ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಟೆಕ್ ಪದವೀಧರನ ಮೇಲೆ ಹಲ್ಲೆ

Last Updated 13 ಸೆಪ್ಟೆಂಬರ್ 2013, 19:29 IST
ಅಕ್ಷರ ಗಾತ್ರ

ಬೆಂಗಳೂರು: ಕೆಲಸ ಅರಸಿ ನಗರಕ್ಕೆ ಬಂದಿರುವ ಪಶ್ಚಿಮ ಬಂಗಾಳ ಮೂಲದ ಮನೀಶ್‌ ಶರ್ಮಾ (25) ಎಂಬ ಬಿ.ಟೆಕ್‌ ಪದವೀಧರನಿಗೆ ದುಷ್ಕರ್ಮಿಗಳ ಗುಂಪು ಚಾಕುವಿನಿಂದ ಇರಿದು ಗಾಯ­ಗೊಳಿಸಿರುವ ಘಟನೆ ಮಾರುತಿ­ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.

ರಾತ್ರಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮನೀಶ್‌ ಅವರನ್ನು ಗಸ್ತಿನಲ್ಲಿದ್ದ ಪೊಲೀಸರು, ಸಮೀಪದ ಆಸ್ಪತ್ರೆಗೆ ದಾಖ­ಲಿಸಿ­ದ್ದಾರೆ. ಅವರ ಸ್ಥಿತಿ ಗಂಭೀರ­ವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಎರಡು ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಮನೀಶ್‌, ಬೊಮ್ಮನಹಳ್ಳಿ ಸಮೀಪದ ಎನ್‌ಜಿಆರ್‌ ಲೇಔಟ್‌ನಲ್ಲಿರುವ ಸ್ನೇಹಿತ ಜೆಮ್‌ಶೆಡ್‌ ಜತೆ ಉಳಿದುಕೊಂಡಿದ್ದರು.

‘ಬೆಳಿಗ್ಗೆ ಸಂದರ್ಶನಕ್ಕೆಂದು ಕೋರ­ಮಂಗಲಕ್ಕೆ ಹೋಗಿದ್ದ ಸ್ನೇಹಿತ, ಸಂಜೆಯಾದರೂ ವಾಪಸ್‌ ಬರಲಿಲ್ಲ. ರಾತ್ರಿ 8.30ರ ಸುಮಾರಿಗೆ ಕರೆ ಮಾಡಿದಾಗ ತಾನು ಮಡಿವಾಳದ ಹೋಟೆಲ್‌ವೊಂದರಲ್ಲಿ ಊಟ ಮಾಡು­ತ್ತಿರುವುದಾಗಿ ಹೇಳಿದ. ಆದರೆ, 11.30ಕ್ಕೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು’ ಎಂದು ಜೆಮ್‌ಶೆಡ್‌ ಹೇಳಿದರು.

‘ಸದ್ಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿರುವ ಮನೀಶ್, ಹೇಳಿಕೆ ನೀಡುವ ಸ್ಥಿತಿ­ಯಲ್ಲಿಲ್ಲ. ಅವರಿಗೆ ಪ್ರಜ್ಞೆ ಬಂದ ನಂತರ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ. ಘಟನೆ ಸಂಬಂಧ ಮಡಿವಾಳ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಟಿ.ಡಿ.ಪವಾರ್‌ ತಿಳಿಸಿದರು.

ಸಾಲ ಕೇಳಲು ಬಂದು ಹಣ ದೋಚಿದರು
ಸಾಲ ಕೇಳುವ ಸೋಗಿನಲ್ಲಿ ಮಾಲೀಕರ ಮನೆಗೆ ಬಂದ ಕಾರ್ಮಿಕ­ರಿಬ್ಬರು ಮಾಲೀ­ಕರ ಮನೆಯಲ್ಲೇ 1.80 ಲಕ್ಷ ರೂಪಾಯಿ ಹಣ ದೋಚಿ­ರುವ ಘಟನೆ ಎಚ್‌ಎಎಲ್‌ಸಮೀಪ­ದ ಲಾಲ್‌­ಬಹದ್ಧೂರ್‌ ಶಾಸ್ತ್ರಿ­ನಗರದಲ್ಲಿ ಗುರು­ವಾರ ನಡೆದಿದೆ.

ಈ ಸಂಬಂಧ ಸುನೀಲ್‌ ಜೈನ್‌ ಎಂಬುವರು ದೂರು ಕೊಟ್ಟಿದ್ದಾರೆ. ಅವರು ವಿಮಾನ ನಿಲ್ದಾಣ ರಸ್ತೆಯಲ್ಲಿ ಬೇಕರಿ ಇಟ್ಟುಕೊಂಡಿದ್ದು, ಬಿಹಾರ ಮೂಲದ ಏಳು ಕಾರ್ಮಿಕರು ಅವರ ಬಳಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಸುರೇಶ್‌ ಮತ್ತು ಮುಖೇಶ್‌ ಎಂಬು­ವರು ಒಂದು ತಿಂಗಳ ಕೆಲಸಕ್ಕೆ ಸೇರಿದ್ದರು.

‘ಸುರೇಶ್‌ ಮತ್ತು ಮುಖೇಶ್‌ ತಮಗೆ ಸಾಲದ ರೂಪದಲ್ಲಿ ಒಂದು ಲಕ್ಷ ರೂಪಾಯಿ ಬೇಕು ಎಂದು ಕೇಳಿದ್ದರು. ಅಷ್ಟೊಂದು ಹಣ ಕೊಡಲು ಒಪ್ಪದ ನಾನು, ಸಂಜೆ ಮನೆಗೆ ಬಂದು ₨ 20,000 ತೆಗೆದುಕೊಂಡು ಹೋಗಿ ಎಂದು ಹೇಳಿದ್ದೆ. ಅಂತೆಯೇ ಸಂಜೆ ಮನೆಗೆ ಬಂದ ಅವರು ನಾನು ಕೋಣೆ­ಯಲ್ಲಿದ್ದಾಗ ಅಲ್ಮೆರಾದಲ್ಲಿದ್ದ 1.80 ಲಕ್ಷ ರೂಪಾಯಿಯನ್ನು ತೆಗೆದು­ಕೊಂಡು ಓಡಿದರು. ಈ ಸಂಗತಿ ತಿಳಿದು ಅವರನ್ನು ಹಿಡಿಯಲು ಯತ್ನಿಸಿದೆ­ಯಾದರೂ ಅವರು ಪರಾರಿ­ಯಾದರು’ ಎಂದು ಸುನೀಲ್‌ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT