ವಾಂಗೀಣ ಅಭಿವೃದ್ಧಿಗೆ ಮತದಾರರು ಸಹಕಾರ ನೀಡಬೇಕು ಎಂದು ಕೋರಿದರು.

ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಚಿವ ಸಗೀರ ಅಹಮ್ಮದ್, ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮಾತನಾಡಿ, ಕಾನೂನು ಬಾಹಿರ ವ್ಯವಹಾರ ಹಾಗೂ ದಬ್ಬಾಳಿಕೆಯನ್ನು ತಡೆಯಲು ರಾಜ್ಯದ ಜನತೆ ಕಾಂಗ್ರೆಸ್ ಅನ್ನು ಬೆಂಬಲಿಸಲು ಮುಂದಾಗಿದ್ದಾರೆ ಎಂದರು.

ಸೇರ್ಪಡೆ: ಮಾಜಿ ಶಾಸಕ ಶಂಕರಗೌಡರ ಪುತ್ರ ಭರಮಲಿಂಗನಗೌಡ  ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಿದರು. ಅವರೊಂದಿಗೆ ಜೇತನ್‌ಕುಮಾರ, ಸಾಲಿ ಸಿದ್ಧಯ್ಯಸ್ವಾಮಿ ಸೇರಿದಂತೆ ಅನೇಕರು ಕಾಂಗ್ರೆಸ್‌ಗೆ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT