ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಬಡವರ ನೋವು ಏಕೆ ಕಾಣಿಸುತ್ತಿಲ್ಲ?

Last Updated 16 ಫೆಬ್ರುವರಿ 2012, 7:20 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅತಿಹೆಚ್ಚು ಪ್ರತಿಭಟನೆಗಳು ನಡೆಯುತ್ತಿರುವುದು ದಾವಣಗೆರೆಯಲ್ಲಿ. ಇಲ್ಲಿ ಅತ್ಯಂತ ಶ್ರೀಮಂತ ರಾಜಕಾರಣಿಗಳೇ ಇದ್ದಾರೆ. ಆದರೆ, ಜನರನ್ನು ಎಲ್ಲಿಟ್ಟಿದ್ದಾರೆ? ಜಾತಿಯ ಹೆಸರಿನಲ್ಲಿ ಮಠಾಧೀಶರು ಜನಪ್ರತಿನಿಧಿಗಳಿಗೆ ಸೂಚನೆ ಕೊಡುತ್ತಾರೆ. ಅದನ್ನು ಅವರು ವಿಧೇಯರಾಗಿ ಪಾಲಿಸುತ್ತಾರೆ. ರಾಜ್ಯದ ಖಜಾನೆ ಭರ್ತಿಯಾಗಿದೆ ಅನ್ನುತ್ತೀರಲ್ಲಾ. ಅದನ್ನು ಇಟ್ಟುಕೊಂಡು ಇಲ್ಲಿ ಬಡಜನರನ್ನು ಯಾಕೆ ಗೋಳಾಡಿಸುತ್ತೀರಿ? ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡದಿದ್ದರೆ ಯಾವ ಪುರುಷಾರ್ಥಕ್ಕೆ ಅಧಿಕಾರದಲ್ಲಿದ್ದೀರಿ?

- ಹೀಗೆ ಸರಣಿ ಪ್ರಶ್ನೆ, ವಾಗ್ಬಾಣಗಳು ಹರಿದು ಬಂದದ್ದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಂದ.

ನಗರದಲ್ಲಿ ಬುಧವಾರ ಜಿಲ್ಲಾ ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾದ ಜನಪರ ಜನತಾ ಜಾಥಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿ ಬಹುಸಂಖ್ಯೆಯಲ್ಲಿ ಹಾಜರಿದ್ದ ಅಂಗವಿಕಲರು, ವೃದ್ಧರು, ವಿಧವೆಯರನ್ನು ಗಮನಿಸಿದ ಕುಮಾರಸ್ವಾಮಿ. ಅವರನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಪ್ರಶ್ನೆಗಳ ಸುರಿಮಳೆಗೈದರು.

ಎಲ್ಲವೂ ಸರಿಯಿದೆ. ಎಲ್ಲ ಸೌಲಭ್ಯ ಕೊಟ್ಟಿದ್ದೇವೆ ಎನ್ನುವ ಬಿಜೆಪಿ ಸರ್ಕಾರಕ್ಕೆ ಈ ಬಡವರ ನೋವು ಯಾಕೆ ಕಾಣಿಸುತ್ತಿಲ್ಲ? ಬಡ ಕುಟುಂಬಗಳು ಸಂಕಷ್ಟದಲ್ಲಿವೆ. ಇದು ಇಡೀ ರಾಜ್ಯದ ಜನರ ಪರಿಸ್ಥಿತಿ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಾಗ ವಿರೋಧ ಪಕ್ಷದವರು ಅಸೂಯೆಯಿಂದ ಕೆಳಗಿಳಿಸಿದರು ಎಂದು ಹೇಳಲಾಯಿತು. ತಮ್ಮನ್ನು ವಚನಭ್ರಷ್ಟ ಎಂದು ಜರೆಯಲಾಯಿತು. ಇದರ ಪರಿಣಾಮ ವಿಧಾನಸಭೆ, ಲೋಕಸಭೆ, ಜಿ.ಪಂ., ತಾ.ಪಂ. ಚುನಾವಣೆಗಳಲ್ಲಿ ಜೆಡಿಎಸ್‌ಗೆ ಶಿಕ್ಷೆ ಕೊಟ್ಟಿದ್ದೀರಿ. ನಾವು ಚೆನ್ನಾಗಿಯೇ ಇದ್ದೇವೆ. ಆದರೆ, ಬಿಜೆಪಿ ಆಡಳಿತದಲ್ಲಿ ಬಡಜನರು ಶಾಪಗ್ರಸ್ತರಾಗಿದ್ದಾರೆ ಎಂದು ವಿಷಾದಿಸಿದರು.

ಬಡ ವಿದ್ಯಾರ್ಥಿಗಳಿಗೆ ಉಚಿತ ಉನ್ನತ ಶಿಕ್ಷಣ, ಹಾಗೂ ಶುಲ್ಕದಲ್ಲಿ ವಿನಾಯಿತಿ ಪ್ರಸ್ತಾವಕ್ಕೆ ವಿರೋಧಿಸಿದರು. ಟ್ರ್ಯಾಕ್ಟರ್ ಸಬ್ಸಿಡಿಯನ್ನೂ ನಿಲ್ಲಿಸಲಾಯಿತು. ರೈತರು ನೇಣು ಹಾಕಿಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಇಲ್ಲಿ ಸೀರೆ ಹಂಚಲಾಯಿತು. ಅದೇ ಬಡಜನರು ಮನೆ ಕೇಳಲು ಹೋದಾಗ ಪೊಲೀಸರಿಂದ ಹೊಡೆಸಲಾಯಿತು ಎಂದು ಘಟನೆಗಳನ್ನು ಸ್ಮರಿಸಿದರು.

ಯಾರೂ ಜಾತಿಯ ವ್ಯಾಮೋಹಕ್ಕೆ ಒಳಗಾಗಬಾರದು. ಇಲ್ಲಿನವರ ನೋವುಗಳನ್ನು ನೋಡಿದಾಗ ನಮಗೆ ತಿನ್ನುವ ಅನ್ನ ದಕ್ಕುತ್ತಿದೆಯೇ ಎಂಬುದನ್ನು ಅರಿಯಬೇಕು. ಈ ಪಶ್ಚಾತ್ತಾಪ  ರಾಜಕಾರಣಿಗಳಿಗೆ ಇರಬೇಕು. ಜನರ ಎಲ್ಲ ಸಮಸ್ಯೆ ಬಗೆಹರಿಸುವ ಶಕ್ತಿ ತಮ್ಮಲ್ಲಿ ಸದ್ಯಕ್ಕಿಲ್ಲ. ನೀವು(ಮತದಾರರು) ಆ ಶಕ್ತಿ ತುಂಬಬೇಕು ಎಂದು ಕೋರಿದರು.

ಫೋಟೊದಿಂದ ನಾಯಕರಾಗುವುದಿಲ್ಲ: ತಮ್ಮ ಜತೆ ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ಯಾರೂ ನಾಯಕರಾಗುವುದಿಲ್ಲ. ಬಡಜನರ ನಿಜವಾದ ಕಷ್ಟಗಳಿಗೆ ಹೋರಾಟ ನಡೆಸಿದರೆ ಮಾತ್ರ ನಾಯಕರಾಗಬಹುದು. ಚುನಾವಣೆಗಳ ಸಂದರ್ಭ ಯಾವುದೇ ಆಮಿಷಕ್ಕೆ ಒಳಗಾಗದೇ ಸ್ವಂತ ನಿರ್ಧಾರಕ್ಕೆ ಬರಬೇಕು ಎಂದರು.

ಗೋಹತ್ಯೆ ನಿಷೇಧದ ಕುರಿತು ಬಂದ ಪ್ರಶ್ನೆಗೆ ಉತ್ತರಿಸಿದ ಅವರು, ನೀವೇ ಎಷ್ಟು ಮಂದಿ ಗಂಡು ಕರುವನ್ನು ಸಾಕುತ್ತೀರಿ? ಯಾರೂ ಇಲ್ಲ. ಹೀಗಾದಾಗ ಗೋರಕ್ಷಣೆ ಹೇಗೆ ಸಾಧ್ಯ. ವಾಸ್ತವವನ್ನು ಅರಿತು ಮಾತನಾಡಬೇಕು. ಈ ಬಗ್ಗೆ ಪ್ರತ್ಯೇಕ ಚರ್ಚೆ ನಡೆಸೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅನಾರೋಗ್ಯಪೀಡಿತ ಪತ್ರಕರ್ತ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಆರ್ಥಿಕ ನೆರವು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT