ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಹೊರ ಬನ್ನಿ, ನಿಮ್ಮ ಜೊತೆ ನಾವಿದ್ದೇವೆ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: `ನೀವು ಬಿಜೆಪಿ ಬಿಟ್ಟು ಹೊರ ಬನ್ನಿ, ನಿಮ್ಮ ಜತೆ ನಾವು ಇದ್ದೇವೆ. ನೀವು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು~

-`ಪರಾಮರ್ಶೆಯ ಪರಿಕ್ರಮ, ನಿಮ್ಮ ಸಮಕ್ಷಮ~ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರೆಲ್ಲರ ಒಕ್ಕೊರಲಿನ ದನಿ.

ಆರಂಭದಲ್ಲಿ ಮಾತನಾಡಿದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಯಡಿಯೂರಪ್ಪ ಹೋರಾಟದಿಂದ ರೂಪುಗೊಂಡವರು. ಅವರನ್ನು ಯಾರೂ ಮುಖ್ಯಮಂತ್ರಿ ಮಾಡಿಲ್ಲ. ಅವರ ನಾಯಕತ್ವ ಜಿಲ್ಲೆಗೆ, ರಾಜ್ಯಕ್ಕೆ ಅಗತ್ಯವಾಗಿದೆ ಎಂದರು.

ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಪ್ರತಿಯೊಬ್ಬರು ಅವರಿಂದ ಉಪಕೃತರಾಗಿದ್ದೇವೆ. ಈಗ ಅವರಿಗೆ ಅದರ ಬಡ್ಡಿ ಸಮೇತ ಶಕ್ತಿ ತುಂಬುವ ಕೆಲಸ ಮಾಡಬೇಕು. ಬೇರೆಯವರ ಹೊಟೆಕಿಚ್ಚು, ಅಸೂಯೆಗಳೇ ನಿಮ್ಮ ಶಕ್ತಿಯಾಗಬೇಕು, ಅಪಪ್ರಚಾರಗಳೇ ಪ್ರಚಾರವಾಗಬೇಕು ಎಂದರು.

ಉದ್ಯಮಿ ರುದ್ರೇಗೌಡ ಮಾತನಾಡಿ, ಈಗಿನ ಸರ್ಕಾರದ ಯಾವುದೇ ಕ್ಷೇತ್ರದಲ್ಲೂ ಒಂದು ದಿಟ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಯಡಿಯೂರಪ್ಪ ಅವರಿಗೆ ಅಸಾಧ್ಯತೆಗಳನ್ನು ಸಾಧ್ಯತೆಗಳನ್ನಾಗಿ ಮಾಡುವ ಶಕ್ತಿ ಇದೆ. ಹಾಗಾಗಿ, ಅವರು ನಮ್ಮೆಲ್ಲರ ನಾಯಕರಾಗಬೇಕು ಎಂದರು.

ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಗುರುಮೂರ್ತಿ, ಸಂಘ ಪರಿವಾರದಿಂದ ಬಂದ ನಾನು, ಯಡಿಯೂರಪ್ಪ ಕೆಲಸಗಳನ್ನು ಪರಿವಾರದ ಆಶಯಗಳನ್ನು ಕಂಡೆ. ಹೋರಾಟ, ಪಾದಯಾತ್ರೆಗಳಿಂದ ಅವರು ಬೆಳೆದು ಬಂದವರು. ಮುಂದೆ ಅವರಿಂದ ಮಾತ್ರ ಕನಸುಗಳನ್ನು ನನಸು ಮಾಡಲು ಸಾಧ್ಯ ಎಂದರು.

ಶಾಸಕ ಎಚ್. ಹಾಲಪ್ಪ ಮಾತನಾಡಿ, ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ರಾಜಕೀಯ ಅಧಿಕಾರ ತಂದುಕೊಡಬೇಕು ಎಂದರು.

ಸಹಕಾರ ಸಚಿವ ಬಿ.ಜೆ. ಪುಟ್ಟಸ್ವಾಮಿ ಮಾತನಾಡಿ, ಯಡಿಯೂರಪ್ಪ ಅವರನ್ನು ಷಡ್ಯಂತ್ರ ಮಾಡಿ ಕೆಳಗಿಳಿಸಲಾಯಿತು. ಅವರ ಮೇಲೆ ಇಲ್ಲದ ಕಳಂಕ ಹೊರಿಸಲಾಯಿತು. ಹೈಕೋರ್ಟ್ ಯಡಿಯೂರಪ್ಪ ಅವರನ್ನು ನಿರಾಪರಾಧಿ ಎಂದು ಘೋಷಣೆ ಮಾಡಿದರೂ ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಸಿಬಿಐಗೆ 24 ಗಂಟೆ ಒಳಗೆ ಅಧಿಕಾರಿಗಳ ಮೂಲಕ ಸುಳ್ಳು ವರದಿ ಕಳುಹಿಸಿಕೊಟ್ಟರು. ಯಡಿಯೂರಪ್ಪ ಅವರಿಗೆ ಪಕ್ಷದವರೇ ಮೋಸ ಮಾಡಿದರು.

ಸಾಗರ ಬಿಜೆಪಿ ಘಟಕದ ಅಧ್ಯಕ್ಷ ಬಿ.ಆರ್. ಜಯಂತ್, ಬೈಂದೂರು ಶಾಸಕ ಲಕ್ಷ್ಮೀನಾರಾಯಣ, ಶಾಸಕ ಕೆ.ಜಿ. ಕುಮಾರಸ್ವಾಮಿ, ಮಾಜಿ ಸಚಿವ ಮುಮ್ತಜ್ ಆಲಿಖಾನ್, ಕ್ರೈಸ್ತ ಮುಖಂಡ ಏಸುದಾಸ್, ಉರ್ದು ಅಕಾಡೆಮಿ ಅಧ್ಯಕ್ಷ ಹಮ್ಜದ್ ಹುಸೇನ್ ಕರ್ನಾಟಕಿ ಮಾತನಾಡಿದರು.

ಕಾಡಾ ಅಧ್ಯಕ್ಷ ಕೆ. ಶೇಖರಪ್ಪ, ಜಿ. ಪಂ. ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ವೇದಿಕೆಯಲ್ಲಿದ್ದರು.

 `ಮನೆ ಬಿಟ್ಟು ಹೋಗಬೇಡಿ~
`ಇದು ನೀವು ಕಟ್ಟಿದ ಮನೆ, ಮನೆ ಯಾಜಮಾನ ನೀವು. ನೀವೇ ನಾಯಕರು. ಈ ಮನೆ ಬಿಟ್ಟು ಹೋಗಬೇಡಿ~ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಮನವಿ ಮಾಡಿದರು.

ಇದಕ್ಕೆ ಸ್ವಲ್ಪ ಪೂರಕವಾಗಿ ಪ್ರತಿಕ್ರಿಯಿಸಿದ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, `ನೀವು ಪಕ್ಷ ಬಿಡಬೇಡಿ ಎನ್ನುವವರು ಇದ್ದಾರೆ. ಹಾಗೆಯೇ, ಅವಮಾನ ಸಹಿಸಿಕೊಂಡು ಇರಬೇಡಿ ಎನ್ನುವವರೂ ಇದ್ದಾರೆ. ಆದರೆ, ಚೆಂಡು ನಿಮ್ಮ ಕೋರ್ಟ್‌ನಲ್ಲಿದೆ. ನೀವು ಯಾವ ರೀತಿ ನಿರ್ಧಾರ ಕೈಗೊಳ್ಳುತ್ತೀರಿ, ಅದು ನಮ್ಮದಾಗುತ್ತದೆ~ ಎಂದರು.

ಮಳೆ: ಸಮಕ್ಷಮ ಸ್ಥಳಾಂತರ
ಶಿವಮೊಗ್ಗ: ನಗರದ ಸಾಗರ ರಸ್ತೆಯ ಪಿಇಎಸ್ ಕಾಲೇಜಿನ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ `ಪರಾಮರ್ಶೆಯ ಪರಿಕ್ರಮ, ನಿಮ್ಮ ಸಮಕ್ಷಮ~ ಕಾರ್ಯಕ್ರಮ ಮಳೆ ಕಾರಣಕ್ಕೆ ಕಾಲೇಜಿನ ಒಳಾಂಗಣಕ್ಕೆ ಸ್ಥಳಾಂತರಗೊಂಡಿತು.

ಯಡಿಯೂರಪ್ಪ ಅಭಿಮಾನಿಗಳು, ಸ್ಥಳಾವಕಾಶ ಇಲ್ಲದಿದ್ದರೂ ನಿಂತು, ಕುಳಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಿಜೆಪಿಯ ಮಹಿಳಾ ಮೋರ್ಚಾದ ಬಹುತೇಕ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸಂಘದ ಪರಿವಾರದ ಕೆಲ ಮುಖಂಡರು ಅಲ್ಲಲ್ಲಿ ಕಾಣಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT