ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲೇ ಉಳಿದ ಸೋಮಣ್ಣ

Last Updated 4 ಏಪ್ರಿಲ್ 2013, 20:08 IST
ಅಕ್ಷರ ಗಾತ್ರ

ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ಅವರು ಕೊನೆಗೂ ಗೊಂದಲದ ಗೂಡಿನಿಂದ ಹೊರಬಂದಿದ್ದಾರೆ. ಬಿಜೆಪಿಯಲ್ಲೇ ಇದ್ದು ಚುನಾವಣೆ ಎದುರಿಸುವುದಾಗಿ ಗುರುವಾರ ಪ್ರಕಟಿಸಿದ್ದಾರೆ.

ರಾಜಕೀಯ ಜೀವನ ಅಂತ್ಯ ಆಗುವವರೆಗೂ ಬಿಜೆಪಿಯಲ್ಲೇ ಇದ್ದು, ಪಕ್ಷಕ್ಕಾಗಿ ದುಡಿಯುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.
ವಿಜಯನಗರದ ತಮ್ಮ ಗೃಹ ಕಚೇರಿಯಲ್ಲಿ ಸಂಸದ ಅನಂತಕುಮಾರ್, ಉಪ ಮುಖ್ಯಮಂತ್ರಿ ಆರ್.ಅಶೋಕ ಮತ್ತು ಸ್ಥಳೀಯ ಪಾಲಿಕೆ ಸದಸ್ಯರ ಜತೆ ಮಾತುಕತೆ ನಡೆಸಿದ ನಂತರ ಬಿಜೆಪಿಯಲ್ಲೇ ಉಳಿಯುವ ತೀರ್ಮಾನ ಪ್ರಕಟಿಸಿದರು.

`ವಿಜಯನಗರ ಹಾಗೂ ಗೋವಿಂದರಾಜ ನಗರ ಕ್ಷೇತ್ರಗಳು ನನ್ನ ಎರಡು ಕಣ್ಣುಗಳಿದ್ದಂತೆ. ಸಾಮಾನ್ಯನಾಗಿದ್ದ ನನ್ನನ್ನು ಉನ್ನತ ಸ್ಥಾನಕ್ಕೇರಿಸಿದ ಈ ಕ್ಷೇತ್ರಗಳ ಜನರನ್ನು ಹಾಗೂ ಕ್ಷೇತ್ರವನ್ನು ತೊರೆಯುವ ಪ್ರಶ್ನೆಯೇ ಇಲ್ಲ. ಪಕ್ಷದ ಸಂಘಟನೆಗಾಗಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು, ರಾಜ್ಯ ನಾಯಕರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸುತ್ತೇನೆ' ಎಂದು ಸೋಮಣ್ಣ ಹೇಳಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮಾತನಾಡಿ, `ಅಭಿವೃದ್ಧಿಯ ಹರಿಕಾರ ಸೋಮಣ್ಣ ಅವರನ್ನು ಅಭಿವೃದ್ಧಿ ವಿಚಾರದಲ್ಲಿ ಮೀರಿಸುವ ಮತ್ತೊಬ್ಬ ನಾಯಕರಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗೆ ಇವರೇ ಕಾರಣ' ಎಂದರು.
`ರಾಜ್ಯದ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಇವರು ಹಳೇ ಮೈಸೂರು ಭಾಗದಲ್ಲಿ ಪಕ್ಷದ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ' ಎಂದರು.

ಉಪ ಮುಖ್ಯಮಂತ್ರಿ ಆರ್. ಅಶೋಕ ಮಾತನಾಡಿ, ಸೋಮಣ್ಣ ಬಿಜೆಪಿ ತೊರೆಯಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಗೋವಿಂದರಾಜನಗರ ಹಾಗೂ ವಿಜಯನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಅವರೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಗೋವಿಂದರಾಜನಗರ ಕ್ಷೇತ್ರದಿಂದ ಸೋಮಣ್ಣ ಸ್ಪರ್ಧಿಸಿದರೆ, ವಿಜಯನಗರ ಕ್ಷೇತ್ರದಿಂದ ಪಾಲಿಕೆ ಸದಸ್ಯ ಎಚ್.ರವೀಂದ್ರ ಅವರನ್ನು ಕಣಕ್ಕೆ ಇಳಿಸುವ ಬಗ್ಗೆಯೂ ಮುಖಂಡರ ಸಭೆಯಲ್ಲಿ ತೀರ್ಮಾನ ಆಗಿದೆ.

ಬೇಸರವಿದೆ
`ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈಗಲೂ ನನ್ನ ನಾಯಕರು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಬಿಜೆಪಿ ತೊರೆಯಬೇಕಾಯಿತು. ಅದಕ್ಕೆ ನನಗೆ ಬೇಸರವಿದೆ. ಕೆಜೆಪಿ ಸೇರುವಂತೆ ನನ್ನ ಮೇಲೆ ಒತ್ತಡ ಇದ್ದರೂ ನಾನು ಬಿಜೆಪಿ ಬಿಡುತ್ತಿಲ್ಲ. ಯಾವುದೇ ರಾಜಕೀಯ ಲಾಭದ ಉದ್ದೇಶದಿಂದ ಇಂಥ ನಿರ್ಧಾರ ತೆಗೆದುಕೊಂಡಿಲ್ಲ'.
-ಸಚಿವ ಸೋಮಣ್ಣ


ಒಳ್ಳೆಯದಾಗಲಿ
`ಸೋಮಣ್ಣ ಅವರಿಗೆ ದೇವರು ಒಳ್ಳೆಯದು ಮಾಡಲಿ'.
-ಬಿ.ಎಸ್. ಯಡಿಯೂರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT