ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ದೂರ ಇಡಲು ಕಾಂಗ್ರೆಸ್‌ಗೆ ಜೆಡಿಎಸ್ ಸಾಥ್?

Last Updated 23 ಫೆಬ್ರುವರಿ 2011, 8:20 IST
ಅಕ್ಷರ ಗಾತ್ರ

ಗಂಗಾವತಿ: ಇಲ್ಲಿನ ತಾಲ್ಲೂಕು ಪಂಚಾಯಿತಿಯ ಮೊದಲ 20 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮತ್ತು ಉಪಾಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆ (ಎಸ್ಸಿ) ವರ್ಗಕ್ಕೆ ಮೀಸಲಾಗಿದ್ದು ಫೆ. 24ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ.ತಾಪಂನ 32 ಸದಸ್ಯ ಬಲದಲ್ಲಿ ಕಾಂಗ್ರೆಸ್ 16 ಸ್ಥಾನ ಹೊಂದಿದ್ದರೂ ಅಧಿಕಾರ ಪಡೆಯಲು ಪಕ್ಷೇತರ ಸದಸ್ಯರೊಬ್ಬರ ಮನವೊಲಿಸುವುದು, ಇಲ್ಲವೆ ಜೆಡಿಎಸ್ (5) ದೋಸ್ತಿ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಹೇಗಾದರೂ ಮಾಡಿ ಬಿಜೆಪಿಯನ್ನು (10 ಸ್ಥಾನ) ಅಧಿಕಾರದಿಂದ ದೂರ ಇಡಲೇಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ಸಿಗರು ಜೆಡಿಎಸ್ ದೋಸ್ತಿಗೆ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮಂಗಳವಾರ ಮುಖಂಡರು ಮೊದಲ ಹಂತದ ಮಾತುಕತೆ ನಡೆಸಿರುವುದಾಗಿ ತಿಳಿದು ಬಂದಿದೆ.ಕಾಂಗ್ರೆಸ್‌ನ ಕೆಲ ತಾ.ಪಂ. ಸದಸ್ಯರು ಮಂಗಳವಾರ ಮಾಜಿ ಎಂಎಲ್‌ಸಿ. ಎಚ್.ಆರ್. ಶ್ರೀನಾಥ, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಮತ್ತು ಮಲ್ಲಿಕಾರ್ಜುನ ನಾಗಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು.

ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾದ ಬಿಜೆಪಿ ತನಗೆ ಅನುಕೂಲವಾಗುವಂತೆ ತಾ.ಪಂ.ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ತರುವಲ್ಲಿ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಸಿ ಯಶಸ್ವಿಯಾಗಿದೆ. ಆದರೆ ಅಧಿಕಾರ ದಕ್ಕಿಸಿಕೊಳ್ಳುವುದು ಸುಲಭದ ಮಾತಾಗಿಲ್ಲ.

ಬಲಾಬಲ: ಹಾಲಿ ಮೀಸಲಾತಿ ಪ್ರಕಾರ ಹಿಂದುಳಿದ ವರ್ಗ ಅ ಕ್ಷೇತ್ರದಿಂದ ಕಾರಟಗಿ, ಹಣವಾಳ, ಹೇರೂರು (ಬಿಜೆಪಿ) ಮತ್ತು ಬೇವಿನಾಳ (ಕಾಂಗ್ರೆಸ್) ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀರಾಮನಗರ ಮತ್ತು ಸುಳೇಕಲ್ (ಕಾಂಗ್ರೆಸ್) ಅಭ್ಯರ್ಥಿಗಳ ಮಧ್ಯೆ ಸ್ಪರ್ಧೆಯಿದೆ.

ಆದರೆ ಅಧ್ಯಕ್ಷ ಸ್ಥಾನಕ್ಕೆ ಮಹಿಳೆ ಬದಲಿಗೆ ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬಂದಿದ್ದರೂ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸ್ಪರ್ಧಿಸಬಹುದಾಗಿದ್ದರಿಂದ ಕಾಂಗ್ರೆಸ್‌ನ ಢಣಾಪುರ, ಕಾರಟಗಿ, ಕನಕಗಿರಿ-2 ಮತ್ತು ವೆಂಕಟಗಿರಿ ಕ್ಷೇತ್ರದ ಸದಸ್ಯರ ಮಧ್ಯೆ ಪೈಪೋಟಿ ಏರ್ಪಟ್ಟಿದೆ.ಆಡಳಿತರೂಢ ಬಿಜೆಪಿ ಸಂಸದ ಮತ್ತು ಶಾಸಕರಿದ್ದರೂ ತಾ.ಪಂ. ಅಧಿಕಾರ ಪಡೆಯಲು ವಿಫಲವಾದಲ್ಲಿ ಬಿಜೆಪಿಗೆ ಅದಕ್ಕಿಂತ ದೊಡ್ಡ ಮುಖಭಂಗ ಮತ್ತೊಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT