ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಮತ, ಪಕ್ಷನಿಧಿ ಹಣಕ್ಕೆ ಬಿಇಒ ಪತ್ರ!

Last Updated 9 ಏಪ್ರಿಲ್ 2013, 5:19 IST
ಅಕ್ಷರ ಗಾತ್ರ

ಹರಪನಹಳ್ಳಿ: ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ಹಾಗೂ ಪಕ್ಷದ ನಿಧಿಗೆ ರೂ. 50ಸಾವಿರ ಹಣ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಎಸ್. ಜತ್ತಿ ಅವರು ಸ್ಥಳೀಯ ಖಾಸಗಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ ಎನ್ನಲಾದ ಘಟನೆ ಬೆಳಕಿಗೆ ಬಂದಿದೆ.

ಪತ್ರದ ಸಾಲುಗಳು ಹೀಗಿವೆ: `ಈ ಮೂಲಕ ನಿಮಗೆ ತಿಳಿಸುವುದೇನೆಂದರೆ ಈಗ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಎಲ್ಲರೂ ಸೇರಿಕೊಂಡು ಕೆಲಸ ಮಾಡಬೇಕಾಗಿದೆ. ಕಾರಣ ನೀನು ಮತ್ತು ಸಿಬ್ಬಂದಿ ವರ್ಗದವರು ಕೂಡಿ ಬಿಜೆಪಿ ಪರವಾಗಿ ಮತ ಹಾಕುವಂತೆ ಜನರನ್ನು ತಮ್ಮ ಕಡೆ ಸೆಳೆಯಬೇಕು. ಮತ್ತು ನೀವು ಈ ಹಿಂದೆ ಯಾವುದೇ ಪಾರ್ಟಿ ಫಂಡ್ ಕೊಟ್ಟಿರುವುದಿಲ್ಲ.

ಈ ಸಲ ಮಾತ್ರ ನೀನು ಮಾತ್ರ ಸಿಬ್ಬಂದಿ ವರ್ಗದವರಿಂದ ಪಾರ್ಟಿ ಫಂಡ್ ರೂ 50ಸಾವಿರ ಮೊತ್ತವನ್ನು ದೈಹಿಕ ಶಿಕ್ಷಕ ಕೆ. ಸಿದ್ದಲಿಂಗನಗೌಡ ಅವರ ಕಡೆ ಮುಟ್ಟಿಸಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳನ್ನು ಕಷ್ಟದ ದಿನಗಳಾಗಿ ಅನುಭವಿಸಬೇಕಾಗುತ್ತದೆ. ಈ ವಿಷಯವನ್ನು ಗೌಪ್ಯವಾಗಿ ಇಡಿ' ಹೀಗೆಂದು ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಎಸ್. ಜತ್ತಿ ಸ್ಥಳೀಯ ಕೆಸಿಎ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎ. ಚಂದ್ರಮೌಳಿ ಅವರಿಗೆ ಬರೆದಿರುವ ಪತ್ರದಲ್ಲಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಬಿಜೆಪಿ ಪರವಾಗಿ ಮತ ಚಲಾಯಿಸುವಂತೆ ಹಾಗೂ ಚುನಾವಣೆಗೆ ಪಾರ್ಟಿ ಫಂಡ್ ಕೊಡುವಂತೆ ಮುಖ್ಯೋಪಾಧ್ಯಾಯರಿಗೆ ಬಿಇಒ ವೀರಣ್ಣ ಎಸ್. ಜತ್ತಿ ವಿನಂತಿಸಿಕೊಂಡಿರುವ ಪತ್ರ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಇಒ ವೀರಣ್ಣ ಅವರು ಶಾಸಕರು ಹಾಗೂ ಸಂಸತ್ ಸದಸ್ಯರ ಜತೆಗೆ ಹೊಂದಿರುವ ನಿಕಟ ಸಂಪರ್ಕ ಹಾಗೂ ಸಭೆ- ಸಮಾರಂಭಗಳಲ್ಲಿ ಅವರನ್ನು ಹೊಗಳುತ್ತಿದ್ದ ಸನ್ನಿವೇಶಗಳನ್ನು ನೋಡಿ ಇದ್ದರೂ ಇರಬಹುದು ಎಂದು ಕೆಲವರು ಚರ್ಚಿಸುತ್ತಿದ್ದರೆ.

ಇನ್ನೂ ಕೆಲವರು, ಅಧಿಕಾರಿಗಳು ಈ ತರಹ ಪತ್ರ ಬರೆಯಲು ಸಾಧ್ಯವಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕಳೆದ 2009ರ ಲೋಕಸಭಾ ಚುನಾವಣೆಯಲ್ಲಿಯೂ ಸಹ, ವೀರಣ್ಣ ಎಸ್. ಜತ್ತಿ ಇದೇ ರೀತಿ ಶಿಕ್ಷಕರಿಗೆ ಬಿಜೆಪಿ ಪರವಾಗಿ ಮತ ಚಲಾಯಿಸುವಂತೆ ಕೋರಿ ಬರೆದ ಪತ್ರ ತೀವ್ರ ವಿವಾದದ ದೂಳೆಬ್ಬಿಸಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಕೆಂಗಣ್ಣಿಗೂ ಗುರಿಯಾಗಿದ್ದ ವೀರಣ್ಣ ಎಸ್. ಜತ್ತಿ, ಆಯೋಗದ ಶಿಫಾರಸ್ಸಿನ ಮೇರೆಗೆ ಬಳ್ಳಾರಿ ಡಯಟ್‌ಗೆ ವರ್ಗಾವಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಿಡಿಗೇಡಿಗಳ ಕೃತ್ಯ: ಬಿಇಒ
ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡುವಂತೆ ಹಾಗೂ ಪಾರ್ಟಿ ಫಂಡ್ ಕೊಡುವಂತೆ ತಮ್ಮ ಹೆಸರಿನಲ್ಲಿ ಕೆಸಿಎ ಶಾಲೆಯ ಮುಖ್ಯಶಿಕ್ಷಕ ಚಂದ್ರಮೌಳಿ ಅವರಿಗೆ ಬರೆದಿರುವ ಪತ್ರ ಕಿಡಿಗೇಡಿಗಳ ಕೃತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಎಸ್. ಜತ್ತಿ ಸ್ಪಷ್ಟಪಡಿಸಿದ್ದಾರೆ. ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಯಾವುದೇ ಪತ್ರ ನನ್ನಿಂದ ರವಾನೆಯಾಗಿರುವುದಿಲ್ಲ. ನನ್ನ ವಿರುದ್ಧ ಅಪಪ್ರಚಾರ, ತೇಜೋವಧೆ ಮಾಡುವ ಮೂಲಕ ನನಗೆ ಹಾಗೂ ನನ್ನ ಹುದ್ದೆಗೆ ಕಳಂಕ ತರುವವರ ಉದ್ದೇಶದಿಂದ ಇಂತಹ ಪತ್ರಗಳನ್ನು ಹರಿಬಿಡಲಾಗಿದೆ.

ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಎಲ್ಲಾ ಶಿಕ್ಷಕರಿಗೆ, ಎಸ್‌ಡಿಎಂಸಿ ಸಮಿತಿಯರಿಗೆ ವೀರಣ್ಣ ಎಸ್. ಜತ್ತಿ ಸ್ಪಷ್ಟೀಕರಣದಲ್ಲಿ ಮನವಿ ಮಾಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT